ಮಂಗಳವಾರ, ಸೆಪ್ಟೆಂಬರ್ 29, 2015

ಮೂಢ ಉವಾಚ - 76

ಕಳ್ಳರಿಗೆ ಸಕಲಜನರೆಲ್ಲ ಕಳ್ಳರೋ ಕಳ್ಳರು
ಸುಳ್ಳರಿಗೆ ಎಲ್ಲೆಲ್ಲು ಸುಳ್ಳರೇ ತೋರುವರು |
ಕುಜನಂಗೆ ಕೆಡುಕು ಸುಜನಂಗೆ ಸುಂದರತೆ
ಜಗವು ಅವರವರ ಭಾವಕ್ಕೆ ಮೂಢ ||

ಭಾನುವಾರ, ಸೆಪ್ಟೆಂಬರ್ 27, 2015

ಮೂಢ ಉವಾಚ - 75

ಮನದಲ್ಲಿ ಒಂದು ಹೇಳುವುದು ಮತ್ತೊಂದು
ಹೇಳಿದ್ದು ಒಂದು ಮಾಡುವುದು ಮತ್ತೊಂದು |
ಸುಳ್ಳುಗಳು ಒಂದನಿನ್ನೊಂದು ನುಂಗಿರಲು 
ಗೊಂದಲವು ನೆಮ್ಮದಿಯ ನುಂಗದೆ ಮೂಢ ||

ಮೂಢ ಉವಾಚ - 74

ಹುಂಬರೊಟ್ಟಾಗಿ ಹಂಗಿಸುತ ಜರೆದಿರಲಿ
ಮನೆಮಂದಿಯೇ ನಿನ್ನ ಹೀಗಳೆಯುತಿರಲಿ |
ಕೆರಳದಿರಲಿ ಕೊರಗದಿರಲಿ ಮನವು
ಧೃತಿಗೆಟ್ಟು ದಾರಿ ತಪ್ಪದಿರಲಿ ಮೂಢ ||  


ಶನಿವಾರ, ಸೆಪ್ಟೆಂಬರ್ 26, 2015

ಮೂಢ ಉವಾಚ - 73

ಮತಿಗೆಟ್ಟು ಅರಚಾಡಿ ಬಂದ ಫಲವೇನು?
ಸಿಟ್ಟಿನಿಂ ನಡುನಡುಗಿ ಗುಡುಗಿದರೆ ಬಂತೇನು?|
ತಪ್ಪು ಒಪ್ಪುಗಳ ತಳ್ಳಿ ಪ್ರತಿಭಟಿಸದಿರರೇನು?
ಸಮಚಿತ್ತದಕ್ಕರೆಯೆ ಒಲಿಸುವುದು ಮೂಢ||


ಶುಕ್ರವಾರ, ಸೆಪ್ಟೆಂಬರ್ 25, 2015

ಮೂಢ ಉವಾಚ - 72

ನೀ ಸರಿಯಾಗಿದ್ದರದುವೆ ಸಾಕು
ಪರರ ಗೊಡವೆ ನಿನಗೇಕೆ ಬೇಕು?|
ತಿದ್ದುವ ಹಂಬಲಕೆ ಕಡಿವಾಣ ಹಾಕು
ಮನವನನುಗೊಳಿಸಿ ಶಾಂತನಿರು ಮೂಢ||


ಗುರುವಾರ, ಸೆಪ್ಟೆಂಬರ್ 24, 2015

ಮೂಢ ಉವಾಚ - 71

ಪರರ ನಡವಳಿಕೆಗಳೆನ್ನ ಮನವ ಕದಡದಿರಲಿ
ಕಿರಿಪಿರಿಯ ಮಾತುಗಳಿಗೆ ಪ್ರತಿಯಾಡದಿರಲಿ|
ಕೇಳಬಯಸದ ಕಿವಿಗಳಿಗೆ ಉಪದೇಶ ವ್ಯರ್ಥ
ಎನ್ನ ಭಾವನೆಗಳೆನಗೆರಲಿ ಮೂಢ||


ಮಂಗಳವಾರ, ಸೆಪ್ಟೆಂಬರ್ 22, 2015

ಮೂಢ ಉವಾಚ - 70

ಪರರೆಂತಿರಬೇಕೆಂದು ಬಯಸುವುದು ನೀನು?
ಅಂತಪ್ಪ ಮಾದರಿಯು ಮೊದಲಾಗು ನೀನು |
ಬದಲಾಗು ನೀ ಮೊದಲು ಬದಲಾಗು ನೀನು
ಬದಲಾಯಿಸುವ ಗುಟ್ಟು ಬದಲಾಗುವುದು ಮೂಢ||

ಸೋಮವಾರ, ಸೆಪ್ಟೆಂಬರ್ 21, 2015

ಮೂಢ ಉವಾಚ - 69

ನಿಜವೈರಿ ಹೊರಗಿಲ್ಲ ನಮ್ಮೊಳಗೆ ಇಹನು
ಉಸಿರು ನಿಲ್ಲುವವರೆಗೆ ಕಾಡುವವನಿವನು |
ಧೃಢಚಿತ್ತ ಸಮಚಿತ್ತಗಳಾಯುಧವ ಮಾಡಿ
ಒಳವೈರಿಯನು ಅಟ್ಟಿಬಿಡು ಮೂಢ ||


ಭಾನುವಾರ, ಸೆಪ್ಟೆಂಬರ್ 20, 2015

ಮೂಢ ಉವಾಚ - 68

ಹೆದರದಿರೆ ಅಳುಕದಿರೆ ಅದ್ಭುತವ ಮಾಡುವೆ
ನೀನೊಬ್ಬ ಸೊನ್ನೆ ಹೆದರಿದ ಮರುಕ್ಷಣವೆ |
ಅಂಜುವವ ಹಿಂಜರಿವ ಅಂಜದವ ಮುನ್ನಡೆವ
ಅಂಜದವ ಅಳುಕದವ ನಾಯಕನು ಮೂಢ ||


ಶನಿವಾರ, ಸೆಪ್ಟೆಂಬರ್ 19, 2015

ಮೂಢ ಉವಾಚ - 67

ಮೊಂಡುವಾದಗಳಿಲ್ಲ ಗರ್ವ ಮೊದಲೇ ಇಲ್ಲ
ಧನ ಪದವಿ ಕೀರ್ತಿ ಮೆಚ್ಚುಗೆಯು ಬೇಕಿಲ್ಲ |
ಸೋಲು ಗೆಲುವುಗಳ ಸಮದಿ ಕಾಣಲುಬಲ್ಲ
ಧೀರನವನೆ ನಿಜನಾಯಕನು ಮೂಢ ||


ಶುಕ್ರವಾರ, ಸೆಪ್ಟೆಂಬರ್ 18, 2015

ಮೂಢ ಉವಾಚ - 66

ಅಚಲ ವಿಶ್ವಾಸ ಹಿಡಿದ ಕಾರ್ಯದಲಿರಲು 
ಧೃಢವಾದ ಮಾತು ನಿರ್ಭೀತ ನಡೆನುಡಿಯು |
ಸ್ನೇಹಕ್ಕೆ ಬದ್ಧ ಸಮರಕೂ ಸಿದ್ಧನಿಹ
ಗುಣವಿರುವ ನಾಯಕನೆ ಗೆಲುವ ಮೂಢ ||


ಗುರುವಾರ, ಸೆಪ್ಟೆಂಬರ್ 17, 2015

ಮೂಢ ಉವಾಚ - 65

ನುಡಿದಂತೆ ನಡೆದು ಮಾದರಿಯು ತಾನಾಗೆ
ಪರರ ಮನವರಿತು ನಡೆವ ಕರುಣೆಯಿರಲಾಗೆ |
ಕರಗತವು ತಾನಾಗೆ ಕೆಲಸ ಮಾಡಿಪ ಕಲೆಯು 
ನಾಯಕನು ಉದಯಿಸುವ ಕಾಣು ಮೂಢ ||

ಮಂಗಳವಾರ, ಸೆಪ್ಟೆಂಬರ್ 15, 2015

ಮೂಢ ಉವಾಚ - 64

ಕೆಲಸಕಾರ್ಯವ ನೋಡೆ ಒಂದು ಕೈಮೇಲು
ಧೃಢ ನಿಲುವು ಇರಲು ಕಾಲದ ಅರಿವು |
ಸರಳ ನಡೆಯೊಡನೆ ಜಾಣತನ ಮೇಳವಿಸೆ
ನಾಯಕನು ಉದಯಿಸುವ ಕಾಣು ಮೂಢ ||


ಸೋಮವಾರ, ಸೆಪ್ಟೆಂಬರ್ 14, 2015

ಮೂಢ ಉವಾಚ - 63

ಅನುಭವದ ನೆಲೆಯಲ್ಲಿ ಬುದ್ಧಿಯ ಒರೆಯಲ್ಲಿ
ಆತ್ಮವಿಶ್ವಾಸವದು ತುಂಬಿ ತುಳುಕಿರಲು |
ಅಪಾಯವೆದುರಿಸುವ ಗಟ್ಟಿತನವಿರಲು
ನಾಯಕನು ಉದಯಿಸುವ ಕಾಣು ಮೂಢ ||


ಭಾನುವಾರ, ಸೆಪ್ಟೆಂಬರ್ 13, 2015

ಮೂಢ ಉವಾಚ - 62

ನೀತಿವಂತರ ನಡೆಯು ನ್ಯಾಯಕಾಸರೆಯು
ನುಡಿದಂತೆ ನಡೆಯುವರು ಸವಿಯ ನೀಡುವರು|
ಪ್ರಾಣವನೆ ಪಣಕಿಟ್ಟು ಮಾತನುಳಿಸುವರು
ಜಗದ ಹಿತಕಾಯ್ವ ಧೀರರವರು ಮೂಢ||


ಮೂಢ ಉವಾಚ - 61

ನಿನ್ನ ಬಲದಲೆ ನಿಲ್ಲು ನಿನ್ನ ಬಲದಲೆ ಸಾಯು
ಇರುವುದಾದರೆ ಪಾಪ ದುರ್ಬಲತೆಯೊಂದೆ |
ದುರ್ಬಲತೆ ಪಾಪ ದುರ್ಬಲತೆಯೇ ಸಾವು
ವಿವೇಕವಾಣಿಯಿದು ನೆನಪಿರಲಿ ಮೂಢ ||


ಶುಕ್ರವಾರ, ಸೆಪ್ಟೆಂಬರ್ 11, 2015

ಮೂಢ ಉವಾಚ - 60

ಒಡಲಗುಡಿಯ ರಜ-ತಮಗಳ ಗುಡಿಸಿ
ಒಳಗಣ್ಣಿನಲಿ ಕಂಡ ಸತ್ವವನು ಉರಿಸಿ|
ಮನದ ಕತ್ತಲ ಕಳೆದು ತಿಳಿವಿನ ಬೆಳಕ
ಪಸರಿಪುದೆ ದೀಪಾವಳಿ ತಿಳಿ ಮೂಢ||


ಗುರುವಾರ, ಸೆಪ್ಟೆಂಬರ್ 10, 2015

ಮೂಢ ಉವಾಚ - 59

ತನುಶುದ್ಧಿ ಮನಶುದ್ಧಿ ಮನೆಶುದ್ಧಿಗಿದು ಕಾಲ
ಸತ್ಪಥದಿ ಸಾಗುವ ಸತ್ ಕ್ರಾಂತಿಯ ಕಾಲ |
ಶುಭಹರಸಿ ತಿಲಬೆಲ್ಲ ಕೊಡುಕೊಳುವ ಕಾಲ
ಸಮರಸತೆ ಸಾರುವುದೆ ಸಂಕ್ರಾಂತಿ ಮೂಢ ||


ಬುಧವಾರ, ಸೆಪ್ಟೆಂಬರ್ 9, 2015

ಮೂಢ ಉವಾಚ - 58

ದೇಹ ದೇಹದ ಬೆಸುಗೆಯೆನಿಸುವುದು ಕಾಮ
ಹೃದಯಗಳ ಮಿಲನದಿಂದರಳುವುದು ಪ್ರೇಮ |
ಆತ್ಮ ಆತ್ಮಗಳೊಂದಾಗೆ ಆತ್ಮಾಮೃತಾನಂದ
ಅಂತರಂಗದ ಸುಖವೆ ಸುಖವು ಮೂಢ ||


ಮೂಢ ಉವಾಚ - 57

ಶ್ವೇತವಸನಧಾರಿಯ ಒಳಗು ಕಪ್ಪಿರಬಹುದು
ಹಂದರವಿದ್ದೀತು ಮನ ದೇಹ ಸುಂದರವಿದ್ದು |
ಕಾಣುವುದು ಒಂದು ಕಾಣದಿಹದಿನ್ನೊಂದು
ಮುಖವಾಡ ಧರಿಸಿಹರು ನರರು ಮೂಢ ||


ಮಂಗಳವಾರ, ಸೆಪ್ಟೆಂಬರ್ 8, 2015

ಮೂಢ ಉವಾಚ - 56

ವೇಷಭೂಷಣವನೊಪ್ಪೀತು ನೆರೆಗಡಣ
ನೀತಿಪಠಣವ ಮೆಚ್ಚೀತು ಶ್ರೋತೃಗಣ|
ನುಡಿದಂತೆ ನಡೆದರದುವೆ ಆಭರಣ
ಮೊದಲಂತರಂಗವನೊಪ್ಪಿಸೆಲೋ ಮೂಢ||


ಭಾನುವಾರ, ಸೆಪ್ಟೆಂಬರ್ 6, 2015

ಮೂಢ ಉವಾಚ - 55

ಕಷ್ಟ ಕೋಟಲೆಗಳು ಮೆಟ್ಟಿನಿಲುವುದಕಾಗಿ
ಕುಗ್ಗಿ ಕುಳಿತಲ್ಲಿ ಕಷ್ಟಗಳು ಓಡುವುವೆ?|
ವೀರನಿಗೆ ಅವಕಾಶ ಹೇಡಿಗದು ನೆಪವು
ನಿಲುವು ಸರಿಯಿರಲು ಗೆಲುವೆ ಮೂಢ||

ಶನಿವಾರ, ಸೆಪ್ಟೆಂಬರ್ 5, 2015

ಮೂಢ ಉವಾಚ - 54

ಕಷ್ಟನಷ್ಟಗಳೆರಗಿ ಕಾಡಿ ದೂಡಲುಬಹುದು
ಆಸೆ ಆಮಿಷಗಳು ದಾರಿ ತಪ್ಪಿಸಬಹುದು |
ಮೈಮರೆತು ಜಾರದೆ ನಿರಾಶೆಗೆಡೆಗೊಡದೆ 
ಅಡಿಯ ಮುಂದಿಡಲು ಗೆಲುವೆ ಮೂಢ ||


ಗುರುವಾರ, ಸೆಪ್ಟೆಂಬರ್ 3, 2015

ಮೂಢ ಉವಾಚ - 53

ಹಿಡಿದ ಗುರಿಯನು ಸಾಧಿಸುವವರೆಗೆ
ಮುಂದಿಟ್ಟ ಹೆಜ್ಜೆಯನು  ಹಿಂದಕ್ಕೆ ಇಡದೆ |
ಆವೇಶ ಉತ್ಸಾಹ ನರನಾಡಿಯಲಿರಿಸೆ
ಯಶವರಸಿ ಹರಸುವುದು ಮೂಢ ||


ಮೂಢ ಉವಾಚ - 52

ಗುರಿಯ ಅರಿವಿರಲು ಅಡಿಯಿಟ್ಟು ಮುಂದೆನಡೆ
ತಪ್ಪಿರಲು ತಿದ್ದಿ ನಡೆ ಒಪ್ಪಿರಲು ಸಾಗಿ ನಡೆ |
ಛಲಬಿಡದೆ ನಡೆಮುಂದೆ ಅಡೆತಡೆಯ ಲೆಕ್ಕಿಸದೆ 
ಹಂಬಲದ ಹಕ್ಕಿಗೆ ಬೆಂಬಲವೆ ರೆಕ್ಕೆ ಮೂಢ ||

ಮಂಗಳವಾರ, ಸೆಪ್ಟೆಂಬರ್ 1, 2015

ಮೂಢ ಉವಾಚ - 51

ದಾರಿ ಸುಂದರವಿರಲು ಗುರಿಯ ಚಿಂತ್ಯಾಕೆ
ಗುರಿಯು ಸುಂದರವಿರಲು ದಾರಿ ಚಿಂತ್ಯಾಕೆ |
ಕಲ್ಲಿರಲಿ ಮುಳ್ಳಿರಲಿ ಹೂವು ಹಾಸಿರಲಿ
ರೀತಿ ಸುಂದರವಿರೆ ಯಶ ನಿನದೆ ಮೂಢ ||