ಬುಧವಾರ, ಏಪ್ರಿಲ್ 23, 2014

ಅಭಾಸ

ಬದುಕಿನಲಪರಿಮಿತ ಅಭಾಸಗಳ ನಾ ಕಂಡೆ
ಪರಿತಪ್ತ ಮನಸಾಗಿಹುದು ಅಗ್ನಿಯ ಉಂಡೆ||

ಸತ್ಯ ನ್ಯಾಯ ಧರ್ಮಗಳೆಂದು ಕಂಡರೆ ಕನಸ

ಹೀಗಳೆದು ಕಾಲೆಳೆದು ಮಾಡುವರು ಪರಿಹಾಸ||

ಹುಂಬರೊಟ್ಟಾಗಿ ಹಂಗಿಸುತ ಜರೆಯುವರು

ಮನೆಮಂದಿಯೇ ಬೆಂಬಲವ ನೀಡದಿಹರು||

ನಳನಳಿಸಿ ಚಿಗುರೊಡೆದ ಸಂಬಂಧವೃಕ್ಷದ ಬೇರು

ಹುಳು ಹತ್ತಿ ಧರೆಗುರುಳಿ ಮನಸು ಚೂರು ಚೂರು||

ಪೋಷಿಸುವ ಕರಗಳು ನೇಣು ಬಿಗಿದುದ ಕಂಡೆ

ಬೇರು ಮೇಲೆದ್ದು ಚಿಗುರ ನುಂಗಿದುದ ಕಂಡೆ||

ಗುರು ಹಿರಿಯರನು ಅವಮಾನಿಸಿದುದ ಕಂಡೆ

ನಂಬಿದವರೇ ಕೊರಳ ಕೊಯ್ದುದನು ಕಂಡೆ||

ಮುನ್ನಡೆಯಲಡಿಯಿಟ್ಟ ನೆಲ ಕುಸಿದುದನು ಕಂಡೆ

ನಡೆದೆಡವಿದ್ದೆ ತಪ್ಪೆಂದು ನಿಂದಿಸಲು ನೊಂದೆ||

-ಕ.ವೆಂ. ನಾಗರಾಜ್.

ಭಾನುವಾರ, ಏಪ್ರಿಲ್ 20, 2014

ಕೆಂಪು ಬೆಳೆ

ಸ್ವಾರ್ಥದಾ ಭೂಮಿಗೆ ಚಾಡಿಮಾತುಗಳ ಮಳೆ ಬಿದ್ದು
ಕ್ಷೇತ್ರವದು ನಳನಳಿಸಿ ಕಂಗೊಳಿಸುತಿಹುದು|

ಅಸಹನೆ ಮತ್ಸರದುಪಕರಣದಿಂ ಉತ್ತಿರಲು
ದ್ವೇಷದಾ ಕಿಡಿಗಳೆಂಬೋ ಬೀಜವನು ಬಿತ್ತಿಹರು|

ಸಂಶಯದ ಗೊಬ್ಬರವ ಕಾಲಕಾಲಕೆ ಹಾಕಿ
ಶಾಂತಿ ಸಹನೆಯ ಕಳೆಯ ಚಿವುಟಿ ಹಾಕಿಹರು|

ವೈಮನಸ್ಸಿನ ಬೆಳೆಯು ಅಬ್ಬರದಿ ಬೆಳೆದಿರಲು
ಆಹಾ ಎಲ್ಲಿ ನೋಡಿದರಲ್ಲಿ ಕೆಂಪಿನೋಕುಳಿಯು

ಬೆಳೆಯ ಬೆಳೆದವರು ಬೆಳೆಯನುಂಡವರು
ಅಯ್ಯೋ ಕೆಂಗಣ್ಣರಾಗಿ ಮತಿಯ ಮರೆತಿಹರು|

ಪತಿ ಪತ್ನಿಯರ ನಡುವೆ ಹೆತ್ತವರ ನಡುವೆ
ವಿರಸದುರಿಯದು ಹೊತ್ತಿ ಜ್ವಲಿಸುತಿಹುದು|

ಅತ್ತೆ ಸೊಸೆಯರ ನಡುವೆ ಸೋದರರ ನಡುವೆ
ಮತ್ಸರದ ಬೆಂಕಿ ತಾ ಹೊಗೆಯಾಡುತಿಹುದು|

ಬದುಕು ಶಾಶ್ವತವಲ್ಲ ದ್ವೇಷ ಬಿಡಿ ಎಂದವರ
ನಾಲಗೆಯ ಕತ್ತರಿಸಿ ಕರುಳ ಬಗೆದೆಳೆದಿಹರು||

************
-ಕವಿ ನಾಗರಾಜ್.

ಮಂಗಳವಾರ, ಏಪ್ರಿಲ್ 15, 2014

ಸತ್ಯ

ಕಷ್ಟವೇನಲ್ಲ,
ಹುಡುಕಿದರೆ ಸಿಕ್ಕೀತು
ಬದುಕಲಗತ್ಯದ ಪ್ರೀತಿ!

ಕಠಿಣಾತಿ ಕಷ್ಟ,
ಹುಡುಕಿದರೂ ಸಿಕ್ಕದು
ಎಲ್ಲಿಹುದದು ಸತ್ಯ?

ಅಯ್ಯೋ ಮರುಳೆ,
ಪಂಡಿತೋತ್ತಮರೆಂದರು
ದೇವರೇ ಸತ್ಯ!

ದೇವರು? ಸತ್ಯ?
ಎಲ್ಲಿಹುದದು ಸತ್ಯ?
ಇನ್ನು ದೇವರು?

ಸಿಕ್ಕರೂ ಸತ್ಯ,
ಮುಖವಾಡದಡಗಿಹುದು ಸತ್ಯ,
ಅರ್ಥವಾಗದ ಸತ್ಯ!

ಅರ್ಥೈಸಿದರೆ ಸತ್ಯ,
ಪಥ್ಯವಾದರೆ ಸತ್ಯ,
ದೇವನೊಲಿವ, ಸತ್ಯ!
****
-ಕವಿನಾಗರಾಜ್.

ಶನಿವಾರ, ಏಪ್ರಿಲ್ 5, 2014

ಮಕ್ಕಳಿಗೆ ಕಿವಿಮಾತು

ಬಾಳಸಂಜೆಯಲಿ ನಿಂತಿಹೆನು ನಾನಿಂದು |
ಮನಸಿಟ್ಟು ಕೇಳಿರಿ ಹೇಳುವೆನು ಮಾತೊಂದು ||

ಕೇಳುವುದು ಬಿಡುವುದು ನಿಮಗೆ ಬಿಟ್ಟಿದ್ದು |
ಅಂತರಾಳದ ನುಡಿಗಳಿವು ಹೃದಯದಲ್ಲಿದ್ದದ್ದು ||

ಗೊತ್ತಿಹುದು ನನಗೆ ರುಚಿಸಲಾರದು ನಿಮಗೆ |
ಸಂಬಂಧ ಉಳಿಸುವ ಕಳಕಳಿಯ ಮಾತು ||

ಗೊತ್ತಿಹುದು ನನಗೆ ಪ್ರಿಯವಹುದು ನಿಮಗೆ |
ಸಂಬಂಧ ಕೆಡಿಸುವ ಬಣ್ಣ ಬಣ್ಣದ ಮಾತು ||

ಹುಳುಕು ಹುಡುಕುವರೆಲ್ಲೆಲ್ಲು ವಿಷವನೆ ಕಕ್ಕುವರು |
ಒಳಿತು ಕಾಣುವರೆಲ್ಲೆಲ್ಲು ಅಮೃತವ ಸುರಿಸುವರು ||

ದಾರಿಯದು ಸರಿಯಿರಲಿ ಅನೃತವನಾಡದಿರಿ |
ತಪ್ಪೊಪ್ಪಿ ಸರಿನಡೆವ ಮನ ನಿಮಗೆ ಇರಲಿ ||

ಗೌರವಿಸಿ ಹಿರಿಯರ ಕಟುಮಾತನಾಡದಿರಿ |
ಅಸಹಾಯಕರ ಶಾಪ ತಂದೀತು ಪರಿತಾಪ |

ದೇವರನು ಅರಸದಿರಿ ಗುಡಿಗೋಪುರಗಳಲ್ಲಿ |
ದೇವನಿಹನಿಲ್ಲಿ ನಮ್ಮ ಹೃದಯಮಂದಿರದಲ್ಲಿ ||

ಇಟ್ಟಿಗೆ ಕಲ್ಲುಗಳ ಜೋಡಿಸಲು ಕಟ್ಟಡವು |
ಹೃದಯಗಳ ಜೋಡಿಸಿರಿ ಆಗುವುದು ಮನೆಯು ||

ಮಕ್ಕಳೇ ನಾ ನಂಬಿದಾ ತತ್ವ ಪಾಲಿಸುವಿರಾ? |
ಬಾಳ ಪಯಣದ ಕೊನೆಗದುವೆನಗೆ ಸಂಸ್ಕಾರ ||
-ಕ.ವೆಂ.ನಾಗರಾಜ್.

ಶುಕ್ರವಾರ, ಮಾರ್ಚ್ 28, 2014

ವಿಷಣ್ಣತೆ


ಎನ್ನ ಕೊನೆಯ ದಿನಗಳ ಮೊದಲ ದಿನಗಳಿವು
ಬಂದ ದಾರಿಯನೊಮ್ಮೆ ನಿಂತು ನೋಡಿದೆ ಮನವು|
ಗುಣಿಸಿ ಭಾಗಿಸಿ ಕೂಡಿಸಿ ಕಳೆದುಳಿದ ಶೇಷವು
ಸೋಲೋ ಗೆಲುವೋ ತಿಳಿಯದ ವಿಷಣ್ಣಭಾವವು||

-ಕ.ವೆಂ.ನಾಗರಾಜ್.

ಸೋಮವಾರ, ಮಾರ್ಚ್ 24, 2014

ಗೌಡರು ಬಂದರು

ಗೌಡರು ಬಂದರು ಸೂತ್ರವ ಹಿಡಿದು ಒಳಗೇ ನಗುನಗುತಾ|
ಕಣ್ಣೀರ್ಗರೆದರು ಮಕ್ಕಳ ಕಷ್ಟವು ತಮದೇ ಎಂದೆನುತಾ||

ಜಾತ್ಯಾತೀತತೆ ಲೇಬಲ್ ಹಚ್ಚಿದ ಶಾಲದು ಹೆಗಲಲ್ಲಿ
ಜಾತೀಯತೆಯ ಕರಾಳ ಬೀಜದ ಚೀಲವು ಬಗಲಲ್ಲಿ||

ಮೌಲ್ಯಾಧಾರಿತ ರಾಜಕಾರಣ ಪುಸ್ತಕದಿರಲೆನುತಾ
ಮಕ್ಕಳೇ ಮೌಲ್ಯವು ಕುರ್ಚಿಯೇ ದೇವರು ಥಕಥಕಥಕದಿಮಿತಾ||

ಗಿಳಿಪಾಠವನೊಪ್ಪಿಸೋ ಬ್ಯಾ ಬ್ಯಾ ಕುರಿಗಳು ಹಿಂದೆಯೆ ಬರುತಿರಲಿ|
ಸ್ವಂತಿಕೆ ತೋರುವ ಮಂದೆಯು ಸೇರಲಿ ಕಟುಕನ ಪಾಲಿನಲಿ||

ಹೆಗಡೆ ಹೊರಗಡೆ ಸಿದ್ಯಾ ಬಿದ್ಯಾ ಮತ್ತಿನ್ಯಾರಲ್ಲಿ|
ಹತ್ತಿದ ಏಣಿಯ ಒದೆಯುವ ಆಟಕೆ ಸಾಟಿ ಯಾರಿಲ್ಲಿ||

ಬಾಲವೆ ತಲೆಯನು ಆಡಿಸೋ ಸೋಜಿಗ ಕಂಡಿರಾ ನೀವೆಲ್ಲಿ|
ಕೊಟ್ಟಿಗೆಯೊಳಗಿನ ಶುನಕನ ಆರ್ಭಟ ಕಾಣಿರಾ ನೀವಿಲ್ಲಿ||

ಮಣ್ಣೂ ನಮದು ಹಣ್ಣೂ ನಮದು ತಿರುಳೂ ನಮಗಿರಲಿ|
ಕಣ್ ಕಣ್ ಬಿಡುತಾ ಬಾಯ್ ಬಾಯ್ ಬಿಡಲು ಕರಟವು ನಿಮಗಿರಲಿ||

[ಇದು 'ಕವಿಮನ'ದಲ್ಲಿ 4 ವರ್ಷಗಳ ಹಿಂದೆ ಪ್ರಥಮವಾಗಿ ಪ್ರಕಟಿಸಿದಾಗ ಬರೆದ ಟಿಪ್ಪಣಿ:
ಈ ವಿಡಂಬನಾತ್ಮಕ ರಚನೆ ಜನಪ್ರಿಯ 'ರಾಯರು ಬಂದರು ಮಾವನ ಮನೆಗೆ' ಧಾಟಿಯಲ್ಲಿ ರಚಿಸಿ ಮೂರು ವರ್ಷಗಳ ಮೇಲಾಗಿತ್ತು. ಮಾನ್ಯ ಕುಮಾರಸ್ವಾಮಿಯವರು ಮಾನ್ಯ ಯಡಿಯೂರಪ್ಪನವರಿಗೆ ಅಧಿಕಾರ ಹಸ್ತಾಂತರ ಮಾಡುವ ಸಂದರ್ಭದಲ್ಲಿ ಷರತ್ತುಗಳನ್ನು ಮುಂದೊಡ್ಡಿದಾಗ ಮೂಡಿದ ರಚನೆಯಿದು. ಆಗ ನಾನು ತಹಸೀಲ್ದಾರನಾಗಿ ಕಾರ್ಯ ಮಾಡುತ್ತಿದ್ದರಿಂದ ನನ್ನ ಭಾವನೆಗಳನ್ನು ಮುಕ್ತವಾಗಿ ಹೊರಗೆಡವುವಂತಿರಲಿಲ್ಲ. ಈಗ ಇದು ಶೈತ್ಯಾಗಾರದಿಂದ ಹೊರಬಂದಿದೆ. ವ್ಯಂಗ್ಯ ಚಿತ್ರ/ವಿಡಂಬನೆಯ ರೀತಿಯಲ್ಲಿ ಸ್ವಾಗತಿಸಲು ಕೋರುವೆ.
4 ವರ್ಷಗಳ ನಂತರ ಈಗಲೂ ಈ ಟಿಪ್ಪಣಿ ಸಾಮಯಿಕವಾಗಿದೆ.]
[ಚಿತ್ರ : ಅಂತರ್ಜಾಲದಿಂದ ಹೆಕ್ಕಿದ್ದು.]

ಗುರುವಾರ, ಮಾರ್ಚ್ 20, 2014

ಚುಚ್ಚಾಣಿ

ಚುಚ್ಚಾಣಿ ಚೂಪಿನದಣ್ಣಾ
ಸಿಕ್ಕಸಿಕ್ಕಲಿ ಚುಚ್ಚಿ ನೋಯಿಸುವುದಣ್ಣಾ
ಚುಚ್ಚಾಣಿ ಚೂಪಿನದಣ್ಣಾ|| ||ಪ||

ಚಿನ್ನದ ಚುಚ್ಚಾಣಿ ನವರಸದ ಚುಚ್ಚಾಣಿ
ಎಲ್ಲರ ಮೆಚ್ಚಿನ ಕಟ್ಟಾಣಿಯಣ್ಣಾ ||ಚುಚ್ಚಾಣಿ||

ಆಸೆ ಪುಗ್ಗೆಯೇರಿ ಸಂಭ್ರಮದಿ ತೇಲಿದ್ದೆ
ಪುಗ್ಗೆ ಡಬ್ಬೆಂದು ಧೊಪ್ಪನೆ ಕೆಳಬಿದ್ದೆ|| ||ಚುಚ್ಚಾಣಿ||

ಬಂಧು ಬಳಗದೆ ಕೂಡಿ ನಲಿಯುತಲಿದ್ದೆ
ಚುಚ್ಚು ಮಾತಿಂದಾಗಿ ಒಂಟಿ ಹೊರಬಿದ್ದೆ||||ಚುಚ್ಚಾಣಿ||

ದೇವಾಂತಃಕರಣದ ಫಲ ಕೈಲಿ ಹಿಡಿದಿದ್ದೆ
ಚುಚ್ಚು ಕಾಲ್ತೊಡರಿ ಎಡವಿ ಬಿದ್ದಿದ್ದೆ|| ||ಚುಚ್ಚಾಣಿ||

ಚುಚ್ಚಾಣಿ ಚೂಪಿನದಣ್ಣಾ
ಸಿಕ್ಕಸಿಕ್ಕಲಿ ಚುಚ್ಚಿ ನೋಯಿಸುವುದಣ್ಣಾ
ಚುಚ್ಚಾಣಿ ಚೂಪಿನದಣ್ಣಾ||

(ಸ್ಪೂರ್ತಿ: ಪುರಂದರದಾಸರ 'ದುಗ್ಗಾಣಿ ಬಲು ಕೆಟ್ಟದಣ್ಣಾ"..)