ಸೋಮವಾರ, ಮಾರ್ಚ್ 24, 2014

ಗೌಡರು ಬಂದರು

ಗೌಡರು ಬಂದರು ಸೂತ್ರವ ಹಿಡಿದು ಒಳಗೇ ನಗುನಗುತಾ|
ಕಣ್ಣೀರ್ಗರೆದರು ಮಕ್ಕಳ ಕಷ್ಟವು ತಮದೇ ಎಂದೆನುತಾ||

ಜಾತ್ಯಾತೀತತೆ ಲೇಬಲ್ ಹಚ್ಚಿದ ಶಾಲದು ಹೆಗಲಲ್ಲಿ
ಜಾತೀಯತೆಯ ಕರಾಳ ಬೀಜದ ಚೀಲವು ಬಗಲಲ್ಲಿ||

ಮೌಲ್ಯಾಧಾರಿತ ರಾಜಕಾರಣ ಪುಸ್ತಕದಿರಲೆನುತಾ
ಮಕ್ಕಳೇ ಮೌಲ್ಯವು ಕುರ್ಚಿಯೇ ದೇವರು ಥಕಥಕಥಕದಿಮಿತಾ||

ಗಿಳಿಪಾಠವನೊಪ್ಪಿಸೋ ಬ್ಯಾ ಬ್ಯಾ ಕುರಿಗಳು ಹಿಂದೆಯೆ ಬರುತಿರಲಿ|
ಸ್ವಂತಿಕೆ ತೋರುವ ಮಂದೆಯು ಸೇರಲಿ ಕಟುಕನ ಪಾಲಿನಲಿ||

ಹೆಗಡೆ ಹೊರಗಡೆ ಸಿದ್ಯಾ ಬಿದ್ಯಾ ಮತ್ತಿನ್ಯಾರಲ್ಲಿ|
ಹತ್ತಿದ ಏಣಿಯ ಒದೆಯುವ ಆಟಕೆ ಸಾಟಿ ಯಾರಿಲ್ಲಿ||

ಬಾಲವೆ ತಲೆಯನು ಆಡಿಸೋ ಸೋಜಿಗ ಕಂಡಿರಾ ನೀವೆಲ್ಲಿ|
ಕೊಟ್ಟಿಗೆಯೊಳಗಿನ ಶುನಕನ ಆರ್ಭಟ ಕಾಣಿರಾ ನೀವಿಲ್ಲಿ||

ಮಣ್ಣೂ ನಮದು ಹಣ್ಣೂ ನಮದು ತಿರುಳೂ ನಮಗಿರಲಿ|
ಕಣ್ ಕಣ್ ಬಿಡುತಾ ಬಾಯ್ ಬಾಯ್ ಬಿಡಲು ಕರಟವು ನಿಮಗಿರಲಿ||

[ಇದು 'ಕವಿಮನ'ದಲ್ಲಿ 4 ವರ್ಷಗಳ ಹಿಂದೆ ಪ್ರಥಮವಾಗಿ ಪ್ರಕಟಿಸಿದಾಗ ಬರೆದ ಟಿಪ್ಪಣಿ:
ಈ ವಿಡಂಬನಾತ್ಮಕ ರಚನೆ ಜನಪ್ರಿಯ 'ರಾಯರು ಬಂದರು ಮಾವನ ಮನೆಗೆ' ಧಾಟಿಯಲ್ಲಿ ರಚಿಸಿ ಮೂರು ವರ್ಷಗಳ ಮೇಲಾಗಿತ್ತು. ಮಾನ್ಯ ಕುಮಾರಸ್ವಾಮಿಯವರು ಮಾನ್ಯ ಯಡಿಯೂರಪ್ಪನವರಿಗೆ ಅಧಿಕಾರ ಹಸ್ತಾಂತರ ಮಾಡುವ ಸಂದರ್ಭದಲ್ಲಿ ಷರತ್ತುಗಳನ್ನು ಮುಂದೊಡ್ಡಿದಾಗ ಮೂಡಿದ ರಚನೆಯಿದು. ಆಗ ನಾನು ತಹಸೀಲ್ದಾರನಾಗಿ ಕಾರ್ಯ ಮಾಡುತ್ತಿದ್ದರಿಂದ ನನ್ನ ಭಾವನೆಗಳನ್ನು ಮುಕ್ತವಾಗಿ ಹೊರಗೆಡವುವಂತಿರಲಿಲ್ಲ. ಈಗ ಇದು ಶೈತ್ಯಾಗಾರದಿಂದ ಹೊರಬಂದಿದೆ. ವ್ಯಂಗ್ಯ ಚಿತ್ರ/ವಿಡಂಬನೆಯ ರೀತಿಯಲ್ಲಿ ಸ್ವಾಗತಿಸಲು ಕೋರುವೆ.
4 ವರ್ಷಗಳ ನಂತರ ಈಗಲೂ ಈ ಟಿಪ್ಪಣಿ ಸಾಮಯಿಕವಾಗಿದೆ.]
[ಚಿತ್ರ : ಅಂತರ್ಜಾಲದಿಂದ ಹೆಕ್ಕಿದ್ದು.]

1 ಕಾಮೆಂಟ್‌:

  1. ಆಸು ಹೆಗ್ಡೆ
    "ಗೌಡ ಮಹಾತ್ಮೆ" ಕಥಾಪ್ರಸಂಗವಿರುವ ದೊಡ್ಡಾಟದ ಸ್ವಾಗತ ಗೀತೆ ಇದೇ ಕಣ್ರೀ... ನಾಗರಾಜ್! :)

    Kavinagaraj
    ಹೌದಲ್ಲವೇ! ಧನ್ಯವಾದ ಸುರೇಶರೇ. -:)

    Deepak D'silva
    ಗೌಡ-ಸೂತ್ರದ ಹಾಡು - ಚೆನ್ನಾಗಿದೆ
    ತಣ್ಣನೆ ನಗು ಬಂತು, ಆಗಿನ ಸ್ಥಿತಿ ನೆನೆಸಿ

    Kavinagaraj
    ಧನ್ಯವಾದ, ದೀಪಕ್.

    ಹೊಳೆ ನರಸೀಪುರ ಮಂಜುನಾಥ
    ಚೆನ್ನಾಗಿದೆ ಕವಿ ನಾಗರಾಜರೆ, ಈ ಅಪ್ಪ ಮಕ್ಕಳ ಬಗ್ಗೆ ಇ೦ಥ ನೂರಾರು ಕವನಗಳನ್ನು ಬರೆಯಬಹುದು! :)

    Kavinagaraj
    ಧನ್ಯವಾದ, ಮಂಜು.:)

    ಪ್ರತ್ಯುತ್ತರಅಳಿಸಿ