ಬುಧವಾರ, ಡಿಸೆಂಬರ್ 30, 2015

ಮೂಢ ಉವಾಚ - 134

ಸುಖವು ಸ್ವಾಭಾವಿಕ ದುಃಖವಾಗಂತುಕನು
ಯೋಗವನುಸರಿಸುವುದು ನಿಜವಿಯೋಗ |
ದುಃಖಸಂಯೋಗ ವಿಯೋಗವೀವುದು ಸುಖ
ವಿಯೋಗವೆ ಯೋಗವೆನುವರು ಮೂಢ ||

ಭಾನುವಾರ, ಡಿಸೆಂಬರ್ 27, 2015

ಮೂಢ ಉವಾಚ - 133

ಅರ್ಧ ಜೀವನವ ನಿದ್ದೆಯಲಿ ಕಳೆವೆ
ಬಾಲ್ಯ ಮುಪ್ಪಿನಲಿ ಕಾಲುಭಾಗವ ಕಳೆಯೆ |
ಕಷ್ಟ ಕೋಟಲೆ ಕಾಲೆ ಉದರಭರಣೆಗೆ
ಕಳೆದುಳಿವ ಬಾಳಿನಲಿ ತಿರುಳಿರಲಿ ಮೂಢ ||ಶನಿವಾರ, ಡಿಸೆಂಬರ್ 26, 2015

ಮೂಢ ಉವಾಚ - 132

ಒಂದು ಕಾಲದ ಭವ್ಯ  ರಾಜಮಹಾರಾಜರೆಲ್ಲಿ
ಚತುರ ಮಂತ್ರಿ ಚಂದ್ರಮುಖಿ ರಾಣಿಯರದೆಲ್ಲಿ |
ವೈಭವ ಆಡಂಬರ ಕೀರ್ತಿ ಪತಾಕೆಗಳೆಲ್ಲಿ
ನಿನ್ನ ಕಥೆಯೇನು ಹೊರತಲ್ಲ ಮೂಢ ||

ಗುರುವಾರ, ಡಿಸೆಂಬರ್ 24, 2015

ಮೂಢ ಉವಾಚ - 131

ಕ್ಷಮಿಸುವರು ನರರು ಬಲಹೀನತೆಯಿಂದ
ಆಸೆ ಪಡದಿಹರು ದೊರೆಯದಿರುವುದರಿಂದ |
ಧೀರನಾ ಕ್ಷಮೆಗೆ ಬೆಲೆಯಿರುವ ಪರಿ ಯೋಗಿಯ
ನಿರ್ಮೋಹತೆಗೆ ಬಲವುಂಟು ಮೂಢ ||


ಬುಧವಾರ, ಡಿಸೆಂಬರ್ 23, 2015

ಮೂಢ ಉವಾಚ - 130

ಬಯಸದಿರುವವರಿಹರೆ ಈ ಜಗದಿ ಸಂಪತ್ತು
ಪರರ ಮೀರಿಪ ಬಯಕೆ ತರದಿರದೆ ಆಪತ್ತು |
ಸಮಚಿತ್ತದಿಂ ನಡೆದು ಕರ್ಮಫಲದಿಂ ಪಡೆದ
ಜ್ಞಾನ ಸಂಪತ್ತಿಗಿಂ ಮಿಗಿಲುಂಟೆ ಮೂಢ ||

ಮೂಢ ಉವಾಚ - 129

ಬಯಕೆಗಳಿರೆ ಬಡವ ಸಾಕೆಂದರದುವೆ ಸಿರಿ
ನಾನೆಂಬುದು ಅಜ್ಞಾನ ನನದೇನೆನಲು ಜ್ಞಾನ |
ದಾಸನಾದರೆ ಹಾಳು ಒಡೆಯನಾದರೆ ಬಾಳು
ಮನದೊಡೆಯನಾದವನೆ  ಮಾನ್ಯ ಮೂಢ ||


ಶನಿವಾರ, ಡಿಸೆಂಬರ್ 19, 2015

ಮೂಢ ಉವಾಚ - 128

ವಿಷಯಮಾರ್ಗದಿ ನಡೆದು ಮಲಿನರಾದವರ
ಹಿಂಬಾಲಿಸದೆ ಹೆಜ್ಜೆ ಹೆಜ್ಜೆಗೆ ಮಿತ್ತು ಪತನ |
ಯುಕ್ತಮಾರ್ಗದಿ ನಡೆದು ವಿವೇಕಿಯಾದೊಡೆ
ಅನುಸರಿಸುವುದು ಫಲಸಿದ್ಧಿ ಮುಕ್ತಿ ಮೂಢ ||


ಮೂಢ ಉವಾಚ - 127

ಚಿತ್ತ ಚಪಲತೆಯಿಂ ಚಿತ್ತ ಚಂಚಲತೆ
ಚಿತ್ತ ಚಂಚಲತೆಯಿಂ ಚಿತ್ತ ತಳಮಳವು |
ತಳಮಳ ಕಳವಳ ಹಾಳುಗೆಡವದೆ ಶಾಂತಿ
ಶಾಂತಿಯಿಲ್ಲದಿರೆ ಸುಖವೆಲ್ಲಿ ಮೂಢ ||

ಬುಧವಾರ, ಡಿಸೆಂಬರ್ 16, 2015

ಮೂಢ ಉವಾಚ - 126

ವಿಷಯಾಭಿಧ್ಯಾನ ತರದಿರದೆ ಅಧ್ವಾನ
ಕಂಡು ಕೇಳಿದರಲಿ ಬರುವುದನುರಾಗ |
ಬಯಕೆ ಫಲಿಸದೊಡೆ ಕೋಪದುದಯ
ಕೋಪದಿಂ ಅಧೋಗತಿಯೆ ಮೂಢ ||


ಮಂಗಳವಾರ, ಡಿಸೆಂಬರ್ 15, 2015

ಮೂಢ ಉವಾಚ - 125

ವಿಷಯಲೋಲುಪತೆ ವಿಷಕಿಂತ ಘೋರ
ಮೊಸಳೆಯ ಬೆನ್ನೇರಿ ದಡವ ದಾಟಲುಬಹುದೆ?|
ಅಂತರಂಗದ ದನಿಯು ಹೊರದನಿಯು ತಾನಾಗೆ
ಹೊರಬರುವ ದಾರಿ ತೋರುವುದು ಮೂಢ ||


ಶನಿವಾರ, ಡಿಸೆಂಬರ್ 12, 2015

ಮೂಢ ಉವಾಚ - 124

ನಾಚಿಕೆಯ ಪಡದೆ ಏನೆಲ್ಲ ಮಾಡಿಹರು
ಆಸ್ತಿ ಅಂತಸ್ತ್ತಿಗಾಗಿ ಬಡಿದಾಡುತಿಹರು |
ಸುಖವನೇ ಹಂಬಲಿಸಿ ದುಃಖವನು ಕಾಣುವರು
ದುಃಖದ ಮೂಲವರಿಯರೋ ಮೂಢ ||


ಗುರುವಾರ, ಡಿಸೆಂಬರ್ 10, 2015

ಮೂಢ ಉವಾಚ - 123

ಉರಿವ ಬೆಂಕಿಗೆ ಕೀಟಗಳು ಹಾರುವೊಲು
ಗಾಳದ ಹುಳುವ ಮತ್ಸ್ಯವಾಸೆ ಪಡುವೊಲು |
ವಿಷಯ ಲೋಲುಪರಾಗಿ ಬಲೆಗೆ ಸಿಲುಕುವರ
ಭ್ರಮೆಯದೆನಿತು ಬಲಶಾಲಿ ಮೂಢ ||

ಬುಧವಾರ, ಡಿಸೆಂಬರ್ 9, 2015

ಮೂಢ ಉವಾಚ - 122

ನರಕದ ಭಯ ಉಳಿಸೀತು ಸ್ವರ್ಗವ
ಭಯವಿರೆ ಮಾನವ ಇಲ್ಲದಿರೆ ದಾನವ |
ಭಯದಿಂ ವ್ಯಷ್ಟಿ ಸಮಷ್ಟಿಗೆ ಕ್ಷೇಮಭಾವ
ಲೋಕಹಿತ ಕಾರಕವು ಭಯವೆ ಮೂಢ ||


ಸೋಮವಾರ, ಡಿಸೆಂಬರ್ 7, 2015

ಮೂಢ ಉವಾಚ - 121

ಕೆಡುಕಾಗುವ ಭಯ ಕೆಡುಕ ತಡೆದೀತು
ರೋಗದ ಭಯ ಚಪಲತೆಯ ತಡೆದೀತು |
ಶಿಕ್ಷೆಯ ಭಯವದು ವ್ಯವಸ್ಥೆ ಉಳಿಸೀತು
ಗುಣ ರಕ್ಷಕ ಭಯಕೆ ಜಯವಿರಲಿ ಮೂಢ ||


ಶನಿವಾರ, ಡಿಸೆಂಬರ್ 5, 2015

ಮೂಢ ಉವಾಚ - 120

ಸಿರಿವಂತನಿಗೆ ಬಡತನ ಬಂದೆರಗುವ ಭಯ
ಬಲಶಾಲಿಯಾದವಗೆ ಶತ್ರು ಸಂಚಿನ ಭಯ |
ಮೇಲೇರಿದವಗೆ ಕೆಳಗೆ ಬೀಳುವ ಭಯ
ಭಯಮುಕ್ತನವನೊಬ್ಬನೇ ವಿರಾಗಿ ಮೂಢ ||


ಶುಕ್ರವಾರ, ಡಿಸೆಂಬರ್ 4, 2015

ಮೂಢ ಉವಾಚ - 119

ಸತ್ಕುಲಜಾತನಿಗೆ ಹೆಸರು ಕೆಡುವ ಭಯ
ಧನವಿರಲು ಚೋರಭಯ ಮೇಣ್ ರಾಜಭಯ |
ಸಜ್ಜನರಿಂಗೆ ಕುಜನರು ಕಾಡುವ ಭಯ
ಭಯ ಭಯ ಭಯಮಯವೀ ಲೋಕ ಮೂಢ ||


ಬುಧವಾರ, ಡಿಸೆಂಬರ್ 2, 2015

ಮೂಢ ಉವಾಚ - 118

ಭೋಗಿಯಾದವಗೆ ರೋಗಿಯಾಗುವ ಭಯ
ರೋಗಿಯಾದವಗೆ ಸಾವು ಬಂದೆರಗುವ ಭಯ |
ಅಭಿಮಾನಧನನಿಗೆ ಮಾನಹಾನಿಯ ಭಯ
ಭಯದ ಕಲ್ಪನೆಯೇ ಭಯಾನಕವು ಮೂಢ ||

ಮಂಗಳವಾರ, ಡಿಸೆಂಬರ್ 1, 2015

ಮೂಢ ಉವಾಚ - 117

ಭಯದ ಮಹಿಮೆಯನರಿಯದವರಾರಿಹರು?
ಭಯವಿಲ್ಲದಾ ಜೀವಿಯದಾವದಿರಬಹುದು?|  
ನಿಶಾಭಯ ಏಕಾಂತಭಯ ಅಭದ್ರತೆಯ ಭಯ
ಭಯದಿಂದ ಮೂಡಿಹನೆ ಭಗವಂತ ಮೂಢ?||