ಭಾನುವಾರ, ಜನವರಿ 31, 2016

ಮೂಢ ಉವಾಚ - 156

ಪ್ರೀತಿಯಿಂದಲೆ ನಲಿವು ಪ್ರೀತಿಯಿಂದಲೆ ನೋವು
ಪ್ರೀತಿಯಿಂದಲೆ ರಕ್ಷೆ ಪ್ರೀತಿಯಿಂದಲೆ ಭಯವು |
ಪ್ರೀತಿಯಿಂದಲೆ ಸುಖವು ಪ್ರೀತಿಯಿಂದಲೆ ದುಃಖ
ಪ್ರೀತಿಯ ಪರಿಗಳೆನಿತೋ ತಿಳಿಯೆ ಮೂಢ ||

ಶನಿವಾರ, ಜನವರಿ 30, 2016

ಮೂಢ ಉವಾಚ - 155

ಮದಭರಿತ ಯೌವನವ ಮುಪ್ಪು ತಿನ್ನುವುದು
ಸಾಕೆಂಬ ಭಾವವನು ಬೇಕೆಂಬುದಳಿಸುವುದು |
ಗುಣವನಸೂಯೆ ತಿನ್ನುವುದು ಒಂದನಿನ್ನೊಂದು
ನುಂಗದಿರುವುದಿದೆಯೇ ಜಗದಿ ಮೂಢ ||

ಬುಧವಾರ, ಜನವರಿ 27, 2016

ಮೂಢ ಉವಾಚ - 154

ಸುಕ್ಕುಗಳು ಮೂಡಿಹವು ತಲೆಯು ನರೆತಿಹುದು
ಮುಪ್ಪು ಬಂದಡರಿ ಕೈಕಾಲು ನಡುಗಿಹುದು |
ರೋಗಗಳು ಮುತ್ತಿ ಬಳಲಿ ಬೆಂಡಾಗಿಹರು
ತೀರದಿಹ ಆಸೆಗೆ ಮುಪ್ಪಿಲ್ಲವೋ ಮೂಢ ||



ಸೋಮವಾರ, ಜನವರಿ 25, 2016

ಮೂಢ ಉವಾಚ - 153

ಯೌವನವು ಮುಕ್ಕಾಗಿ ಸಂಪತ್ತು ಹಾಳಾಗಿ 
ಗೆಳೆಯರು ಮರೆಯಾಗಿ ಕೈಕಾಲು ಸೋತಿರಲು |
ನಿಂದೆ ಮೂದಲಿಕೆ ಸಾಲಾಗಿ ಎರಗಿರಲು
ಬದುಕಿನರ್ಥ ತಿಳಿದೇನು ಫಲ ಮೂಢ ||



ಬುಧವಾರ, ಜನವರಿ 20, 2016

ಮೂಢ ಉವಾಚ - 152

ದಿನಗಳುರುಳುವುವು ಅಂತೆ ಮನುಜನಾಯುವು
ಶಾಶ್ವತನು ತಾನೆಂಬ ಭ್ರಮೆಯು ಮುಸುಕಿಹುದು |
ಚದುರಂಗದ ರಾಜ ಮಂತ್ರಿ ರಥ ಕುದುರೆ ಕಾಲಾಳು
ಆಟದಂತ್ಯದಲಿ ಎಲ್ಲರೂ ಒಂದೆ ಮೂಢ ||

ಮಂಗಳವಾರ, ಜನವರಿ 19, 2016

ಮೂಢ ಉವಾಚ - 151

ವೃದ್ಧಾಪ್ಯ ಮುಸುಕಿರಲು ದಂತಗಳುದುರಿರಲು
ಕಿವಿಯು ಕೇಳದಿರೆ ನೋಟ ಮಂದವಾಗಿರಲು |
ತನುವು ಕುಗ್ಗಿರಲು ಯಾರು ಗಣಿಸುವರು ನಿನ್ನ
ಜಯವಿರುವವರೆಗೆ ಭಯವಿಲ್ಲ ಮೂಢ ||





ಸೋಮವಾರ, ಜನವರಿ 18, 2016

ಮೂಢ ಉವಾಚ - 150

ತಾಯಿಯ ಸ್ವತ್ತಲ್ಲ ತಂದೆಯ ಸ್ವತ್ತಲ್ಲ
ಪತ್ನಿಯ ಸ್ವತ್ತಲ್ಲ ಮಕ್ಕಳ ಸ್ವತ್ತಲ್ಲ |
ಮಿತ್ರರ ಸ್ವತ್ತಲ್ಲ ತನ್ನದಲ್ಲವೆ ಅಲ್ಲ
ಶರೀರವಿದಾರ ಸ್ವತ್ತು ಗೊತ್ತಿಲ್ಲ ಮೂಢ ||



ಭಾನುವಾರ, ಜನವರಿ 17, 2016

ಮೂಢ ಉವಾಚ - 149

ಭೂಮಿಯೊಂದಿರಬಹುದು ಮಣ್ಣಿನ ಗುಣ ಭಿನ್ನ
ಜಲವೊಂದಿರಬಹುದು ಜಲದಗುಣ ಭಿನ್ನ |
ಜ್ಯೋತಿಯೊಂದಿರಬಹುದು ಪ್ರಕಾಶ ಭಿನ್ನ
ಭಿನ್ನದೀ ಜಗದಿ ಆತ್ಮವವಿಚ್ಛಿನ್ನ ಮೂಢ ||


ಶನಿವಾರ, ಜನವರಿ 16, 2016

ಮೂಢ ಉವಾಚ - 148

ಅಚ್ಚರಿಯು ಅಚ್ಚರಿಯು ಏನಿದಚ್ಚರಿಯು
ಆತ್ಮವಿದು ಅಚ್ಚರಿಯು ಹೇಳಲಚ್ಚರಿಯು |
ಕೇಳಲಚ್ಚರಿಯು ಅರಿಯಲಚ್ಚರಿಯು
ಆತ್ಮವನರಿಯದಿಹದಚ್ಚರಿಯು ಮೂಢ ||


ಶುಕ್ರವಾರ, ಜನವರಿ 15, 2016

ಮೂಢ ಉವಾಚ - 147

ಕಾಣುವುದು ನಿಜವಲ್ಲ ಕಾಣದಿರೆ ಸುಳ್ಳಲ್ಲ
ತಿಳಿದದ್ದು ನಿಜವಲ್ಲ ತಿಳಿಯದಿರೆ ಸುಳ್ಳಲ್ಲ |
ಕೇಳುವುದು ನಿಜವಲ್ಲ ಕೇಳದಿರೆ ಸುಳ್ಳಲ್ಲ
ಆತ್ಮಾನಾತ್ಮರರಿವು ಅವನೆ ಬಲ್ಲ ಮೂಢ ||

ಬುಧವಾರ, ಜನವರಿ 13, 2016

ಮೂಢ ಉವಾಚ - 146

ಕಾಣದದು ನಯನ ಕೇಳಿಸದು ಕಿವಿಗೆ
ಮುಟ್ಟಲಾಗದು ಕರ ತಿಳಿಯದು ಮನ |
ಬಣ್ಣಿಸಲು ಸಿಗದು ಪ್ರಮಾಣಕೆಟುಕದು
ಅವ್ಯಕ್ತ ಆತ್ಮದರಿವು ಸುಲಭವೇ ಮೂಢ? ||



ಮಂಗಳವಾರ, ಜನವರಿ 12, 2016

ಮೂಢ ಉವಾಚ - 145

ಅರಿತವರು ಹೇಳಿಹರು ಅಚ್ಚರಿಯ ಸಂಗತಿಯ
ಆತ್ಮಕ್ಕೆ ಅಳಿವಿಲ್ಲ ಹುಟ್ಟು ಸಾವುಗಳಿಲ್ಲ |
ಬದಲಾಗದು ಬೆಳೆಯದು ನಾಶವಾಗದು 
ಚಿರಂಜೀವ ನಿತ್ಯ ಶಾಶ್ವತವು ಮೂಢ ||



ಸೋಮವಾರ, ಜನವರಿ 11, 2016

ಮೂಢ ಉವಾಚ - 144

ಜೀವಿಗಳಿವರು ಎಲ್ಲಿಂದ ಬಂದವರು
ಬಂದದ್ದಾಯಿತು ಮತ್ತೆಲ್ಲಿ ಹೋಗುವರು |
ಎಲ್ಲಿಂದ ಬಂದಿಹರಲ್ಲಿಗೇ ಹೋಗುವರು
ಕೆಲದಿನ ನಮ್ಮೊಡನಿರುವರು ಮೂಢ ||



ಭಾನುವಾರ, ಜನವರಿ 10, 2016

ಮೂಢ ಉವಾಚ - 143

ತನುವು ನೀನಲ್ಲವೆನೆ ಯಾವುದದು ನಿನದು?
ಆ ಜಾತಿ ಈ ಜಾತಿ ನಿನದಾವುದದು ಜಾತಿ? |
ಬಸವಳಿಯದಿರಳಿವ ದೇಹದಭಿಮಾನದಲಿ 
ಜೀವರಹಸ್ಯವನರಿತವನೆ ಜ್ಞಾನಿ ಮೂಢ ||

ಮೂಢ ಉವಾಚ - 142

ನೀರು ಹರಿಯುವುದು ಬೆಂಕಿ ಸುಡುವುದು
ಬಾಲಕನು ಅಂತ್ಯದಲಿ ಮುಪ್ಪಡರಿ ಕುಗ್ಗುವನು |
ಚಣಚಣಕೆ ತನುವು ಬದಲಾಗುತಿಹುದು
ಬದಲಾಗುವುದೆ ತನುಗುಣವು ಮೂಢ ||


ಶುಕ್ರವಾರ, ಜನವರಿ 8, 2016

ಮೂಢ ಉವಾಚ - 141

ಪರಮಾತ್ಮ ರಚಿಸಿಹನು ನವರಸದರಮನೆಯ
ನಡೆದಾಡುವೀ ಮಹಲಿನರಸ ಜೀವಾತ್ಮ |
ಬುದ್ಧಿಯದು ಮಂತ್ರಿ ಮನವು ಸೇನಾಧಿಪತಿ
ಇಂದ್ರಿಯಗಳು ಕಾವಲಿಗಿಹವು ಮೂಢ ||

ಗುರುವಾರ, ಜನವರಿ 7, 2016

ಮೂಢ ಉವಾಚ - 140

ಹಿಂದೆ ಇರಲಿಲ್ಲ ಮುಂದೆ ಇರದೀ ದೇಹ
ಈಗಿರುವ ದೇಹಕರ್ಥ ಬಂದುದು ಹೇಗೆ |
ಶುದ್ಧ ಬುದ್ಧಿಯಲಿ ನೋಡೆ ತಿಳಿದೀತು ನಿನಗೆ
ಅಂತರಾತ್ಮನ ಕರೆಯು ಕೇಳಿಪುದು ಮೂಢ ||


ಮೂಢ ಉವಾಚ - 139

ಪ್ರಾಣವಿದ್ದರೆ ತ್ರಾಣ ಪ್ರಾಣದಿಂದಲೆ ನೀನು
ಪ್ರಾಣವಿರದಿರೆ ದೇಹಕರ್ಥವಿಹುದೇನು? |
ನಿನಗರ್ಥ ನೀಡಿರುವ ಜೀವಾತ್ಮನೇ ನೀನು 
ನೀನಲ್ಲ ತನುವೆಂಬುದರಿಯೋ ಮೂಢ ||



ಸೋಮವಾರ, ಜನವರಿ 4, 2016

ಮೂಡ ಉವಾಚ - 138

ರಕ್ತ ಮಾಂಸ ಮೂಳೆಗಳ ತಡಿಕೆಯೀ ತನುವು
ಚೈತನ್ಯ ಒಳಗಿರೆ ತನುವರ್ಥ ಪಡೆಯುವುದು | 
ದೇಹ ದೋಣಿಯಾಗಿಸಿ ಸಂಸಾರಸಾಗರವ
ದಾಂಟಿಸುವ ಅಂಬಿಗನೆ ಜೀವಾತ್ಮ ಮೂಢ ||


ಭಾನುವಾರ, ಜನವರಿ 3, 2016

ಮೂಢ ಉವಾಚ - 137

ದೇಹವೆಂಬುದು ಅನಂತ ಆಪತ್ತುಗಳ ತಾಣ
ಹೇಳದೆ ಕೇಳದೆ ಸಾವು ಬರುವುದು ಜಾಣ |
ದೇಹ ಚೈತನ್ಯ ಮೂಲಕೆ ಸಾವಿರದು ಕಾಣಾ
ಸಾಧು ಸಂತರ ಮಾತು ನೆನಪಿರಲಿ ಮೂಢ ||



ಶನಿವಾರ, ಜನವರಿ 2, 2016

ಮೂಢ ಉವಾಚ - 136

ತನುವು ಸುಂದರವೆಂದು ಉಬ್ಬದಿರು ಮನುಜ 
ಹೊಳೆವ ಚರ್ಮದೊಳಗಿಹುದು ಹೊಲಸು |
ತನುವಿನೊಳಿಲ್ಲ ಬಣ್ಣದೊಳಿಲ್ಲ ಚೆಲುವು ಹೊರಗಿಲ್ಲ
ಒಳಗಿನ ಗುಣದಲ್ಲಿ ಚೆಲುವಿಹುದು ಮೂಢ ||



ಮೂಢ ಉವಾಚ - 135

ಪಂಚಭೂತಗಳಿಂದಾದುದೀ ಮಲಿನ ದೇಹ
ಹೊಲಸು ತುಂಬಿರುವ ಕೊಳಕು ಚರ್ಮದ ಚೀಲ |
ಬಣ್ಣಬಣ್ಣದ ಬಟ್ಟೆಯಲಿ ಮುಚ್ಚುವರು ಕೊಳಕ
ಇಂತಪ್ಪ ದೇಹವನು  ನಾನೆನಲೆ ಮೂಢ ||