ಶುಕ್ರವಾರ, ಮೇ 4, 2018

ಮೂಢ ಉವಾಚ - 410

ಹಿರಿಯರಾರೂ ಇಲ್ಲ ಕಿರಿಯರೂ ಇರದಿಹರು
ಅಣ್ಣ ತಮ್ಮದಿರವರು ಮುನ್ನಡೆಯುತಿಹರು |
ಭೂಮಾತೆ ಪೊರೆಯುತಿರೆ ದೇವಪಿತ ಕಾಯುತಿರೆ
ಸುದಿನವದು ಸನಿಹದಲಿ ಕಾಣು ಮೂಢ || ಮೂಢ ಉವಾಚ - 409

ಅವನೊಲುಮೆ ಬಲುಮೆಯನು ಕೊಂಡಾಡಬೇಕು
ಸಕಲರಿಗೆ ಸಮನಿಹನ ಗುಣವ ಧರಿಸಲುಬೇಕು ||
ಸದ್ವಿದ್ಯೆಯನು ಗಳಿಸಿ ಸತ್ಕರ್ಮದಲಿ ತೊಡಗೆ
ಅದುವೆ ಧರ್ಮದ ಹಾದಿ ತಿಳಿಯೊ ನೀ ಮೂಢ || 

ಬುಧವಾರ, ಮೇ 2, 2018

ಮೂಢ ಉವಾಚ - 408

ಜ್ಞಾನಜ್ಯೋತಿಯೆ ಅವನು ಸತ್ಯರೂಪನೆ ಅವನು
ಸರ್ವಮಿತ್ರನೆ ಅವನು ಸಕಲ ಶಕ್ತಿಯೆ ಅವನು |
ಅವನ ಮಹಿಮೆಯನರಿತು ನರನು ಬೆರಗಾಗಿರಲು
ನರನ ಪರಿ ಸುರವರನ ಮೆರೆದಿಪುದು ಮೂಢ || 

ಭಾನುವಾರ, ಏಪ್ರಿಲ್ 29, 2018

ಮೂಢ ಉವಾಚ - 407

ದೇವನೊಲುಮೆಗೆ ದಾರಿ ತೋರುವುದೆ ಸ್ತುತಿಯು
ಎದೆಯೊಳಗೆ ನಮ್ರತೆಯ ಬೀಜ ಬಿತ್ತುವುದು |
ಮನವು ನಿರ್ಮಲವಾಗಿ ಸುಖ ಶಾಂತಿ ಲಭಿಸುವುದು
ಸತ್ಯೋಪಾಸನೆಯ ಮಹಿಮೆಯಿದು ಮೂಢ || 

ಶನಿವಾರ, ಏಪ್ರಿಲ್ 28, 2018

ಮೂಢ ಉವಾಚ - 406

ಚಂಚಲಿತ ಮನಕಿರಲು ಬುದ್ಧಿಯ ಆಸರೆಯು
ಹೊರಸೆಳೆತಗಳ ತಳ್ಳಿ ಮನಸು ಸ್ಥಿರವಾಗುವುದು | 
ಸ್ಥಿರವಾದ ಮನಸಿನಲಿ ದೇವನನು ನೆನೆಯುತಿರೆ
ಶಾಂತಿಪಥದಲಿ ನೀನು ಮುನ್ನಡೆವೆ ಮೂಢ || 

ಮಂಗಳವಾರ, ಏಪ್ರಿಲ್ 24, 2018

ಮೂಢ ಉವಾಚ - 405

ಬೇಕೆಂಬುದೇ ಮನಸು ಬೇಡವೆಂಬುದದೆ ಮನಸು
ಅರಿತು ಮುನ್ನಡೆವುದಕೆ ಬುದ್ಧಿಯದು ಸಾಧನವು |
ಸಲ್ಲದಾಲೋಚನೆಗೆ ಬುದ್ಧಿಯನು ಬಳಸದಲೆ
ಹೊಯ್ದಾಟ ನಿಲಿಪುದಕೆ ಬಳಸು ಬಳಸೆಲೊ ಮೂಢ||

ಮಂಗಳವಾರ, ಏಪ್ರಿಲ್ 17, 2018

ಮೂಢ ಉವಾಚ - 404

ಲೋಕವನೆ ಧರಿಸಿಹನ ಜಪಿಸು ಜಪಿಸೆಲೆ ಜೀವ
ಮನವನವನಲಿ ನಿಲಿಸು ಬುದ್ದಿಯನು ನಿಲಿಸು |
ಅವನಿರದ ಇರುವಿಲ್ಲ ಅವನಿರದೆ ಜಗವಿಲ್ಲ
ಅವನ ಗರಿಮೆಯನರಿಯೆ ಉನ್ನತಿಯು ಮೂಢ ||