ಸೋಮವಾರ, ಜುಲೈ 31, 2017

ಮೂಢ ಉವಾಚ - 321

ನಿದ್ದೆಯಿಂದೆದ್ದೊಡನೆ ನಾನು ಜನಿಸುವುದು
ಒಂದಿದ್ದು ಎರಡಾಗಿ ಮೂರಾಗಿ ಕಾಣುವುದು|
ದೇಹವೇ ನಾನೆನಿಸಿ ಭೇದ ಮೆರೆಯುವುದು
ಮಾಯಾ ಮೋಹಿನಿಗೆ ಶರಣು ಮೂಢ||


ಭಾನುವಾರ, ಜುಲೈ 30, 2017

ಮೂಢ ಉವಾಚ - 320

ನಾನಿಲ್ಲ ಅವನಿಲ್ಲ ಜಗವಿಲ್ಲ ನಿದ್ದೆಯಲಿ
ರಾಗ ದ್ವೇಷಗಳಿಲ್ಲ ನೋವು ನಲಿವುಗಳಿಲ್ಲ|
ತಮೋತ್ತುಂಗದಲಿ ಪ್ರಶ್ನೋತ್ತರದ ಸೊಲ್ಲಿಲ್ಲ
ಮಾಯಾ ಶಕ್ತಿಗೆದುರುಂಟೆ ಮೂಢ||


ಶನಿವಾರ, ಜುಲೈ 29, 2017

ಮೂಢ ಉವಾಚ - 319

ನಾನಾರೆಂದು ತಿಳಿಸಿ ಹೇಳುವನೆ ಗುರುವು
ಅವನೆಂತೆಂದು ತೋರಿ ತಿದ್ದುವನೆ ಗುರುವು|
ಜಗವನನುಭವಿಸೆ ಮಾರ್ಗದರ್ಶಿಯೆ ಗುರುವು
ಗುರಿಯವನು ಗುರುವವನು ಒಬ್ಬನೇ ಮೂಢ||


ಶುಕ್ರವಾರ, ಜುಲೈ 28, 2017

ಮೂಢ ಉವಾಚ - 318

ಬೈಬಲ್ಲು ಹೇಳುವುದು ಜಗ ಜೀವ ದೇವ
ಕುರಾನು ಸಾರುವುದು ಜಗ ಜೀವ ದೇವ|
ಸಕಲ ಮತಗಳ ಸಾರ ಜಗ ಜೀವ ದೇವ
ಒಂದಲದೆ ಹಲವುಂಟೆ ಕಾಣೆ ಮೂಢ||


ಗುರುವಾರ, ಜುಲೈ 27, 2017

ಮೂಢ ಉವಾಚ - 317

ರವಿ ಸೋಮರಿಹರು ಇಹುದು ಭೂಮಂಡಲವು
ವಾಯು ಜಲವಿಹುದು ಆಗಸವು ತುಂಬಿಹುದು|
ಜಗವನನುಭವಿಪ ಜೀವಿಗಳ ಲೆಕ್ಕವಿಟ್ಟವರಾರು 
ಎಲ್ಲದಕೆ ಕಾರಣನು ಎಂತಿಹನೊ ಮೂಢ||


ಬುಧವಾರ, ಜುಲೈ 26, 2017

ಮೂಢ ಉವಾಚ - 316

ಜಗವೆಂತಿಹುದು ಎಷ್ಟಿಹುದು ಬಲ್ಲವರು ಇಹರೇನು
ಯಾರಿಗಾಗೀ ಜಗವು ರಚಿಸಿದವರಾರು|
ಆದಿ ತಿಳಿಯದೀ ಜಗಕೆ ಅಂತ್ಯವಿಹುದೇನು
ಜಗಜನಕನೇ ಬಲ್ಲ ಪ್ರಶ್ನೆಗುತ್ತರ ಮೂಢ||


ಮಂಗಳವಾರ, ಜುಲೈ 25, 2017

ಮೂಢ ಉವಾಚ - 315

ನಾನಾರು ಹೇಗಿರುವೆ ಬಿಡಿಸಿ ಹೇಳುವವರಾರು
ಜನನ ಮರಣಗಳ ಚಕ್ರ ತಿರುಗುವುದು ಏಕೆ|
ಹುಟ್ಟುವುದು ಏಕೆ ಸಾಯುವುದು ಮತ್ತೇಕೆ
ಅನಾದಿ ಪ್ರಶ್ನೆಗಳು ಅನಂತವೋ ಮೂಢ||


ಸೋಮವಾರ, ಜುಲೈ 24, 2017

ಮೂಢ ಉವಾಚ - 314

ನಾನಾರು ಅವನಾರು ಜಗವೆಂದರೇನು
ಪ್ರಶ್ನತ್ರಯಗಳು ನರರ ಕಾಡದಿಹವೇನು|
ಹಿಂದಿದ್ದು ಈಗಿರುವ ಎಂದೆಂದು ಇಹವೀ
ಒಗಟಿಗುತ್ತರವ ತಿಳಿದಿಹೆಯ ಮೂಢ||


ಭಾನುವಾರ, ಜುಲೈ 23, 2017

ಮೂಢ ಉವಾಚ - 313

ಹುಟ್ಟಿನಿಂ ಜಾತಿಯೆನೆ ನೀತಿಗದು ದೂರ
ಪ್ರಿಯ ಸುತರು ನರರಲ್ತೆ ದೇವಾಧಿದೇವನ|
ದೇವಗಿಲ್ಲದ ಜಾತಿ ಮಕ್ಕಳಿಗೆ ಬೇಕೇಕೆ
ಮೇಲು ಕೀಳುಗಳ ಸರಿಸಿಬಿಡು ಮೂಢ||


ಶನಿವಾರ, ಜುಲೈ 22, 2017

ಮೂಢ ಉವಾಚ - 312

ಆನಂದದ ಬಯಕೆ ನಂದದೆಂದೆಂದು
ಆನಂದವೇನೆಂದು ತಿಳಿಯಬೇಕಿಂದು|
ಸಿಕ್ಕಷ್ಟು ಸಾಲದೆನೆ ಆನಂದವಿನ್ನೆಲ್ಲಿ
ಇರುವುದೆ ಸಾಕೆನಲು ಆನಂದ ಮೂಢ|| 

ಶುಕ್ರವಾರ, ಜುಲೈ 21, 2017

ಮೂಢ ಉವಾಚ - 311

ದೇವನನು ಮೆಚ್ಚಿಸಲು ನಾಮ ಪಟ್ಟೆಗಳೇಕೆ
ರುದ್ರಾಕ್ಷಿ ಸರವೇಕೆ ಜಪಮಣಿಯು ಬೇಕೆ|
ತೋರಿಕೆಯ ನಡೆ ಸಲ್ಲ ನುಡಿಯು ಬೇಕಿಲ್ಲ
ಅಂತರಂಗದ ಭಾವ ಸಾಕೆಲ್ಲ ಮೂಢ||


ಗುರುವಾರ, ಜುಲೈ 20, 2017

ಮೂಢ ಉವಾಚ - 310

ದುರ್ಜನರ ಸಂಗವದು ರಾಗದ್ವೇಷಕೆ ದಾರಿ
ಒಳಕರೆಗೆ ಕಿವುಡಾಗಿ ಬೀಳುವರು ಜಾರಿ|
ಕುಜನರಿಂ ದೂರಾಗಿ ಸುಜನರೊಡನಾಡೆ
ಮೇಲೇರುವ ದಾರಿ ಕಂಡೀತು ಮೂಢ||


ಬುಧವಾರ, ಜುಲೈ 19, 2017

ಮೂಢ ಉವಾಚ - 309

ತಿನಿಸ ಕಂಡೊಡನೆ ಹಸಿವು ಹಿಂಗುವುದೆ
ಜಠರಾಗ್ನಿ ತಣಿದೀತು ಸೇವಿಸಲು ತಾನೆ?|
ಅರಿವು ಇದ್ದೊಡನೆ ಪರಮಾತ್ಮ ಸಿಕ್ಕಾನೆ
ಅನುಭವಿಸಿ ಕಾಣಬೇಕವನ ಮೂಢ||


ಮಂಗಳವಾರ, ಜುಲೈ 18, 2017

ಮೂಢ ಉವಾಚ - 308

ಭಕ್ತಿಯೆಂಬುದು ಪ್ರೀತಿ ಭಕ್ತಿಯೆಂಬುದು ರೀತಿ
ಬೇಕೆಂಬುದು ಭಕ್ತಿ ಬೇಡದಿಹುದೂ ಭಕ್ತಿ|
ರಾಗ ದ್ವೇಷಗಳು ಭಕ್ತಿ ನವರಸಗಳೂ ಭಕ್ತಿ
ನಿಜ ಭಾವಾಭಿವ್ಯಕ್ತಿ ಭಕ್ತಿ ಮೂಢ||


ಸೋಮವಾರ, ಜುಲೈ 17, 2017

ಮೂಢ ಉವಾಚ - 307

ಭಕ್ತಿಯದು ಸಿದ್ಧಿಸಲು ಏಕಾಂತವಿರಬೇಕು
ದೇವ ಸುಜನರೊಡೆ ಕೂಡಿಯಾಡಲುಬೇಕು|
ಗುರುಕರುಣೆಯಲಿ ನಲಿಯುತಿರಬೇಕು 
ನಿರ್ಮಮದಿ ಸಚ್ಚಿದಾನಂದ ಮೂಢ||


ಭಾನುವಾರ, ಜುಲೈ 16, 2017

ಮೂಢ ಉವಾಚ - 306

ಕರ್ಮಕಿಂ ಮಿಗಿಲು ಜ್ಞಾನಕಿಂ ಮಿಗಿಲು
ಯೋಗಕಿಂ ಮಿಗಿಲು ಭಕ್ತಿಯ ಹೊನಲು|
ಮೂರರ ಗುರಿಯೆ ಭಕ್ತಿ ತಾನಾಗಿರಲು
ಭಕ್ತಿಯೇ ಸಿರಿ ನೀನರಿಯೊ ಮೂಢ||


ಶುಕ್ರವಾರ, ಜುಲೈ 14, 2017

ಮೂಢ ಉವಾಚ - 305

ತನ್ನಿಷ್ಟ ಬಂದಂತೆ ನಯನ ನೋಡುವುದೆ?
ತಮ್ಮಿಚ್ಛೆಯಂತೆ ಕೈಕಾಲು ಆಡುವುವೆ?|
ತನುವಿನೊಳಗಿಹ ಅವನಿಚ್ಛೆಯೇ ಪರಮ
ಅವನಿರುವವರೆಗೆ ಆಟವೋ ಮೂಢ||


ಗುರುವಾರ, ಜುಲೈ 13, 2017

ಮೂಢ ಉವಾಚ - 304

ನಯನ ನೋಡುವುದು ತನಗಾಗಿ ಅಲ್ಲ
ಕಿವಿಯು ಕೇಳುವುದು ತನಗಲ್ಲವೇ ಅಲ್ಲ|
ದೇಹವಿದು ದಣಿಯುವುದು ದೇಹಕೆಂದಲ್ಲ
ಯಾರಿಗಾಗೆಂದು ಗೊತ್ತಿಹುದೆ ಮೂಢ?||


ಬುಧವಾರ, ಜುಲೈ 12, 2017

ಮೂಢ ಉವಾಚ - 303

ತಂತ್ರಗಳು ಬೇಕಿಲ್ಲ ಮಂತ್ರಗಳ ಹಂಗಿಲ್ಲ
ನಿಜಭಕ್ತನಾದವಗೆ ಕಟ್ಟುಪಾಡುಗಳಿಲ್ಲ|
ಚಂಚಲಿತ ಮನಕಿರಲಿ ರೀತಿನೀತಿಗಳು
ನಡೆದದ್ದೆ ದಾರಿ ಸಾಧಕಗೆ ಮೂಢ|| 

ಮಂಗಳವಾರ, ಜುಲೈ 11, 2017

ಮೂಢ ಉವಾಚ - 302

ಬಯಕೆಯದು ದೂರಾಗಿ ತೃಪ್ತಿ ಸಿಕ್ಕುವುದು
ಮತ್ಸರದ ನೆರಳಿರದೆ ನೆಲೆಸೀತು ಶಾಂತತೆಯು|
ಭಕ್ತಿಯೊಂದಿರಲಾಗಿ ಚಿರಸುಖವು ಸಿಕ್ಕೀತು
ನಿತ್ಯನೂತನ ಶಕ್ತಿ ಭಕ್ತಿ ಮೂಢ||


ಭಾನುವಾರ, ಜುಲೈ 9, 2017

ಮೂಢ ಉವಾಚ - 301

ದೇವನನು ಬಯಸುವ ಉತ್ಕಟತೆ ಭಕ್ತಿ
ಪ್ರೀತಿಯಾಮೃತದ ರಸಧಾರೆ ಭಕ್ತಿ|
ಭಕ್ತಿಯದು ಸಾಧಿಸಲು ಬೇರೇನು ಬೇಕಿಲ್ಲ
ಒಳಗೊಳಗೆ ಆನಂದ ಚಂದ ಮೂಢ||


ಶನಿವಾರ, ಜುಲೈ 8, 2017

ಮೂಢ ಉವಾಚ - 300

ಚಿತ್ತವದು ದೂರವಿರೆ ರೂಪ ರಸ ಗಂಧದಿಂ
ಮೇಣ್ ಕೇಳದಿರೆ ಶಬ್ದ ತಿಳಿಯದಿರೆ ಸ್ಪರ್ಶ|
ನಿಂತೀತು ಮನವು ದೇವಸಾಮೀಪ್ಯದಲಿ
ಭಕ್ತಿಯೇ ಸಾಧನವು ಇದಕೆ ಮೂಢ||


ಶುಕ್ರವಾರ, ಜುಲೈ 7, 2017

ಮೂಢ ಉವಾಚ - 299

ಸವಿಗವಳದ ರುಚಿಯ ಕರವು ತಿಳಿದೀತೆ
ಸವಿಗಾನದ ಸವಿಯ ನಯನ ಸವಿದೀತೆ|
ಚೆಲುವು ಚಿತ್ತಾರಗಳ ಕಿವಿಯು ಕಂಡೀತೆ
ಅವರವರ ಭಾಗ್ಯ ಅವರದೊ ಮೂಢ||


ಗುರುವಾರ, ಜುಲೈ 6, 2017

ಮೂಢ ಉವಾಚ - 298

ನೆಲವ ಸೋಕದಿಹ ಅನ್ನವಿಹುದೇನು
ನೆಲವ ತಾಕದಿಹ ಪಾದಗಳು ಉಂಟೇನು|
ಮಡಿಯೆಂದು ಹಾರಾಡಿ ದಣಿವುದೇತಕೆ ಹೇಳು
ದೇವಗೇ ಇಲ್ಲ ಮಡಿ ನಿನಗೇಕೆ ಮೂಢ||


ಮೂಢ ಉವಾಚ - 297

ಅಲ್ಲೆಲ್ಲ ಇಲ್ಲೆಲ್ಲ ಮೇಲೆಲ್ಲ ಕೆಳಗೆಲ್ಲ
ಎಲ್ಲಿಂದ ಎಲ್ಲಿಗೂ ಮುಗಿದುದೇ ಇಲ್ಲ|
ಅವನೊಬ್ಬನೇ ಜಗದ ಎಲ್ಲೆಯನು ಬಲ್ಲ
ಕಣ್ಣರಳಿ ಬೆರಗಾಗಿ ನಿಂತಿಹನು ಮೂಢ||


ಸೋಮವಾರ, ಜುಲೈ 3, 2017

ಮೂಢ ಉವಾಚ - 296

ಜಗಕೆ ಕಾರಣ ಒಂದು ಆಧಾರ ಒಂದು 
ಒಂದನೊಂದನು ಕಂಡು ಬೆರಗಾಯಿತೊಂದು|
ಚಂದಕಿಂತ ಚಂದ ಒಂದಕೊಂದರ ನಂಟು 
ಆಧಾರಕಾಧಾರನವನೆ ಮೂಢ||


ಭಾನುವಾರ, ಜುಲೈ 2, 2017

ಮೂಢ ಉವಾಚ - 295

ಬಂಡಿಗೊಡೆಯನು ನೀನೆ ಪಯಣಿಗನು ನೀನೆ
ಅವನ ಕರುಣೆಯಿದು ಅಹುದಹುದು ತಾನೆ|
ಗುರಿಯ ಅರಿವಿರಲು ಸಾರ್ಥಕವು ಪಯಣ
ಗುರಿಯಿರದ ಪಯಣ ವ್ಯರ್ಥ ಮೂಢ||