ಬುಧವಾರ, ಆಗಸ್ಟ್ 22, 2018
ಸತ್ಯಪ್ಪನ ಸತ್ಯ !
ಸತ್ಯಪ್ಪನೆಂಬೋನು ಎಲ್ಲದಾನೋ ಯಪಾ
ನಡುರಾತ್ರ್ಯಾಗ ಬಿಡದೆ ಹೊತ್ತೊಯ್ದರೋ |
ನನ್ನ ದಿಕ್ಕವನು ನನ್ನ ಉಸಿರವನು ಬಿಟ್ಟು ಬಿಡಿರೋ ಯಪಾ
ಸೆರಗೊಡ್ಡಿ ಬೇಡುವೆನು ಪುಣ್ಣೇವ ಕಟ್ಕೋರೀ ಯಪಾ ||
ನಮ್ಹಂತ್ಯಾಕ ಸತ್ಯಪ್ಪ ಇಲ್ಲಾ ಕಣಬೇ
ದೊರೆಯ ಕಾರ‍್ನಾಗವನ ಒಯ್ದಾರಬೇ |
ದೊರೆಯ ಕಣ್ಣೀಗಿ ಅವ ಕಿಸುರು ಕಣಬೇ
ದೊರೆಯ ಹಾದ್ಯಾಗವನು ಮುಳ್ಳಂತ್ಯಬೇ ||
ಅಂಗನಬೇಡ ನನರಾಜ ಕಾಪಾಡೋ ಯಪಾ
ನೀನೆ ನನ ದ್ಯಾವ್ರಂತ ದೀಪ ಹಚ್ತೀನಪಾ |
ಊರ ಬಿಟ್ಟೇವಂತೆ ತಿರುಪೆ ಬೇಡೇವಂತೆ
ಜೀವವೊಂದನಕುಳಿಸಿ ಬಿಟ್ಟು ಬಿಡಿರೋ ಯಪಾ ||
ಚಿಂತೆ ಬಿಡು ಮುದುಕಿ ಸತ್ಯಪ್ಪ ಬರ್ತಾನಬೇ
ಉಪ್ಪೆಸರು ಮಾಡಿಟ್ಟು ದಾರಿ ಕಾಯ್ವೋಗಬೇ |
ಆಳು ಮಕ್ಕಳು ನಾವು ನಮ್ಕೈಲಿ ಏನೈತಬೇ
ಕನಿಕರವ ದಣಿಗೆ ಅಡ ಇಟ್ಟೀವಬೇ ||
ಸತ್ಯಪ್ಪ ಬರದೆ ಓಗಾಣಿಲ್ಲ ನಾ ಓಗಾಣಿಲ್ಲಾ
ಎಂಗಾರ ಮಾಡ್ಯವನ ಉಳಿಸೋ ಯಪಾ |
ಎಲ್ಲವನೊ ನನ ಕಂದ ಎಂಗವನೋ ನನ ಚಂದ
ನನ್ನೊಪ್ಪ ಮಾಡುದಕೆ ಅವನು ಬೇಕ್ರೋ ಯಪಾ ||
ಅಷ್ಟರಲ್ಲಿ . . .
ಭರ್ರೆಂದು ಕಾರೊಂದು ಮೂಟೆಯೊಂದನು ಇಳಿಸಿ
ಸರ್ರೆಂದು ತಿರುಗಿ ಒಂಟೋಯ್ತಲಾ |
ಚೀರುತ್ತ ಭೋರ‍್ಯಾಡಿ ಮುದುಕಿ ಅಳ್ತೈತಲ್ಲಾ
ಬಿಟ್ಟ ಕಣ್ ಬಿಟ್ಟಂತೆ ನೆಟ್ಟ ಕಣ್ ನೆಟ್ಟಂತೆ ಸತ್ಯಪ್ಪ ಕುಂತವ್ನಲ್ಲ ||
ಸತ್ಯಪ್ಪ ಸತ್ತಿಲ್ಲ ಸತ್ಯ ಮಾತ್ರ ಪೂರ್ತಿ ಸತ್ತೋಯ್ತಲಾ
ಉಳ ಬಿದ್ದು ಸಾಯಿರೋ ಅದ್ದು ತಿಂದೋಗಲೋ |
ಮಣ್ಣು ತೂರಿದ ಮುದುಕಿ ಶಾಪ ಹಾಕಿತಲ್ಲಾ
ಕರಿ ಮೋಡ ಮುಸುಕಿ ಬಾನೆಲ್ಲ ಕಪ್ಪಾಯ್ತಲಾ ||
ಹಲವು ದಿನಗಳ ನಂತರ . .
ಸತ್ಯಪ್ಪ ಬದುಕವನೆ ಹೈಕಳ ಎದೆಯೊಳಗೆ ಇಳಿದುಬಿಟ್ಟವನೆ
ಎದೆ ಸೆಟೆಸಿದಾ ಸತ್ಯ ಮುಷ್ಟಿ ಬಿಗಿದಾ ಸತ್ಯ |
ಕನಲಿ ಕೆರಳಿದ ಸತ್ಯ ಒಡಲ ಬೆಂಕಿಯ ಸತ್ಯ
ದೊರೆಯಂಜಿ ಮುಲುಗುಟ್ಟಿ ಸತ್ಯನ ಕಾಲಿಗೆ ಬಿದ್ದುಬಿಟ್ಟವನೆ ||
-ಕ.ವೆಂ. ನಾಗರಾಜ್
**************
26.8.2018ರ ವಿಕ್ರಮ ವಾರಪತ್ರಿಕೆಯಲ್ಲಿ ಪ್ರಕಟಿತ:
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕನಿಕರವ ದಣಿಗೆ ಅಡವಿಟ್ಟ ನಮ್ಮ ನಿಮ್ಮಂತವರೆಲ್ಲ ಇಲ್ಲಿ ದನಿಯಾಗಿದ್ದಾರೆ. ಸತ್ಯವನು ಉಡುಗಿಸಿಡಲು ಬಹು ಕಾಲ ಸಾಧ್ಯವಾಗದ ಮಾತಾದರೂ, ಇಂದಿನವರೆಗೆ ನಮಗೆ ಲಭ್ಯವಿರುವ ಇತಿಹಾಸವಾದರೂ ದಿಟವೇ ಗೊತ್ತಿಲ್ಲ!
ಪ್ರತ್ಯುತ್ತರಅಳಿಸಿಬಳಸಿದ ಭಾಷೆ ಮತ್ತು ಅದರ ಸುಲಲಿತ ಚಲನೆಗೆ ನಿಮಗೆ ನೀವೇ ಸಾಟಿ.
ವಿಕ್ರಮಕ್ಕೆ ಅಭಿನಂದನೆಗಳು.
ನಮಸ್ಕಾರ,Badarinath Palavalli. ನಿಮ್ಮ ಅಭಿಮಾನಕ್ಕೆ ನನ್ನ ವಿಶ್ವಾಸ ಅಡವಿಟ್ಟಿರುವೆ.
ಪ್ರತ್ಯುತ್ತರಅಳಿಸಿ