ಕವನ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಕವನ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಸೋಮವಾರ, ಜನವರಿ 28, 2019

ಗೊಡ್ಡು ಮುದುಕಿಯ ಸ್ವಗತ


ನೀವೇನು ಕಂಡಿರಿ ದಾದಿಯರೇ? ಏನು ಕಂಡಿರಿ?
ನನ್ನನ್ನು ಕಂಡು ಏನೆಂದು ಭಾವಿಸಿಹಿರಿ?
ಗೊಣಗುಡುವ ಗೊಡ್ಡು ಮುದುಕಿ, ಬುದ್ಧಿಯಿರದವಳು?
ಗೊತ್ತು ಗುರಿಯಿರದವಳು, ಕಣ್ಣುಮಂಜಿನವಳೆಂದೆ?

ಉದುರಿಸುತಾ ತಿನುವವಳು, ಉತ್ತರಿಸದವಳು?
ಸರಿಯಾಗಿ ತಿನ್ನೆಂದು ಗಟ್ಟಿದನಿಯಲಿ ಗದರಿಸಲು ನೀವು |
ಗಮನಿಸದಂತೆ ಇರುವವಳು? ನಿಮ್ಮ ಪರಿಯ ತಿಳಿಯದವಳು?
ಕಾಲುಚೀಲವೋ, ಪಾದರಕ್ಷೆಯೋ ಕಳೆಯುತಿರುವವಳು?

ಒಪ್ಪಲಿ, ಒಪ್ಪದಿರಲಿ, ನಿಮ್ಮಿಚ್ಛೆಯಂತೆ ಬಿಟ್ಟುಬಿಡುವವಳು
ಶುಚಿಗೊಳಿಸುವಾಗ, ತಿನ್ನಿಸುವಾಗ? ದೀರ್ಘ ದಿನವೊಂದು ಕಳೆಯಲೆಂದೆ?
ಅದೇ ನೀವು ತಿಳಿದಿರುವುದು? ಅದೇ ತಾನೇ ನೀವು ಕಂಡಿರುವುದು?
ಕಣ್ಣು ತೆರಿ ದಾದಿ, ನೀನು ನನ್ನನ್ನು ಕಾಣುತ್ತಿಲ್ಲ!  

ನಾನಾರೆಂದು  ಹೇಳುವೆನು ಕೇಳಿ, ಬಿಮ್ಮನೆ ಕುಳಿತುಕೊಂಡಿರುವಾಗ
ನಿಮ್ಮಿಚ್ಛೆಯಂತೆ ನಡೆಯುತಿರುವಾಗ, ನಿಮ್ಮಿಚ್ಛೆಯಂತೆ ತಿನ್ನುತಿರುವಾಗ!
ನಾನೊಬ್ಬ ಹತ್ತು ವರ್ಷದ ಹುಡುಗಿ, ಅಪ್ಪ -ಅಮ್ಮರ ಜೊತೆಗೆ
ಪ್ರೀತಿಯಲಿ ಕಾಣುವ ಸೋದರ-ಸೋದರಿಯರೊಡನೆ!

 ಹದಿನಾರರ ಹುಡುಗಿ ನಾನು, ಪಾದಗಳಲಿ ರೆಕ್ಕೆಯಿಹವು
ಪ್ರಿಯಕರನು ಬಹನೆಂದು ಕನಸ ಕಾಣುತಿರುವವಳು !
ಇಪ್ಪತ್ತರಲಿ ಮದುಮಗಳು, ಹೃದಯವದು ಹಾರಿ ಕುಣಿದಿಹುದು 
ಇತ್ತ ಭರವಸೆಗಳ ಕಾಪಿಡುವ ವಾಗ್ದಾನಗಳ ನೆನಪಿನಲಿ!

ಇಪ್ಪತ್ತೈದರಲಿ ನಾನೀಗ ನನ್ನದೇ ಮಗುವಿನ ತಾಯಿ
ಆಸರೆ ಬಯಸುವ ಮಗು, ಭದ್ರತೆಯನಿತ್ತಿರಲು ಸಂತಸದ ಮನೆಯು|
ಮೂವತ್ತರ ಹೆಣ್ಣೀಗ, ವೇಗದಲಿ ಮಗುವು ಬೆಳವಣಿಗೆ ಕಂಡಿಹುದು
ಒಬ್ಬರೊಬ್ಬರಲಿ ಬೆಸೆದಿರುವ ಬಂಧ, ಕೊನೆಯವರೆಗೂ ಇರಲಿ ಅನುಬಂಧ ||

ನನಗೀಗ ನಲವತ್ತು, ನನ್ನ ಮಕ್ಕಳು ಬೆಳೆದು ಹೊರಟುಹೋಗಿಹರು
ನನ್ನವನು ನನ್ನ ಜೊತೆಗೆ ಉಳಿದಿಹನು, ನನ್ನ ದುಃಖವನು ಮರೆಸಲೆಂದು|
ಐವತ್ತರಲಿ ಮತ್ತೊಮ್ಮೆ ಮಕ್ಕಳು, ನನ್ನ ಸುತ್ತಲೆ ತೊಡರಿ ಆಡಿಕೊಂಡಿಹರು
ಮತ್ತೊಮ್ಮೆ ಮಕ್ಕಳನು ತಿಳಿದೆವು, ನಾನು ಮತ್ತೆ ನನ್ನ ಪತಿರಾಯ ||

ಮೇಲೆ ಅಡರಿದವು ಕತ್ತಲೆಯ ದಿನಗಳು, ಅಸ್ತಂಗತನು ಪತಿರಾಯ 
ಭವಿಷ್ಯವನು ನೆನೆದು ಭಯದಿಂದ ನಡುಗಿಹೆನು|
ನನ್ನ ಮಕ್ಕಳು ಅವರವರ ಮಕ್ಕಳನು ನೋಡಿಕೊಂಡಿಹರು
ಹಳೆಯ ವರ್ಷಗಳನು, ಗೊತ್ತಿರುವ ಪ್ರೀತಿಯನು ನೆನೆಯುತಿಹೆನು||

ನಾನೀಗ ಮುದುಕಿ, ಪ್ರಕೃತಿಯು ಕ್ರೂರಿ
ನಗೆಪಾಟಲಿಗೆ ದೂಡಿದೀ ಮುದಿತನವೆನ್ನ ಮೂರ್ಖಳಂತಾಗಿಸಿತು|
ಕುಸಿಯುತಿಹ ದೇಹ, ಗತ್ತು ಗಾಂಭೀರ್ಯ ಹೊರಟುಹೋಗಿಹವು
ಒಂದೊಮ್ಮೆ ಹೃದಯವಿದ್ದೆಡೆಯಲ್ಲಿ ಇಹುದೀಗ ಒಂದು ಕಲ್ಲು ||

ಬಲ್ಲಿರಾ, ಈ ಮುದಿ ಶವದೊಳಗೊಬ್ಬ ಚಿಕ್ಕ ಹುಡುಗಿಯಿದ್ದಾಳೆ
ಆಗಿಂದಾಗ ಪುನಃಪುನಃ ಒಡೆದ ಹೃದಯವುಬ್ಬುವುದು|
ಸಂತೋಷಗಳ ನೆನೆಯುವೆನು ನೋವುಗಳ ನೆನೆಯುವೆನು
ಪ್ರೀತಿಸುತ ಬದುಕುವೆನು ಜೀವನವ ಮತ್ತೊಮ್ಮೆ||

ಹಳೆಯ ವರುಷಗಳವು ಎಲ್ಲವೂ ಅಲ್ಪ, ವೇಗದಲಿ ಕಳೆದುಹೋಗಿಬಿಟ್ಟಿಹವು
ಕಠಿಣ ವಾಸ್ತವತೆ ಒಪ್ಪಿಕೊಂಡಿಹೆನು, ಯಾವುದೂ ಉಳಿಯದು|
ನಿಮ್ಮ ಕಣ್ಣು ತೆರೆಯಿರಿ ಜನರೇ, ತೆರೆದು ನೋಡಿ
ನಾನು ಗೊಣಗುವ ಗೊಡ್ಡು ಮುದುಕಿಯಲ್ಲ, ಹತ್ತಿರ ಬನ್ನಿ, ನನ್ನನ್ನು ನೋಡಿ||

ಮೂಲ ಇಂಗ್ಲಿಷ್: ಅನಾಮಧೇಯ
ಕನ್ನಡ ಭಾವಾನುವಾದ: ಕ.ವೆಂ.ನಾಗರಾಜ್.
ನಿವೇದನೆ:  
     ವಿದೇಶದ ನರ್ಸಿಂಗ್ ಹೋಮ್ ಒಂದರಲ್ಲಿ ಸತ್ತ ವೃದ್ಧೆಯ ಹತ್ತಿರ ಸಿಕ್ಕ ಕವನ ಇದು. ಇದು ವೈರಲ್ ಆಗಿ ಅಂತರ್ಜಾಲ ತಾಣದಲ್ಲಿ ಹರಿದಾಡಿದೆ. ಓದಿದ ನನ್ನ ಮೇಲೂ ಇದು ಪ್ರಭಾವ ಬೀರಿದೆ. ವೃದ್ಧರನ್ನು ಕಂಡಾಗ ಆದರದಿಂದ ಕಾಣುವ ಮನೋಭಾವ ಜಾಗೃತಗೊಳ್ಳಲು ಇಂತಹ ಬರಹಗಳು ಅಗತ್ಯ. ಅದರ ಕನ್ನಡ ಭಾವಾನುವಾದ ಮಾಡಿ ಸಹೃದಯರ ಅವಗಾಹನೆಗೆ ಮಂಡಿಸಿರುವೆ.

ಬುಧವಾರ, ಆಗಸ್ಟ್ 22, 2018

ಸತ್ಯಪ್ಪನ ಸತ್ಯ !


ಸತ್ಯಪ್ಪನೆಂಬೋನು ಎಲ್ಲದಾನೋ ಯಪಾ
ನಡುರಾತ್ರ್ಯಾಗ ಬಿಡದೆ ಹೊತ್ತೊಯ್ದರೋ |
ನನ್ನ ದಿಕ್ಕವನು ನನ್ನ ಉಸಿರವನು ಬಿಟ್ಟು ಬಿಡಿರೋ ಯಪಾ
ಸೆರಗೊಡ್ಡಿ ಬೇಡುವೆನು ಪುಣ್ಣೇವ ಕಟ್ಕೋರೀ ಯಪಾ ||

ನಮ್ಹಂತ್ಯಾಕ ಸತ್ಯಪ್ಪ ಇಲ್ಲಾ ಕಣಬೇ
ದೊರೆಯ ಕಾರ‍್ನಾಗವನ ಒಯ್ದಾರಬೇ |
ದೊರೆಯ ಕಣ್ಣೀಗಿ ಅವ ಕಿಸುರು ಕಣಬೇ
ದೊರೆಯ ಹಾದ್ಯಾಗವನು ಮುಳ್ಳಂತ್ಯಬೇ ||

ಅಂಗನಬೇಡ ನನರಾಜ ಕಾಪಾಡೋ ಯಪಾ
ನೀನೆ ನನ ದ್ಯಾವ್ರಂತ ದೀಪ ಹಚ್ತೀನಪಾ |
ಊರ ಬಿಟ್ಟೇವಂತೆ ತಿರುಪೆ ಬೇಡೇವಂತೆ
ಜೀವವೊಂದನಕುಳಿಸಿ ಬಿಟ್ಟು ಬಿಡಿರೋ ಯಪಾ ||

ಚಿಂತೆ ಬಿಡು ಮುದುಕಿ ಸತ್ಯಪ್ಪ ಬರ್ತಾನಬೇ
ಉಪ್ಪೆಸರು ಮಾಡಿಟ್ಟು ದಾರಿ ಕಾಯ್ವೋಗಬೇ |
ಆಳು ಮಕ್ಕಳು ನಾವು ನಮ್ಕೈಲಿ ಏನೈತಬೇ
ಕನಿಕರವ ದಣಿಗೆ ಅಡ ಇಟ್ಟೀವಬೇ ||

ಸತ್ಯಪ್ಪ ಬರದೆ ಓಗಾಣಿಲ್ಲ ನಾ ಓಗಾಣಿಲ್ಲಾ 
ಎಂಗಾರ ಮಾಡ್ಯವನ ಉಳಿಸೋ ಯಪಾ |
ಎಲ್ಲವನೊ ನನ ಕಂದ ಎಂಗವನೋ ನನ ಚಂದ
ನನ್ನೊಪ್ಪ ಮಾಡುದಕೆ ಅವನು ಬೇಕ್ರೋ ಯಪಾ ||

ಅಷ್ಟರಲ್ಲಿ . .
ಭರ್ರೆಂದು ಕಾರೊಂದು ಮೂಟೆಯೊಂದನು ಇಳಿಸಿ 
ಸರ್ರೆಂದು ತಿರುಗಿ ಒಂಟೋಯ್ತಲಾ |
ಚೀರುತ್ತ ಭೋರ‍್ಯಾಡಿ ಮುದುಕಿ ಅಳ್ತೈತಲ್ಲಾ
ಬಿಟ್ಟ ಕಣ್ ಬಿಟ್ಟಂತೆ ನೆಟ್ಟ ಕಣ್ ನೆಟ್ಟಂತೆ ಸತ್ಯಪ್ಪ ಕುಂತವ್ನಲ್ಲ ||

ಸತ್ಯಪ್ಪ ಸತ್ತಿಲ್ಲ ಸತ್ಯ ಮಾತ್ರ ಪೂರ್ತಿ ಸತ್ತೋಯ್ತಲಾ
ಉಳ ಬಿದ್ದು ಸಾಯಿರೋ ಅದ್ದು ತಿಂದೋಗಲೋ |
ಮಣ್ಣು ತೂರಿದ ಮುದುಕಿ ಶಾಪ ಹಾಕಿತಲ್ಲಾ
ಕರಿ ಮೋಡ ಮುಸುಕಿ ಬಾನೆಲ್ಲ ಕಪ್ಪಾಯ್ತಲಾ ||

ಹಲವು ದಿನಗಳ ನಂತರ . .
ಸತ್ಯಪ್ಪ ಬದುಕವನೆ ಹೈಕಳ ಎದೆಯೊಳಗೆ ಇಳಿದುಬಿಟ್ಟವನೆ
ಎದೆ ಸೆಟೆಸಿದಾ ಸತ್ಯ ಮುಷ್ಟಿ ಬಿಗಿದಾ ಸತ್ಯ |
ಕನಲಿ ಕೆರಳಿದ ಸತ್ಯ ಒಡಲ ಬೆಂಕಿಯ ಸತ್ಯ
ದೊರೆಯಂಜಿ ಮುಲುಗುಟ್ಟಿ ಸತ್ಯನ ಕಾಲಿಗೆ ಬಿದ್ದುಬಿಟ್ಟವನೆ ||
-ಕ.ವೆಂ. ನಾಗರಾಜ್
**************
26.8.2018ರ ವಿಕ್ರಮ ವಾರಪತ್ರಿಕೆಯಲ್ಲಿ ಪ್ರಕಟಿತ:

ಶುಕ್ರವಾರ, ಜನವರಿ 26, 2018

ಮಾಡಿದ್ದುಣ್ಣೋ ಮಹರಾಯ! - As you sow, so shall you reap!

ಎಂಥ ಸತ್ಯ ಎಂಥ ಸತ್ಯ ಎಂಥ ಸತ್ಯವು |
ಅಟ್ಟಿದ್ದೇ ಉಣಬೇಕು ಎಂಬ ಸತ್ಯವು || ಪ ||

ಒಂಬತ್ತು ಬಾಗಿಲಿನ ದೇವಮಂದಿರ
ಮಂದಿರದ ಅಧಿಪತಿಯೆ ಸತ್ಯಸುಂದರ |
ಸುತ್ತೆಲ್ಲ ಹರಿದಿಹುದು ನವರಸಧಾರಾ
ಮಾಯೆಯ ಮುಸುಕಿನಲಿ ಜೀವನಸಾರ || ೧ ||

ಮಂದಿರದ ಒಳಗಿಹುದು ಕಾಣದ ಪಾತ್ರೆ
ಅಂಕಿಲ್ಲದ ಡೊಂಕಿಲ್ಲದ ಸೋರದ ಪಾತ್ರೆ |
ದೇವನ ಲೆಕ್ಕದಲಿ ದೋಷವೆಂಬುದಿಲ್ಲ
ಬೇಯುತಿದೆ ಪಾತ್ರೆಯಲಿ ಮಾಡಿದಡುಗೆಯೆಲ್ಲ || ೨ ||

ಮಾಡಿದ ಕರ್ಮವದು ಬೆನ್ನನು ಬಿಡದು
ಧನಕನಕ ಬಂಧು ಬಳಗ ನೆರವಿಗೆ ಬರದು |
ಅಟ್ಟಡುಗೆಯುಣ್ಣದೆ ವಿಧಿಯೆ ಇಲ್ಲವು
ರಸಪಾಕವ ಮಾಡುವುದೆ ಇರುವ ದಾರಿಯು || ೩ ||
-ಕ.ವೆಂ.ನಾ.
*************
ಪ್ರೇರಣೆ:
ನ ಕಿಲ್ಬಿಷಮತ್ರ ನಾಧಾರೋ ಅಸ್ತಿ ನ ಯನ್ಮಿತ್ರೈಃ ಸಮಮಮಾನ ಏತಿ |
ಅನೂನಂ ಪಾತ್ರಂ ನಿಹಿತಂ ನ ಏತತ್ಪಕ್ತಾರಂ ಪಕ್ವಃ ಪುನರಾ ವಿಶಾತಿ ||  (ಅಥರ್ವ.೧೨.೩.೪೮)


     ಅರ್ಥ:  ಈಶ್ವರೀಯ ನ್ಯಾಯವಿಧಾನದಲ್ಲಿ ಯಾವ ಒಡಕೂ, ದೋಷವೂ ಇಲ್ಲ. ಬೇರೆ ಯಾವ ಆಧಾರವೂ ಇಲ್ಲ. ಸ್ನೇಹಿತರ ಮಧ್ಯೆ ಸೇರಿಕೊಂಡು, ಕ್ಷೇಮವಾಗಿದ್ದೇನೆಂದುಕೊಂಡು ಮೋಕ್ಷಕ್ಕೆ ಸೇರುತ್ತೇನೆ ಎಂಬುದೂ ಕೂಡ ಇಲ್ಲ. ನಮ್ಮ ಈ ಒಡಕಿಲ್ಲದ ಅಂತಃಕರಣದ ಪಾತ್ರೆ ಗೂಢವಾಗಿ ಇಡಲ್ಪಟ್ಟಿದೆ. ಬೇಯಿಸಿದ ಅನ್ನ (ಕರ್ಮಫಲವಿಪಾಕ) ಅದನ್ನು ಪಾಕ ಮಾಡಿದವನನ್ನು ಪುನಃ ಮರಳಿ ಪ್ರವೇಶಿಸಿಯೇ ತೀರುತ್ತದೆ.

ಸೋಮವಾರ, ಜನವರಿ 19, 2015

ಕುರುಡು ದ್ವೇಷ ಸಂಸಾರವ ನುಂಗಿತ್ತಾ . . .

     ಒಂದು ವೈದಿಕ ಭಜನೆಯ ಸಾಲುಗಳಿವು:
ಪೂಜನೀಯ ಪ್ರಭೋ ಹಮಾರೇ ಭಾವ ಉಜ್ವಲ ಕೀಜಿಯೇ |
ಛೋಡ ದೇವೇ ಛಲ ಕಪಟ ಕೋ ಮಾನಸಿಕ ಬಲ ದೀಜಿಯೇ ||
. . . .
ಸ್ವಾರ್ಥ ಭಾವ ಮಿಟೇ ಹಮಾರ ಪ್ರೇಮ ಪಥ ವಿಸ್ತಾರ ಹೋ |
. . . .
     'ಓ ದೇವರೇ, ನಮ್ಮ ಭಾವಗಳನ್ನು ಉಜ್ವಲಗೊಳಿಸು. ಛಲ, ಕಪಟಗಳನ್ನು ಬಿಡಿಸಿ ಮಾನಸಿಕ ಬಲ ನೀಡು, ನಮ್ಮ ಸ್ವಾರ್ಥ ಭಾವವನ್ನು ತೊಡೆದು ಪ್ರೇಮಪಥ ವಿಸ್ತಾರಗೊಳಿಸು' ಎಂದು ಪ್ರಾರ್ಥಿಸುವ ಸಾಲುಗಳು ಅರ್ಥಪೂರ್ಣವಾಗಿವೆ. ಬಹುತೇಕ ಕುಟುಂಬಗಳಲ್ಲಿ ಕಂಡುಬರುವ ಪರಸ್ಪರರಲ್ಲಿನ ಅಸಹನೆ, ಅಸಂತೋಷ, ಸಂದೇಹ, ಮತ್ಸರ, ದ್ವೇಷಗಳಿಗೆ ಮೂಲಕಾರಣ ಸ್ವಾರ್ಥಪ್ರೇರಿತ ಚಿಂತನಾಧಾಟಿ ಎಂಬುದರಲ್ಲಿ ಸಂದೇಹವಿರಲಾರದು. ಸಂಸಾರಗಳು ಪತನದ ಹಾದಿ ಹಿಡಿಯುವುದಕ್ಕೆ ಇದೇ ಕಾರಣವಾಗಿದೆ.
     ಸ್ವಾರ್ಥದಿಂದ ಮೂಡಿದ ದ್ವೇಷಭಾವನೆ ಹೇಗೆ ಸಂಸಾರವನ್ನೇ ನುಂಗುತ್ತದೆ ಎಂದು ಬಿಂಬಿಸುವ ಈ ರಚನೆಯನ್ನು ಸಂತ ಶಿಶುನಾಳ ಶರೀಫರ 'ಕೋಡಗನ ಕೋಳಿ ನುಂಗಿತ್ತಾ' ಹಾಡಿನ ಧಾಟಿಯಲ್ಲಿ ಹಾಡಬಹುದಾಗಿದೆ.

ಕುರುಡು ದ್ವೇಷ ಸಂಸಾರವ ನುಂಗಿತ್ತಾ . . .
ಕುರುಡು ದ್ವೇಷ ಸಂಸಾರವ ನುಂಗಿತ್ತಾ, ಕೇಳೆಲೊ ಮೂಢ
ಕುರುಡು ದ್ವೇಷ ಸು-ಸಾರವ ಹೀರಿತ್ತಾ                          || ಪ ||

ಸ್ವಾರ್ಥ ಪ್ರೀತಿಯ ನುಂಗಿ ಛಲವು ನೆಮ್ಮದಿಯ ನುಂಗಿ

ಕೇಳಲು ಬಂದ ವಿವೇಕವನ್ನೇ ಕೋಪವು ನುಂಗಿತ್ತಾ, ಮೂಢ || ೧ ||

ಸರಿಯು ತಪ್ಪಾಗಿ ಕಂಡು ತಪ್ಪು ಒಪ್ಪಾಗಿ ಬಂದು

ನ್ಯಾಯದ ಕಣ್ಣಿಗೆ ಮಣ್ಣೆರಚುತ್ತ ಮೀಸೆಯ ತಿರುವಿತ್ತಾ, ಮೂಢ    || ೨ ||

ಅನ್ಯರ ಮನೆಗೆ ಹಚ್ಚಿದ ಬೆಂಕಿ ಭಗ್ಗನೆ ಹೊತ್ತಿತ್ತಾ

ಹಚ್ಚಿದವರ ಮನೆಯನು ಕೂಡ ಬೆಂಕಿಯು ನುಂಗಿತ್ತಾ, ಮೂಢ || ೩ ||

ಕಟ್ಟಿಕೊಟ್ಟ ಬುತ್ತಿಯು ಮುಗಿದು ಹಸಿವದು ಹೆಚ್ಚಿತ್ತಾ

ಎರವಲು ಬುದ್ಧಿ ತಾಳಿಕೆ ಬರದೆ ಕಣ್ ಕಣ್ ಬಿಟ್ಟಿತ್ತಾ, ಮೂಢ  || ೪ ||

ಮುಸುಕಿದ ಮಾಯೆಯ ಪರದೆಯು ಸರಿದು ಅರಿವು ಮೂಡಿತ್ತಾ

ಆಗುವುದೇನಿದೆ ಮಾಡುವುದೇನಿದೆ ಕಾಲವು ಮಿಂಚಿತ್ತಾ, ಮೂಢ || ೫ ||

-ಕ.ವೆಂ.ನಾಗರಾಜ್.

ಭಾನುವಾರ, ಸೆಪ್ಟೆಂಬರ್ 7, 2014

ಹಿಂಸೆ


ಹಿಂಸೆಯೆಂಬುದು ಕುಣಿಯುತಲಿತ್ತು
ನಿದ್ದೆಯ ಕಾಣದೆ ಚಡಪಡಿಸಿತ್ತು |
ಯಾರನು ಕೊಲ್ಲಲಿ ಯಾರನು ಕೆಡವಲಿ
ಯಾರನು ಚುಚ್ಚಲಿ ಯಾರನು ತಿವಿಯಲಿ ||

ಬಂಧು ಬಳಗ ಗೆಳೆಯರು ಎನ್ನದೆ
ಸಿಟ್ಟಿನ ಭರದಲಿ ಅಬ್ಬರಿಸಿತ್ತು |
ರೋಷವು ಉಕ್ಕಿದೆ ಹಲ್ಲದು ಕಡಿದಿದೆ
ಯಾರನು ಹೊಡೆಯಲಿ ಯಾರನು ಬಡಿಯಲಿ ||

ಸ್ಥಾನ ಮಾನದ ಗಣನೆಯೆ ಇಲ್ಲ
ಸ್ವಂತ ನಾಶದ ಭಯವೆ ಇಲ್ಲ |
ನ್ಯಾಯವು ಎಲ್ಲಿದೆ ಧರ್ಮವು ಎಲ್ಲಿದೆ
ಸುತ್ತಲು ಮುಸುಕಿದೆ ಕತ್ತಲೆ ಎಲ್ಲ ||

ಸಿಟ್ಟದು ತಣಿಯಲು ಕಾಣುವುದೇನು
ರೋದನ ನೋವು ಮಾಡುವುದೇನು |
ಕೋಪದ ಭರದಲಿ ಕೊಯ್ದಿಹ ಮೂಗು
ಶಾಂತವಾಗಲು ಮರಳುವುದೇನು? ||

ಹಿಂಸೆಯೆಂಬುದು ಹೀನರ ಶಸ್ತ್ರವು
ಮತಿಯನು ಮರೆಸಿ ನಾಶವ ತರುವುದು |
ನಿದ್ದೆಯು ಬರದು ಬುದ್ಧಿಯು ಇರದು
ಕಳವಳ ಕಾಡಲು ನೆಮ್ಮದಿ ಸಿಗದು ||

ಕೋಪದ ಕೂಪದಿ ಕತ್ತಲ ಗುಹೆಯಲಿ
ಚಿಗುರುವ ಹಿಂಸೆಗೆ ಸೊರಗದೆ ಬಾಳು |
ಹಿಂಸೆಯು ಅಡಗಲಿ ಶಾಂತಿಯು ನೆಲೆಸಲಿ
ದ್ವೇಷವು ಕಮರಲಿ ಪ್ರೀತಿಯು ಅರಳಲಿ |

-ಕ.ವೆಂ.ನಾಗರಾಜ್.

ಶುಕ್ರವಾರ, ಆಗಸ್ಟ್ 8, 2014

ತಿಳಿದೆ ನಾನು!


ತಿಳಿದೆ ನಾನು
ಒಬ್ಬನೇ ಬಂದೆ ಒಬ್ಬನೇ ಹೋಗುವೆನೆಂದು!
ತಿಳಿದೆ ನಾನು
ಕೆಲರು ಒಡನಿರುವರು ನಾನು ಬೇಕೆಂದಲ್ಲ ,
ಅವರಿಗೆ ನಾನು ಬೇಕಿತ್ತೆಂದು!
ತಿಳಿದೆ ನಾನು 
ಯಾರನ್ನು ಇಷ್ಟಪಡುವೆನೋ ಅವರಿಂದ
ದೂರಲ್ಪಡುವೆನೆಂದು!
ತಿಳಿದೆ ನಾನು
ಪ್ರಿಯರ ಸಣ್ಣ ಸುಳ್ಳು ಹೃದಯ ಒಡೆಸೀತೆಂದು!
ತಿಳಿದೆ ನಾನು
ಆಸರೆಯ ಭುಜವಿಲ್ಲದೆ ಅಳುವುದು ಕಷ್ಟವೆಂದು!
ತಿಳಿದೆ ನಾನು
ಇರುವ ಪ್ರೀತಿಯನ್ನೆಲ್ಲಾ ಕಳೆದುಕೊಳ್ಳದೆ
ಸ್ವಂತಕ್ಕೂ ಸ್ವಲ್ಪ ಉಳಿಸಿಕೊಳ್ಳಬೇಕೆಂದು!
ತಿಳಿದೆ ನಾನು
ಎಲ್ಲರೊಡನಿದ್ದರೂ ಒಂಟಿಯಾಗಿರುವೆನೆಂದು!
ತಿಳಿದೆ ನಾನು
ಬದಲಾಗಬೇಕಾದ್ದು ನಾನೇ ಎಂದು!
ತಿಳಿದೆ ನಾನು
ಬಯಸಿದಂತೆ ನಡೆಯುವುದು ಕಷ್ಟವೆಂದು!
ತಿಳಿದೆ ನಾನು
ಬಹಿರಂಗ ಅಂತರಂಗವ ನುಂಗಿ ನೀಗೀತೆಂದು!
ತಿಳಿದೆ ನಾನು
ಏಕಾಂತ ಮಾತ್ರ ನನ್ನತನವನುಳಿಸೀತೆಂದು!
ತಿಳಿದೆ ನಾನು
ತಿಳಿದದ್ದು ಸ್ವಲ್ಪ ತಿಳಿಯದಿರುವುದು ಬಹಳವೆಂದು!
ತಿಳಿದೆ ನಾನು
. . . . . . . . . . . . . . . . . . . . . . . . . . . . . .! 

-ಕ.ವೆಂ.ನಾಗರಾಜ್.

ಬುಧವಾರ, ಜುಲೈ 2, 2014

ಜಿಹಾದ್ !!

ಆತ್ಮದಾ ಕರೆಯಿದು, ಜಿಹಾದ್ ಜಿಹಾದ್|
ಒಳಗಿನ ಮೊರೆಯಿದು, ಜಿಹಾದ್ ಜಿಹಾದ್|

ವೈರಿಗಳು ಹೊರಗಿಲ್ಲ ಅದೆಲ್ಲ ಬರಿಯ ಸುಳ್ಳು,
ನಿಜವೈರಿ ಒಳಗಿಹನು ಹೊರಗೆಳೆದು ತಳ್ಳು
ಅಂಧಕಾರ ಮೂಡಿಸುವ ಕಾಮ ನಿನ್ನ ವೈರಿ,
ಬುದ್ಧಿಯನ್ನು ದಹಿಸುವ ಕ್ರೋಧ ನಿನ್ನ ವೈರಿ,
ವೈರಿಗಳ ತರಿಯೋಣ ಜಿಹಾದ್ ಜಿಹಾದ್|

ನರರ ತರಿದು ಗೆಲ್ವೆನೆಂದು ಕಾಣದಿರು ಕನಸು
ಕಸುವಿದ್ದರೆ ಒಳಗಿರುವ ವೈರಿಯನ್ನು ಮಣಿಸು
ಮೋಹ ಕೊರಳಿಗುರುಳು ಕುಣಿಕೆಯನ್ನು ಸರಿಸು
ಹರಿಹರಿದು ತಿನ್ನುತಿಹ ಮದವ ಮೆಟ್ಟಿ ಕೊಲ್ಲು
ಕೊಲ್ಲೋಣ ಕೊಲ್ಲೋಣ ಜಿಹಾದ್ ಜಿಹಾದ್!

ಬಾಂಬು ಹಾಕಿ ವಿಷವನಿಕ್ಕಿ ಮಾಡಿದ್ದೇನು ನೀನು
ಮತ್ಸರದ ಕೊರಳನಮುಕಿ ಹಿಡಿಯಬಲ್ಲೆಯೇನು
ಅಡಗಿರುವ ಲೋಭವನ್ನು ಹುಡುಕಬಲ್ಲೆಯೇನು
ವೀರ ಶೂರನಾದರೆ ಹಿಡಿದು ಎಳೆದು ಸಾಯಿಸು
ಮೆಟ್ಟೋಣ ಕುಟ್ಟೋಣ ಜಿಹಾದ್ ಜಿಹಾದ್!


-ಕ.ವೆಂ.ನಾಗರಾಜ್.
**************
5.10.2014ರ ವಿಕ್ರಮದ ವಿಜಯದಶಮಿ ವಿಶೇಷಾಂಕದಲ್ಲಿ ಪ್ರಕಟಿತ:


ಶುಕ್ರವಾರ, ಜೂನ್ 20, 2014

ಅರಿವು


ನಮ್ಮವರೆಂಬರು ನಮ್ಮವರಲ್ಲ; ಮೋಹಕೆ ಸಿಲುಕಿ ಬಳಲಿದೆನಲ್ಲ |
ದೇವ ನಿನ್ನನು ನೆನೆಯಲೆ ಇಲ್ಲ; ಹುಟ್ಟಿನ ಮಹತಿ ತಿಳಿಯಲೆ ಇಲ್ಲ || ಪ ||

ಕಂಡದ್ದೆಲ್ಲ ಬಯಸಿದೆನಲ್ಲ; ಸಿಕ್ಕದೆ ಇರಲು ಶಪಿಸಿದೆನಲ್ಲ |
ಇಲ್ಲದ ಬಯಸಿ ಕೊರಗಿದೆನಲ್ಲ; ಇದ್ದುದ ಬಿಟ್ಟು ಕೆಟ್ಟೆನಲ್ಲ || 1 ||

ಚಪಲತೆ ಕಣ್ಣನು ಮುಚ್ಚಿತಲ್ಲ; ನಿಜ ಕಾಣದಾಯಿತಲ್ಲ |
ಚಂಚಲ ಬುದ್ಧಿ ಆಡಿದ ಆಟಕೆ ಮೋಸ ಹೋದೆನಲ್ಲಾ || 2 ||

ಸಜ್ಜನ ಸಂಗವ ಮಾಡಲಿಲ್ಲ; ಸದ್ಗತಿ ಸಿಗಲಿಲ್ಲ |
ಕೋಪವು ಮತಿಯ ತಿಂದಿತಲ್ಲ; ಮನಸೇ ಸರಿಯಿಲ್ಲ || 3 ||

ಮಿಗಿಲಾರೆಂದು ಬೀಗಿದೆನಲ್ಲ; ನಗೆಪಾಟಲಾಯಿತಲ್ಲ |
ರಜೋ ತಮಗಳ ಆರ್ಭಟದಲ್ಲಿ ಸತ್ವ ಸತ್ತಿತಲ್ಲಾ || 4 ||

ನಾನು ಎಂಬುದು ನಿಜವಲ್ಲ; ನಾನೇ ಎಂಬುದು ತರವಲ್ಲ |
ನಿನ್ನನು ಬಿಟ್ಟು ನಾನೇನೆಂಬುದ ಅರಿಯಲಿಲ್ಲವಲ್ಲಾ || 5 ||

ಕ.ವೆಂ.ನಾಗರಾಜ್.

ಸೋಮವಾರ, ಜೂನ್ 2, 2014

ಸೋಲದಿರು

ದೂಷಿಸದಿರು ಮನವೆ ಪರರು ಕಾರಣರಲ್ಲ
ನಿನ್ನೆಣಿಕೆ ತಪ್ಪಾಗಿ ಕಂಡಿರುವೆ ನೋವ |
ವಿಧಿಯು ಕಾರಣವಲ್ಲ ಹಣೆಬರಹ ಮೊದಲಲ್ಲ
ಕೊರಗಿದರೆ ಫಲವಿಲ್ಲ ದಣಿಯದಿರು ಮನವೆ ||

ಉಗ್ರವಾಗಿಹ ಮನವೆ ತಾಳು ತಾಳೆಲೆ ನೀನು
ವಿವೇಕ ನಲುಗೀತು ಕೆರಳದಿರು ತಾಳು |
ವ್ಯಗ್ರತೆಯ ನಿಗ್ರಹಿಸಿ ಸಮಚಿತ್ತದಲಿ ನಡೆಯೆ
ಸೋಲಿನ ಅನುಭವವೆ ಗೆಲುವಿಗಾಸರೆಯು ||

ಮೂಢನಂತಾಡದಿರು ಮತಿಗೆಟ್ಟು ನರಳದಿರು
ಮೈ ಕೊಡವಿ ಮೇಲೆದ್ದು ಅಡಿಯನಿಡು ಧೀರ |
ಸೋಲದಿರೆಲೆ ಜೀವ ಕಾಯ್ವ ನಮ್ಮನು ದೇವ
ಛಲಬಿಡದೆ ಮುನ್ನಡೆದು ಉಳಿಸು ಸ್ವಂತಿಕೆಯ ||

ಲೋಕದೊಪ್ಪಿಗೆ ಬೇಕೆ ಪರರ ಮನ್ನಣೆಯೇಕೆ
ದಾರಿ ಸರಿಯಿರುವಾಗ ಅಳುಕು ಅಂಜಿಕೆಯೇಕೆ |
ಒಳಮನವು ಒಪ್ಪಿರಲು ಚಂಚಲತೆ ಇನ್ನೇಕೆ
ಪಯಣಿಗನೆ ನೀ ಸಾಗು ದಾರಿ ನಿಚ್ಛಳವಿರಲು ||
***************
-ಕ.ವೆಂ.ನಾಗರಾಜ್.

ಮಂಗಳವಾರ, ಮೇ 20, 2014

ಮೊರೆ

     ದಿನಾಂಕ 30-01-2011ರಂದು 'ವೇದಸುಧೆ' ವಾರ್ಷಿಕೋತ್ಸವದ ಸಂದರ್ಭದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನನ್ನ ಈ ರಚನೆಯನ್ನು ಶ್ರೀಮತಿ ಲಲಿತಾ ರಮೇಶರವರು ಸುಶ್ರಾವ್ಯವಾಗಿ ಹಾಡಿದ್ದರು. ನೀವೂ ಕೇಳಿ:



Untitled from hariharapurasridhar on Vimeo.

ಸರಿಸಿಬಿಡು ಮೂಢಮನ ಆವರಿತ ಪೊರೆಯಾ
ತೆರೆದುಬಿಡು ಕಿಟಕಿಯನು ಒಳಬರಲಿ ಬೆಳಕು|
ರೂಢಿರಾಡಿಯಡಿ ಸಿಲುಕಿ ತೊಳಲಾಡುತಿಹೆ ನಾನು
ಕರುಣೆದೋರೈ ದೇವ ಸತ್ಪಥದಿ ಮುನ್ನಡೆಸು||

ಬಲ್ಲಿದರ ನುಡಿಕೇಳಿ ನೇರಮಾರ್ಗದಿ ನಡೆದೆ

ಬಸವಳಿದಿದೆ ಮನವು ಕಷ್ಟಗಳ ಕೋಟಲೆಗೆ |
ಅರಿಗಳಾರರ ಬಂದಿ ದಿಕ್ಕೆಟ್ಟು ಕುಳಿತಿರುವೆ
ಸದ್ಗುರುವೆ ಕೃಪೆದೋರಿ ಹಿಡಿದೆತ್ತಿ ಸಂತಯಿಸು||

ಪಂಡಿತನು ನಾನಲ್ಲ ಪಾಂಡಿತ್ಯವೆನಗಿಲ್ಲ

ಒಳಮನದ ನುಡಿಯೊಂದೆ ಆಸರೆಯು ನನಗೆಲ್ಲ|
ಹುಲುಮನುಜ ನಾನಾಗಿ ಭಾವಬಂಧಿಯು ನಾನು
ಸಮಚಿತ್ತ ಕರುಣಿಸೈ ನೆಮ್ಮದಿಯ ನೀನೀಡು||
**********************
-ಕವಿನಾಗರಾಜ್.


ಬುಧವಾರ, ಮೇ 7, 2014

ಆಹಾ, ನಾವ್ ಆಳುವವರು!

ಆಹಾ, ನಾವ್ ಆಳುವವರು
ಓಹೋ ನಾವ್ ಅಳಿಸುವವರು ||ಪ||

ಕುರ್ಚಿಯ ಕಾಲ್ಗಳನೊತ್ತುವೆವು
ತಡೆದರೆ ಕೈಯನೆ ಕಡಿಯುವೆವು|

ದೇಶವ ಪೊರೆಯುವ ಹಿರಿಗಣರು
ಖಜಾನೆ ಕೊರೆಯುವ ಹೆಗ್ಗಣರು|

ಜಾತ್ಯಾತೀತರು ಎನ್ನುವೆವು
ಜಾತೀಯತೆಯ ಬೆಳೆಸುವೆವು|

ಗಾಂಧಿಯ ನಾಮ ಜಪಿಸುವೆವು
ಬ್ರಾಂದಿಯ ಕುಡಿದು ಮಲಗುವೆವು|

ಬಿದ್ದರೆ ಪಾದವ ಹಿಡಿಯುವೆವು
ಎದ್ದರೆ ಎದೆಗೆ ಒದೆಯುವೆವು|

ಪಾದಯಾತ್ರೆಯನು ಮಾಡುವೆವು
ಕುರ್ಚಿಯ ಕನಸನು ಕಾಣುವೆವು|

ಗೆದ್ದವರನೆ ನಾವ್ ಕೊಳ್ಳುವೆವು
ಸ್ವಂತದ ಸೇವೆಯ ಮಾಡುವೆವು|

ಸಮಾಜ ಸೇವಕರೆನ್ನುವೆವು
ದೇಶವ ಹರಿದು ತಿನ್ನುವೆವು|
*********
-ಕವಿನಾಗರಾಜ್.

ಮಂಗಳವಾರ, ಮೇ 6, 2014

ಸಂಬಂಧ

ಯಾರೂ ಬೇಡವೆಂದವರು
ಯಾರಿಗೂ ಬೇಡವಾಗುವರು
ಸ್ವಹಿತವೇ ಮೇಲೆಂಬರು
ಇತರರನು ದೂರುವರು
ಮೂಲೆಗುಂಪಾಗುವರು

ಎಲ್ಲರೂ ಬೇಕೆಂಬವರೂ
ಯಾರಿಗೂ ಬೇಡವಾಗುವರು
ಅವರ ಪರವೆಂದಿವರು
ಇವರ ಪರವೆಂದವರು
ದೂರಿ ದೂಡಿಬಿಡುವರು
*********
-ಕ.ವೆಂ.ನಾಗರಾಜ್.

ಬುಧವಾರ, ಏಪ್ರಿಲ್ 23, 2014

ಅಭಾಸ

ಬದುಕಿನಲಪರಿಮಿತ ಅಭಾಸಗಳ ನಾ ಕಂಡೆ
ಪರಿತಪ್ತ ಮನಸಾಗಿಹುದು ಅಗ್ನಿಯ ಉಂಡೆ||

ಸತ್ಯ ನ್ಯಾಯ ಧರ್ಮಗಳೆಂದು ಕಂಡರೆ ಕನಸ

ಹೀಗಳೆದು ಕಾಲೆಳೆದು ಮಾಡುವರು ಪರಿಹಾಸ||

ಹುಂಬರೊಟ್ಟಾಗಿ ಹಂಗಿಸುತ ಜರೆಯುವರು

ಮನೆಮಂದಿಯೇ ಬೆಂಬಲವ ನೀಡದಿಹರು||

ನಳನಳಿಸಿ ಚಿಗುರೊಡೆದ ಸಂಬಂಧವೃಕ್ಷದ ಬೇರು

ಹುಳು ಹತ್ತಿ ಧರೆಗುರುಳಿ ಮನಸು ಚೂರು ಚೂರು||

ಪೋಷಿಸುವ ಕರಗಳು ನೇಣು ಬಿಗಿದುದ ಕಂಡೆ

ಬೇರು ಮೇಲೆದ್ದು ಚಿಗುರ ನುಂಗಿದುದ ಕಂಡೆ||

ಗುರು ಹಿರಿಯರನು ಅವಮಾನಿಸಿದುದ ಕಂಡೆ

ನಂಬಿದವರೇ ಕೊರಳ ಕೊಯ್ದುದನು ಕಂಡೆ||

ಮುನ್ನಡೆಯಲಡಿಯಿಟ್ಟ ನೆಲ ಕುಸಿದುದನು ಕಂಡೆ

ನಡೆದೆಡವಿದ್ದೆ ತಪ್ಪೆಂದು ನಿಂದಿಸಲು ನೊಂದೆ||

-ಕ.ವೆಂ. ನಾಗರಾಜ್.

ಭಾನುವಾರ, ಏಪ್ರಿಲ್ 20, 2014

ಕೆಂಪು ಬೆಳೆ

ಸ್ವಾರ್ಥದಾ ಭೂಮಿಗೆ ಚಾಡಿಮಾತುಗಳ ಮಳೆ ಬಿದ್ದು
ಕ್ಷೇತ್ರವದು ನಳನಳಿಸಿ ಕಂಗೊಳಿಸುತಿಹುದು|

ಅಸಹನೆ ಮತ್ಸರದುಪಕರಣದಿಂ ಉತ್ತಿರಲು
ದ್ವೇಷದಾ ಕಿಡಿಗಳೆಂಬೋ ಬೀಜವನು ಬಿತ್ತಿಹರು|

ಸಂಶಯದ ಗೊಬ್ಬರವ ಕಾಲಕಾಲಕೆ ಹಾಕಿ
ಶಾಂತಿ ಸಹನೆಯ ಕಳೆಯ ಚಿವುಟಿ ಹಾಕಿಹರು|

ವೈಮನಸ್ಸಿನ ಬೆಳೆಯು ಅಬ್ಬರದಿ ಬೆಳೆದಿರಲು
ಆಹಾ ಎಲ್ಲಿ ನೋಡಿದರಲ್ಲಿ ಕೆಂಪಿನೋಕುಳಿಯು

ಬೆಳೆಯ ಬೆಳೆದವರು ಬೆಳೆಯನುಂಡವರು
ಅಯ್ಯೋ ಕೆಂಗಣ್ಣರಾಗಿ ಮತಿಯ ಮರೆತಿಹರು|

ಪತಿ ಪತ್ನಿಯರ ನಡುವೆ ಹೆತ್ತವರ ನಡುವೆ
ವಿರಸದುರಿಯದು ಹೊತ್ತಿ ಜ್ವಲಿಸುತಿಹುದು|

ಅತ್ತೆ ಸೊಸೆಯರ ನಡುವೆ ಸೋದರರ ನಡುವೆ
ಮತ್ಸರದ ಬೆಂಕಿ ತಾ ಹೊಗೆಯಾಡುತಿಹುದು|

ಬದುಕು ಶಾಶ್ವತವಲ್ಲ ದ್ವೇಷ ಬಿಡಿ ಎಂದವರ
ನಾಲಗೆಯ ಕತ್ತರಿಸಿ ಕರುಳ ಬಗೆದೆಳೆದಿಹರು||

************
-ಕವಿ ನಾಗರಾಜ್.

ಮಂಗಳವಾರ, ಏಪ್ರಿಲ್ 15, 2014

ಸತ್ಯ

ಕಷ್ಟವೇನಲ್ಲ,
ಹುಡುಕಿದರೆ ಸಿಕ್ಕೀತು
ಬದುಕಲಗತ್ಯದ ಪ್ರೀತಿ!

ಕಠಿಣಾತಿ ಕಷ್ಟ,
ಹುಡುಕಿದರೂ ಸಿಕ್ಕದು
ಎಲ್ಲಿಹುದದು ಸತ್ಯ?

ಅಯ್ಯೋ ಮರುಳೆ,
ಪಂಡಿತೋತ್ತಮರೆಂದರು
ದೇವರೇ ಸತ್ಯ!

ದೇವರು? ಸತ್ಯ?
ಎಲ್ಲಿಹುದದು ಸತ್ಯ?
ಇನ್ನು ದೇವರು?

ಸಿಕ್ಕರೂ ಸತ್ಯ,
ಮುಖವಾಡದಡಗಿಹುದು ಸತ್ಯ,
ಅರ್ಥವಾಗದ ಸತ್ಯ!

ಅರ್ಥೈಸಿದರೆ ಸತ್ಯ,
ಪಥ್ಯವಾದರೆ ಸತ್ಯ,
ದೇವನೊಲಿವ, ಸತ್ಯ!
****
-ಕವಿನಾಗರಾಜ್.

ಶನಿವಾರ, ಏಪ್ರಿಲ್ 5, 2014

ಮಕ್ಕಳಿಗೆ ಕಿವಿಮಾತು

ಬಾಳಸಂಜೆಯಲಿ ನಿಂತಿಹೆನು ನಾನಿಂದು |
ಮನಸಿಟ್ಟು ಕೇಳಿರಿ ಹೇಳುವೆನು ಮಾತೊಂದು ||

ಕೇಳುವುದು ಬಿಡುವುದು ನಿಮಗೆ ಬಿಟ್ಟಿದ್ದು |
ಅಂತರಾಳದ ನುಡಿಗಳಿವು ಹೃದಯದಲ್ಲಿದ್ದದ್ದು ||

ಗೊತ್ತಿಹುದು ನನಗೆ ರುಚಿಸಲಾರದು ನಿಮಗೆ |
ಸಂಬಂಧ ಉಳಿಸುವ ಕಳಕಳಿಯ ಮಾತು ||

ಗೊತ್ತಿಹುದು ನನಗೆ ಪ್ರಿಯವಹುದು ನಿಮಗೆ |
ಸಂಬಂಧ ಕೆಡಿಸುವ ಬಣ್ಣ ಬಣ್ಣದ ಮಾತು ||

ಹುಳುಕು ಹುಡುಕುವರೆಲ್ಲೆಲ್ಲು ವಿಷವನೆ ಕಕ್ಕುವರು |
ಒಳಿತು ಕಾಣುವರೆಲ್ಲೆಲ್ಲು ಅಮೃತವ ಸುರಿಸುವರು ||

ದಾರಿಯದು ಸರಿಯಿರಲಿ ಅನೃತವನಾಡದಿರಿ |
ತಪ್ಪೊಪ್ಪಿ ಸರಿನಡೆವ ಮನ ನಿಮಗೆ ಇರಲಿ ||

ಗೌರವಿಸಿ ಹಿರಿಯರ ಕಟುಮಾತನಾಡದಿರಿ |
ಅಸಹಾಯಕರ ಶಾಪ ತಂದೀತು ಪರಿತಾಪ |

ದೇವರನು ಅರಸದಿರಿ ಗುಡಿಗೋಪುರಗಳಲ್ಲಿ |
ದೇವನಿಹನಿಲ್ಲಿ ನಮ್ಮ ಹೃದಯಮಂದಿರದಲ್ಲಿ ||

ಇಟ್ಟಿಗೆ ಕಲ್ಲುಗಳ ಜೋಡಿಸಲು ಕಟ್ಟಡವು |
ಹೃದಯಗಳ ಜೋಡಿಸಿರಿ ಆಗುವುದು ಮನೆಯು ||

ಮಕ್ಕಳೇ ನಾ ನಂಬಿದಾ ತತ್ವ ಪಾಲಿಸುವಿರಾ? |
ಬಾಳ ಪಯಣದ ಕೊನೆಗದುವೆನಗೆ ಸಂಸ್ಕಾರ ||
-ಕ.ವೆಂ.ನಾಗರಾಜ್.

ಶುಕ್ರವಾರ, ಮಾರ್ಚ್ 28, 2014

ವಿಷಣ್ಣತೆ


ಎನ್ನ ಕೊನೆಯ ದಿನಗಳ ಮೊದಲ ದಿನಗಳಿವು
ಬಂದ ದಾರಿಯನೊಮ್ಮೆ ನಿಂತು ನೋಡಿದೆ ಮನವು|
ಗುಣಿಸಿ ಭಾಗಿಸಿ ಕೂಡಿಸಿ ಕಳೆದುಳಿದ ಶೇಷವು
ಸೋಲೋ ಗೆಲುವೋ ತಿಳಿಯದ ವಿಷಣ್ಣಭಾವವು||

-ಕ.ವೆಂ.ನಾಗರಾಜ್.

ಸೋಮವಾರ, ಮಾರ್ಚ್ 24, 2014

ಗೌಡರು ಬಂದರು

ಗೌಡರು ಬಂದರು ಸೂತ್ರವ ಹಿಡಿದು ಒಳಗೇ ನಗುನಗುತಾ|
ಕಣ್ಣೀರ್ಗರೆದರು ಮಕ್ಕಳ ಕಷ್ಟವು ತಮದೇ ಎಂದೆನುತಾ||

ಜಾತ್ಯಾತೀತತೆ ಲೇಬಲ್ ಹಚ್ಚಿದ ಶಾಲದು ಹೆಗಲಲ್ಲಿ
ಜಾತೀಯತೆಯ ಕರಾಳ ಬೀಜದ ಚೀಲವು ಬಗಲಲ್ಲಿ||

ಮೌಲ್ಯಾಧಾರಿತ ರಾಜಕಾರಣ ಪುಸ್ತಕದಿರಲೆನುತಾ
ಮಕ್ಕಳೇ ಮೌಲ್ಯವು ಕುರ್ಚಿಯೇ ದೇವರು ಥಕಥಕಥಕದಿಮಿತಾ||

ಗಿಳಿಪಾಠವನೊಪ್ಪಿಸೋ ಬ್ಯಾ ಬ್ಯಾ ಕುರಿಗಳು ಹಿಂದೆಯೆ ಬರುತಿರಲಿ|
ಸ್ವಂತಿಕೆ ತೋರುವ ಮಂದೆಯು ಸೇರಲಿ ಕಟುಕನ ಪಾಲಿನಲಿ||

ಹೆಗಡೆ ಹೊರಗಡೆ ಸಿದ್ಯಾ ಬಿದ್ಯಾ ಮತ್ತಿನ್ಯಾರಲ್ಲಿ|
ಹತ್ತಿದ ಏಣಿಯ ಒದೆಯುವ ಆಟಕೆ ಸಾಟಿ ಯಾರಿಲ್ಲಿ||

ಬಾಲವೆ ತಲೆಯನು ಆಡಿಸೋ ಸೋಜಿಗ ಕಂಡಿರಾ ನೀವೆಲ್ಲಿ|
ಕೊಟ್ಟಿಗೆಯೊಳಗಿನ ಶುನಕನ ಆರ್ಭಟ ಕಾಣಿರಾ ನೀವಿಲ್ಲಿ||

ಮಣ್ಣೂ ನಮದು ಹಣ್ಣೂ ನಮದು ತಿರುಳೂ ನಮಗಿರಲಿ|
ಕಣ್ ಕಣ್ ಬಿಡುತಾ ಬಾಯ್ ಬಾಯ್ ಬಿಡಲು ಕರಟವು ನಿಮಗಿರಲಿ||

[ಇದು 'ಕವಿಮನ'ದಲ್ಲಿ 4 ವರ್ಷಗಳ ಹಿಂದೆ ಪ್ರಥಮವಾಗಿ ಪ್ರಕಟಿಸಿದಾಗ ಬರೆದ ಟಿಪ್ಪಣಿ:
ಈ ವಿಡಂಬನಾತ್ಮಕ ರಚನೆ ಜನಪ್ರಿಯ 'ರಾಯರು ಬಂದರು ಮಾವನ ಮನೆಗೆ' ಧಾಟಿಯಲ್ಲಿ ರಚಿಸಿ ಮೂರು ವರ್ಷಗಳ ಮೇಲಾಗಿತ್ತು. ಮಾನ್ಯ ಕುಮಾರಸ್ವಾಮಿಯವರು ಮಾನ್ಯ ಯಡಿಯೂರಪ್ಪನವರಿಗೆ ಅಧಿಕಾರ ಹಸ್ತಾಂತರ ಮಾಡುವ ಸಂದರ್ಭದಲ್ಲಿ ಷರತ್ತುಗಳನ್ನು ಮುಂದೊಡ್ಡಿದಾಗ ಮೂಡಿದ ರಚನೆಯಿದು. ಆಗ ನಾನು ತಹಸೀಲ್ದಾರನಾಗಿ ಕಾರ್ಯ ಮಾಡುತ್ತಿದ್ದರಿಂದ ನನ್ನ ಭಾವನೆಗಳನ್ನು ಮುಕ್ತವಾಗಿ ಹೊರಗೆಡವುವಂತಿರಲಿಲ್ಲ. ಈಗ ಇದು ಶೈತ್ಯಾಗಾರದಿಂದ ಹೊರಬಂದಿದೆ. ವ್ಯಂಗ್ಯ ಚಿತ್ರ/ವಿಡಂಬನೆಯ ರೀತಿಯಲ್ಲಿ ಸ್ವಾಗತಿಸಲು ಕೋರುವೆ.
4 ವರ್ಷಗಳ ನಂತರ ಈಗಲೂ ಈ ಟಿಪ್ಪಣಿ ಸಾಮಯಿಕವಾಗಿದೆ.]
[ಚಿತ್ರ : ಅಂತರ್ಜಾಲದಿಂದ ಹೆಕ್ಕಿದ್ದು.]

ಗುರುವಾರ, ಮಾರ್ಚ್ 20, 2014

ಚುಚ್ಚಾಣಿ

ಚುಚ್ಚಾಣಿ ಚೂಪಿನದಣ್ಣಾ
ಸಿಕ್ಕಸಿಕ್ಕಲಿ ಚುಚ್ಚಿ ನೋಯಿಸುವುದಣ್ಣಾ
ಚುಚ್ಚಾಣಿ ಚೂಪಿನದಣ್ಣಾ|| ||ಪ||

ಚಿನ್ನದ ಚುಚ್ಚಾಣಿ ನವರಸದ ಚುಚ್ಚಾಣಿ
ಎಲ್ಲರ ಮೆಚ್ಚಿನ ಕಟ್ಟಾಣಿಯಣ್ಣಾ ||ಚುಚ್ಚಾಣಿ||

ಆಸೆ ಪುಗ್ಗೆಯೇರಿ ಸಂಭ್ರಮದಿ ತೇಲಿದ್ದೆ
ಪುಗ್ಗೆ ಡಬ್ಬೆಂದು ಧೊಪ್ಪನೆ ಕೆಳಬಿದ್ದೆ|| ||ಚುಚ್ಚಾಣಿ||

ಬಂಧು ಬಳಗದೆ ಕೂಡಿ ನಲಿಯುತಲಿದ್ದೆ
ಚುಚ್ಚು ಮಾತಿಂದಾಗಿ ಒಂಟಿ ಹೊರಬಿದ್ದೆ||||ಚುಚ್ಚಾಣಿ||

ದೇವಾಂತಃಕರಣದ ಫಲ ಕೈಲಿ ಹಿಡಿದಿದ್ದೆ
ಚುಚ್ಚು ಕಾಲ್ತೊಡರಿ ಎಡವಿ ಬಿದ್ದಿದ್ದೆ|| ||ಚುಚ್ಚಾಣಿ||

ಚುಚ್ಚಾಣಿ ಚೂಪಿನದಣ್ಣಾ
ಸಿಕ್ಕಸಿಕ್ಕಲಿ ಚುಚ್ಚಿ ನೋಯಿಸುವುದಣ್ಣಾ
ಚುಚ್ಚಾಣಿ ಚೂಪಿನದಣ್ಣಾ||

(ಸ್ಪೂರ್ತಿ: ಪುರಂದರದಾಸರ 'ದುಗ್ಗಾಣಿ ಬಲು ಕೆಟ್ಟದಣ್ಣಾ"..)

ಸೋಮವಾರ, ಮಾರ್ಚ್ 17, 2014

ನಿನ್ನನೆಂತು ಅರ್ಚಿಸಲಿ?


ನಿನ್ನನೆಂತು ಅರ್ಚಿಸಲಿ, ಹೇ ದೇವಾ|
ಸತ್ಪಥವ ತೋರಿ ತಣಿಸೆನ್ನ ಮನವಾ|| 


ಸರ್ವವ್ಯಾಪಕ ಸರ್ವಾಂತರ್ಯಾಮಿ ನೀನು|
ಗಂಟಾನಾದವ ಮಾಡಿ ಬಾ ಎನ್ನಲೇನು?||

ಅಖಿಲಾಂಡ ಕೋಟಿ ಬ್ರಹ್ಮಾಂಡ ನಾಯಕ ನೀನು|
ಕಿರುಪೀಠವ ತೋರಿ ಕುಳ್ಳಿರಿಸಲೇನು?||

ದಿವ್ಯ ಚೇತನ ಪರಿಶುದ್ಧ ಪರಮಾತ್ಮ ನೀನು|
ಅಭಿಷೇಕವ ಮಾಡಿ ಕೊಳೆ ತೊಳೆಯಲೇನು?||

ಸಕಲ ಚರಾಚರ ಸೃಷ್ಟಿಕರ್ತ ನೀನಲ್ಲವೇನು?|
ನಿನ್ನ ಸೃಷ್ಟಿಯ ಹೂವ ನಿನಗೆಂತು ಕೊಟ್ಟೇನು?||

ಅನೂಹ್ಯ ಅನಂತ ಅಭೋಕ್ತ ಅಚ್ಯುತ ನೀನು|
ನಿನಗೆ ನೈವೇದ್ಯವೆನೆ ಕೊಡಬಹುದು ನಾನೇನು?||

ಸಕಲ ಜೀವರಿಗೆ ನೆಲೆ ಕೊಟ್ಟ ಧೀಮಂತ ನೀನು|
ನಿನಗೊಂದು ಗುಡಿ ಕಟ್ಟಿ ನೆಲೆಗೊಳಿಸಲೇನು?||

ರೂಢಿರಾಡಿಯಲಿ ಮುಳುಗಿ ಇರಲಾರೆ ನಾನು|
ಹೊರಬರುವ ದಾರಿಯನು ತೋರುವೆಯ ನೀನು?||

ನಿನ್ನನೆಂತು ಅರ್ಚಿಸಲಿ, ಹೇ ದೇವಾ|
ಸತ್ಪಥವ ತೋರಿ ತಣಿಸೆನ್ನ ಮನವಾ||

-ಕ.ವೆಂ.ನಾಗರಾಜ್.