ಬುಧವಾರ, ಮಾರ್ಚ್ 5, 2014

ದೇವರು ನನಗೆ ಹೇಳಿದ ಸುಪ್ರಭಾತ



ಮುಂಜಾನೆ ನೀನೆದ್ದೆ - ನಾನು ಕಾದಿದ್ದೆ
ನಿನ್ನೆರಡು ಮಾತಿಗೆ, ಮುಗುಳ್ನಗೆಗೆ;
ನಿನಗೆ ಪುರುಸೊತ್ತಿಲ್ಲ !
ಗಡಿಬಿಡಿಯಲಿ ನೀ ನಿತ್ಯಕರ್ಮ ಮುಗಿಸಿದೆ
ನಿನ್ನ ನಿರೀಕ್ಷಣೆಯಲ್ಲೇ ನಾನಿದ್ದೆ;
ಯಾವ ಬಟ್ಟೆ ಧರಿಸಲಿ
ಎಂಬ ಗುಂಗಿನಲ್ಲಿ ನೀನಿದ್ದೆ;
ನಿನಗೆ ಸಮಯವಿಲ್ಲ !
ತಿಂಡಿ ತಿನ್ನುವಾಗೊಮ್ಮೆಯಾದರೂ
ನೀ ನೋಡುವಿಯೆಂದುಕೊಂಡಿದ್ದೆ;
ಇಂದೇನು ಮಾಡಬೇಕೆಂಬ
ಚಿಂತೆಯಲಿ ನೀನಿದ್ದೆ;
ನಿನಗೆ ಸಮಯವಿಲ್ಲ !
ಮನೆಯಿಂದ ಹೊರಟಾಗಲೊಮ್ಮೆ
ಕೈಬೀಸಿ ವಿದಾಯ ನುಡಿಯಲೂ
ನಿನಗಾಗಲಿಲ್ಲ ! ಅಷ್ಟು ಆತುರ ನಿನಗೆ;
ನಿನಗೆ ಸಮಯವಿಲ್ಲ !
ದಿನವಿಡೀ ನಾಕಾದೆ - ನಿನ್ನ ಗಮನಿಸಿದೆ
ನಿನ್ನ ಕೆಲಸದ ಒತ್ತಡದಿ
ನನ್ನ ನೆನಪು ನಿನಗಾಗದಿರಬಹುದು;
ನಿನಗೆ ಸಮಯವಿಲ್ಲ !
ಮಧ್ಯಾಹ್ನದೂಟ ಮಾಡುವ ಮುನ್ನ
ಅರೆಘಳಿಗೆ ನೀ ಸುಮ್ಮನೆ ಇದ್ದಾಗ
ಮಾತಾಡಬಹುದೇನೋ ಅನ್ನಿಸಿತು;
ನಾನು ಕಾದಿದ್ದೇ ಬಂತು;
ನಿನಗೆ ಗೊತ್ತೇ ಆಗಲಿಲ್ಲ;
ನಿನಗೆ ಸಮಯವಿಲ್ಲ !
ಯಾಂತ್ರಿಕವಾಗಿ ಟಿವಿ ನೋಡಿ
ಮಡದಿ ಮಕ್ಕಳೊಂದಿಗೆ ಊಟ ಮಾಡಿ
ಸುಸ್ತಾಗಿ ಮಲಗುವ ಮುನ್ನ
ನನ್ನೊಡನೆ ದಿನದ ಕಷ್ಟ ಸುಖ
ಹಂಚಿಕೊಳ್ಳಬಹುದೆಂದು ನಾನು ಕಾದಿದ್ದೆ;
ನಿದ್ರೆಗೆ ನೀನು ಜಾರಿದೆ;
ನಿನಗೆ ಸಮಯವಿಲ್ಲ !
ದಿನಚರಿ ಹೀಗೇ ಸಾಗುವುದು
ಬೆಳಗಾಗುವುದು, ರಾತ್ರಿಯಾಗುವುದು;
ನಾನು ಕಾಯುತ್ತಿರುವೆ, ಪ್ರೀತಿಯಿಂದ
ನಿನಗೆ ಸಮಯ ಸಿಗಬಹುದೆಂದು;
ನಿನಗೆ ಶುಭವಾಗಲಿ !
-ಕ.ವೆಂ.ನಾಗರಾಜ್.

1 ಕಾಮೆಂಟ್‌:

  1. Prabhu
    ಇದೊಂದು ಅತ್ಯುತ್ತಮ ಕವನ ನಾಗರಾಜ್ ಅವರೇ. ನಿಮ್ಮ ಆತ್ಮಾವಲೋಕನ ಮತ್ತೊಬ್ಬರಿಗೂ ಆತ್ಮಾವಲೋಕನಕ್ಕೆ ಪ್ರೇರಣೆ ನೀಡುವಂತಿದೆ. ಧನ್ಯವಾದಗಳು.
    ಎಚ್.ಎಸ್. ಪ್ರಭಾಕರ, ಪತ್ರಕರ್ತ, ಹಾಸನ.

    ಕವಿ ನಾಗರಾಜ್
    ಧನ್ಯವಾದ, ಪ್ರಭಾಕರರವರೇ.

    Bharathi
    Really very nice poem Ur worsted .... & god bless u my dear friend

    'ಶಾಮಲ'
    ಕವಿನಾಗರಾಜ್ ಅವರೇ, ದೇವರ ಸುಪ್ರಭಾತ ಬಹಳ ಚೆನ್ನಾಗಿದೆ. ದೇವರನ್ನು ನೆನೆದುಕೊಳ್ಳುವಂತೆ ಮಾಡಿದ ನಿಮಗೆ ಧನ್ಯವಾದಗಳು, ಶಾಮಲ

    ಆಸು ಹೆಗ್ಡೆ
    ನೀ ಮನುಜನನು ಸುಖವಾಗಿ ಇಟ್ಟು ನಿನ್ನ ನೆನೆಯೆಂದರೆ ಹೇಗೆ ದೇವಾ? ನೋಡು ಆತನಿಗೆ ಸ್ವಲ್ಪ ಕಷ್ಟ ಕೊಟ್ಟು ಮತ್ತೆ ಹಗಲೆಲ್ಲಾ ನಿನ್ನದೆ ಜಪ ದೇವಾ ಎಲ್ಲವೂ ಸುಸೂತ್ರವಾಗಿ ನಡೆಯುತಿರೆ ಇಲ್ಲಿ ಯಾರಿಗೂ ಬೇಕಾಗಿಲ್ಲ ನೀನು ಸೂತ್ರ ಕಡಿದ ಗಾಳಿಪಟವಾದರೆ ಎಲ್ಲರನೂ ಕಾಪಾಡಲು ಬೇಕು ನೀನು. -ಸುರೇಶ್.

    ಅರವಿಂದ್
    ಕವಿ ನಾಗರಾಜ್ ಸಾರ್ ಒಳ್ಳೆ ಪ್ರಯೋಗ ಮುಂದುವರೆಸಿ.

    ಪ್ರತ್ಯುತ್ತರಅಳಿಸಿ