ಶುಕ್ರವಾರ, ಜುಲೈ 31, 2015

ಮೂಢ ಉವಾಚ - 32

ನಿಂದಕರ ವಂದಿಸುವೆ ನಡೆಯ ತೋರಿಹರು
ಮನೆಮುರುಕರಿಂ ಮನವು ಮಟ್ಟವಾಗಿಹುದು |
ಕುಹಕಿಗಳ ಹರಸುವೆ ಮತ್ತೆ ಪೀಡಕರ
ಜರೆವವರು ಗುರುವಾಗರೇ ಮೂಢ ||

ಗುರುವಾರ, ಜುಲೈ 30, 2015

ಮೂಢ ಉವಾಚ - 31

ಸೋತೆನೆಂದೆನಬೇಡ ಸೋಲು ನೀನರಿತೆ
ಬಿದ್ದೆನೆಂದೆನಬೇಡ ನೋವು ನೀನರಿತೆ |
ಸೋಲರಿತು ನೋವರಿತು ಹಸಿವರಿತು
ಜಗವರಿಯೆ ನೀನೇ ಗೆಲುವೆ ಮೂಢ ||

ಬುಧವಾರ, ಜುಲೈ 29, 2015

ಮೂಢ ಉವಾಚ - 30

ವೈರಿಯ ಅಬ್ಬರಕೆ ಬರೆಯೆಳೆಯಬಹುದು
ಕಪಟಿಯಾಟವನು ಮೊಟಕಿಬಿಡಬಹುದು|
ಮನೆಮುರುಕರನು ತರುಬಿಬಿಡಬಹುದು
ಪ್ರೀತಿಯ ಆಯುಧಕೆ ಎಣೆಯುಂಟೆ ಮೂಢ||


ಮಂಗಳವಾರ, ಜುಲೈ 28, 2015

ಮೂಢ ಉವಾಚ - 29

ಸಜ್ಜನನು ಬೇರಲ್ಲ ದುರ್ಜನನು ಬೇರಿಲ್ಲ
ಬುದ್ಧನೂ ಬೇರಲ್ಲ ಹಿಟ್ಲರನೂ ಬೇರಿಲ್ಲ|
ಕೆಡುಕದು ಬೇರಲ್ಲ ಒಳಿತದು ಬೇರಿಲ್ಲ
ಎಲ್ಲ ನೀನೆ ಎಲ್ಲವೂ ನಿನ್ನೊಳಗೆ ಮೂಢ|| ಭಾನುವಾರ, ಜುಲೈ 26, 2015

ಮೂಢ ಉವಾಚ - 28

ಬರುವಾಗ ತರಲಾರೆ ಹೋಗುವಾಗ ಒಯ್ಯೆ
ಇಹುದು ಬಹುದೆಲ್ಲ ಸಂಚಿತಾರ್ಜಿತ ಫಲ|
ಸಿರಿ ಸಂಪದದೊಡೆಯ ನೀನಲ್ಲ ನಿಜದಿ ದೇವ 
ಅಟ್ಟಡುಗೆಯುಣ್ಣದೆ ವಿಧಿಯಿಲ್ಲ ಮೂಢ ||


ಶನಿವಾರ, ಜುಲೈ 25, 2015

ಮೂಢ ಉವಾಚ - 27

ಹೊರಗಣ್ಣು ತೆರೆದಿರಲು ಬೀಳುವ ಭಯವಿಲ್ಲ
ಒಳಗಣ್ಣು ತೆರೆದಿರಲು ಪತನದ ಭಯವಿಲ್ಲ|
ತಪ್ಪೊಪ್ಪಿ ನಡೆವವರು ಹಿರಿಯರೆಂದೆನಿಸುವರು
ತಪ್ಪೆ ಸರಿಯೆಂದವರು ಜಾರುವರು ಮೂಢ||ಶುಕ್ರವಾರ, ಜುಲೈ 24, 2015

ಮೂಢ ಉವಾಚ - 26

ಜನಿಸಿದವನೆಂದು ಸಾಯದಿಹನೇನು
ಚಿಂತಿಸಿದೊಡೆ ಓಡಿ ಪೋಪುದೆ ಸಾವು | 
ಸಾವಿನ ಭಯಮರೆತು ಸಂತಸವ ಕಾಣು
ಅರಿವಿನಿಂ ಬಾಳಲದುವೆ ಬದುಕು ಮೂಢ ||

ಗುರುವಾರ, ಜುಲೈ 23, 2015

ಮೂಢ ಉವಾಚ - 25

ಇರಲೆಮಗೆ ನಮ್ಮ ಪಥ ಬೇಕಿಲ್ಲ ಪರಪಥ
ಮನಕೊಪ್ಪುವ ಪಥದಿ ಸಾಗಲಿ ಸಕಲಜನ|
ಅವರ ದಾರಿ ಅವರಿಗಿರಲಿ ಗುರಿಯೊಂದೆ
ತಲುಪುವ ಗಮ್ಯವೊಂದೇ ಮೂಢ ||


ಬುಧವಾರ, ಜುಲೈ 22, 2015

ಮೂಢ ಉವಾಚ - 24

ಪರರ ಮೆಚ್ಚಿಸಲು ಸಾಧ್ಯವೇ ಜಗದೊಳು
ಒಳ್ಳೆಯವ ರಕ್ಕಸ ಜಾಣನಹಂಕಾರಿಯೊಲು |
ತಾಳುವವ ದುರ್ಬಲ ಕ್ರೂರಿಯೊಲು ಗಟ್ಟಿಗ
ಕಾಣಲಚ್ಚರಿ ಪಡುವುದೇಕೋ ಮೂಢ ||

ಮೂಢ ಉವಾಚ - 23

ಕೇಳಲೊಲ್ಲದ ಕಿವಿಗೆ ನೀತಿಪಾಠವದೇಕೆ?
ತಿನ್ನಲೊಲ್ಲದ ಬಾಯ್ಗೆ ಷಡ್ರಸವದೇಕೆ? |
ಮೆಚ್ಚಿದವರೊಡನಾಡು ಹಸಿದವರಿಗನ್ನವಿಡು
ಪಾತ್ರಾಪಾತ್ರರನರಿತು ನಡೆ ಮೂಢ ||

ಸೋಮವಾರ, ಜುಲೈ 20, 2015

ಮೂಢ ಉವಾಚ - 22

ಮನೆ ಮೇಲೆ ಮನೆ ಕಟ್ಟಿ ಉಬ್ಬಿದೊಡಿಲ್ಲ
ನಗನಾಣ್ಯ ಸಿರಿಸಂಪದವ ತುಂಬಿಟ್ಟರಿಲ್ಲ|
ನಿಂತ ನೀರು ಕೊಳೆತು ನಾರುವುದು ನೋಡ
ಕೂಡಿಟ್ಟವರ ಪಾಡು ಬೇರಲ್ಲ ಮೂಢ||ಮೂಢ ಉವಾಚ - 21

ಆಳಿದವರಳಿದುಳಿಸಿಹುದೇನು ಕೇಳು
ಮನೆಮಹಲು ಸಿರಿನಗವ ಕೊಂಡೊಯ್ವರೇನು? |
ಅವಗುಣವ ಶಪಿಸಿ ಜನ ಗುಣವ ನೆನೆವರು
ಎರಡು ದಿನದಲಿ ಎಲ್ಲ ಮರೆಯುವರು ಮೂಢ ||

ಶುಕ್ರವಾರ, ಜುಲೈ 17, 2015

ಮೂಢ ಉವಾಚ - 20

ಇರುವುದು ನಿನದಲ್ಲ ಬರುವುದು ನಿನಗಲ್ಲ
ತರಲಾರದ ನೀನು ಹೊರುವೆಯೇನನ್ನು?|
ಇದ್ದುದಕೆ ತಲೆಬಾಗಿ ಬಂದುದಕೆ ಋಣಿಯಾಗಿ
ಫಲಧಾರೆ ಹರಿಯಗೊಡು ಮರುಳು ಮೂಢ||ಗುರುವಾರ, ಜುಲೈ 16, 2015

ಮೂಢ ಉವಾಚ - 19

ರಸಭರಿತ ಫಲಮೂಲ ಕೊಂಬೆ ತಾನಲ್ಲ
ಫಲಸತ್ವ ಸಾಗಿಪ ಮಾರ್ಗ ತಾನಹುದು|
ಮಾಡಿದೆನೆನಬೇಡ ನಿನದೆನಬೇಡ
ಜಗವೃಕ್ಷ ರಸ ಹರಿವ ಕೊಂಬೆ ನೀನು ಮೂಢ||ಬುಧವಾರ, ಜುಲೈ 15, 2015

ಮೂಢ ಉವಾಚ - 18

ಬಾರದದು ಜನವು ಧನವು ಕಾಯದು
ಕರೆ ಬಂದಾಗ ಅಡೆತಡೆಯು ನಡೆಯದು |
ಇರುವ ಮೂರು ದಿನ ಜನಕೆ ಬೇಕಾಗಿ
ಜಗಕೆ ಬೆಳಕಾಗಿ ಬಾಳೆಲೋ ಮೂಢ ||ಮಂಗಳವಾರ, ಜುಲೈ 14, 2015

ಮೂಢ ಉವಾಚ - 17

ಅತಿವಿನಯ ತೋರುವರು ಸುಮ್ಮನೆ ಹೊಗಳುವರು
ಸೇವೆಯನು ಗೈಯುವರು ನಂಬಿಕೆಯ ನಟಿಸುವರು |
ನೀನೆ ಗತಿ ನೀನೆ ಮತಿ ಪರದೈವವೆನ್ನುವರು
ಪೀಠದಾ ಮಹಿಮೆಯದು ಉಬ್ಬದಿರು ಮೂಢ ||

ಸೋಮವಾರ, ಜುಲೈ 13, 2015

ಮೂಢ ಉವಾಚ - 16

ಗತಿಯು ತಿರುಗುವುದು ಮತಿಯು ಅಳಿಯುವುದು
ಬಂಧುತ್ವ ಮರೆಸುವುದು ಸ್ನೇಹಿತರು ಕಾಣಿಸರು|
ನಾನತ್ವ ಮೆರೆಯುವುದು ಪೊರೆಯು ಮುಸುಕುವುದು
ಹಣವು ಗುಣವ ಹಿಂದಿಕ್ಕುವುದು ಮೂಢ|| ಶುಕ್ರವಾರ, ಜುಲೈ 10, 2015

ಮೂಢ ಉವಾಚ - 15

ಒಲವೀವುದು ಗೆಲುವು ಬಲವೀವುದು
ಜೊತೆಜೊತೆಗೆ ಮದವು ಮತ್ತೇರಿಸುವುದು|
ಸೋಲಿನವಮಾನ ಛಲ ಬೆಳೆಸುವುದು
ಯಶದ ಹಾದಿ ತೋರುವುದು ಮೂಢ|| ಗುರುವಾರ, ಜುಲೈ 9, 2015

ಮೂಢ ಉವಾಚ - 14

ಮಾತಿನಲಿ ವಿಷಯ ಭಾಷೆಯಲಿ ಭಾವ
ಅನುಭವದಿ ಪಾಂಡಿತ್ಯ ಮೇಳವಿಸಿ|
ಕೇಳುಗರಹುದಹುದೆನುವ ಮಾತುಗಾರ
ಸರಸತಿಯ ವರಸುತನು ಮೂಢ||ಬುಧವಾರ, ಜುಲೈ 8, 2015

ಮೂಢ ಉವಾಚ - 13

ಮಾತು ಕಟ್ಟೀತು ಮಾತು ಕೆಡಿಸೀತು
ಮಾತು ಉಳಿಸೀತು ಮಾತು ಕಲಿಸೀತು |
ಮಾತು ಅಳಿಸೀತು ಮಾತು ನಲಿಸೀತು
ಅನುಭವದ ಮಾತು ಮುತ್ತು ಮೂಢ ||ಮಂಗಳವಾರ, ಜುಲೈ 7, 2015

ಮೂಢ ಉವಾಚ - 12

ಮಾತಿನಲಿ ಹಿತವಿರಲಿ ಮಿತಿ ಮೀರದಿರಲಿ
ಮಾತಿನಿಂದಲೆ ಸ್ನೇಹ ಮಾತಿನಿಂ ದ್ವೇಷ |
ಮಾತಿನಿಂದಲೆ ಒಳಿತು ಮಾತಿನಿಂ ಕೆಡುಕು
ಮಾತು ಮುತ್ತಂತಿರಲಿ ಮೂಢ ||


ಸೋಮವಾರ, ಜುಲೈ 6, 2015

ಮೂಢ ಉವಾಚ - 11

ಮಾತಿಗೆ ಮಾತು ತರದಿರದೆ ಆಪತ್ತು
ವಾದ ವಿವಾದದಲಿ ಪ್ರೀತಿಗೇ ಕುತ್ತು |
ಎಲ್ಲರ ಮಾತುಗಳನಾಲಿಸುವನೊಬ್ಬನೆ
ಪ್ರತಿಯಾಡದ ದೇವನೊಬ್ಬನೆ ಮೂಢ ||

ಮೂಢ ಉವಾಚ -10

ಮಾತಾಗಲಿ ಮುತ್ತು ತರದಿರಲಿ ಆಪತ್ತು
ಮಾತು ನಿಜವಿರಲಿ ನೋವು ತರದಿರಲಿ |
ಪ್ರಿಯವಾದ ಹಿತವಾದ ನುಡಿಗಳಾಡುವನು
ನುಡಿಯೋಗಿ ಜನಾನುರಾಗಿ ಮೂಢ || 

ಗುರುವಾರ, ಜುಲೈ 2, 2015

ಮೂಢ ಉವಾಚ - 9

ಆತುರದ ಮಾತು ಮಾನ ಕಳೆಯುವುದು
ಕೋಪದ ನಡೆನುಡಿ ಸಂಬಂಧ ಕೆಡಿಸುವುದು|
ತಪ್ಪರಿತು ಒಪ್ಪಿದೊಡೆ ಬಿರುಕು ಮುಚ್ಚುವುದು
ಬಿರುಕು ಕಂದರವಾದೀತು ಜೋಕೆ ಮೂಢ|| ಮೂಢ ಉವಾಚ - 8

ನಿಂದನೆಯ ನುಡಿಗಳು ಅಡಿಯನೆಳೆಯುವುವು
ಮೆಚ್ಚುಗೆಯ ಸವಿಮಾತು ಪುಟಿದೆಬ್ಬಿಸುವುದು |
ಪರರ ನಿಂದಿಪರ ಜಗವು ಹಿಂದಿಕ್ಕುವುದು
ವಂದಿತನಾಗು ನಲ್ನುಡಿಯೊಡೆಯನಾಗು ಮೂಢ ||