ಭಾನುವಾರ, ಸೆಪ್ಟೆಂಬರ್ 7, 2014

ಹಿಂಸೆ


ಹಿಂಸೆಯೆಂಬುದು ಕುಣಿಯುತಲಿತ್ತು
ನಿದ್ದೆಯ ಕಾಣದೆ ಚಡಪಡಿಸಿತ್ತು |
ಯಾರನು ಕೊಲ್ಲಲಿ ಯಾರನು ಕೆಡವಲಿ
ಯಾರನು ಚುಚ್ಚಲಿ ಯಾರನು ತಿವಿಯಲಿ ||

ಬಂಧು ಬಳಗ ಗೆಳೆಯರು ಎನ್ನದೆ
ಸಿಟ್ಟಿನ ಭರದಲಿ ಅಬ್ಬರಿಸಿತ್ತು |
ರೋಷವು ಉಕ್ಕಿದೆ ಹಲ್ಲದು ಕಡಿದಿದೆ
ಯಾರನು ಹೊಡೆಯಲಿ ಯಾರನು ಬಡಿಯಲಿ ||

ಸ್ಥಾನ ಮಾನದ ಗಣನೆಯೆ ಇಲ್ಲ
ಸ್ವಂತ ನಾಶದ ಭಯವೆ ಇಲ್ಲ |
ನ್ಯಾಯವು ಎಲ್ಲಿದೆ ಧರ್ಮವು ಎಲ್ಲಿದೆ
ಸುತ್ತಲು ಮುಸುಕಿದೆ ಕತ್ತಲೆ ಎಲ್ಲ ||

ಸಿಟ್ಟದು ತಣಿಯಲು ಕಾಣುವುದೇನು
ರೋದನ ನೋವು ಮಾಡುವುದೇನು |
ಕೋಪದ ಭರದಲಿ ಕೊಯ್ದಿಹ ಮೂಗು
ಶಾಂತವಾಗಲು ಮರಳುವುದೇನು? ||

ಹಿಂಸೆಯೆಂಬುದು ಹೀನರ ಶಸ್ತ್ರವು
ಮತಿಯನು ಮರೆಸಿ ನಾಶವ ತರುವುದು |
ನಿದ್ದೆಯು ಬರದು ಬುದ್ಧಿಯು ಇರದು
ಕಳವಳ ಕಾಡಲು ನೆಮ್ಮದಿ ಸಿಗದು ||

ಕೋಪದ ಕೂಪದಿ ಕತ್ತಲ ಗುಹೆಯಲಿ
ಚಿಗುರುವ ಹಿಂಸೆಗೆ ಸೊರಗದೆ ಬಾಳು |
ಹಿಂಸೆಯು ಅಡಗಲಿ ಶಾಂತಿಯು ನೆಲೆಸಲಿ
ದ್ವೇಷವು ಕಮರಲಿ ಪ್ರೀತಿಯು ಅರಳಲಿ |

-ಕ.ವೆಂ.ನಾಗರಾಜ್.

ಭಾನುವಾರ, ಆಗಸ್ಟ್ 24, 2014

ತಲೆ ಮಾತ್ರ ಬಾಗದಿರಲಿ, ಅನ್ಯಾಯದೆದುರು ಧಾತಾ

     ಪ್ರತಿ ಶನಿವಾರದಂದು ಸಾಯಂಕಾಲ 5-30ಕ್ಕೆ ಸರಿಯಾಗಿ ಬೆಂಗಳೂರಿನ ಪಂ. ಸುಧಾಕರ ಚತುರ್ವೇದಿಯವರ ನಿವಾಸದಲ್ಲಿ ಸತ್ಸಂಗವಿರುತ್ತದೆ. ಆ ಸಂದರ್ಭದಲ್ಲಿ ಅಗ್ನಿಹೋತ್ರ, ಭಜನೆ ಮತ್ತು ಪಂಡಿತರಿಂದ ಸುಮಾರು 45 ನಿಮಿಷಗಳ ಕಾಲ ಉಪನ್ಯಾಸವಿರುತ್ತದೆ. ಆಸಕ್ತರು ಭಾಗವಹಿಸಬಹುದು. ಅಲ್ಲಿ ಹಾಡಲಾದ ಒಂದು ಭಜನೆಯನ್ನು ಚಿತ್ರೀಕರಿಸಿ ಇಲ್ಲಿ ಪ್ರಸ್ತುತ ಪಡಿಸಿರುವೆ. ಭಜನೆಯ ಸಾಹಿತ್ಯವನ್ನೂ ಇಲ್ಲಿ ಕೊಟ್ಟಿರುವೆ. ನಿಮಗೆ ಇಷ್ಟವೆನಿಸಿದರೆ ಸಂತೋಷ.
-ಕ.ವೆಂ.ನಾಗರಾಜ್.



ಜ್ಯೋತೀಸ್ವರೂಪ ಭಗವನ್| ಆ ದಿವ್ಯಜ್ಯೋತಿ ನೀಡು|
ಈ ತಿಮಿರ ರಾಶಿ ಹರಿದು| ಮನವಾಗೆ ಬೆಳಕ ಬೀಡು || ೧ ||
ಪ್ರಾಸಾದ ಕುಟಿಗಳಲ್ಲಿ| ಧನಿ ದೀನರಲ್ಲಿ ದೇವ|
ವೈಶಮ್ಯ ದ್ವಂದ್ವದಲ್ಲಿ| ನೀಡೆಮಗೆ ಸಾಮ್ಯಭಾವ || ೨ ||
ನರರೆಲ್ಲ ಸರಿಸಮಾನ| ಎಂಬೀ ಪ್ರಬುದ್ಧ ಭಾವ|
ಉರದಲ್ಲಿ ಮೂಡುವಂತೆ| ಧೃತಿ ನೀಡು ಸತ್ಪ್ರಭಾವ || ೩ ||
ದೀನರ್ಗೆ ನೋವನಿತ್ತು| ಸಂಪತ್ತ ಗಳಿಸದಂತೆ|
ನೀ ನೀಡು ಶುದ್ಧಮತಿಯಾ| ಪರಹಿಂಸೆಗೆಳೆಸದಂತೆ || ೪ ||
ಮನದಲ್ಲಿ ಮಾತಿನಲ್ಲಿ| ಮೈಯಲ್ಲಿ ಸತ್ಯ ಮಾತ್ರ|
ಮೊನೆವಂತೆ ಆತ್ಮಬಲವ| ನೀಡೈ ಜಗದ್ವಿಧಾತ್ರ || ೫ ||
ಸಲೆ ಕಷ್ಟಕೋಟಿ ಬರಲಿ| ನಮಗಾದರಾತ್ಮಧಾತಾ|
ತಲೆ ಮಾತ್ರ ಬಾಗದಿರಲಿ| ಅನ್ಯಾಯದೆದುರು ಧಾತಾ || ೬ ||
ಪಾಪಾಚರಣ ವಿರಕ್ತಿ| ಜೀವಾತ್ಮರಲನುರಕ್ತಿ|
ತಾಪಾಪಹಾರ ಶಕ್ತಿ| ನೀಡೆಮಗೆ ನಿನ್ನ ಭಕ್ತಿ || ೭ ||
ಬಾಧಾ ಕಠೋರ ಕ್ಲೇಶ| ಪ್ರತಿನಿತ್ಯ ಸಹಿಪೆವಾವು|
ವೇದೋಕ್ತ ಧರ್ಮ ಮಾತ್ರ| ಬಿಡೆವಡಸಿದೊಡೆಯೆ ಸಾವು || ೮ ||

ಶುಕ್ರವಾರ, ಆಗಸ್ಟ್ 8, 2014

ತಿಳಿದೆ ನಾನು!


ತಿಳಿದೆ ನಾನು
ಒಬ್ಬನೇ ಬಂದೆ ಒಬ್ಬನೇ ಹೋಗುವೆನೆಂದು!
ತಿಳಿದೆ ನಾನು
ಕೆಲರು ಒಡನಿರುವರು ನಾನು ಬೇಕೆಂದಲ್ಲ ,
ಅವರಿಗೆ ನಾನು ಬೇಕಿತ್ತೆಂದು!
ತಿಳಿದೆ ನಾನು 
ಯಾರನ್ನು ಇಷ್ಟಪಡುವೆನೋ ಅವರಿಂದ
ದೂರಲ್ಪಡುವೆನೆಂದು!
ತಿಳಿದೆ ನಾನು
ಪ್ರಿಯರ ಸಣ್ಣ ಸುಳ್ಳು ಹೃದಯ ಒಡೆಸೀತೆಂದು!
ತಿಳಿದೆ ನಾನು
ಆಸರೆಯ ಭುಜವಿಲ್ಲದೆ ಅಳುವುದು ಕಷ್ಟವೆಂದು!
ತಿಳಿದೆ ನಾನು
ಇರುವ ಪ್ರೀತಿಯನ್ನೆಲ್ಲಾ ಕಳೆದುಕೊಳ್ಳದೆ
ಸ್ವಂತಕ್ಕೂ ಸ್ವಲ್ಪ ಉಳಿಸಿಕೊಳ್ಳಬೇಕೆಂದು!
ತಿಳಿದೆ ನಾನು
ಎಲ್ಲರೊಡನಿದ್ದರೂ ಒಂಟಿಯಾಗಿರುವೆನೆಂದು!
ತಿಳಿದೆ ನಾನು
ಬದಲಾಗಬೇಕಾದ್ದು ನಾನೇ ಎಂದು!
ತಿಳಿದೆ ನಾನು
ಬಯಸಿದಂತೆ ನಡೆಯುವುದು ಕಷ್ಟವೆಂದು!
ತಿಳಿದೆ ನಾನು
ಬಹಿರಂಗ ಅಂತರಂಗವ ನುಂಗಿ ನೀಗೀತೆಂದು!
ತಿಳಿದೆ ನಾನು
ಏಕಾಂತ ಮಾತ್ರ ನನ್ನತನವನುಳಿಸೀತೆಂದು!
ತಿಳಿದೆ ನಾನು
ತಿಳಿದದ್ದು ಸ್ವಲ್ಪ ತಿಳಿಯದಿರುವುದು ಬಹಳವೆಂದು!
ತಿಳಿದೆ ನಾನು
. . . . . . . . . . . . . . . . . . . . . . . . . . . . . .! 

-ಕ.ವೆಂ.ನಾಗರಾಜ್.

ಭಾನುವಾರ, ಜುಲೈ 27, 2014

ಭಾವತಂತಿ ಮೀಟಿದ ಹಾಡು

     1971-72ರಲ್ಲಿ ನಾನು ಅಂಚೆ ಇಲಾಖೆಯ ಕೆಲಸಕ್ಕೆ ಆಯ್ಕೆಯಾದಾಗ ಪ್ರಾರಂಭದಲ್ಲಿ ಮೈಸೂರಿನ ಅಂಚೆ ತರಬೇತಿ ಕೇಂದ್ರದಲ್ಲಿ ಮೂರು ತಿಂಗಳ ತರಬೇತಿ ನೀಡಿದ್ದರು. ಆ ಸಂದರ್ಭದಲ್ಲಿ ಅಂಚೆ ತರಬೇತಿ ಕೇಂದ್ರದ ಗೀತೆಯೆಂದು ಪರಿಗಣಿಸಿದ್ದ ಈ ಹಾಡನ್ನು ಆರಿಸಿದ್ದ ಪುಣ್ಯಾತ್ಮನನ್ನು ನೆನೆಸಿಕೊಳ್ಳುತ್ತೇನೆ. ಭಗತ್ ಸಿಂಗ್ ಕುರಿತಾದ ಶಹೀದ್ ಎಂಬ ಹಿಂದಿ ಚಲನಚಿತ್ರದಲ್ಲಿ  ಭಗತ್ ಸಿಂಗ್ ದೇಶಕ್ಕಾಗಿ ಹೋರಾಡಿ ಬ್ರಿಟಿಷರಿಂದ ಗಲ್ಲಿಗೇರಿಸಲ್ಪಟ್ಟ ನಂತರ ಆತನ ಶವಮೆರವಣಿಗೆಯ ಸಂದರ್ಭದಲ್ಲಿ ಹಿನ್ನೆಲೆಗೀತೆಯಾಗಿ ಮಹಮದ್ ರಫಿಯವರು ಹಾಡಿದ್ದ ಗೀತೆ ಅದು. ಈ ಹಾಡನ್ನು ಸಾಮೂಹಿಕವಾಗಿ ನಮ್ಮಿಂದ ಹೇಳಿಸಲಾಗುತ್ತಿತ್ತು.
    ವತನ್ ಕಿ ರಾಹ ಮೇ ವತನ್ ಕೆ ನೌಜವಾನ್ ಶಹೀದ್ ಹೋ|
    ಪುಕಾರತೆ ಹೈ ಯಹ ಜಮೀನ್ ಆಸ್ಮಾ(ನ್) ಶಹೀದ್ ಹೋ|| 
    (ದೇಶಕ್ಕಾಗಿ ದೇಶದ ನವಯುವಕರೇ ಅಮರರಾಗಿರಿ|
    ನೆಲ ನಭಗಳು ಕರೆಯುತಿಹವು  ಅಮರರಾಗಿರಿ||) 
     ಈ ರೀತಿ ಪ್ರಾರಂಭವಾಗುತ್ತಿದ್ದ ಈ ಹಾಡಿನ ಪ್ರತಿ ಸಾಲಿನಲ್ಲೂ ದೇಶಕ್ಕಾಗಿ ಹೋರಾಡುವ, ದೇಶಕ್ಕಾಗಿ ಜೀವನ ಮುಡುಪಿಡುವ ಪ್ರೇರಣೆ ತುಂಬಿಸಲಾಗಿತ್ತು. ಈ ಹಾಡನ್ನು ಹೇಳುವಾಗಲೆಲ್ಲಾ ನನಗೆ ಗಂಟಲು ತುಂಬಿ ಬರುತ್ತಿತ್ತು. ಭಾವಾವೇಶಕ್ಕೆ ಒಳಗಾಗುತ್ತಿದ್ದೆ. ಈ ಹಾಡನ್ನು ನಾನು ಈಗಲೂ ನೆನೆಸಿಕೊಳ್ಳುತ್ತಿದ್ದು, ಇದು ನನ್ನ ಮೇಲೆ ಬಹಳ ಪ್ರಭಾವ ಬೀರಿದೆ. ಈ ಹಾಡಿನ ಸಾಹಿತ್ಯ ಹೀಗಿದೆ:
ವತನ್ ಕೀ ರಾಹ್ ಮೇ. .
ವತನ್ ಕೀ ರಾಹ್ ಮೆ ವತನ್ ಕೆ ನೌ ಜವಾನ್ ಶಹೀದ್ ಹೋ|
ಪುಕಾರ್ ತೀ ಹೈ ಯಹ ಜಮೀನ್ -ಆಸ್ಮಾ(ನ್) ಶಹೀದ್ ಹೋ||

ಶಹೀದ್ ತೇರೀ ಮೌತ್ ಹೀ ತೇರೆ ವತನ್ ಕೀ ಜಿಂದಗೀ
ತೇರೇ ಲಹೂ ಸೆ ಜಾಗ್ ಉಠೇಗಿ ಇಸ್ ಚಮನ್ ಕೀ ಜಿಂದಗೀ
ಖಿಲೇಂಗೇ ಫೂಲ್ ಉಸ್ ಜಗಹ್ ಪೆ ತು ಜಹಾನ್ ಶಹೀದ್ ಹೋ||
 . .ವತನ್ ಕಿ. .
ಗುಲಾಮ್ ಉಠ್ ವತನ್ ಕೆ ದುಷ್ಮನೋಂಸೆ ಇಂತಖಾಮ್ ಲೇ
ಇನ್ ಅಪ್ನೆ ದೋನೋ ಬಾಜೂವೋಂ ಸೆ ಖಂಜರೋಂಕಾ ಕಾಮ್ ಲೇ
ಚಮನ್ ಕೇ ವಾಸ್ತೆ ಚಮನ್ ಕೆ ಬಾಗ್‌ಬಾನ್ ಶಹೀದ್ ಹೋ||
. .ವತನ್ ಕಿ. .
ಪಹಾಡ್ ತಕ್ ಭೀ ಕಾಂಪನೇ ಲಗೇ ತೇರೇ ಜುನೂನ್ ಸೆ
ತೂ ಆಸ್ಮಾ(ನ್) ಪೆ ಇಂಖಿಲಾಬ್ ಲಿಖ್ ದೆ ಅಪ್ನೆ ಖೂನ್ ಸೆ
ಜಮೀನ್ ನಹೀಂ ತೇರಾ ವತನ್ ಹೈ ಆಸ್ಮಾನ್ ಶಹೀದ್ ಹೋ||
 . .ವತನ್ ಕಿ. .
ವತನ್ ಕಿ ಲಾಜ್ ಜಿಸ್ ಕೋ ಥಿ ಅಜೀಝ್ ಅಪ್ನಿ ಜಾನ್ ಸೇ
ವಹ್ ನೌ ಜವಾನ್ ಜಾ ರಹಾ ಹೈ ಆಜ್ ಕಿತ್ನೀ ಶಾನ್ ಸೇ
ಇಸ್ ಏಕ್ ಜವಾನ್ ಕೀ ಖಾಕ್ ಪರ್ ಹರ್ ಏಕ್ ಜವಾನ್ ಶಹೀದ್ ಹೋ||
 . .ವತನ್ ಕಿ. .
ಹೈ ಕೌನ್ ಖುಷ್‌ನಸೀಬ್ ಮಾ ಕಿ ಜಿಸ್ ಕಾ ಯಹ್ ಚಿರಾಗ್ ಹೈ
ವೊ ಖುಷ್‌ನಸೀಬ್ ಹೈ ಕಹಾಂ ಯಹ್ ಜಿಸ್ಕೆ ಸರ್ ಕಾ ತಾಜ್ ಹೈ
ಅಮರ್ ವೊ ದೇಶ್ ಕ್ಯೋಂ ನ ಹೋ ಕಿ ತು ಜಹಾನ್ ಶಹೀದ್ ಹೋ||
 . .ವತನ್ ಕಿ. .
[ಚಿತ್ರ: ಶಹೀದ್.          ಗಾಯಕರು: ರಫಿ, ಮಸ್ತಾನ್, ಸಂದರ್ಭ: ಹುತಾತ್ಮ ಭಗತ್ ಸಿಂಗ್ ಶವಯಾತ್ರೆ]
*************
Watan Ki Raah Mein lyrics by Mohammad Rafi
Watan ki raah mein watan ke naujawan shaheed ho
pukaarte hain ye zameen-o-aasmaan shaheed ho

shaheed teri maut hi tere vatan ki zindagi
tere lahu se jaag uthegi is chaman mein zindagi
khilenge phool us jagah ki tu jahaan shaheed ho,
watan ki ...
ghulam uth watan ke dushmano se intaqaam le
in apne donon baajuon se khanjaron ka kaam le
chaman ke vaaste chaman ke baagbaan shaheed ho,
watan ki ...
pahaad tak bhi kaanpane lage tere junoon se
tu aasmaan pe inqalaab likh de apane khoon se
zameen nahi tera watan hai aasmaan shaheed ho,
watan ki ...
watan ki laaj jisko thi ajeez apani jaan se
wo naujavaan ja raha hai aaj kitani shaan se
is ek jawaan ki khaak par har ik jawaan shaheed ho
watan ki ...
hai kaun khushanaseeb maan ki jiska ye chiraag hai
wo khushanaseeb hai kahaan ye jisake sar ka taaj hai
amar wo desh kyon na ho ki tu jahaan shaheed ho,
watan ki ...
****************
     ಈ ಹಾಡಿನ ಭಾವಾನುವಾದವನ್ನು ಮಾಡಿದ್ದು ತಮ್ಮ ಮುಂದಿಟ್ಟಿರುವೆ. ಇದು ಪದಶಃ ಮಾಡಿದ ಅನುವಾದವಲ್ಲ. ಮೂಲಾರ್ಥ ಉಳಿಸಿ ರಚಿಸಿರುವ ಭಾವಾನುವಾದ.
ನಾಡಿಗಾಗಿ . .
ನವತರುಣರೆ ನಾಡಿಗಾಗಿ ಜೀವಜ್ಯೋತಿಯುರಿಸಿರಿ
ನೆಲ ನಭಗಳು ಮೊರೆಯಿಡುತಿರೆ ಹುತಾತ್ಮರಾಗಿರಿ ||

ಅಮರ ನಿನ್ನ ಬಲಿದಾನದಿ ದೇಶ ಬೆಳಗಲಿಹುದು
ನಿನ್ನ ರಕ್ತ ಹೂದೋಟಕೆ ಕಸುವ ನೀಡಲಿಹುದು
ನೀನು ಬಿದ್ದ ತಾಣದಿ ನವಕುಸುಮವು ನಗುವುದು
.. ನವತರುಣರೇ ..
ಮೈಕೊಡವಿ ಮೇಲೇಳು ವೈರಿಗಳ ಬಡಿದಟ್ಟು
ಕೈಗಳೆ ಕರವಾಳವಲ್ತೆ ಎದ್ದು ತೊಡೆಯ ತಟ್ಟು
ತೋಟದೊಡೆಯ ಬಲಿಯಾಗಲು ತೋಟಕದು ಕಟ್ಟು
.. ನವತರುಣರೇ ..
ನಿನ್ನ ಈ ಹೂಂಕಾರಕೆ ಗಿರಿಪರ್ವತ ನಡುಗಿದೆ
ನಿನ್ನ ನೆತ್ತರ ಚಿತ್ತಾರವು ಮೂಡಲಿ ನಭದೆಲ್ಲೆಡೆ
ನೆಲವಲ್ಲವು ಅಮರನಾಗು ನಿನ್ನ ನಾಡು ಮೇಲೆ
.. ನವತರುಣರೇ ..
ಪ್ರಾಣಕಿಂತ ನಾಡಮಾನ ಹಿರಿದೆಂದನು ಅವನು
ಧನ್ಯತೆಯಲಿ ನೋಡು ಹೇಗೆ ಮೇಲಕೇರುತಿಹನು
ಅಮರ ಸಂದೇಶವದು ಪ್ರತಿ ತರುಣಗೆ ಪ್ರೇರಣೆಯು
.. ನವತರುಣರೇ ..
ಮುತ್ತಿನಂಥ ಮಗನ ಹೆತ್ತ ಮಾತೆಯದು ಯಾರು
ಕುಲತಿಲಕನೆತ್ತಾಡಿ ಬೀಗಿರುವ ಭಾಗ್ಯವಂತೆ ಯಾರು
ದೇಶಕಾಗಿ ದೇಹವಿಡಲು ಅಜರ ಅಮರವೀ ನಾಡು
.. ನವತರುಣರೇ ..
[ಭಾವಾನುವಾದ: ಕ.ವೆಂ.ನಾಗರಾಜ್]
****************
ಮೂಲ ಹಾಡಿನ ಆಡಿಯೋ ಆಲಿಸಿರಿ:




ಬುಧವಾರ, ಜುಲೈ 2, 2014

ಜಿಹಾದ್ !!

ಆತ್ಮದಾ ಕರೆಯಿದು, ಜಿಹಾದ್ ಜಿಹಾದ್|
ಒಳಗಿನ ಮೊರೆಯಿದು, ಜಿಹಾದ್ ಜಿಹಾದ್|

ವೈರಿಗಳು ಹೊರಗಿಲ್ಲ ಅದೆಲ್ಲ ಬರಿಯ ಸುಳ್ಳು,
ನಿಜವೈರಿ ಒಳಗಿಹನು ಹೊರಗೆಳೆದು ತಳ್ಳು
ಅಂಧಕಾರ ಮೂಡಿಸುವ ಕಾಮ ನಿನ್ನ ವೈರಿ,
ಬುದ್ಧಿಯನ್ನು ದಹಿಸುವ ಕ್ರೋಧ ನಿನ್ನ ವೈರಿ,
ವೈರಿಗಳ ತರಿಯೋಣ ಜಿಹಾದ್ ಜಿಹಾದ್|

ನರರ ತರಿದು ಗೆಲ್ವೆನೆಂದು ಕಾಣದಿರು ಕನಸು
ಕಸುವಿದ್ದರೆ ಒಳಗಿರುವ ವೈರಿಯನ್ನು ಮಣಿಸು
ಮೋಹ ಕೊರಳಿಗುರುಳು ಕುಣಿಕೆಯನ್ನು ಸರಿಸು
ಹರಿಹರಿದು ತಿನ್ನುತಿಹ ಮದವ ಮೆಟ್ಟಿ ಕೊಲ್ಲು
ಕೊಲ್ಲೋಣ ಕೊಲ್ಲೋಣ ಜಿಹಾದ್ ಜಿಹಾದ್!

ಬಾಂಬು ಹಾಕಿ ವಿಷವನಿಕ್ಕಿ ಮಾಡಿದ್ದೇನು ನೀನು
ಮತ್ಸರದ ಕೊರಳನಮುಕಿ ಹಿಡಿಯಬಲ್ಲೆಯೇನು
ಅಡಗಿರುವ ಲೋಭವನ್ನು ಹುಡುಕಬಲ್ಲೆಯೇನು
ವೀರ ಶೂರನಾದರೆ ಹಿಡಿದು ಎಳೆದು ಸಾಯಿಸು
ಮೆಟ್ಟೋಣ ಕುಟ್ಟೋಣ ಜಿಹಾದ್ ಜಿಹಾದ್!


-ಕ.ವೆಂ.ನಾಗರಾಜ್.
**************
5.10.2014ರ ವಿಕ್ರಮದ ವಿಜಯದಶಮಿ ವಿಶೇಷಾಂಕದಲ್ಲಿ ಪ್ರಕಟಿತ:


ಶುಕ್ರವಾರ, ಜೂನ್ 20, 2014

ಅರಿವು


ನಮ್ಮವರೆಂಬರು ನಮ್ಮವರಲ್ಲ; ಮೋಹಕೆ ಸಿಲುಕಿ ಬಳಲಿದೆನಲ್ಲ |
ದೇವ ನಿನ್ನನು ನೆನೆಯಲೆ ಇಲ್ಲ; ಹುಟ್ಟಿನ ಮಹತಿ ತಿಳಿಯಲೆ ಇಲ್ಲ || ಪ ||

ಕಂಡದ್ದೆಲ್ಲ ಬಯಸಿದೆನಲ್ಲ; ಸಿಕ್ಕದೆ ಇರಲು ಶಪಿಸಿದೆನಲ್ಲ |
ಇಲ್ಲದ ಬಯಸಿ ಕೊರಗಿದೆನಲ್ಲ; ಇದ್ದುದ ಬಿಟ್ಟು ಕೆಟ್ಟೆನಲ್ಲ || 1 ||

ಚಪಲತೆ ಕಣ್ಣನು ಮುಚ್ಚಿತಲ್ಲ; ನಿಜ ಕಾಣದಾಯಿತಲ್ಲ |
ಚಂಚಲ ಬುದ್ಧಿ ಆಡಿದ ಆಟಕೆ ಮೋಸ ಹೋದೆನಲ್ಲಾ || 2 ||

ಸಜ್ಜನ ಸಂಗವ ಮಾಡಲಿಲ್ಲ; ಸದ್ಗತಿ ಸಿಗಲಿಲ್ಲ |
ಕೋಪವು ಮತಿಯ ತಿಂದಿತಲ್ಲ; ಮನಸೇ ಸರಿಯಿಲ್ಲ || 3 ||

ಮಿಗಿಲಾರೆಂದು ಬೀಗಿದೆನಲ್ಲ; ನಗೆಪಾಟಲಾಯಿತಲ್ಲ |
ರಜೋ ತಮಗಳ ಆರ್ಭಟದಲ್ಲಿ ಸತ್ವ ಸತ್ತಿತಲ್ಲಾ || 4 ||

ನಾನು ಎಂಬುದು ನಿಜವಲ್ಲ; ನಾನೇ ಎಂಬುದು ತರವಲ್ಲ |
ನಿನ್ನನು ಬಿಟ್ಟು ನಾನೇನೆಂಬುದ ಅರಿಯಲಿಲ್ಲವಲ್ಲಾ || 5 ||

ಕ.ವೆಂ.ನಾಗರಾಜ್.

ಸೋಮವಾರ, ಜೂನ್ 2, 2014

ಸೋಲದಿರು

ದೂಷಿಸದಿರು ಮನವೆ ಪರರು ಕಾರಣರಲ್ಲ
ನಿನ್ನೆಣಿಕೆ ತಪ್ಪಾಗಿ ಕಂಡಿರುವೆ ನೋವ |
ವಿಧಿಯು ಕಾರಣವಲ್ಲ ಹಣೆಬರಹ ಮೊದಲಲ್ಲ
ಕೊರಗಿದರೆ ಫಲವಿಲ್ಲ ದಣಿಯದಿರು ಮನವೆ ||

ಉಗ್ರವಾಗಿಹ ಮನವೆ ತಾಳು ತಾಳೆಲೆ ನೀನು
ವಿವೇಕ ನಲುಗೀತು ಕೆರಳದಿರು ತಾಳು |
ವ್ಯಗ್ರತೆಯ ನಿಗ್ರಹಿಸಿ ಸಮಚಿತ್ತದಲಿ ನಡೆಯೆ
ಸೋಲಿನ ಅನುಭವವೆ ಗೆಲುವಿಗಾಸರೆಯು ||

ಮೂಢನಂತಾಡದಿರು ಮತಿಗೆಟ್ಟು ನರಳದಿರು
ಮೈ ಕೊಡವಿ ಮೇಲೆದ್ದು ಅಡಿಯನಿಡು ಧೀರ |
ಸೋಲದಿರೆಲೆ ಜೀವ ಕಾಯ್ವ ನಮ್ಮನು ದೇವ
ಛಲಬಿಡದೆ ಮುನ್ನಡೆದು ಉಳಿಸು ಸ್ವಂತಿಕೆಯ ||

ಲೋಕದೊಪ್ಪಿಗೆ ಬೇಕೆ ಪರರ ಮನ್ನಣೆಯೇಕೆ
ದಾರಿ ಸರಿಯಿರುವಾಗ ಅಳುಕು ಅಂಜಿಕೆಯೇಕೆ |
ಒಳಮನವು ಒಪ್ಪಿರಲು ಚಂಚಲತೆ ಇನ್ನೇಕೆ
ಪಯಣಿಗನೆ ನೀ ಸಾಗು ದಾರಿ ನಿಚ್ಛಳವಿರಲು ||
***************
-ಕ.ವೆಂ.ನಾಗರಾಜ್.

ಮಂಗಳವಾರ, ಮೇ 20, 2014

ಮೊರೆ

     ದಿನಾಂಕ 30-01-2011ರಂದು 'ವೇದಸುಧೆ' ವಾರ್ಷಿಕೋತ್ಸವದ ಸಂದರ್ಭದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನನ್ನ ಈ ರಚನೆಯನ್ನು ಶ್ರೀಮತಿ ಲಲಿತಾ ರಮೇಶರವರು ಸುಶ್ರಾವ್ಯವಾಗಿ ಹಾಡಿದ್ದರು. ನೀವೂ ಕೇಳಿ:



Untitled from hariharapurasridhar on Vimeo.

ಸರಿಸಿಬಿಡು ಮೂಢಮನ ಆವರಿತ ಪೊರೆಯಾ
ತೆರೆದುಬಿಡು ಕಿಟಕಿಯನು ಒಳಬರಲಿ ಬೆಳಕು|
ರೂಢಿರಾಡಿಯಡಿ ಸಿಲುಕಿ ತೊಳಲಾಡುತಿಹೆ ನಾನು
ಕರುಣೆದೋರೈ ದೇವ ಸತ್ಪಥದಿ ಮುನ್ನಡೆಸು||

ಬಲ್ಲಿದರ ನುಡಿಕೇಳಿ ನೇರಮಾರ್ಗದಿ ನಡೆದೆ

ಬಸವಳಿದಿದೆ ಮನವು ಕಷ್ಟಗಳ ಕೋಟಲೆಗೆ |
ಅರಿಗಳಾರರ ಬಂದಿ ದಿಕ್ಕೆಟ್ಟು ಕುಳಿತಿರುವೆ
ಸದ್ಗುರುವೆ ಕೃಪೆದೋರಿ ಹಿಡಿದೆತ್ತಿ ಸಂತಯಿಸು||

ಪಂಡಿತನು ನಾನಲ್ಲ ಪಾಂಡಿತ್ಯವೆನಗಿಲ್ಲ

ಒಳಮನದ ನುಡಿಯೊಂದೆ ಆಸರೆಯು ನನಗೆಲ್ಲ|
ಹುಲುಮನುಜ ನಾನಾಗಿ ಭಾವಬಂಧಿಯು ನಾನು
ಸಮಚಿತ್ತ ಕರುಣಿಸೈ ನೆಮ್ಮದಿಯ ನೀನೀಡು||
**********************
-ಕವಿನಾಗರಾಜ್.


ಬುಧವಾರ, ಮೇ 7, 2014

ಆಹಾ, ನಾವ್ ಆಳುವವರು!

ಆಹಾ, ನಾವ್ ಆಳುವವರು
ಓಹೋ ನಾವ್ ಅಳಿಸುವವರು ||ಪ||

ಕುರ್ಚಿಯ ಕಾಲ್ಗಳನೊತ್ತುವೆವು
ತಡೆದರೆ ಕೈಯನೆ ಕಡಿಯುವೆವು|

ದೇಶವ ಪೊರೆಯುವ ಹಿರಿಗಣರು
ಖಜಾನೆ ಕೊರೆಯುವ ಹೆಗ್ಗಣರು|

ಜಾತ್ಯಾತೀತರು ಎನ್ನುವೆವು
ಜಾತೀಯತೆಯ ಬೆಳೆಸುವೆವು|

ಗಾಂಧಿಯ ನಾಮ ಜಪಿಸುವೆವು
ಬ್ರಾಂದಿಯ ಕುಡಿದು ಮಲಗುವೆವು|

ಬಿದ್ದರೆ ಪಾದವ ಹಿಡಿಯುವೆವು
ಎದ್ದರೆ ಎದೆಗೆ ಒದೆಯುವೆವು|

ಪಾದಯಾತ್ರೆಯನು ಮಾಡುವೆವು
ಕುರ್ಚಿಯ ಕನಸನು ಕಾಣುವೆವು|

ಗೆದ್ದವರನೆ ನಾವ್ ಕೊಳ್ಳುವೆವು
ಸ್ವಂತದ ಸೇವೆಯ ಮಾಡುವೆವು|

ಸಮಾಜ ಸೇವಕರೆನ್ನುವೆವು
ದೇಶವ ಹರಿದು ತಿನ್ನುವೆವು|
*********
-ಕವಿನಾಗರಾಜ್.

ಮಂಗಳವಾರ, ಮೇ 6, 2014

ಸಂಬಂಧ

ಯಾರೂ ಬೇಡವೆಂದವರು
ಯಾರಿಗೂ ಬೇಡವಾಗುವರು
ಸ್ವಹಿತವೇ ಮೇಲೆಂಬರು
ಇತರರನು ದೂರುವರು
ಮೂಲೆಗುಂಪಾಗುವರು

ಎಲ್ಲರೂ ಬೇಕೆಂಬವರೂ
ಯಾರಿಗೂ ಬೇಡವಾಗುವರು
ಅವರ ಪರವೆಂದಿವರು
ಇವರ ಪರವೆಂದವರು
ದೂರಿ ದೂಡಿಬಿಡುವರು
*********
-ಕ.ವೆಂ.ನಾಗರಾಜ್.

ಬುಧವಾರ, ಏಪ್ರಿಲ್ 23, 2014

ಅಭಾಸ

ಬದುಕಿನಲಪರಿಮಿತ ಅಭಾಸಗಳ ನಾ ಕಂಡೆ
ಪರಿತಪ್ತ ಮನಸಾಗಿಹುದು ಅಗ್ನಿಯ ಉಂಡೆ||

ಸತ್ಯ ನ್ಯಾಯ ಧರ್ಮಗಳೆಂದು ಕಂಡರೆ ಕನಸ

ಹೀಗಳೆದು ಕಾಲೆಳೆದು ಮಾಡುವರು ಪರಿಹಾಸ||

ಹುಂಬರೊಟ್ಟಾಗಿ ಹಂಗಿಸುತ ಜರೆಯುವರು

ಮನೆಮಂದಿಯೇ ಬೆಂಬಲವ ನೀಡದಿಹರು||

ನಳನಳಿಸಿ ಚಿಗುರೊಡೆದ ಸಂಬಂಧವೃಕ್ಷದ ಬೇರು

ಹುಳು ಹತ್ತಿ ಧರೆಗುರುಳಿ ಮನಸು ಚೂರು ಚೂರು||

ಪೋಷಿಸುವ ಕರಗಳು ನೇಣು ಬಿಗಿದುದ ಕಂಡೆ

ಬೇರು ಮೇಲೆದ್ದು ಚಿಗುರ ನುಂಗಿದುದ ಕಂಡೆ||

ಗುರು ಹಿರಿಯರನು ಅವಮಾನಿಸಿದುದ ಕಂಡೆ

ನಂಬಿದವರೇ ಕೊರಳ ಕೊಯ್ದುದನು ಕಂಡೆ||

ಮುನ್ನಡೆಯಲಡಿಯಿಟ್ಟ ನೆಲ ಕುಸಿದುದನು ಕಂಡೆ

ನಡೆದೆಡವಿದ್ದೆ ತಪ್ಪೆಂದು ನಿಂದಿಸಲು ನೊಂದೆ||

-ಕ.ವೆಂ. ನಾಗರಾಜ್.

ಭಾನುವಾರ, ಏಪ್ರಿಲ್ 20, 2014

ಕೆಂಪು ಬೆಳೆ

ಸ್ವಾರ್ಥದಾ ಭೂಮಿಗೆ ಚಾಡಿಮಾತುಗಳ ಮಳೆ ಬಿದ್ದು
ಕ್ಷೇತ್ರವದು ನಳನಳಿಸಿ ಕಂಗೊಳಿಸುತಿಹುದು|

ಅಸಹನೆ ಮತ್ಸರದುಪಕರಣದಿಂ ಉತ್ತಿರಲು
ದ್ವೇಷದಾ ಕಿಡಿಗಳೆಂಬೋ ಬೀಜವನು ಬಿತ್ತಿಹರು|

ಸಂಶಯದ ಗೊಬ್ಬರವ ಕಾಲಕಾಲಕೆ ಹಾಕಿ
ಶಾಂತಿ ಸಹನೆಯ ಕಳೆಯ ಚಿವುಟಿ ಹಾಕಿಹರು|

ವೈಮನಸ್ಸಿನ ಬೆಳೆಯು ಅಬ್ಬರದಿ ಬೆಳೆದಿರಲು
ಆಹಾ ಎಲ್ಲಿ ನೋಡಿದರಲ್ಲಿ ಕೆಂಪಿನೋಕುಳಿಯು

ಬೆಳೆಯ ಬೆಳೆದವರು ಬೆಳೆಯನುಂಡವರು
ಅಯ್ಯೋ ಕೆಂಗಣ್ಣರಾಗಿ ಮತಿಯ ಮರೆತಿಹರು|

ಪತಿ ಪತ್ನಿಯರ ನಡುವೆ ಹೆತ್ತವರ ನಡುವೆ
ವಿರಸದುರಿಯದು ಹೊತ್ತಿ ಜ್ವಲಿಸುತಿಹುದು|

ಅತ್ತೆ ಸೊಸೆಯರ ನಡುವೆ ಸೋದರರ ನಡುವೆ
ಮತ್ಸರದ ಬೆಂಕಿ ತಾ ಹೊಗೆಯಾಡುತಿಹುದು|

ಬದುಕು ಶಾಶ್ವತವಲ್ಲ ದ್ವೇಷ ಬಿಡಿ ಎಂದವರ
ನಾಲಗೆಯ ಕತ್ತರಿಸಿ ಕರುಳ ಬಗೆದೆಳೆದಿಹರು||

************
-ಕವಿ ನಾಗರಾಜ್.

ಮಂಗಳವಾರ, ಏಪ್ರಿಲ್ 15, 2014

ಸತ್ಯ

ಕಷ್ಟವೇನಲ್ಲ,
ಹುಡುಕಿದರೆ ಸಿಕ್ಕೀತು
ಬದುಕಲಗತ್ಯದ ಪ್ರೀತಿ!

ಕಠಿಣಾತಿ ಕಷ್ಟ,
ಹುಡುಕಿದರೂ ಸಿಕ್ಕದು
ಎಲ್ಲಿಹುದದು ಸತ್ಯ?

ಅಯ್ಯೋ ಮರುಳೆ,
ಪಂಡಿತೋತ್ತಮರೆಂದರು
ದೇವರೇ ಸತ್ಯ!

ದೇವರು? ಸತ್ಯ?
ಎಲ್ಲಿಹುದದು ಸತ್ಯ?
ಇನ್ನು ದೇವರು?

ಸಿಕ್ಕರೂ ಸತ್ಯ,
ಮುಖವಾಡದಡಗಿಹುದು ಸತ್ಯ,
ಅರ್ಥವಾಗದ ಸತ್ಯ!

ಅರ್ಥೈಸಿದರೆ ಸತ್ಯ,
ಪಥ್ಯವಾದರೆ ಸತ್ಯ,
ದೇವನೊಲಿವ, ಸತ್ಯ!
****
-ಕವಿನಾಗರಾಜ್.

ಶನಿವಾರ, ಏಪ್ರಿಲ್ 5, 2014

ಮಕ್ಕಳಿಗೆ ಕಿವಿಮಾತು

ಬಾಳಸಂಜೆಯಲಿ ನಿಂತಿಹೆನು ನಾನಿಂದು |
ಮನಸಿಟ್ಟು ಕೇಳಿರಿ ಹೇಳುವೆನು ಮಾತೊಂದು ||

ಕೇಳುವುದು ಬಿಡುವುದು ನಿಮಗೆ ಬಿಟ್ಟಿದ್ದು |
ಅಂತರಾಳದ ನುಡಿಗಳಿವು ಹೃದಯದಲ್ಲಿದ್ದದ್ದು ||

ಗೊತ್ತಿಹುದು ನನಗೆ ರುಚಿಸಲಾರದು ನಿಮಗೆ |
ಸಂಬಂಧ ಉಳಿಸುವ ಕಳಕಳಿಯ ಮಾತು ||

ಗೊತ್ತಿಹುದು ನನಗೆ ಪ್ರಿಯವಹುದು ನಿಮಗೆ |
ಸಂಬಂಧ ಕೆಡಿಸುವ ಬಣ್ಣ ಬಣ್ಣದ ಮಾತು ||

ಹುಳುಕು ಹುಡುಕುವರೆಲ್ಲೆಲ್ಲು ವಿಷವನೆ ಕಕ್ಕುವರು |
ಒಳಿತು ಕಾಣುವರೆಲ್ಲೆಲ್ಲು ಅಮೃತವ ಸುರಿಸುವರು ||

ದಾರಿಯದು ಸರಿಯಿರಲಿ ಅನೃತವನಾಡದಿರಿ |
ತಪ್ಪೊಪ್ಪಿ ಸರಿನಡೆವ ಮನ ನಿಮಗೆ ಇರಲಿ ||

ಗೌರವಿಸಿ ಹಿರಿಯರ ಕಟುಮಾತನಾಡದಿರಿ |
ಅಸಹಾಯಕರ ಶಾಪ ತಂದೀತು ಪರಿತಾಪ |

ದೇವರನು ಅರಸದಿರಿ ಗುಡಿಗೋಪುರಗಳಲ್ಲಿ |
ದೇವನಿಹನಿಲ್ಲಿ ನಮ್ಮ ಹೃದಯಮಂದಿರದಲ್ಲಿ ||

ಇಟ್ಟಿಗೆ ಕಲ್ಲುಗಳ ಜೋಡಿಸಲು ಕಟ್ಟಡವು |
ಹೃದಯಗಳ ಜೋಡಿಸಿರಿ ಆಗುವುದು ಮನೆಯು ||

ಮಕ್ಕಳೇ ನಾ ನಂಬಿದಾ ತತ್ವ ಪಾಲಿಸುವಿರಾ? |
ಬಾಳ ಪಯಣದ ಕೊನೆಗದುವೆನಗೆ ಸಂಸ್ಕಾರ ||
-ಕ.ವೆಂ.ನಾಗರಾಜ್.

ಶುಕ್ರವಾರ, ಮಾರ್ಚ್ 28, 2014

ವಿಷಣ್ಣತೆ


ಎನ್ನ ಕೊನೆಯ ದಿನಗಳ ಮೊದಲ ದಿನಗಳಿವು
ಬಂದ ದಾರಿಯನೊಮ್ಮೆ ನಿಂತು ನೋಡಿದೆ ಮನವು|
ಗುಣಿಸಿ ಭಾಗಿಸಿ ಕೂಡಿಸಿ ಕಳೆದುಳಿದ ಶೇಷವು
ಸೋಲೋ ಗೆಲುವೋ ತಿಳಿಯದ ವಿಷಣ್ಣಭಾವವು||

-ಕ.ವೆಂ.ನಾಗರಾಜ್.

ಸೋಮವಾರ, ಮಾರ್ಚ್ 24, 2014

ಗೌಡರು ಬಂದರು

ಗೌಡರು ಬಂದರು ಸೂತ್ರವ ಹಿಡಿದು ಒಳಗೇ ನಗುನಗುತಾ|
ಕಣ್ಣೀರ್ಗರೆದರು ಮಕ್ಕಳ ಕಷ್ಟವು ತಮದೇ ಎಂದೆನುತಾ||

ಜಾತ್ಯಾತೀತತೆ ಲೇಬಲ್ ಹಚ್ಚಿದ ಶಾಲದು ಹೆಗಲಲ್ಲಿ
ಜಾತೀಯತೆಯ ಕರಾಳ ಬೀಜದ ಚೀಲವು ಬಗಲಲ್ಲಿ||

ಮೌಲ್ಯಾಧಾರಿತ ರಾಜಕಾರಣ ಪುಸ್ತಕದಿರಲೆನುತಾ
ಮಕ್ಕಳೇ ಮೌಲ್ಯವು ಕುರ್ಚಿಯೇ ದೇವರು ಥಕಥಕಥಕದಿಮಿತಾ||

ಗಿಳಿಪಾಠವನೊಪ್ಪಿಸೋ ಬ್ಯಾ ಬ್ಯಾ ಕುರಿಗಳು ಹಿಂದೆಯೆ ಬರುತಿರಲಿ|
ಸ್ವಂತಿಕೆ ತೋರುವ ಮಂದೆಯು ಸೇರಲಿ ಕಟುಕನ ಪಾಲಿನಲಿ||

ಹೆಗಡೆ ಹೊರಗಡೆ ಸಿದ್ಯಾ ಬಿದ್ಯಾ ಮತ್ತಿನ್ಯಾರಲ್ಲಿ|
ಹತ್ತಿದ ಏಣಿಯ ಒದೆಯುವ ಆಟಕೆ ಸಾಟಿ ಯಾರಿಲ್ಲಿ||

ಬಾಲವೆ ತಲೆಯನು ಆಡಿಸೋ ಸೋಜಿಗ ಕಂಡಿರಾ ನೀವೆಲ್ಲಿ|
ಕೊಟ್ಟಿಗೆಯೊಳಗಿನ ಶುನಕನ ಆರ್ಭಟ ಕಾಣಿರಾ ನೀವಿಲ್ಲಿ||

ಮಣ್ಣೂ ನಮದು ಹಣ್ಣೂ ನಮದು ತಿರುಳೂ ನಮಗಿರಲಿ|
ಕಣ್ ಕಣ್ ಬಿಡುತಾ ಬಾಯ್ ಬಾಯ್ ಬಿಡಲು ಕರಟವು ನಿಮಗಿರಲಿ||

[ಇದು 'ಕವಿಮನ'ದಲ್ಲಿ 4 ವರ್ಷಗಳ ಹಿಂದೆ ಪ್ರಥಮವಾಗಿ ಪ್ರಕಟಿಸಿದಾಗ ಬರೆದ ಟಿಪ್ಪಣಿ:
ಈ ವಿಡಂಬನಾತ್ಮಕ ರಚನೆ ಜನಪ್ರಿಯ 'ರಾಯರು ಬಂದರು ಮಾವನ ಮನೆಗೆ' ಧಾಟಿಯಲ್ಲಿ ರಚಿಸಿ ಮೂರು ವರ್ಷಗಳ ಮೇಲಾಗಿತ್ತು. ಮಾನ್ಯ ಕುಮಾರಸ್ವಾಮಿಯವರು ಮಾನ್ಯ ಯಡಿಯೂರಪ್ಪನವರಿಗೆ ಅಧಿಕಾರ ಹಸ್ತಾಂತರ ಮಾಡುವ ಸಂದರ್ಭದಲ್ಲಿ ಷರತ್ತುಗಳನ್ನು ಮುಂದೊಡ್ಡಿದಾಗ ಮೂಡಿದ ರಚನೆಯಿದು. ಆಗ ನಾನು ತಹಸೀಲ್ದಾರನಾಗಿ ಕಾರ್ಯ ಮಾಡುತ್ತಿದ್ದರಿಂದ ನನ್ನ ಭಾವನೆಗಳನ್ನು ಮುಕ್ತವಾಗಿ ಹೊರಗೆಡವುವಂತಿರಲಿಲ್ಲ. ಈಗ ಇದು ಶೈತ್ಯಾಗಾರದಿಂದ ಹೊರಬಂದಿದೆ. ವ್ಯಂಗ್ಯ ಚಿತ್ರ/ವಿಡಂಬನೆಯ ರೀತಿಯಲ್ಲಿ ಸ್ವಾಗತಿಸಲು ಕೋರುವೆ.
4 ವರ್ಷಗಳ ನಂತರ ಈಗಲೂ ಈ ಟಿಪ್ಪಣಿ ಸಾಮಯಿಕವಾಗಿದೆ.]
[ಚಿತ್ರ : ಅಂತರ್ಜಾಲದಿಂದ ಹೆಕ್ಕಿದ್ದು.]

ಗುರುವಾರ, ಮಾರ್ಚ್ 20, 2014

ಚುಚ್ಚಾಣಿ

ಚುಚ್ಚಾಣಿ ಚೂಪಿನದಣ್ಣಾ
ಸಿಕ್ಕಸಿಕ್ಕಲಿ ಚುಚ್ಚಿ ನೋಯಿಸುವುದಣ್ಣಾ
ಚುಚ್ಚಾಣಿ ಚೂಪಿನದಣ್ಣಾ|| ||ಪ||

ಚಿನ್ನದ ಚುಚ್ಚಾಣಿ ನವರಸದ ಚುಚ್ಚಾಣಿ
ಎಲ್ಲರ ಮೆಚ್ಚಿನ ಕಟ್ಟಾಣಿಯಣ್ಣಾ ||ಚುಚ್ಚಾಣಿ||

ಆಸೆ ಪುಗ್ಗೆಯೇರಿ ಸಂಭ್ರಮದಿ ತೇಲಿದ್ದೆ
ಪುಗ್ಗೆ ಡಬ್ಬೆಂದು ಧೊಪ್ಪನೆ ಕೆಳಬಿದ್ದೆ|| ||ಚುಚ್ಚಾಣಿ||

ಬಂಧು ಬಳಗದೆ ಕೂಡಿ ನಲಿಯುತಲಿದ್ದೆ
ಚುಚ್ಚು ಮಾತಿಂದಾಗಿ ಒಂಟಿ ಹೊರಬಿದ್ದೆ||||ಚುಚ್ಚಾಣಿ||

ದೇವಾಂತಃಕರಣದ ಫಲ ಕೈಲಿ ಹಿಡಿದಿದ್ದೆ
ಚುಚ್ಚು ಕಾಲ್ತೊಡರಿ ಎಡವಿ ಬಿದ್ದಿದ್ದೆ|| ||ಚುಚ್ಚಾಣಿ||

ಚುಚ್ಚಾಣಿ ಚೂಪಿನದಣ್ಣಾ
ಸಿಕ್ಕಸಿಕ್ಕಲಿ ಚುಚ್ಚಿ ನೋಯಿಸುವುದಣ್ಣಾ
ಚುಚ್ಚಾಣಿ ಚೂಪಿನದಣ್ಣಾ||

(ಸ್ಪೂರ್ತಿ: ಪುರಂದರದಾಸರ 'ದುಗ್ಗಾಣಿ ಬಲು ಕೆಟ್ಟದಣ್ಣಾ"..)

ಸೋಮವಾರ, ಮಾರ್ಚ್ 17, 2014

ನಿನ್ನನೆಂತು ಅರ್ಚಿಸಲಿ?


ನಿನ್ನನೆಂತು ಅರ್ಚಿಸಲಿ, ಹೇ ದೇವಾ|
ಸತ್ಪಥವ ತೋರಿ ತಣಿಸೆನ್ನ ಮನವಾ|| 


ಸರ್ವವ್ಯಾಪಕ ಸರ್ವಾಂತರ್ಯಾಮಿ ನೀನು|
ಗಂಟಾನಾದವ ಮಾಡಿ ಬಾ ಎನ್ನಲೇನು?||

ಅಖಿಲಾಂಡ ಕೋಟಿ ಬ್ರಹ್ಮಾಂಡ ನಾಯಕ ನೀನು|
ಕಿರುಪೀಠವ ತೋರಿ ಕುಳ್ಳಿರಿಸಲೇನು?||

ದಿವ್ಯ ಚೇತನ ಪರಿಶುದ್ಧ ಪರಮಾತ್ಮ ನೀನು|
ಅಭಿಷೇಕವ ಮಾಡಿ ಕೊಳೆ ತೊಳೆಯಲೇನು?||

ಸಕಲ ಚರಾಚರ ಸೃಷ್ಟಿಕರ್ತ ನೀನಲ್ಲವೇನು?|
ನಿನ್ನ ಸೃಷ್ಟಿಯ ಹೂವ ನಿನಗೆಂತು ಕೊಟ್ಟೇನು?||

ಅನೂಹ್ಯ ಅನಂತ ಅಭೋಕ್ತ ಅಚ್ಯುತ ನೀನು|
ನಿನಗೆ ನೈವೇದ್ಯವೆನೆ ಕೊಡಬಹುದು ನಾನೇನು?||

ಸಕಲ ಜೀವರಿಗೆ ನೆಲೆ ಕೊಟ್ಟ ಧೀಮಂತ ನೀನು|
ನಿನಗೊಂದು ಗುಡಿ ಕಟ್ಟಿ ನೆಲೆಗೊಳಿಸಲೇನು?||

ರೂಢಿರಾಡಿಯಲಿ ಮುಳುಗಿ ಇರಲಾರೆ ನಾನು|
ಹೊರಬರುವ ದಾರಿಯನು ತೋರುವೆಯ ನೀನು?||

ನಿನ್ನನೆಂತು ಅರ್ಚಿಸಲಿ, ಹೇ ದೇವಾ|
ಸತ್ಪಥವ ತೋರಿ ತಣಿಸೆನ್ನ ಮನವಾ||

-ಕ.ವೆಂ.ನಾಗರಾಜ್.

ರಂಗ


ರಂಗಾ ರಂಗಾ ಓ ರಂಗಾ ಬೇಗ್ ಬಾರೋ ನನ್ ರಂಗಾ|
ಹೇಗ್ ಬರಲಿ ಹೇಳಮ್ಮಾ ಪುರುಸೊತ್ತಿಲ್ಲ ಕಾಣಮ್ಮಾ||

ಹೊಲ ಗದ್ದೆ ಮಾರಾಯ್ತು ಇಂಜನೀರಿಂಗ್ ಓದ್ಸಾಯ್ತು|

ಹೋದ್ರೆ ಹೋಗ್ಲಿ ಬಿಡಮ್ಮಾ ಮಕ್ಳಿಗ್ ಮಾಡೋದ್ ನಿಮ್ ಧರ್ಮ||   ||ರಂಗಾ||


ಮನೆ ಮಂದಾಳ ಬಿಟ್ ಹೋಯ್ತು ನಿನ್ ನೌಕ್ರಿಗ್ ಪಾಡಾಯ್ತು|
ಹೋದ್ರೆ ಹೋಯ್ತು ಬಿಡಮ್ಮಾ ಮಕ್ಳಿಗ್ ಮಾಡೋದ್ ನಿಮ್ ಕರ್ಮ|| ||ರಂಗಾ||

ಅಪ್ಪಂಗ್ ಸೀರಿಯಸ್ ಕಾಣಪ್ಪಾ ಬೇಗ್ ಬಾರೋ ನನ್ ಮಗನೇ|

ಆಸ್ಪತ್ರೆಗ್ ಕರಕೊಂಡ್ ಹೋಗಮ್ಮಾ ದುಡ್ಡೆಷ್ಟ್ ಬೇಕು ಹೇಳಮ್ಮಾ||  ||ರಂಗಾ||


ಅಪ್ಪ ಕೈಬಿಟ್ರು ಕಾಣಪ್ಪಾ ಗತಿ ಕಾಣಿಸು ಬಾರಪ್ಪಾ|
ಸತ್ಮೇಲಿನ್ನೇನ್ ಬಿಡಮ್ಮಾ ಮಣ್ ಮಾಡಿ ಮುಗಿಸಮ್ಮಾ||                ||ರಂಗಾ||

                                                                -ಕ.ವೆಂ. ನಾಗರಾಜ್

ಭಾನುವಾರ, ಮಾರ್ಚ್ 9, 2014

ಏನಂತೆ? ? . . .! !

                ಏನಂತೆ?  ? .  . .! !

ಏನಂತೆ? ಸೋತರೇನಂತೆ?
              ಸೋಲೆಂಬುದೇನೆಂದು ತಿಳಿಯಿತಂತೆ!
              ಗೆಲುವಿನ ದಾರಿಯದು ಕಂಡಿತಂತೆ!!

ಏನಂತೆ? ಬಿದ್ದರೇನಂತೆ?
              ನೋವೆಂಬುದೇನೆಂದು ತಿಳಿಯಿತಂತೆ!
              ನೋಡಿ ನಡೆಯಲು ಕಲಿತೆನಂತೆ!!

ಏನಂತೆ? ಹಸಿವಾದರೇನಂತೆ?
              ದುಡಿದು ಉಣ್ಣಲು ಮಾರ್ಗವಂತೆ!
              ಹಳಸಿದ ಅನ್ನವೂ ರುಚಿಯಂತೆ!!

ಏನಂತೆ? ದುಃಖವಾದರೇನಂತೆ?
              ಸಂತೋಷದ ದಾರಿ ಸಿಕ್ಕಿತಂತೆ!
              ಸುಖವೆಂಬುದೊಳಗೇ ಇದೆಯಂತೆ!!

ಏನಂತೆ? ತಪ್ಪಾದರೇನಂತೆ?
              ನಡೆ ತಿದ್ದಿ ಸಾಗುವ ಮನಸಂತೆ!
              ತಲೆ ಎತ್ತಿ ನಡೆಯುವ ಕನಸಂತೆ!

ಏನಂತೆ? ನಿಂದಿಸಿದರೇನಂತೆ?
              ನಿಂದಕರ ಬಾಯಿ ಹೊಲಸಂತೆ!
              ನಾನಾರೆಂದು ನನಗೆ ತಿಳಿಯಿತಂತೆ!!

ಏನಂತೆ? ಸೂರಿಲ್ಲದಿರೇನಂತೆ?
              ಲೋಕವೆ ನನ್ನ ಮನೆಯಂತೆ!
              ಬಹು ದೊಡ್ಡ ಮನೆಯೇ ನನ್ನದಂತೆ!!

ಏನಂತೆ? ದಿಕ್ಕಿಲ್ಲದಿರೇನಂತೆ?
             ಜನರೆಲ್ಲ ನನ್ನ ಬಂಧುಗಳಂತೆ!
             ಬಲು ದೊಡ್ಡ ಸಂಸಾರ ನನ್ನದಂತೆ!!

                     ?   ?    !    !
-ಕ.ವೆಂ.ನಾಗರಾಜ್.
ಚಿತ್ರ: ಅಂತರ್ಜಾಲದಿಂದ ಹೆಕ್ಕಿದ್ದು.
***********************

ಶನಿವಾರ, ಮಾರ್ಚ್ 8, 2014

ಹಕ್ಕಿಯೊಂದು ಹಾರಿ ಬಂದು . . .

ಹಕ್ಕಿಯೊಂದು ಹಾರಿ ಬಂದು ಕಿಟಕಿಯಲ್ಲಿ ಕುಳಿತಿತು
ಸುತ್ತಮುತ್ತ ಹಾರಿತು ಅತ್ತ ಇತ್ತ ನೋಡಿತು |
ಸರಿಯೆಂದು ಕಂಡಿತು ಗೂಡನೊಂದು ಕಟ್ಟಿತು
ಕಾಲ ಕೂಡಿ ಬಂದಿತು ಮೊಟ್ಟೆ ಮೂರು ಇಟ್ಟಿತು ||

ಹಕ್ಕಿಗಾಗಿ ಕೋಣೆ ತೆರವು ಮನೆಮಂದಿಯಲ್ಲ ನೆರವು
ತಾಯಿಗಿಲ್ಲ ತಲೆಭಾರ ಜೀವಸೆಲೆಗೆ ಉಪಕಾರ |
ಬಿಟ್ಟ ಬಾಣದಂತೆ ಹಾರಿ ಬಂದವರನು ಹೆದರಿಸಿತು
ಕಾವಲಿದ್ದು ಕಾವು ಕೊಟ್ಟು ತಾಯಿತನವ ಮೆರೆಯಿತು ||

ಮೊಟ್ಟೆ ಬಿರಿದು ಬೊಮ್ಮಟೆಗಳು ಬಂದವು
ತ್ರಾಣವಿಲ್ಲ ಕಾಣದೆಲ್ಲ ಕಿಚಿಪಿಚಿ ಕದಲಿದವು |
ನಾವು ತಾಳಲಾರೆವು ಅಮ್ಮ ಹಸಿವೆ ಅಮ್ಮ ಹಸಿವೆ
ಬಂದೆ ತಡಿ ಇಗೋ ಹಿಡಿ ಪ್ರೀತಿ ಎಲ್ಲ ಸುರಿವೆ ||

ಹಾ ಸರಿ ಹೀಗೆ ಮರಿ ಎಲ್ಲಿ ಹಾರು ನೋಡುವ
ಹಾರುವುದ ಕಲಿತ ಮೇಲೆ ಭರ್ ಎಂದು ಹಾರುವ |
ನಿಮ್ಮ ನೆರವು ನಮ್ಮ ನಲಿವು ಎನಿತು ಮಧುರ ಸಂಬಂಧ
ದ್ವೇಷ ಬಿಡಿ ಪ್ರೀತಿಸಿರಿ ಅನಿತು ಬಾಳು ಚೆಂದ ||
****************
-ಕ.ವೆಂ. ನಾಗರಾಜ್.
(ಆಧಾರ: ಶಿವಮೊಗ್ಗದ ದಿನಪತ್ರಿಕೆ 'ಜನಹೋರಾಟ'ದಲ್ಲಿ ಪ್ರಕಟವಾದ ಕವಿ ಸುರೇಶರ 'ಒಂದು ಗೂಡಿನ ಕಥೆ' ಎಂಬ ಸಚಿತ್ರ ಲೇಖನ;                                                                                                      ಚಿತ್ರಗಳು: ಬಿ.ಎಸ್.ಆರ್. ದೀಪಕ್.)