ಶುಕ್ರವಾರ, ಮಾರ್ಚ್ 28, 2014

ವಿಷಣ್ಣತೆ


ಎನ್ನ ಕೊನೆಯ ದಿನಗಳ ಮೊದಲ ದಿನಗಳಿವು
ಬಂದ ದಾರಿಯನೊಮ್ಮೆ ನಿಂತು ನೋಡಿದೆ ಮನವು|
ಗುಣಿಸಿ ಭಾಗಿಸಿ ಕೂಡಿಸಿ ಕಳೆದುಳಿದ ಶೇಷವು
ಸೋಲೋ ಗೆಲುವೋ ತಿಳಿಯದ ವಿಷಣ್ಣಭಾವವು||

-ಕ.ವೆಂ.ನಾಗರಾಜ್.

ಸೋಮವಾರ, ಮಾರ್ಚ್ 24, 2014

ಗೌಡರು ಬಂದರು

ಗೌಡರು ಬಂದರು ಸೂತ್ರವ ಹಿಡಿದು ಒಳಗೇ ನಗುನಗುತಾ|
ಕಣ್ಣೀರ್ಗರೆದರು ಮಕ್ಕಳ ಕಷ್ಟವು ತಮದೇ ಎಂದೆನುತಾ||

ಜಾತ್ಯಾತೀತತೆ ಲೇಬಲ್ ಹಚ್ಚಿದ ಶಾಲದು ಹೆಗಲಲ್ಲಿ
ಜಾತೀಯತೆಯ ಕರಾಳ ಬೀಜದ ಚೀಲವು ಬಗಲಲ್ಲಿ||

ಮೌಲ್ಯಾಧಾರಿತ ರಾಜಕಾರಣ ಪುಸ್ತಕದಿರಲೆನುತಾ
ಮಕ್ಕಳೇ ಮೌಲ್ಯವು ಕುರ್ಚಿಯೇ ದೇವರು ಥಕಥಕಥಕದಿಮಿತಾ||

ಗಿಳಿಪಾಠವನೊಪ್ಪಿಸೋ ಬ್ಯಾ ಬ್ಯಾ ಕುರಿಗಳು ಹಿಂದೆಯೆ ಬರುತಿರಲಿ|
ಸ್ವಂತಿಕೆ ತೋರುವ ಮಂದೆಯು ಸೇರಲಿ ಕಟುಕನ ಪಾಲಿನಲಿ||

ಹೆಗಡೆ ಹೊರಗಡೆ ಸಿದ್ಯಾ ಬಿದ್ಯಾ ಮತ್ತಿನ್ಯಾರಲ್ಲಿ|
ಹತ್ತಿದ ಏಣಿಯ ಒದೆಯುವ ಆಟಕೆ ಸಾಟಿ ಯಾರಿಲ್ಲಿ||

ಬಾಲವೆ ತಲೆಯನು ಆಡಿಸೋ ಸೋಜಿಗ ಕಂಡಿರಾ ನೀವೆಲ್ಲಿ|
ಕೊಟ್ಟಿಗೆಯೊಳಗಿನ ಶುನಕನ ಆರ್ಭಟ ಕಾಣಿರಾ ನೀವಿಲ್ಲಿ||

ಮಣ್ಣೂ ನಮದು ಹಣ್ಣೂ ನಮದು ತಿರುಳೂ ನಮಗಿರಲಿ|
ಕಣ್ ಕಣ್ ಬಿಡುತಾ ಬಾಯ್ ಬಾಯ್ ಬಿಡಲು ಕರಟವು ನಿಮಗಿರಲಿ||

[ಇದು 'ಕವಿಮನ'ದಲ್ಲಿ 4 ವರ್ಷಗಳ ಹಿಂದೆ ಪ್ರಥಮವಾಗಿ ಪ್ರಕಟಿಸಿದಾಗ ಬರೆದ ಟಿಪ್ಪಣಿ:
ಈ ವಿಡಂಬನಾತ್ಮಕ ರಚನೆ ಜನಪ್ರಿಯ 'ರಾಯರು ಬಂದರು ಮಾವನ ಮನೆಗೆ' ಧಾಟಿಯಲ್ಲಿ ರಚಿಸಿ ಮೂರು ವರ್ಷಗಳ ಮೇಲಾಗಿತ್ತು. ಮಾನ್ಯ ಕುಮಾರಸ್ವಾಮಿಯವರು ಮಾನ್ಯ ಯಡಿಯೂರಪ್ಪನವರಿಗೆ ಅಧಿಕಾರ ಹಸ್ತಾಂತರ ಮಾಡುವ ಸಂದರ್ಭದಲ್ಲಿ ಷರತ್ತುಗಳನ್ನು ಮುಂದೊಡ್ಡಿದಾಗ ಮೂಡಿದ ರಚನೆಯಿದು. ಆಗ ನಾನು ತಹಸೀಲ್ದಾರನಾಗಿ ಕಾರ್ಯ ಮಾಡುತ್ತಿದ್ದರಿಂದ ನನ್ನ ಭಾವನೆಗಳನ್ನು ಮುಕ್ತವಾಗಿ ಹೊರಗೆಡವುವಂತಿರಲಿಲ್ಲ. ಈಗ ಇದು ಶೈತ್ಯಾಗಾರದಿಂದ ಹೊರಬಂದಿದೆ. ವ್ಯಂಗ್ಯ ಚಿತ್ರ/ವಿಡಂಬನೆಯ ರೀತಿಯಲ್ಲಿ ಸ್ವಾಗತಿಸಲು ಕೋರುವೆ.
4 ವರ್ಷಗಳ ನಂತರ ಈಗಲೂ ಈ ಟಿಪ್ಪಣಿ ಸಾಮಯಿಕವಾಗಿದೆ.]
[ಚಿತ್ರ : ಅಂತರ್ಜಾಲದಿಂದ ಹೆಕ್ಕಿದ್ದು.]

ಗುರುವಾರ, ಮಾರ್ಚ್ 20, 2014

ಚುಚ್ಚಾಣಿ

ಚುಚ್ಚಾಣಿ ಚೂಪಿನದಣ್ಣಾ
ಸಿಕ್ಕಸಿಕ್ಕಲಿ ಚುಚ್ಚಿ ನೋಯಿಸುವುದಣ್ಣಾ
ಚುಚ್ಚಾಣಿ ಚೂಪಿನದಣ್ಣಾ|| ||ಪ||

ಚಿನ್ನದ ಚುಚ್ಚಾಣಿ ನವರಸದ ಚುಚ್ಚಾಣಿ
ಎಲ್ಲರ ಮೆಚ್ಚಿನ ಕಟ್ಟಾಣಿಯಣ್ಣಾ ||ಚುಚ್ಚಾಣಿ||

ಆಸೆ ಪುಗ್ಗೆಯೇರಿ ಸಂಭ್ರಮದಿ ತೇಲಿದ್ದೆ
ಪುಗ್ಗೆ ಡಬ್ಬೆಂದು ಧೊಪ್ಪನೆ ಕೆಳಬಿದ್ದೆ|| ||ಚುಚ್ಚಾಣಿ||

ಬಂಧು ಬಳಗದೆ ಕೂಡಿ ನಲಿಯುತಲಿದ್ದೆ
ಚುಚ್ಚು ಮಾತಿಂದಾಗಿ ಒಂಟಿ ಹೊರಬಿದ್ದೆ||||ಚುಚ್ಚಾಣಿ||

ದೇವಾಂತಃಕರಣದ ಫಲ ಕೈಲಿ ಹಿಡಿದಿದ್ದೆ
ಚುಚ್ಚು ಕಾಲ್ತೊಡರಿ ಎಡವಿ ಬಿದ್ದಿದ್ದೆ|| ||ಚುಚ್ಚಾಣಿ||

ಚುಚ್ಚಾಣಿ ಚೂಪಿನದಣ್ಣಾ
ಸಿಕ್ಕಸಿಕ್ಕಲಿ ಚುಚ್ಚಿ ನೋಯಿಸುವುದಣ್ಣಾ
ಚುಚ್ಚಾಣಿ ಚೂಪಿನದಣ್ಣಾ||

(ಸ್ಪೂರ್ತಿ: ಪುರಂದರದಾಸರ 'ದುಗ್ಗಾಣಿ ಬಲು ಕೆಟ್ಟದಣ್ಣಾ"..)

ಸೋಮವಾರ, ಮಾರ್ಚ್ 17, 2014

ನಿನ್ನನೆಂತು ಅರ್ಚಿಸಲಿ?


ನಿನ್ನನೆಂತು ಅರ್ಚಿಸಲಿ, ಹೇ ದೇವಾ|
ಸತ್ಪಥವ ತೋರಿ ತಣಿಸೆನ್ನ ಮನವಾ|| 


ಸರ್ವವ್ಯಾಪಕ ಸರ್ವಾಂತರ್ಯಾಮಿ ನೀನು|
ಗಂಟಾನಾದವ ಮಾಡಿ ಬಾ ಎನ್ನಲೇನು?||

ಅಖಿಲಾಂಡ ಕೋಟಿ ಬ್ರಹ್ಮಾಂಡ ನಾಯಕ ನೀನು|
ಕಿರುಪೀಠವ ತೋರಿ ಕುಳ್ಳಿರಿಸಲೇನು?||

ದಿವ್ಯ ಚೇತನ ಪರಿಶುದ್ಧ ಪರಮಾತ್ಮ ನೀನು|
ಅಭಿಷೇಕವ ಮಾಡಿ ಕೊಳೆ ತೊಳೆಯಲೇನು?||

ಸಕಲ ಚರಾಚರ ಸೃಷ್ಟಿಕರ್ತ ನೀನಲ್ಲವೇನು?|
ನಿನ್ನ ಸೃಷ್ಟಿಯ ಹೂವ ನಿನಗೆಂತು ಕೊಟ್ಟೇನು?||

ಅನೂಹ್ಯ ಅನಂತ ಅಭೋಕ್ತ ಅಚ್ಯುತ ನೀನು|
ನಿನಗೆ ನೈವೇದ್ಯವೆನೆ ಕೊಡಬಹುದು ನಾನೇನು?||

ಸಕಲ ಜೀವರಿಗೆ ನೆಲೆ ಕೊಟ್ಟ ಧೀಮಂತ ನೀನು|
ನಿನಗೊಂದು ಗುಡಿ ಕಟ್ಟಿ ನೆಲೆಗೊಳಿಸಲೇನು?||

ರೂಢಿರಾಡಿಯಲಿ ಮುಳುಗಿ ಇರಲಾರೆ ನಾನು|
ಹೊರಬರುವ ದಾರಿಯನು ತೋರುವೆಯ ನೀನು?||

ನಿನ್ನನೆಂತು ಅರ್ಚಿಸಲಿ, ಹೇ ದೇವಾ|
ಸತ್ಪಥವ ತೋರಿ ತಣಿಸೆನ್ನ ಮನವಾ||

-ಕ.ವೆಂ.ನಾಗರಾಜ್.

ರಂಗ


ರಂಗಾ ರಂಗಾ ಓ ರಂಗಾ ಬೇಗ್ ಬಾರೋ ನನ್ ರಂಗಾ|
ಹೇಗ್ ಬರಲಿ ಹೇಳಮ್ಮಾ ಪುರುಸೊತ್ತಿಲ್ಲ ಕಾಣಮ್ಮಾ||

ಹೊಲ ಗದ್ದೆ ಮಾರಾಯ್ತು ಇಂಜನೀರಿಂಗ್ ಓದ್ಸಾಯ್ತು|

ಹೋದ್ರೆ ಹೋಗ್ಲಿ ಬಿಡಮ್ಮಾ ಮಕ್ಳಿಗ್ ಮಾಡೋದ್ ನಿಮ್ ಧರ್ಮ||   ||ರಂಗಾ||


ಮನೆ ಮಂದಾಳ ಬಿಟ್ ಹೋಯ್ತು ನಿನ್ ನೌಕ್ರಿಗ್ ಪಾಡಾಯ್ತು|
ಹೋದ್ರೆ ಹೋಯ್ತು ಬಿಡಮ್ಮಾ ಮಕ್ಳಿಗ್ ಮಾಡೋದ್ ನಿಮ್ ಕರ್ಮ|| ||ರಂಗಾ||

ಅಪ್ಪಂಗ್ ಸೀರಿಯಸ್ ಕಾಣಪ್ಪಾ ಬೇಗ್ ಬಾರೋ ನನ್ ಮಗನೇ|

ಆಸ್ಪತ್ರೆಗ್ ಕರಕೊಂಡ್ ಹೋಗಮ್ಮಾ ದುಡ್ಡೆಷ್ಟ್ ಬೇಕು ಹೇಳಮ್ಮಾ||  ||ರಂಗಾ||


ಅಪ್ಪ ಕೈಬಿಟ್ರು ಕಾಣಪ್ಪಾ ಗತಿ ಕಾಣಿಸು ಬಾರಪ್ಪಾ|
ಸತ್ಮೇಲಿನ್ನೇನ್ ಬಿಡಮ್ಮಾ ಮಣ್ ಮಾಡಿ ಮುಗಿಸಮ್ಮಾ||                ||ರಂಗಾ||

                                                                -ಕ.ವೆಂ. ನಾಗರಾಜ್

ಭಾನುವಾರ, ಮಾರ್ಚ್ 9, 2014

ಏನಂತೆ? ? . . .! !

                ಏನಂತೆ?  ? .  . .! !

ಏನಂತೆ? ಸೋತರೇನಂತೆ?
              ಸೋಲೆಂಬುದೇನೆಂದು ತಿಳಿಯಿತಂತೆ!
              ಗೆಲುವಿನ ದಾರಿಯದು ಕಂಡಿತಂತೆ!!

ಏನಂತೆ? ಬಿದ್ದರೇನಂತೆ?
              ನೋವೆಂಬುದೇನೆಂದು ತಿಳಿಯಿತಂತೆ!
              ನೋಡಿ ನಡೆಯಲು ಕಲಿತೆನಂತೆ!!

ಏನಂತೆ? ಹಸಿವಾದರೇನಂತೆ?
              ದುಡಿದು ಉಣ್ಣಲು ಮಾರ್ಗವಂತೆ!
              ಹಳಸಿದ ಅನ್ನವೂ ರುಚಿಯಂತೆ!!

ಏನಂತೆ? ದುಃಖವಾದರೇನಂತೆ?
              ಸಂತೋಷದ ದಾರಿ ಸಿಕ್ಕಿತಂತೆ!
              ಸುಖವೆಂಬುದೊಳಗೇ ಇದೆಯಂತೆ!!

ಏನಂತೆ? ತಪ್ಪಾದರೇನಂತೆ?
              ನಡೆ ತಿದ್ದಿ ಸಾಗುವ ಮನಸಂತೆ!
              ತಲೆ ಎತ್ತಿ ನಡೆಯುವ ಕನಸಂತೆ!

ಏನಂತೆ? ನಿಂದಿಸಿದರೇನಂತೆ?
              ನಿಂದಕರ ಬಾಯಿ ಹೊಲಸಂತೆ!
              ನಾನಾರೆಂದು ನನಗೆ ತಿಳಿಯಿತಂತೆ!!

ಏನಂತೆ? ಸೂರಿಲ್ಲದಿರೇನಂತೆ?
              ಲೋಕವೆ ನನ್ನ ಮನೆಯಂತೆ!
              ಬಹು ದೊಡ್ಡ ಮನೆಯೇ ನನ್ನದಂತೆ!!

ಏನಂತೆ? ದಿಕ್ಕಿಲ್ಲದಿರೇನಂತೆ?
             ಜನರೆಲ್ಲ ನನ್ನ ಬಂಧುಗಳಂತೆ!
             ಬಲು ದೊಡ್ಡ ಸಂಸಾರ ನನ್ನದಂತೆ!!

                     ?   ?    !    !
-ಕ.ವೆಂ.ನಾಗರಾಜ್.
ಚಿತ್ರ: ಅಂತರ್ಜಾಲದಿಂದ ಹೆಕ್ಕಿದ್ದು.
***********************

ಶನಿವಾರ, ಮಾರ್ಚ್ 8, 2014

ಹಕ್ಕಿಯೊಂದು ಹಾರಿ ಬಂದು . . .

ಹಕ್ಕಿಯೊಂದು ಹಾರಿ ಬಂದು ಕಿಟಕಿಯಲ್ಲಿ ಕುಳಿತಿತು
ಸುತ್ತಮುತ್ತ ಹಾರಿತು ಅತ್ತ ಇತ್ತ ನೋಡಿತು |
ಸರಿಯೆಂದು ಕಂಡಿತು ಗೂಡನೊಂದು ಕಟ್ಟಿತು
ಕಾಲ ಕೂಡಿ ಬಂದಿತು ಮೊಟ್ಟೆ ಮೂರು ಇಟ್ಟಿತು ||

ಹಕ್ಕಿಗಾಗಿ ಕೋಣೆ ತೆರವು ಮನೆಮಂದಿಯಲ್ಲ ನೆರವು
ತಾಯಿಗಿಲ್ಲ ತಲೆಭಾರ ಜೀವಸೆಲೆಗೆ ಉಪಕಾರ |
ಬಿಟ್ಟ ಬಾಣದಂತೆ ಹಾರಿ ಬಂದವರನು ಹೆದರಿಸಿತು
ಕಾವಲಿದ್ದು ಕಾವು ಕೊಟ್ಟು ತಾಯಿತನವ ಮೆರೆಯಿತು ||

ಮೊಟ್ಟೆ ಬಿರಿದು ಬೊಮ್ಮಟೆಗಳು ಬಂದವು
ತ್ರಾಣವಿಲ್ಲ ಕಾಣದೆಲ್ಲ ಕಿಚಿಪಿಚಿ ಕದಲಿದವು |
ನಾವು ತಾಳಲಾರೆವು ಅಮ್ಮ ಹಸಿವೆ ಅಮ್ಮ ಹಸಿವೆ
ಬಂದೆ ತಡಿ ಇಗೋ ಹಿಡಿ ಪ್ರೀತಿ ಎಲ್ಲ ಸುರಿವೆ ||

ಹಾ ಸರಿ ಹೀಗೆ ಮರಿ ಎಲ್ಲಿ ಹಾರು ನೋಡುವ
ಹಾರುವುದ ಕಲಿತ ಮೇಲೆ ಭರ್ ಎಂದು ಹಾರುವ |
ನಿಮ್ಮ ನೆರವು ನಮ್ಮ ನಲಿವು ಎನಿತು ಮಧುರ ಸಂಬಂಧ
ದ್ವೇಷ ಬಿಡಿ ಪ್ರೀತಿಸಿರಿ ಅನಿತು ಬಾಳು ಚೆಂದ ||
****************
-ಕ.ವೆಂ. ನಾಗರಾಜ್.
(ಆಧಾರ: ಶಿವಮೊಗ್ಗದ ದಿನಪತ್ರಿಕೆ 'ಜನಹೋರಾಟ'ದಲ್ಲಿ ಪ್ರಕಟವಾದ ಕವಿ ಸುರೇಶರ 'ಒಂದು ಗೂಡಿನ ಕಥೆ' ಎಂಬ ಸಚಿತ್ರ ಲೇಖನ;                                                                                                      ಚಿತ್ರಗಳು: ಬಿ.ಎಸ್.ಆರ್. ದೀಪಕ್.)




 














ಬುಧವಾರ, ಮಾರ್ಚ್ 5, 2014

ಸ್ವಾರ್ಥ


         
ಸ್ವಾರ್ಥದ ಭೂತ ದ್ವೇಷದ ಕತ್ತಿ ಸೆಳೆದಿತ್ತು
ಕಂಡ ಕಂಡವರ ಗುಂಡಿಗೆಯ ಬಗೆದಿತ್ತು||

ಅಪ್ಪ ಅಮ್ಮದಿರಿಲ್ಲ ಅಣ್ಣ ತಮ್ಮದಿರಿಲ್ಲ
ಗಂಡ ಹೆಂಡತಿಯಿಲ್ಲ ಮಕ್ಕಳು ಮರಿಯಿಲ್ಲ
ಯಾರನೂ ಉಳಿಸಿಲ್ಲ, ಬೇಡಿದರೂ ಬಿಡಲಿಲ್ಲ||


ನಗುವು ಬಂದೀತೆಂದು ಹಲ್ಲ ಮುರಿದಿತ್ತು
ಓಡಿ ಹೋದಾರೆಂದು ಕಾಲ ತುಂಡರಿಸಿತ್ತು.
ಬೇಡವೆಂದವರ ಕೈಯನೇ ಕಡಿದಿತ್ತು||

ಕಣ್ಣೀರು ಒರೆಸುವರ ಕಣ್ಣ ಬಗೆದಿತ್ತು
ಕೈಚೆಲ್ಲಿ ಕುಳಿತವರ ಬೆದರಿ ಬೆಂಡಾದವರ
ಗಂಟಲನೆ ಸೀಳಿ ಗಹಗಹಿಸಿ ನಕ್ಕಿತ್ತು||

ಸಾಕ್ಷಿಯಾದವರ ನಾಲಗೆಯ ನುಂಗಿತ್ತು
ನೊಂದು ಬೆಂದ ಅತೃಪ್ತ ಆತ್ಮಗಳು
ತಿರುಗಿ ಬೀಳುವ ವೇಳೆ ಕಾಲ ಮಿಂಚಿತ್ತು||
                             -ಕ.ವೆಂ.ನಾಗರಾಜ್

[ಚಿತ್ರ: ಅಂತರ್ಜಾಲದಿಂದ ಹೆಕ್ಕಿದ್ದು.]
21-04-2013ರ 'ಜನಮಿತ್ರ' ಪತ್ರಿಕೆಯಲ್ಲಿ ಪ್ರಕಟವಾಗಿದೆ.

ದೇವರು ನನಗೆ ಹೇಳಿದ ಸುಪ್ರಭಾತ



ಮುಂಜಾನೆ ನೀನೆದ್ದೆ - ನಾನು ಕಾದಿದ್ದೆ
ನಿನ್ನೆರಡು ಮಾತಿಗೆ, ಮುಗುಳ್ನಗೆಗೆ;
ನಿನಗೆ ಪುರುಸೊತ್ತಿಲ್ಲ !
ಗಡಿಬಿಡಿಯಲಿ ನೀ ನಿತ್ಯಕರ್ಮ ಮುಗಿಸಿದೆ
ನಿನ್ನ ನಿರೀಕ್ಷಣೆಯಲ್ಲೇ ನಾನಿದ್ದೆ;
ಯಾವ ಬಟ್ಟೆ ಧರಿಸಲಿ
ಎಂಬ ಗುಂಗಿನಲ್ಲಿ ನೀನಿದ್ದೆ;
ನಿನಗೆ ಸಮಯವಿಲ್ಲ !
ತಿಂಡಿ ತಿನ್ನುವಾಗೊಮ್ಮೆಯಾದರೂ
ನೀ ನೋಡುವಿಯೆಂದುಕೊಂಡಿದ್ದೆ;
ಇಂದೇನು ಮಾಡಬೇಕೆಂಬ
ಚಿಂತೆಯಲಿ ನೀನಿದ್ದೆ;
ನಿನಗೆ ಸಮಯವಿಲ್ಲ !
ಮನೆಯಿಂದ ಹೊರಟಾಗಲೊಮ್ಮೆ
ಕೈಬೀಸಿ ವಿದಾಯ ನುಡಿಯಲೂ
ನಿನಗಾಗಲಿಲ್ಲ ! ಅಷ್ಟು ಆತುರ ನಿನಗೆ;
ನಿನಗೆ ಸಮಯವಿಲ್ಲ !
ದಿನವಿಡೀ ನಾಕಾದೆ - ನಿನ್ನ ಗಮನಿಸಿದೆ
ನಿನ್ನ ಕೆಲಸದ ಒತ್ತಡದಿ
ನನ್ನ ನೆನಪು ನಿನಗಾಗದಿರಬಹುದು;
ನಿನಗೆ ಸಮಯವಿಲ್ಲ !
ಮಧ್ಯಾಹ್ನದೂಟ ಮಾಡುವ ಮುನ್ನ
ಅರೆಘಳಿಗೆ ನೀ ಸುಮ್ಮನೆ ಇದ್ದಾಗ
ಮಾತಾಡಬಹುದೇನೋ ಅನ್ನಿಸಿತು;
ನಾನು ಕಾದಿದ್ದೇ ಬಂತು;
ನಿನಗೆ ಗೊತ್ತೇ ಆಗಲಿಲ್ಲ;
ನಿನಗೆ ಸಮಯವಿಲ್ಲ !
ಯಾಂತ್ರಿಕವಾಗಿ ಟಿವಿ ನೋಡಿ
ಮಡದಿ ಮಕ್ಕಳೊಂದಿಗೆ ಊಟ ಮಾಡಿ
ಸುಸ್ತಾಗಿ ಮಲಗುವ ಮುನ್ನ
ನನ್ನೊಡನೆ ದಿನದ ಕಷ್ಟ ಸುಖ
ಹಂಚಿಕೊಳ್ಳಬಹುದೆಂದು ನಾನು ಕಾದಿದ್ದೆ;
ನಿದ್ರೆಗೆ ನೀನು ಜಾರಿದೆ;
ನಿನಗೆ ಸಮಯವಿಲ್ಲ !
ದಿನಚರಿ ಹೀಗೇ ಸಾಗುವುದು
ಬೆಳಗಾಗುವುದು, ರಾತ್ರಿಯಾಗುವುದು;
ನಾನು ಕಾಯುತ್ತಿರುವೆ, ಪ್ರೀತಿಯಿಂದ
ನಿನಗೆ ಸಮಯ ಸಿಗಬಹುದೆಂದು;
ನಿನಗೆ ಶುಭವಾಗಲಿ !
-ಕ.ವೆಂ.ನಾಗರಾಜ್.