ಬುಧವಾರ, ಫೆಬ್ರವರಿ 10, 2016

ಮೂಢ ವಾಚ - 163

ವಿರಾಗದಲಿ ಮನೆಯ ತೊರೆಯಬೇಕಿಲ್ಲ
ತಪವನಾಚರಿಸೆ ವನವನರಸಬೇಕಿಲ್ಲ |
ನಿಷ್ಕಾಮಕರ್ಮದ ನಿಜಮರ್ಮವನರಿಯೆ
ಅದುವೆ ವಿರಾಗ ಅದುವೆ ತಪ ಮೂಢ ||



ಮಂಗಳವಾರ, ಫೆಬ್ರವರಿ 9, 2016

ಮೂಢ ಉವಾಚ - 162

ಪದ್ಮಪತ್ರದ ಮೇಲಣ ಜಲಬಿಂದುವಿನೊಲು
ಸ್ಥಿರವಲ್ಲವೀ ಬದುಕಿನಾಸೆ ಬಯಕೆಗಳು |
ಮಿಂಚಿನೊಲು ಮೂಡಿ ಮರೆಯಾಗದೆ ಸುಖ
ಚಂಚಲ ಮನವನಚಲಗೊಳಿಸು ಮೂಢ ||



ಭಾನುವಾರ, ಫೆಬ್ರವರಿ 7, 2016

ಮೂಢ ಉವಾಚ - 161

ಧರ್ಮದರಿವಿಹುದು ಸಕಲ ಸಂಪತ್ತುಗಳಿಹುದು
ಸುಕಾಮಿಯೆಂದೆನಿಸಿ ಜ್ಞಾನಸಾಧಕನಾಗಿಹನು |
ನಿಜ ಪುರುಷನವನು  ಮುಕ್ತಿಪಥದಲಿ ಸಾಗಿ
ನಿಜ ವೈರಾಗಿಯವನೆನಿಸುವನು ಮೂಢ ||


ಶುಕ್ರವಾರ, ಫೆಬ್ರವರಿ 5, 2016

ಮೂಢ ಉವಾಚ - 160

ಧರ್ಮದ ಅರಿವಿಲ್ಲ ಅರ್ಥ ಸುಳಿದಿಲ್ಲ
ಸುಕಾಮಿಯೆನಿಸಿಲ್ಲ ಮುಕ್ತಿಪಥ ತಿಳಿದಿಲ್ಲ |
ಪುರುಷಾರ್ಥ ಸಾಧಿಸಲಾಪದಾ ಕೊರಗಿರಲು
ವಿಫಲತೆ ವೈರಾಗ್ಯ ತರದಿರದೆ ಮೂಢ ||



ಗುರುವಾರ, ಫೆಬ್ರವರಿ 4, 2016

ಮೂಢ ಉವಾಚ - 159

ಮಸಣ ವೈರಾಗ್ಯವದು ಮರೆಯುವ ತನಕ
ಅಭಾವ ವೈರಾಗ್ಯವದು ದೊರೆಯುವ ತನಕ |
ಬೇಕೆಂದು ಕೊರಗದಿಹ ಇರುವುದೆ ಸಾಕೆಂಬ 
ರಾಗರಾಹಿತ್ಯ ನಿಜವೈರಾಗ್ಯ ಮೂಢ ||


ಬುಧವಾರ, ಫೆಬ್ರವರಿ 3, 2016

ಮೂಢ ಉವಾಚ - 158

ಅಕ್ಕರೆಯ ಪಡೆದವರು ಅರಿಗಳಂತಾಡಿರಲು
ಆಸರೆಯ ಪಡೆದವರು ದೂಡಿ ನಡೆದಿರಲು |
ಸ್ವಾರ್ಥವೆಂಬುದು ಪ್ರೀತಿಯನೆ ನುಂಗಿರಲು
ವೈರಾಗ್ಯವೆರಗದಿರೆ ಅಚ್ಚರಿಯು ಮೂಢ ||






ಮಂಗಳವಾರ, ಫೆಬ್ರವರಿ 2, 2016

ಮೂಢ ಉವಾಚ - 157

ಆಸೆಯಿಂದಲೆ ದುಃಖ ಆಸೆಯಿಂದಲೆ ಭಯವು
ದುಃಖ ಭಯಗಳೆಲ್ಲಿ ಆಸೆಗಳ ತೊರೆದವಗೆ |
ಸಂತಸದ ಬೆನ್ನೇರಿ ದುಃಖ ಭಯ ಬರದಿರದೆ
ಬುದ್ಧವಾಣಿಯಿದು ಮರೆಯದಿರು ಮೂಢ ||