ಭಾನುವಾರ, ಸೆಪ್ಟೆಂಬರ್ 7, 2014

ಹಿಂಸೆ


ಹಿಂಸೆಯೆಂಬುದು ಕುಣಿಯುತಲಿತ್ತು
ನಿದ್ದೆಯ ಕಾಣದೆ ಚಡಪಡಿಸಿತ್ತು |
ಯಾರನು ಕೊಲ್ಲಲಿ ಯಾರನು ಕೆಡವಲಿ
ಯಾರನು ಚುಚ್ಚಲಿ ಯಾರನು ತಿವಿಯಲಿ ||

ಬಂಧು ಬಳಗ ಗೆಳೆಯರು ಎನ್ನದೆ
ಸಿಟ್ಟಿನ ಭರದಲಿ ಅಬ್ಬರಿಸಿತ್ತು |
ರೋಷವು ಉಕ್ಕಿದೆ ಹಲ್ಲದು ಕಡಿದಿದೆ
ಯಾರನು ಹೊಡೆಯಲಿ ಯಾರನು ಬಡಿಯಲಿ ||

ಸ್ಥಾನ ಮಾನದ ಗಣನೆಯೆ ಇಲ್ಲ
ಸ್ವಂತ ನಾಶದ ಭಯವೆ ಇಲ್ಲ |
ನ್ಯಾಯವು ಎಲ್ಲಿದೆ ಧರ್ಮವು ಎಲ್ಲಿದೆ
ಸುತ್ತಲು ಮುಸುಕಿದೆ ಕತ್ತಲೆ ಎಲ್ಲ ||

ಸಿಟ್ಟದು ತಣಿಯಲು ಕಾಣುವುದೇನು
ರೋದನ ನೋವು ಮಾಡುವುದೇನು |
ಕೋಪದ ಭರದಲಿ ಕೊಯ್ದಿಹ ಮೂಗು
ಶಾಂತವಾಗಲು ಮರಳುವುದೇನು? ||

ಹಿಂಸೆಯೆಂಬುದು ಹೀನರ ಶಸ್ತ್ರವು
ಮತಿಯನು ಮರೆಸಿ ನಾಶವ ತರುವುದು |
ನಿದ್ದೆಯು ಬರದು ಬುದ್ಧಿಯು ಇರದು
ಕಳವಳ ಕಾಡಲು ನೆಮ್ಮದಿ ಸಿಗದು ||

ಕೋಪದ ಕೂಪದಿ ಕತ್ತಲ ಗುಹೆಯಲಿ
ಚಿಗುರುವ ಹಿಂಸೆಗೆ ಸೊರಗದೆ ಬಾಳು |
ಹಿಂಸೆಯು ಅಡಗಲಿ ಶಾಂತಿಯು ನೆಲೆಸಲಿ
ದ್ವೇಷವು ಕಮರಲಿ ಪ್ರೀತಿಯು ಅರಳಲಿ |

-ಕ.ವೆಂ.ನಾಗರಾಜ್.

9 ಕಾಮೆಂಟ್‌ಗಳು:

  1. ಕುರುಡು ಕಾಂಚಾಣ... ನೆನಪಿಸಿದಿರಿ ಕವಿವರ್ಯ.
    ultimate:
    "ಹಿಂಸೆಯೆಂಬುದು ಹೀನರ ಶಸ್ತ್ರವು
    ಮತಿಯನು ಮರೆಸಿ ನಾಶವ ತರುವುದು |"

    ಪ್ರತ್ಯುತ್ತರಅಳಿಸಿ
    ಪ್ರತ್ಯುತ್ತರಗಳು
    1. Swami Chidrupananda Saraswati
      liked verymuch. ...swamiji

      Kavi Nagaraj
      ಪ್ರಣಾಮಗಳು, ಸ್ವಾಮೀಜಿ.

      Prathibha Rai S
      ಹಿಂಸೆ ಆಡಗಲಿ...ಪ್ರೀತಿ ಅರಳಲಿ.

      ಅಳಿಸಿ
    2. ಸತೀಶ್. ಎನ್ ನಾಸ
      ಹಿಂಸೆಯು ಅಡಗಲಿ ಶಾಂತಿಯು ನೆಲೆಸಲಿ
      ದ್ವೇಷವು ಕಮರಲಿ ಪ್ರೀತಿಯು ಅರಳಲಿ | ನಿಮ್ಮ ಬಯಕೆಯೇ ನಮ್ಮ ಬಯಕೆ ನಾಗರಾಜ್ ರವರೇ ಧನ್ಯವಾದಗಳೊಂದಿಗೆ

      ಅಳಿಸಿ
    3. swara kamath
      ನಮಸ್ಕಾರ ನಾಗರಾಜರೆ,
      ಅಪರೂಪಕ್ಕೆಎಂಬಂತೆ ಕವನ ಒಂದು ನಿಮ್ಮ ಲೇಖನಿಯಿಂದ ಹೊರಹೊಮ್ಮಿದೆ.ಮನಸ್ಸು ವ್ಯಘ್ರ ಗೊಂಡಾಗ ವಿವೇಚನೆ ಕಳೆದುಕೊಂಡು ಪ್ರಚೋದಿತವಾಗಿ ಹಿಂಸೆಯ ದಾರಿ ತುಳಿಯುತ್ತೆ.ಅಂಥಹ ಸಂದರ್ಭದಲ್ಲಿ ನಮ್ಮ ಬುದ್ಧಿ ನಮ್ಮ ಕೈಲಿರದೆ ಅನೇಕ ಅನಾಹುತಗಳಿಗೆ ಎಡೆಮಾಡಿಕೊಡುತ್ತದೆ.ಅಂತೆಯೆ ಅದರಿಂದಾಗುವ ಹಾನಿಯು ಸಹ ಘೋರವಾದದ್ದು. ಹಿಂಸೆಯು ಅಡಗಿ ಶಾಂತಿಯು ನೆಲಸುವ ತಮ್ಮ ಆಶಯ ನನ್ನದೂ ಸಹ. ವಂದನೆಗಳು............ರಮೇಶ ಕಾಮತ್

      kavinagaraj
      ವಂದನೆಗಳು, ರಮೇಶಕಾಮತರೇ. ಸ್ಥಳೀಯ ಜಿಲ್ಲಾ ಪತ್ರಿಕೆಗಳಿಗೆ ಪ್ರತಿ ವಾರ ಎರಡು ಅಂಕಣ ಲೇಖನಗಳನ್ನು ಬರೆಯುತ್ತಿರುವುದರಿಂದ ಕವನಗಳಿಗೆ ರೂಪ ಕೊಡಲಾಗುತ್ತಿಲ್ಲ. ನಿಮ್ಮ ಅನಿಸಿಕೆಗೆ ಧನ್ಯವಾದಗಳು.

      nageshamysore on September 9, 2014 - 7:28pm
      ಕವಿಗಳೆ ನಮಸ್ಕಾರ, ಹಿಂಸೆ ಮೂಲತಃ ಒಂದು ನೈಸರ್ಗಿಕ ಮತ್ತು ಸಹಜ ಪ್ರಕ್ರಿಯೆಯಂತೆ ಪ್ರಾಣಿಗಳಲ್ಲಿ. ಬಹುಶಃ ಅದರಿಂದಲೊ ಏನೊ ಬೇಟೆ, ಯುಧ್ಹ, ಕದನ, ಹೋರಾಟಗಳಂತಹ ಹಿಂಸಾವೃತ್ತ ಕಾರ್ಯಗಳಲ್ಲೂ ಕೆಲ ಮನುಷ್ಯರು ಉನ್ಮಾದಾನಂದ ಕಾಣುವುದು. ನಾಗರೀಕತೆಯ ಪಸರಿಸುವಿಕೆ ಇದನ್ನು ತುಸು ಮಟ್ಟಿಗೆ ತಗ್ಗಿಸಿ ಕ್ರೀಡೆಗಳಂತಹ ಸೌಮ್ಯ ರೂಪಕ್ಕೆ ಇಳಿಸಿದೆಯಾದರೂ ಆ ಮೂಲ ಪ್ರವೃತ್ತಿ ಸಂಪೂರ್ಣ ಮಾಯವಾಗಿದೆಯೆಂದು ಹೇಳಬರುವಂತಿಲ್ಲ. ಬದಲಿಗೆ ಬಹಿರಂಗವಾಗಿ ಪ್ರಕಟವಾಗುವ ಬದಲು ಗುಟ್ಟಾಗಿ ನಡೆಸುವ ಪ್ರವೃತ್ತಿಯಾಗಿ ನಡೆದುಕೊಂಡು ಹೋಗುತ್ತಿರುತ್ತದೆ - ಕಂಡೂ ಕಾಣದಂತೆ. ಅದರ ಮೂಲ ಸರಕಾದ ಸಿಟ್ಟು, ಸೆಡವು, ಕೋಪ, ತಾಪಗಳ ಮೇಲೆ ತುಸು ನಿಯಂತ್ರಣವಿಟ್ಟರೆ ಹಿಂಸಾ ಪ್ರವೃತ್ತಿಗೆ ತುಸು ಅಂಕುಶವಿಡಬಹುದೆ ಹೊರತು ಅದನ್ನು ಮೂಲೋತ್ಪಾಟನೆ ಮಾಡಲಾಗುವುದಿಲ್ಲ. ಅದರೆಲ್ಲಾ ಭಾವಗಳನ್ನು ಸಮೀಕರಿಸಿದ ಕವನ ಚೆನ್ನಾಗಿ ಬಂದಿದೆ :-)

      kavinagaraj
      ಮನುಷ್ಯಪ್ರಾಣಿ ಇತರ ಪ್ರಾಣಿಗಳಿಗಿಂತ ಭಿನ್ನ. ವಿವೇಚನೆ ಶಕ್ತಿ ಇರುವ ಅವನು ಅದನ್ನು ಬಲಸಿಕೊಳ್ಳಬೇಕಷ್ಟೆ. ಅಂಕುಶವಿಸುವುದೇ ಮಹತ್ವದ ಕೆಲಸ. ವಿಮರ್ಶಾತ್ಮಕ ಅನಿಸಿಕೆಗೆ ಕೃತಜ್ಞತೆಗಳು, ನಾಗೇಶರೇ.

      H A Patil
      ಕವಿ ನಾಗರಾಜ ರವರಿಗೆ ವಂದನೆಗಳು
      'ಹಿಂಸೆ' ಕವನ ಓದಿದೆ, ಹಿಂಸೆಯ ಬಿಜರೂಪ ಅದು ಬೆಳೆದು ಮಾಡುವ ದುಷ್ಪರಿಣಾಮಗಳನ್ನು ಪರಿಣಾಮಕಾರಿಯಾಗಿ ನಿರೂಪಿಸುವ ಕವನ, ಕವನದ ಆಶಯ ಚೆನ್ನಾಗಿದೆ ಧನ್ಯವಾದಗಳು.

      kavinagaraj
      ಧನ್ಯವಾದಗಳು, ಪಾಟೀಲರೇ.

      ಅಳಿಸಿ
    4. naveengkn
      ಕವಿಗಳಿಗೆ ನಮಸ್ತೆ, ಬಹಳ‌ ದಿನದ‌ ನಂತರ‌ ಕವಿಗಳ‌ ಕವಿತೆ ಓದುವ‌ ಭಾಗ್ಯ‌,,,,,,,, ಹಿಂಸೆಯ‌ ದೂರ್ತ‌ ಲಕ್ಷಣಗಳು ಛೆನ್ನಾಗಿ ಮೂಡಿವೆ,,,,, ಕೊನೆಯಲ್ಲಿ ಗೆಲ್ಲುವುದು ಷಾಂತಿ ಮತ್ತು ಪ್ರೆಮ‌ ಮಾತ್ರ‌ ಎಂಬುದು ಸಾಬಿತುಪಡಿಸಿದ್ದೀರಿ,,, ಧನ್ಯವಾದಗಳು,,,,

      kavinagaraj
      ವಂದನೆ, ನವೀನರೇ.

      ಅಳಿಸಿ