ಭಾನುವಾರ, ನವೆಂಬರ್ 29, 2015

ಮೂಢ ಉವಾಚ - 116

ನೋಡುವ ನೋಟವದು ಭಿನ್ನವಾಗುವುದು
ಅತ್ತೆ ಸೊಸೆಯರ ನಡುವೆ ಹೆತ್ತವರ ನಡುವೆ |
ದ್ವೇಷ ಭುಗಿಲೇಳುವುದು ಸೋದರರ ನಡುವೆ
ಕಾಳ ಮತ್ಸರದ ಚೇಳು ಕುಟುಕೀತು ಮೂಢ ||


ಶನಿವಾರ, ನವೆಂಬರ್ 28, 2015

ಮೂಢ ಉವಾಚ - 115

ಸದ್ಗುಣಕಮಲಗಳು ಕಮರಿ ಕಪ್ಪಡರುವುವು
ಸರಿಯು ತಪ್ಪೆನಿಸಿ ತಪ್ಪು ಒಪ್ಪಾಗುವುದು |
ಅರಿವು ಬರುವ ಮುನ್ನಾವರಿಸಿ ಮತ್ಸರವು
ನರರ ಕೀಳರಾಗಿಸದೆ ಮೂಢ ||



ಶುಕ್ರವಾರ, ನವೆಂಬರ್ 27, 2015

ಮೂಢ ಉವಾಚ - 114

ಭುಕ್ತಾಹಾರ ಜೀರ್ಣಿಸುವ ವೈಶ್ವಾನರ
ಕಂಡವರನು ಸುಡುವನು ಅಸೂಯಾಪರ |
ಶತಪಾಲು ಲೇಸು ಮಂಕರೊಡನೆ ಮೌನ
ಬೇಡ ಮಚ್ಚರಿಗರೊಡೆ ಸಲ್ಲಾಪ ಮೂಢ ||





ಗುರುವಾರ, ನವೆಂಬರ್ 26, 2015

ಮೂಢ ಉವಾಚ - 113

ಕೋಪಿಷ್ಠರೊಡನೆ ಬಡಿದಾಡಬಹುದು
ಅಸಹನೀಯವದು ಮಚ್ಚರಿಗರ ಪ್ರೇಮ |
ಪರರುತ್ಕರ್ಷ ಸಹಿಸರು ಕರುಬಿಯುರಿಯುವರು
ಉದರದುರಿಯನಾರಿಸುವವರಾರು ಮೂಢ ||


ಮಂಗಳವಾರ, ನವೆಂಬರ್ 24, 2015

ಮೂಢ ಉವಾಚ - 112

ಮದಸೊಕ್ಕಿ ಮೆರೆದವರೊಡನಾಡಬಹುದೆ?
ನಯ ವಿನಯ ಸನ್ನಡತೆಗವಕಾಶ ಕೊಡದೆ |
ವಿಕಟನರ್ತನಗೈವ ಮದವದವನತಿ ತರದೆ?
ನರಾರಿ ಮದದೀಪರಿಯನೀನರಿ ಮೂಢ ||


ಸೋಮವಾರ, ನವೆಂಬರ್ 23, 2015

ಮೂಢ ಉವಾಚ - 111

ಮದೋನ್ಮತ್ತನಾ ಮಹಿಮೆಯನೆಂತು ಬಣ್ಣಿಸಲಿ?
ಉದ್ಧಟತೆ ಮೈವೆತ್ತು ದರ್ಪದಿಂ ದಿಟ್ಟಿಸುವ |
ಎದುರು ಬಂದವರ ಕಡೆಗಣಿಸಿ ತುಳಿಯುವ
ಮದಾಂಧನದೆಂತ ಠೇಂಕಾರ ನೋಡು ಮೂಢ ||

ಭಾನುವಾರ, ನವೆಂಬರ್ 22, 2015

ಮೂಢ ಉವಾಚ - 110

ಕಣ್ಣೆತ್ತಿ ನೋಡರು ಪರರ ನುಡಿಗಳಾಲಿಸರು
ದರ್ಪದಿಂ ವರ್ತಿಸುತ ಕೊಬ್ಬಿ ಮೆರೆಯುವರು |
ಮೂಲೋಕದೊಡೆಯರೇ ತಾವೆಂದು ಭಾವಿಸುತ
ಮದೋನ್ಮತ್ತರೋಲಾಡುವರು ಮೂಢ ||


ಶನಿವಾರ, ನವೆಂಬರ್ 21, 2015

ಮೂಢ ಉವಾಚ - 109

ಮದಭರಿತ ಮನುಜನ ಪರಿಯೆಂತು ನೋಡು
ನಡೆಯುವಾ ಗತ್ತು  ನುಡಿಯುವಾ ಗಮ್ಮತ್ತು |
ಮೇಲರಿಮೆಯಾ ಭೂತ ಅಡರಿಕೊಂಡಿಹುದು
ಭೂತಕಾಟವೆ ಬೇಡ ದೂರವಿರು ಮೂಢ ||



ಗುರುವಾರ, ನವೆಂಬರ್ 19, 2015

ಮೂಢ ಉವಾಚ - 108

ಮಾಯಾವಿ ಮೋಹಿನಿ ಜಗವನೆ ಕುಣಿಸುವಳು
ರಮಣೀಯ ಮೋಹದಾ ಬಲೆಯ ಬೀಸುವಳು |
ಮಾಯೆಗೆ ಮರುಳಾಗಿ ತಿಳಿದೂ ತಪ್ಪೆಸಗುವರ
ಅಂತರಂಗವು ಮೋಹದಾ ಬಂಧಿ ಮೂಢ ||


ಮೂಢ ಉವಾಚ - 107

ಮೋಹಪಾಶದ ಬಲೆಯಲ್ಲಿ ಸಿಲುಕಿಹರು ನರರು
ಮಡದಿ ಮಕ್ಕಳ ಮೋಹ ಪರಿಜನರ ಮೋಹ |
ಜಾತಿ-ಧರ್ಮದ ಮೋಹ ಮಾಯಾವಿ ಮೋಹವೇ
ಜಗದ ದುಸ್ಥಿತಿಗೆ ಮೂಲವೋ ಮೂಢ ||


ಮಂಗಳವಾರ, ನವೆಂಬರ್ 17, 2015

ಮೂಢ ಉವಾಚ - 106

ಧೃತರಾಷ್ಟ್ರನಾ ಮೋಹ ಮಕ್ಕಳನೆ ನುಂಗಿತು
ಪುತ್ರ ವ್ಯಾಮೋಹವದು ನೀತಿಯನೆ ತಿಂದಿತು |
ಮನಮೋಹಕ ಮೋಹ ಬಿಗಿದೀತು ಸಂಕಲೆಯ
ಸುತ್ತೀತು ಭವಬಂಧನದ ಪಾಶ ಮೂಢ ||

ಸೋಮವಾರ, ನವೆಂಬರ್ 16, 2015

ಮೂಢ ಉವಾಚ - 105

ನನದು ನನ್ನವರೆಂಬ ಭಾವವದು ಮೋಹ
ಪರದಾಟ ತೊಳಲಾಟ ಸಂಕಟಕೆ ಮೂಲ |
ಹೆಣ್ಣು ಜೇಡಕೆ ತುತ್ತು ಗಂಡು ಸಂಗಮದಿ 
ಜೀವಿಯ ಮೋಹಕೆ ಜೀವನವೆ ಬಲಿ ಮೂಢ ||


ಭಾನುವಾರ, ನವೆಂಬರ್ 15, 2015

ಮೂಢ ಉವಾಚ - 104

ದೃಷ್ಟಿಭೋಗಕ್ಕುಂಟು ವಿನಿಯೋಗಕಿಲ್ಲ
ಅಪಹಾಸ್ಯ ನಿಂದೆಗಳಿಗಂಜುವುದೆ ಇಲ್ಲ |
ಪ್ರಾಣವನೆ ಬಿಟ್ಟಾನು ಕೈಯೆತ್ತಿ ಕೊಡನು
ಲೋಭಿಯಾ ಲೋಭಕೆ ಮದ್ದುಂಟೆ ಮೂಢ ||


ಶನಿವಾರ, ನವೆಂಬರ್ 14, 2015

ಮೂಢ ಉವಾಚ - 103

ಬರುವುದೆಲ್ಲದಕು ಹಿಡಿಯುವುದು ಗ್ರಹಣ
ಕೂಡಿಡುವ ಬಚ್ಚಿಡುವ ನಿಪುಣ ತಾ ಕೃಪಣ |
ಕೈಯೆತ್ತಿ ಕೊಡಲಾರ ಬಂದದ್ದು ಬಿಡಲಾರ
ಲೋಭಿಯಾ ಲೋಭಕೆ ಮದ್ದುಂಟೆ ಮೂಢ ||

ಗುರುವಾರ, ನವೆಂಬರ್ 12, 2015

ಮೂಢ ಉವಾಚ - 102

ಕೋಪದಿಂದ ಜನಿಪುದಲ್ತೆ ಅವಿವೇಕ 
ಅವಿವೇಕದಿಂದಲ್ತೆ ವಿವೇಚನೆಯು ಮಾಯ |
ವಿವೇಕ ಮರೆಯಾಗೆ ಬುದ್ಧಿಯೇ ನಾಶ
ಬುದ್ಧಿಯಿರದಿದ್ದೇನು ಫಲ ಮೂಢ ||



ಮಂಗಳವಾರ, ನವೆಂಬರ್ 10, 2015

ಮೂಢ ಉವಾಚ - 101

ದುಷ್ಟ ಶಿಕ್ಷಣಕಾಗಿ ಶಿಷ್ಟ ರಕ್ಷಣಕಾಗಿ
ಸಮಾಜಹಿತಕಾಗಿ ಧರ್ಮ ರಕ್ಷಣೆಗಾಗಿ |
ರಾಷ್ಟ್ತ ಭದ್ರತೆಗಾಗಿ ಆತ್ಮಸಮ್ಮಾನಕಾಗಿ
ಕೋಪವದುಕ್ಕುಕ್ಕಿ ಬರಲಿ ಮೂಢ ||


ಶುಕ್ರವಾರ, ನವೆಂಬರ್ 6, 2015

ಮೂಢ ಉವಾಚ - 100

ಭುಗಿಲೆದ್ದ ಜ್ವಾಲಾಗ್ನಿ ಮನೆಯನ್ನೆ ಸುಟ್ಟೀತು
ಹದವರಿತ ಬೆಂಕಿಯದು ಅಟ್ಟುಣಬಡಿಸೀತು |
ಕ್ರೋಧಾಗ್ನಿ ತರದಿರದೆ ಬಾಳಿನಲಿ ವಿರಸ
ಹದವರಿತ ಕೋಪವದು ಹಿತಕಾರಿ ಮೂಢ ||

ಗುರುವಾರ, ನವೆಂಬರ್ 5, 2015

ಮೂಢ ಉವಾಚ - 99

ರಾಷ್ಟ್ರ ರಾಷ್ಟ್ರದ ನಡುವೆ ರಾಜ್ಯ ರಾಜ್ಯದ ನಡುವೆ
ಗ್ರಾಮ ಗ್ರಾಮದ ನಡುವೆ ಜಾತಿ ಜಾತಿಯ ನಡುವೆ |
ಮನುಜ ಮನುಜರ ನಡುವೆ ಧಗಧಗಿಸುವ ದ್ವೇಷದ 
ಮೂಲ ಕ್ರೋಧಾಗ್ನಿಯಲ್ಲವೆ ಮೂಢ? ||


ಬುಧವಾರ, ನವೆಂಬರ್ 4, 2015

ಮೂಢ ಉವಾಚ - 98

ಕೀಳರಿಮೆಯದು ತಾ ಸಿಟ್ಟಿಗದು ಹೇತುವು
ಅಭಿಮಾನಕಾಘಾತ ಕಿಚ್ಚಿಗದು ಕಾರಣವು |
ಬಲಶಾಲಿಗಳೊಡನಾಡಿ ಧೀಶಕ್ತಿ ನೀಗಳಿಸು
ಛಲದಿಂದ ಬಲಗಳಿಸಿ ಮೇಲೇರು ಮೂಢ ||


ಸೋಮವಾರ, ನವೆಂಬರ್ 2, 2015

ಮೂಢ ಉವಾಚ - 97

ದೇಹ ದೌರ್ಬಲ್ಯವದು ಸಿಡಿಮಿಡಿಗೆ ಕಾರಣವು
ಅಸಹಾಯಕತೆ ತಾ ಕೋಪಾಗ್ನಿಗದು ಘೃತವು | 
ದೇಹಧಾರ್ಢ್ಯವನು ಕಾಪಿಟ್ಟು ಮುನ್ನಡೆದು 
ಕಠಚಿತ್ತದಲುಗ್ರತೆಯ ನಿಗ್ರಹಿಸು ಮೂಢ ||