ಶುಕ್ರವಾರ, ಜೂನ್ 30, 2017

ಮೂಢ ಉವಾಚ - 294

ಹುಟ್ಟು ಮೊದಲಲ್ಲ ಸಾವು ಕೊನೆಯಲ್ಲ
ಹುಟ್ಟು ಸಾವಿನ ಕೊಂಡಿ ಬದುಕಿನಾ ಬಂಡಿ|
ಹಿಂದಕೋ ಮುಂದಕೋ ಬಂಡಿ ಸಾಗುವುದು
ನಶಿಸಿದರೆ ಏರುವೆ ಹೊಸಬಂಡಿ ಮೂಢ||


ಗುರುವಾರ, ಜೂನ್ 29, 2017

ಮೂಢ ಉವಾಚ - 293

ಜೀವವಿರುವ ದೇಹದಲ್ಲಿ ದೇವನಿರುವ ಕಾಣು
ಜೀವವಿರದ ದೇಹವದು ಹರಿದ ಬಟ್ಟೆ ತಾನು|
ಸುಟ್ಟರೂ ಹೂತರೂ ಅದಕೆ ತಿಳಿಯದಲ್ಲ
ಸಂಸ್ಕಾರ ಸಿಗಬೇಕು ಮನಕೆ ಮೂಢ||


ಮೂಢ ಉವಾಚ - 292

ದಾನಿಯೆಂದೆನುತ ಕೊರಳೆತ್ತಿ ನಡೆಯದಿರು
ತರಲಿಲ್ಲ ನೀನು ಕೊಡುವೆ ಮತ್ತೇನು|
ಕೊಟ್ಟದ್ದು ನಿನದಲ್ಲ ಪಡೆದದ್ದು ನಿನಗಲ್ಲ 
ದಾನಿಗಳ ದಾನಿ ಒಬ್ಬನೇ ಮೂಢ||


ಬುಧವಾರ, ಜೂನ್ 28, 2017

ಮೂಢ ಉವಾಚ - 291

ಇತ್ತಿಹನು ಭಗವಂತ ಬದುಕಲೀ ಬದುಕು
ಬದುಕುವ ಮುನ್ನ ಸಾಯುವುದೆ ಕೆಡುಕು|
ಸಾಯುವುದು ಸುಲಭ ಬದುಕುವುದು ಕಷ್ಟ
ಸುಲಭದ ಸಾವ ಬಯಸದಿರು ಮೂಢ||  


ಸೋಮವಾರ, ಜೂನ್ 26, 2017

ಮೂಢ ಉವಾಚ - 290

ಬಯಸಿದರು ಸಾವೆ ಬಯಸದಿದ್ದರು ಸಾವೆ
ಬೇಡವೆಂದರೆ ನೀನು ಬರದಿಹುದೆ ಸಾವು|
ಬೇಡದಿರು ಮನವೆ ಬೇಡದಿಹ ಸಾವ
ಅಡ್ಡದಾರಿಯಲಿ ನುಗ್ಗದಿರು ಮೂಢ||


ಭಾನುವಾರ, ಜೂನ್ 25, 2017

ಮೂಢ ಉವಾಚ - 289

ಚಲಿಸದೇ ಚಲಿಸುವನು ಅವನೊಬ್ಬನೇ
ಹತ್ತಿರದಿ ಅವನೆ ದೂರದಲು ಅವನೆ|
ಒಳಹೊರಗು ಎಲ್ಲೆಲ್ಲು ಅವನೊಬ್ಬನೇ
ಸರ್ವಮಯನೊಬ್ಬನೆ ತಿಳಿಯೊ ನೀ ಮೂಢ||



ಶುಕ್ರವಾರ, ಜೂನ್ 23, 2017

ಮೂಢ ಉವಾಚ - 288

ಎರಡಿಲ್ಲ ಮೂರಿಲ್ಲ ನಾಲ್ಕಿಲ್ಲವೇ ಇಲ್ಲ
ಐದಲ್ಲ ಆರಲ್ಲ ಏಳಲ್ಲವೇ ಅಲ್ಲ|
ಎಂಟೊಂಬತ್ತಿಲ್ಲ ಹತ್ತು ಕಂಡೇ ಇಲ್ಲ
ಸರ್ವವ್ಯಾಪಕ ಶಕ್ತನೊಬ್ಬನೇ ಮೂಢ|| 





ಗುರುವಾರ, ಜೂನ್ 22, 2017

ಮೂಢ ಉವಾಚ - 287


ಸಜ್ಜನರು ಹಿತವಾಗಿ ಧೀಬಲವು ಮೇಳವಿಸಿ
ಜ್ಞಾನಿಗಳ ಹಿತನುಡಿಯು ನಾಯಕಗೆ ನೆರವಾಗೆ|
ಅಂತಿಪ್ಪ ನಾಡು ಪುಣ್ಯವಂತರ ಬೀಡು
ಸಜ್ಜನರ ಒಡನಾಟ ಹಿತಕಾರಿ ಮೂಢ||


ಬುಧವಾರ, ಜೂನ್ 21, 2017

ಮೂಢ ಉವಾಚ - 286

ಒಳಗಣ್ಣು ಮುಚ್ಚಿದ್ದು ಹೊರಗಣ್ಣು ತೆರೆದಿರಲು
ಕಣ್ಣಿದ್ದು ಕುರುಡನೆನಿಸುವೆಯೊ ನೀನು|
ಒಳಗಿವಿ ಮುಚ್ಚಿದ್ದು ಹೊರಗಿವಿ ತೆರೆದಿರಲು
ನಿನ್ನ ದನಿಯೇ ನಿನಗೆ ಕೇಳಿಸದು ಮೂಢ||


ಸೋಮವಾರ, ಜೂನ್ 19, 2017

ಮೂಢ ಉವಾಚ - 285

ಕಾಣದ್ದು ಕಾಣುವುದು ಕೇಳದ್ದು ಕೇಳುವುದು
ಕಂಡಿರದ ಕೇಳಿರದ ಸತ್ಯದರಿವಾಗುವುದು|
ಮುಚ್ಚಿದ್ದ ದಾರಿಗಳು ನಿಚ್ಚಳದಿ ತೆರೆಯುವುವು
ಏಕಾಂತದಲಿಹುದು ನಿನ್ನತನ ಮೂಢ|| 



ಶನಿವಾರ, ಜೂನ್ 17, 2017

ಮೂಢ ಉವಾಚ - 284

ಒಂಟಿಯೆಂದೆನುತ ಕೊರಗದಿರು ಮರುಳೆ
ಕೊರಗಿ ಮುದುಡಿದರೆ ಜೊತೆಗಾರು ಸಿಗರು|
ಮೈಕೊಡವಿ ಮೇಲೆದ್ದು ಮುಂದಡಿಯನಿಡಲು
ಎಲ್ಲರೂ ನಿನ್ನವರೆ ತಿಳಿಯೊ ಮೂಢ||


ಶುಕ್ರವಾರ, ಜೂನ್ 16, 2017

ಮೂಢ ಉವಾಚ - 283

ಸಂತೋಷ ಜೊತೆಗಿರಲು ಮತ್ತೇನೂ ಬೇಕಿಲ್ಲ
ಮತ್ತೇನೂ ಬೇಡದಿರೆ ಸಂತೋಷ ಬಾಳೆಲ್ಲ|
ಇರುವುದು ಸಾಕೆಂಬ ಭಾವ ಸಂತೋಷ
ಅರಿತವನೆ ಪರಮಸುಖಿ ಕಾಣು ಮೂಢ||


ಮೂಢ ಉವಾಚ - 282

ನುಡಿವ ಸತ್ಯವದು ಗೆಳೆತನವ ನುಂಗೀತು
ಬಂಧುತ್ವ ಕಳೆದೀತು ಸೌಜನ್ಯ ಮರೆಸೀತು|
ಮರುಳು ಮಾಡುವ ಸುಳ್ಳಿಗಿಹ ಬೆಲೆಯ
ಕೊಡರು ಸತ್ಯಕೆ ಇದು ಸತ್ಯ ಮೂಢ||  


ಮಂಗಳವಾರ, ಜೂನ್ 13, 2017

ಮೂಢ ಉವಾಚ - 281

ಹಿರಿಯ ಪರ್ವತದ ಬದಿಯೆ ಕಂದಕವು
ಮೂಢರಿರಲಾಗಿ ಬುದ್ಧಿವಂತಗೆ ಬೆಲೆಯು|
ಸುಖವ ಬಯಸಿರಲು ಜೊತೆಗಿರದೆ ದುಃಖ
ಒಂದರಿಂದಾಗಿ ಮತ್ತೊಂದು ಮೂಢ||


ಸೋಮವಾರ, ಜೂನ್ 12, 2017

ಮೂಢ ಉವಾಚ - 280

ಹುಟ್ಟದೇ ಇರುವವರು ಸಾಯುವುದೆ ಇಲ್ಲ
ಹುಟ್ಟಿದರು ಎನಲವರು ಸತ್ತಿರಲೆ ಇಲ್ಲ|
ಸತ್ತರು ಎನಲವರು ಹುಟ್ಟಿರಲೆ ಇಲ್ಲ
ಹುಟ್ಟುಸಾವುಗಳೆರಡು ಮಾಯೆ ಮೂಢ||


ಶುಕ್ರವಾರ, ಜೂನ್ 9, 2017

ಮೂಢ ಉವಾಚ - 279

ಇವರಿಂತೆ ಅವರಂತೆ ಎಂತಿರಲಿ ಏನಂತೆ
ಇರುವೆ ನೀನೆಂತೆ ಬಿಟ್ಟುಬಿಡು ಪರಚಿಂತೆ|
ಹುಳುಕನೆತ್ತಾಡದಿರು ಕೆಡುಕು ನಿನಗಂತೆ
ಕೊಟ್ಟಿಗೆಯ ಶುನಕನಾಗದಿರು ಮೂಢ||
[ಕೊಟ್ಟಿಗೆಯ ಶುನಕ: ಕೊಟ್ಟಿಗೆಯಲ್ಲಿ ನಾಯಿ ಇದ್ದರೆ ಅದು ತಾನೂ ಹುಲ್ಲು ತಿನ್ನುವುದಿಲ್ಲ,ಹಸುವಿಗೂ ಹುಲ್ಲು ತಿನ್ನಲು ಬಿಡುವುದಿಲ್ಲ.]


ಗುರುವಾರ, ಜೂನ್ 8, 2017

ಮೂಢ ಉವಾಚ - 278

ತಿಳಿದವರು ಯಾರಿಹರು ಆಗಸದ ನಿಜಬಣ್ಣ
ತುಂಬುವರು ಯಾರಿಹರು ಆಗಸದ ಶೂನ್ಯ|
ಆಗಸದ ನಿಜತತ್ವ ಅರಿತವರು ಯಾರಿಹರು 
ಗಗನದ ಗಹನತೆಗೆ ಮಿತಿಯೆಲ್ಲಿ ಮೂಢ||

ಚಿತ್ರಕೃಪೆ: ಮಿತ್ರ ಚೇತನ್ (ಚಿಕ್ಕು)



ಬುಧವಾರ, ಜೂನ್ 7, 2017

ಮೂಢ ಉವಾಚ - 277

ಅರಿವಿರದ ನರನಿರುವನೆ ದುರಿತದಿಂ ದೂರ
ಎಡವಿ ಜಾರುವನು ಕವಿಯೆ ಗೂಢಾಂಧಕಾರ|
ಬೆಳಗೀತು ಬಾಳು ಪಸರಿಸಲರಿವ ಬೆಳಕು 
ವಿಕಸಿಸುವ ಹಾದಿ ತೋರೀತು ಮೂಢ||


ಮಂಗಳವಾರ, ಜೂನ್ 6, 2017

ಮೂಢ ಉವಾಚ - 276

ಅರಿವು ಧರ್ಮದ ಶಿರವು ಕರ್ಮ ಕೈಕಾಲುಗಳು
ತಿರುಳಿರದ ಫಲಕೆ ಸಮ ಅರಿವಿರದಕರ್ಮ|
ಕರ್ಮವಿರದಾ ಧರ್ಮ ಒಣಶುಷ್ಕ ಸಿದ್ಧಾಂತ
ನಿಜಧರ್ಮದ ಮರ್ಮ ಸತ್ಕರ್ಮ ಮೂಢ||



ಸೋಮವಾರ, ಜೂನ್ 5, 2017

ಮೂಢ ಉವಾಚ - 275

ಮಾಯೆಯಲಿ ಸೊಗವು ಮಾಯೆಯಲಿ ಜಗವು
ಮಾಯೆಯಲಿ ನಲಿವು ಮಾಯೆಯಲಿ ನೋವು|
ಮಾಯಾವಿ ಮಾಯೆಯಿಂ ಜಗವು ನಡೆದಿಹುದು
ಮಾಯೆಯಿಲ್ಲದಿರೆ ಜಗವೆಲ್ಲಿ ಮೂಢ|| 

ಭಾನುವಾರ, ಜೂನ್ 4, 2017

ಮೂಢ ಉವಾಚ - 274

ಅಪ್ಪ ಅಮ್ಮರು ಸುಳ್ಳು ಸತಿಸುತರು ಸುಳ್ಳು
ಬಂಧು ಮಿತ್ರರು ಸುಳ್ಳು ತನದೆಂಬುದೇ ಸುಳ್ಳು|
ಕಂಡೆನೆಂಬುದು ಸುಳ್ಳು ಕಾಣೆನೆಂಬುದು ಸುಳ್ಳು
ಸುಳ್ಳಿನ ಗುಳ್ಳೆಯೊಡೆದೀತು ಮೂಢ||


ಶನಿವಾರ, ಜೂನ್ 3, 2017

ಮೂಢ ಉವಾಚ - 273

ಸಕಲವನು ಬಯಸುವ ಲೋಭದ ಪರಿಯೇನು 
ಅಹಮಿಕೆಯು ತಾನೆರಗಿ ಮೆರೆದಿಹ ಸಿರಿಯೇನು|
ಗೆಲ್ಲಹೊರಟಿಹುದೇನು ಬಾಳಲಾರದ ಮನುಜ
ಮಾಯೆಯ ಮುಸುಕು ಸರಿದೀತೆ ಮೂಢ|| 

ಶುಕ್ರವಾರ, ಜೂನ್ 2, 2017

ಮೂಢ ಉವಾಚ - 272

ಪ್ರಿಯರಾರು ಆರಿಸೆನೆ ಅನ್ಯರನು ತೋರುವರೆ
ಸತಿಸುತರನಾರಿಸರು ಬಂಧುಗಳನಾರಿಸರು|
ಹಿರಿಯರನಾರಿಸರು ದೇವರದೇವನಾರಿಸರು
ತಾವೆ ಮಿಗಿಲೆಂಬರು ಇದು ಸತ್ಯ ಮೂಢ||







ಗುರುವಾರ, ಜೂನ್ 1, 2017

ಮೂಢ ಉವಾಚ - 271

ನೂರು ಜನ್ಮವು ಅಲ್ಪ ತಿಳಿಯಲೀ ಜಗವ
ಅಲ್ಪಜ್ಞ ಕುಣಿವ ತೋರಿ ಪಂಡಿತನ ಭಾವ|
ಪರರ ಹೀಗಳೆದು ತಾನೆ ಸರಿಯೆನುವವನು
ಮಾಯೆಯ ಬಲೆಯಲಿಹ ಕೀಟ ಮೂಢ||