ಮಂಗಳವಾರ, ಜೂನ್ 30, 2015

ಮೂಢ ಉವಾಚ - 7

ಗೊತ್ತಿಲ್ಲದವರನು ಹಾಡಿ ಹೊಗಳುವರು
ಪ್ರೀತಿಸುವ ಜನರನೆ ಘಾಸಿಗೊಳಿಸುವರು |
ನಂಬದವರನೋಲೈಸಿ ನಂಬುವರ ಹೀನೈಸಿ
ಪಡೆದುಕೊಂಬುವುದೇನೋ ಮೂಢ? || ಸೋಮವಾರ, ಜೂನ್ 29, 2015

ಮೂಢ ಉವಾಚ - 6

ಹುಳುಕು ಹುಡುಕುವರೆಲ್ಲೆಲ್ಲು ವಿಷವನೇ ಕಕ್ಕುವರು
ಚಾಡಿಯನು ಹೇಳುವರು ಸಂಬಂಧ ಕೆಡಿಸುವರು |
ಒಳಿತು ಕಾಣುವರೆಲ್ಲೆಲ್ಲು ಅಮೃತವ ಸುರಿಸುವರು
ಸಂಬಂಧ ಉಳಿಸಿ ಬೆಳೆಸುವರು ಮೂಢ ||


ಭಾನುವಾರ, ಜೂನ್ 28, 2015

ಮೂಢ ಉವಾಚ - 5

ಗಂಟಿರಲು ನಂಟಿಹುದು ಇಲ್ಲದಿರೆ ಏನಹುದು
ಕಸುವಿರಲು ಬಂಧುಗಳು ಇಲ್ಲದಿರೆ ಉಂಡೆಲೆಯು |
ನಗುವಿರಲು ನೆಂಟತನ ಇಲ್ಲದಿರೆ ಒಂಟಿತನ
ಜಗದ ಪರಿಯಿದು ಏನೆನುವೆ ಮೂಢ ||


ಶನಿವಾರ, ಜೂನ್ 27, 2015

ಮೂಢ ಉವಾಚ - 4

ಆಪತ್ತಿಗಾಗುವರಿಹರು ತಿರುಗಿ ನೋಡದವರಿಹರು
ಒಳಿತು ಹಾರೈಸುವರಿಹರು ಕೆಡಕು ಬಯಸುವರಿಹರು |
ಒಳಿತು ಮಾಡದ ಕೆಡಕು ಎಣಿಸಲರಿಯರಿಹರು
ಇವರೊಳು ನೀಯಾರು ನಾಯಾರು ಹೇಳು ಮೂಢ||


ಶುಕ್ರವಾರ, ಜೂನ್ 26, 2015

ಮೂಢ ಉವಾಚ - 3

ಸಂಬಂಧ ಬೇಕೆಂಬರಿಹರು ಯಾಕೆಂಬರಿಹರು
ಬೆಸೆಯುವರಿಹರು ಬೆಸೆದುಕೊಂಬವರಿಹರು |
ಮುರಿಯುವವರಿಹರು ಮುರಿದುಕೊಂಬವರಿಹರು
ಇವರೊಳು ನೀಯಾರು ನಾಯಾರು ಹೇಳು ಮೂಢ ||ಗುರುವಾರ, ಜೂನ್ 25, 2015

ಮೂಢ ಉವಾಚ- 2

ಸ್ನೇಹ ಪ್ರೀತಿಯಲು ಲಾಭವನೆ ಅರಸುವರು
ಕಿಂಚಿತ್ತು ಪಡೆಯಲು ಶಾಶ್ವತವ ಕಳೆಯುವರು|
ವಿಶ್ವಾಸದಮೃತಕೆ ವಿಷವ ಬೆರೆಸುವರು
ಇಂಥವರ ಸಂಗದಿಂ ದೂರವಿರು ಮೂಢ||ಬುಧವಾರ, ಜೂನ್ 24, 2015

ಮೂಢ ಉವಾಚ - 1

ಅತ್ತ ಮುಖ ಇತ್ತ ಮುಖ ಎತ್ತೆತ್ತಲೋ ಮುಖ
ಏಕಮುಖ ಬಹುಮುಖ ಸುಮುಖ ಕುಮುಖ |
ಮುಖದೊಳಗೊಂದು ಮುಖ ಹಿಮ್ಮುಖ ಮುಮ್ಮುಖ 
ಮುಖಾಮುಖಿಯಲ್ಲಿ ನಿಜಮುಖವೆಲ್ಲೋ ಮೂಢ ||