ಸೋಮವಾರ, ಮಾರ್ಚ್ 17, 2014

ನಿನ್ನನೆಂತು ಅರ್ಚಿಸಲಿ?


ನಿನ್ನನೆಂತು ಅರ್ಚಿಸಲಿ, ಹೇ ದೇವಾ|
ಸತ್ಪಥವ ತೋರಿ ತಣಿಸೆನ್ನ ಮನವಾ|| 


ಸರ್ವವ್ಯಾಪಕ ಸರ್ವಾಂತರ್ಯಾಮಿ ನೀನು|
ಗಂಟಾನಾದವ ಮಾಡಿ ಬಾ ಎನ್ನಲೇನು?||

ಅಖಿಲಾಂಡ ಕೋಟಿ ಬ್ರಹ್ಮಾಂಡ ನಾಯಕ ನೀನು|
ಕಿರುಪೀಠವ ತೋರಿ ಕುಳ್ಳಿರಿಸಲೇನು?||

ದಿವ್ಯ ಚೇತನ ಪರಿಶುದ್ಧ ಪರಮಾತ್ಮ ನೀನು|
ಅಭಿಷೇಕವ ಮಾಡಿ ಕೊಳೆ ತೊಳೆಯಲೇನು?||

ಸಕಲ ಚರಾಚರ ಸೃಷ್ಟಿಕರ್ತ ನೀನಲ್ಲವೇನು?|
ನಿನ್ನ ಸೃಷ್ಟಿಯ ಹೂವ ನಿನಗೆಂತು ಕೊಟ್ಟೇನು?||

ಅನೂಹ್ಯ ಅನಂತ ಅಭೋಕ್ತ ಅಚ್ಯುತ ನೀನು|
ನಿನಗೆ ನೈವೇದ್ಯವೆನೆ ಕೊಡಬಹುದು ನಾನೇನು?||

ಸಕಲ ಜೀವರಿಗೆ ನೆಲೆ ಕೊಟ್ಟ ಧೀಮಂತ ನೀನು|
ನಿನಗೊಂದು ಗುಡಿ ಕಟ್ಟಿ ನೆಲೆಗೊಳಿಸಲೇನು?||

ರೂಢಿರಾಡಿಯಲಿ ಮುಳುಗಿ ಇರಲಾರೆ ನಾನು|
ಹೊರಬರುವ ದಾರಿಯನು ತೋರುವೆಯ ನೀನು?||

ನಿನ್ನನೆಂತು ಅರ್ಚಿಸಲಿ, ಹೇ ದೇವಾ|
ಸತ್ಪಥವ ತೋರಿ ತಣಿಸೆನ್ನ ಮನವಾ||

-ಕ.ವೆಂ.ನಾಗರಾಜ್.

1 ಕಾಮೆಂಟ್‌:

  1. Badarinath Palavalli
    ನಿಜ ಮಾನಸ ಭಕ್ತಿ ಇಲ್ಲದೇ ಹೊರ ಆಡಂಭರಕ್ಕೆ ಯಾಮಾರುವನೇ ಶಿವಾ? ಸರಿಯಾಗಿ ಝಾಡಿಸುವ ಕವನ.

    Kavi Nagaraj
    ವಂದನೆ, ಬದರೀನಾಥರೇ.

    ಪ್ರತ್ಯುತ್ತರಅಳಿಸಿ