ಬುಧವಾರ, ಏಪ್ರಿಲ್ 23, 2014

ಅಭಾಸ

ಬದುಕಿನಲಪರಿಮಿತ ಅಭಾಸಗಳ ನಾ ಕಂಡೆ
ಪರಿತಪ್ತ ಮನಸಾಗಿಹುದು ಅಗ್ನಿಯ ಉಂಡೆ||

ಸತ್ಯ ನ್ಯಾಯ ಧರ್ಮಗಳೆಂದು ಕಂಡರೆ ಕನಸ

ಹೀಗಳೆದು ಕಾಲೆಳೆದು ಮಾಡುವರು ಪರಿಹಾಸ||

ಹುಂಬರೊಟ್ಟಾಗಿ ಹಂಗಿಸುತ ಜರೆಯುವರು

ಮನೆಮಂದಿಯೇ ಬೆಂಬಲವ ನೀಡದಿಹರು||

ನಳನಳಿಸಿ ಚಿಗುರೊಡೆದ ಸಂಬಂಧವೃಕ್ಷದ ಬೇರು

ಹುಳು ಹತ್ತಿ ಧರೆಗುರುಳಿ ಮನಸು ಚೂರು ಚೂರು||

ಪೋಷಿಸುವ ಕರಗಳು ನೇಣು ಬಿಗಿದುದ ಕಂಡೆ

ಬೇರು ಮೇಲೆದ್ದು ಚಿಗುರ ನುಂಗಿದುದ ಕಂಡೆ||

ಗುರು ಹಿರಿಯರನು ಅವಮಾನಿಸಿದುದ ಕಂಡೆ

ನಂಬಿದವರೇ ಕೊರಳ ಕೊಯ್ದುದನು ಕಂಡೆ||

ಮುನ್ನಡೆಯಲಡಿಯಿಟ್ಟ ನೆಲ ಕುಸಿದುದನು ಕಂಡೆ

ನಡೆದೆಡವಿದ್ದೆ ತಪ್ಪೆಂದು ನಿಂದಿಸಲು ನೊಂದೆ||

-ಕ.ವೆಂ. ನಾಗರಾಜ್.

ಭಾನುವಾರ, ಏಪ್ರಿಲ್ 20, 2014

ಕೆಂಪು ಬೆಳೆ

ಸ್ವಾರ್ಥದಾ ಭೂಮಿಗೆ ಚಾಡಿಮಾತುಗಳ ಮಳೆ ಬಿದ್ದು
ಕ್ಷೇತ್ರವದು ನಳನಳಿಸಿ ಕಂಗೊಳಿಸುತಿಹುದು|

ಅಸಹನೆ ಮತ್ಸರದುಪಕರಣದಿಂ ಉತ್ತಿರಲು
ದ್ವೇಷದಾ ಕಿಡಿಗಳೆಂಬೋ ಬೀಜವನು ಬಿತ್ತಿಹರು|

ಸಂಶಯದ ಗೊಬ್ಬರವ ಕಾಲಕಾಲಕೆ ಹಾಕಿ
ಶಾಂತಿ ಸಹನೆಯ ಕಳೆಯ ಚಿವುಟಿ ಹಾಕಿಹರು|

ವೈಮನಸ್ಸಿನ ಬೆಳೆಯು ಅಬ್ಬರದಿ ಬೆಳೆದಿರಲು
ಆಹಾ ಎಲ್ಲಿ ನೋಡಿದರಲ್ಲಿ ಕೆಂಪಿನೋಕುಳಿಯು

ಬೆಳೆಯ ಬೆಳೆದವರು ಬೆಳೆಯನುಂಡವರು
ಅಯ್ಯೋ ಕೆಂಗಣ್ಣರಾಗಿ ಮತಿಯ ಮರೆತಿಹರು|

ಪತಿ ಪತ್ನಿಯರ ನಡುವೆ ಹೆತ್ತವರ ನಡುವೆ
ವಿರಸದುರಿಯದು ಹೊತ್ತಿ ಜ್ವಲಿಸುತಿಹುದು|

ಅತ್ತೆ ಸೊಸೆಯರ ನಡುವೆ ಸೋದರರ ನಡುವೆ
ಮತ್ಸರದ ಬೆಂಕಿ ತಾ ಹೊಗೆಯಾಡುತಿಹುದು|

ಬದುಕು ಶಾಶ್ವತವಲ್ಲ ದ್ವೇಷ ಬಿಡಿ ಎಂದವರ
ನಾಲಗೆಯ ಕತ್ತರಿಸಿ ಕರುಳ ಬಗೆದೆಳೆದಿಹರು||

************
-ಕವಿ ನಾಗರಾಜ್.

ಮಂಗಳವಾರ, ಏಪ್ರಿಲ್ 15, 2014

ಸತ್ಯ

ಕಷ್ಟವೇನಲ್ಲ,
ಹುಡುಕಿದರೆ ಸಿಕ್ಕೀತು
ಬದುಕಲಗತ್ಯದ ಪ್ರೀತಿ!

ಕಠಿಣಾತಿ ಕಷ್ಟ,
ಹುಡುಕಿದರೂ ಸಿಕ್ಕದು
ಎಲ್ಲಿಹುದದು ಸತ್ಯ?

ಅಯ್ಯೋ ಮರುಳೆ,
ಪಂಡಿತೋತ್ತಮರೆಂದರು
ದೇವರೇ ಸತ್ಯ!

ದೇವರು? ಸತ್ಯ?
ಎಲ್ಲಿಹುದದು ಸತ್ಯ?
ಇನ್ನು ದೇವರು?

ಸಿಕ್ಕರೂ ಸತ್ಯ,
ಮುಖವಾಡದಡಗಿಹುದು ಸತ್ಯ,
ಅರ್ಥವಾಗದ ಸತ್ಯ!

ಅರ್ಥೈಸಿದರೆ ಸತ್ಯ,
ಪಥ್ಯವಾದರೆ ಸತ್ಯ,
ದೇವನೊಲಿವ, ಸತ್ಯ!
****
-ಕವಿನಾಗರಾಜ್.

ಶನಿವಾರ, ಏಪ್ರಿಲ್ 5, 2014

ಮಕ್ಕಳಿಗೆ ಕಿವಿಮಾತು

ಬಾಳಸಂಜೆಯಲಿ ನಿಂತಿಹೆನು ನಾನಿಂದು |
ಮನಸಿಟ್ಟು ಕೇಳಿರಿ ಹೇಳುವೆನು ಮಾತೊಂದು ||

ಕೇಳುವುದು ಬಿಡುವುದು ನಿಮಗೆ ಬಿಟ್ಟಿದ್ದು |
ಅಂತರಾಳದ ನುಡಿಗಳಿವು ಹೃದಯದಲ್ಲಿದ್ದದ್ದು ||

ಗೊತ್ತಿಹುದು ನನಗೆ ರುಚಿಸಲಾರದು ನಿಮಗೆ |
ಸಂಬಂಧ ಉಳಿಸುವ ಕಳಕಳಿಯ ಮಾತು ||

ಗೊತ್ತಿಹುದು ನನಗೆ ಪ್ರಿಯವಹುದು ನಿಮಗೆ |
ಸಂಬಂಧ ಕೆಡಿಸುವ ಬಣ್ಣ ಬಣ್ಣದ ಮಾತು ||

ಹುಳುಕು ಹುಡುಕುವರೆಲ್ಲೆಲ್ಲು ವಿಷವನೆ ಕಕ್ಕುವರು |
ಒಳಿತು ಕಾಣುವರೆಲ್ಲೆಲ್ಲು ಅಮೃತವ ಸುರಿಸುವರು ||

ದಾರಿಯದು ಸರಿಯಿರಲಿ ಅನೃತವನಾಡದಿರಿ |
ತಪ್ಪೊಪ್ಪಿ ಸರಿನಡೆವ ಮನ ನಿಮಗೆ ಇರಲಿ ||

ಗೌರವಿಸಿ ಹಿರಿಯರ ಕಟುಮಾತನಾಡದಿರಿ |
ಅಸಹಾಯಕರ ಶಾಪ ತಂದೀತು ಪರಿತಾಪ |

ದೇವರನು ಅರಸದಿರಿ ಗುಡಿಗೋಪುರಗಳಲ್ಲಿ |
ದೇವನಿಹನಿಲ್ಲಿ ನಮ್ಮ ಹೃದಯಮಂದಿರದಲ್ಲಿ ||

ಇಟ್ಟಿಗೆ ಕಲ್ಲುಗಳ ಜೋಡಿಸಲು ಕಟ್ಟಡವು |
ಹೃದಯಗಳ ಜೋಡಿಸಿರಿ ಆಗುವುದು ಮನೆಯು ||

ಮಕ್ಕಳೇ ನಾ ನಂಬಿದಾ ತತ್ವ ಪಾಲಿಸುವಿರಾ? |
ಬಾಳ ಪಯಣದ ಕೊನೆಗದುವೆನಗೆ ಸಂಸ್ಕಾರ ||
-ಕ.ವೆಂ.ನಾಗರಾಜ್.