ಸೋಮವಾರ, ಜೂನ್ 2, 2014

ಸೋಲದಿರು

ದೂಷಿಸದಿರು ಮನವೆ ಪರರು ಕಾರಣರಲ್ಲ
ನಿನ್ನೆಣಿಕೆ ತಪ್ಪಾಗಿ ಕಂಡಿರುವೆ ನೋವ |
ವಿಧಿಯು ಕಾರಣವಲ್ಲ ಹಣೆಬರಹ ಮೊದಲಲ್ಲ
ಕೊರಗಿದರೆ ಫಲವಿಲ್ಲ ದಣಿಯದಿರು ಮನವೆ ||

ಉಗ್ರವಾಗಿಹ ಮನವೆ ತಾಳು ತಾಳೆಲೆ ನೀನು
ವಿವೇಕ ನಲುಗೀತು ಕೆರಳದಿರು ತಾಳು |
ವ್ಯಗ್ರತೆಯ ನಿಗ್ರಹಿಸಿ ಸಮಚಿತ್ತದಲಿ ನಡೆಯೆ
ಸೋಲಿನ ಅನುಭವವೆ ಗೆಲುವಿಗಾಸರೆಯು ||

ಮೂಢನಂತಾಡದಿರು ಮತಿಗೆಟ್ಟು ನರಳದಿರು
ಮೈ ಕೊಡವಿ ಮೇಲೆದ್ದು ಅಡಿಯನಿಡು ಧೀರ |
ಸೋಲದಿರೆಲೆ ಜೀವ ಕಾಯ್ವ ನಮ್ಮನು ದೇವ
ಛಲಬಿಡದೆ ಮುನ್ನಡೆದು ಉಳಿಸು ಸ್ವಂತಿಕೆಯ ||

ಲೋಕದೊಪ್ಪಿಗೆ ಬೇಕೆ ಪರರ ಮನ್ನಣೆಯೇಕೆ
ದಾರಿ ಸರಿಯಿರುವಾಗ ಅಳುಕು ಅಂಜಿಕೆಯೇಕೆ |
ಒಳಮನವು ಒಪ್ಪಿರಲು ಚಂಚಲತೆ ಇನ್ನೇಕೆ
ಪಯಣಿಗನೆ ನೀ ಸಾಗು ದಾರಿ ನಿಚ್ಛಳವಿರಲು ||
***************
-ಕ.ವೆಂ.ನಾಗರಾಜ್.

2 ಕಾಮೆಂಟ್‌ಗಳು:

 1. ತುಸು ಸಹನೆಯು ತಪ್ಪಿಸುತ್ತದೆ ಘೋರ ಅವಘಡ.

  ಪ್ರತ್ಯುತ್ತರಅಳಿಸಿ
  ಪ್ರತ್ಯುತ್ತರಗಳು
  1. ಆತ್ಮೀಯ ಬದರೀನಾಥರೇ,
   ಯಾರಿಗೆ ಇದೆಯೋ ಇಲ್ಲವೋ ಗೊತ್ತಿಲ್ಲ. ನಿಮಗಂತೂ ಅದ್ಭುತ ಸಹನೆ ಇದೆ. ನಮ್ಮೆಲ್ಲರ ಬ್ಲಾಗುಗಳ ಪೋಸ್ಟುಗಳನ್ನು ಸಾವಧಾನದಿಂದ ಓದುವುದಲ್ಲದೆ ಸೂಕ್ತ ಮೆಚ್ಚುಗೆಯ ಪ್ರತಿಕ್ರಿಯೆ ನೀಡುವಿರಿ. ಹ್ಯಾಟ್ಸಾಫ್!! ನಿಮ್ಮದು ಆದರಣೀಯ ನಡೆ. ಧನ್ಯವಾದಗಳು.
   ಕ.ವೆಂ.ನಾಗರಾಜ್.

   Prathibha Rai
   ಎಸ್ ,ಸೋಲಿನ ಅನುಬವವೇ ..ಗೆಲುವಿನ ಆಸರೆಯೂ ..

   ಅಳಿಸಿ