ಭಾನುವಾರ, ಫೆಬ್ರವರಿ 21, 2016

ಮೂಢ ಉವಾಚ - 170

ತಾಯಿಯು ಅವನೆ ತಂದೆಯು ಅವನೆ
ಬಂಧುವು ಅವನೆ ಬಳಗವು ಅವನೆ |
ವಿದ್ಯೆಯು ಅವನೆ ಸಕಲಸಿರಿಯವನೆ
ಸಕಲ ಸರ್ವನವನಲ್ಲದಿನ್ಯಾರು ಮೂಢ ||




ಬುಧವಾರ, ಫೆಬ್ರವರಿ 17, 2016

ಮೂಢ ಉವಾಚ - 169

ರವಿಯ ಬೆಳಕು ಚಂದ್ರಕಾಂತಿ ಸುಡುವಗ್ನಿ 
ನಿಲ್ವನೆಲ ಹರಿವ ಜಲ ಜೀವರಕ್ಷಕ ಗಾಳಿ |
ಅಚ್ಚರಿಯ ಆಕಾಶಗಳೆಲ್ಲದರ ಕಾರಕನು
ಪ್ರೇರಕನು ಅವನಲ್ಲವೇನು ಮೂಢ ||



ಮಂಗಳವಾರ, ಫೆಬ್ರವರಿ 16, 2016

ಮೂಢ ಉವಾಚ - 168

ದುಷ್ಟಶಿಕ್ಷಕ ಶಿಷ್ಟರಕ್ಷಕ ದೇವನವನೊಬ್ಬನೆ
ಶಕ್ತರಲಿ ಶಕ್ತ ಬಲ್ಲಿದರ ಬಲ್ಲಿದನವನೊಬ್ಬನೆ |
ಮುನಿಗಳಿಗೆ ಮುನಿ ಕವಿಗಳಿಗೆ ಕವಿಯವನೆ
ಸರ್ವೋತ್ತಮರಲಿರುವವನವನೆ ಮೂಢ ||

ಸೋಮವಾರ, ಫೆಬ್ರವರಿ 15, 2016

ಮೂಢ ಉವಾಚ - 167

ವಿಷಯಲೋಲುಪರಾಗಿ ಬಯಸುವರು ಸುಖವ
ಸುಖವನನುಸರಿಸಿ ಬಹ ದುಃಖ ಕಾಣುವರು |
ವಿವೇಕಿ ಧೀರ ಗಂಭೀರ ಬುದ್ಧಿಕಾರಕ ಬುಧನ
ಜ್ಞಾನ ಪ್ರದಾತನ ಪರಿಯನರಿಯೋ ಮೂಢ ||

ಭಾನುವಾರ, ಫೆಬ್ರವರಿ 14, 2016

ಮೂಢ ಉವಾಚ - 166

ಮನಮುದಗೊಳಿಸುವ ಇಂದ್ರ ಆ ಚಂದ್ರ
ಸಕಲರಿಗಾಪ್ಯಾಯ ಮನಾಪಹರ ಶೀತಲ |
ಶಾಂತಿ ಪ್ರದಾತ ಚೆಲುವಿಗನ್ವರ್ಥ ಚಂದ್ರನ
ಕಾಂತಿಯ ಮೂಲನವನೇ ತಿಳಿ ಮೂಢ ||



ಮೂಢ ಉವಾಚ - 165

ಜಗದ ಕಣ್ಣದುವೆ ಭಾಸ್ಕರನ ಬೆಳಕು
ರವಿಯ ಮಹತಿಗೆ ಕಾರಣವು ಪ್ರಭೆಯು |
ನರರು ನಮಿಪ ರವಿ ಕಿರಣದಣುವಣುವು
ದೇವನಂತಃಕರಣ ಸ್ಫುರಣ ಮೂಢ ||

ಶುಕ್ರವಾರ, ಫೆಬ್ರವರಿ 12, 2016

ಮೂಢ ಉವಾಚ - 164

ತಿರುಗಿದೆ ನಿರಂತರ ಹುಟ್ಟು ಸಾವುಗಳ ಚಕ್ರ 
ಸಕ ಜೀವಗಳಲುತ್ತಮವು ಮಾನವಜನ್ಮ |
ಭ್ರಮೆಗೆ ಪಕ್ಕಾಗಿ ನಿಜಗುರಿಯನರಿಯದಲೆ 
ಜೀವ ಹಾನಿ ಮಾಡಿಕೊಳ್ಳದಿರೆಲೆ ಮೂಢ ||