ಬುಧವಾರ, ಅಕ್ಟೋಬರ್ 28, 2015

ಮೂಢ ಉವಾಚ - 96

ಕೋಪವೆಂಬುದು ಕೇಳು ವಂಶದಾ ಬಳುವಳಿಯು
ಸುಜನ ಸಹವಾಸವೇ ಪರಿಹಾರದಮೃತವು |
ಕೋಪದ ತಾಪದಿಂ ಪಡದಿರಲು ಪರಿತಾಪ
ಶಾಂತಚಿತ್ತದಲಿ ಅಡಿಯನಿಡು ಮೂಢ ||


ಮಂಗಳವಾರ, ಅಕ್ಟೋಬರ್ 27, 2015

ಮೂಢ ಉವಾಚ - 95

ಸರಸ ಸಂತಸವಿಲ್ಲ ಮನಕೆ ನೆಮ್ಮದಿಯಿಲ್ಲ
ಮಾತಿಲ್ಲ ಕತೆಯಿಲ್ಲ ನಗುವು ಮೊದಲೇ ಇಲ್ಲ|
ಕೋಪಿಷ್ಠರ ಮನೆಯು ಸೂತಕದ ಅಂಗಣವು
ಕೋಪವದು ನರಕದ್ವಾರವೋ ಮೂಢ||


ಶನಿವಾರ, ಅಕ್ಟೋಬರ್ 24, 2015

ಮೂಢ ಉವಾಚ - 94

ಕೋಪದಿಂದಲೆ ವಿರಸ ಕೋಪದಿಂದಲೆ ನಿಂದೆ
ಕೋಪದಿಂದಲೆ ನಾಶ ಕೋಪದಿಂದಲೆ ಭಯವು |
ತನ್ನ ತಾ ಹಾಳ್ಗೆಡವಿ ಪರರನೂ ಬಾಳಿಸದ
ಕೋಪಿಷ್ಠರವರು ಪಾಪಿಷ್ಠರೋ ಮೂಢ ||


ಮಂಗಳವಾರ, ಅಕ್ಟೋಬರ್ 20, 2015

ಮೂಢ ಉವಾಚ - 93

ಕಣ್ಣಿದ್ದು ಕುರುಡಾಗಿ ಕಿವಿಯಿದ್ದು ಕಿವುಡಾಗಿ
ವಿವೇಕ ಮರೆಯಾಗಿ ಕ್ರೂರತ್ವ ತಾನೆರಗಿ |
ತಡೆಯಬಂದವರನೆ ತೊಡೆಯಲುದ್ಯುಕ್ತ
ಕ್ರೋಧಾಸುರಾವಾಹಿತ ನರನೆ ರಕ್ಕಸನು ಮೂಢ ||


ಸೋಮವಾರ, ಅಕ್ಟೋಬರ್ 19, 2015

ಮೂಢ ಉವಾಚ - 92

ಕೆಂಡ ಕಾರುವ ಕಣ್ಣು ಗಂಟಿಕ್ಕಿದ ಹುಬ್ಬು
ಅವಡುಗಚ್ಚಿದ ಬಾಯಿ ಮುಷ್ಟಿ ಕಟ್ಟಿದ ಕರವು |
ಕಂಪಿಸುವ ಕೈಕಾಲು ಬುಸುಗುಡುವ ನಾಸಿಕ
ಕ್ರೋಧಾಸುರಾವಾಹಿತ ನರನೆ ರಕ್ಕಸನು ಮೂಢ||

ಭಾನುವಾರ, ಅಕ್ಟೋಬರ್ 18, 2015

ಮೂಢ ಉವಾಚ - 91

ಕಾಮವನು ಹತ್ತಿಕ್ಕಿ ಮುಖವಾಡ ಧರಿಸದಿರು
ಕಾಮವನೆ ಬೆಂಬತ್ತಿ ಓಡುತ್ತಾ ಹೋಗದಿರು|
ಧರ್ಮದಿಂ ಬಾಳಿದರೆ ಸಂಯಮದಿ ಸಾಗಿದರೆ
ದಿವ್ಯ ಕಾಮ ರಮ್ಯ ಕಾಮ ನಿನದಲ್ತೆ ಮೂಢ||


ಶುಕ್ರವಾರ, ಅಕ್ಟೋಬರ್ 16, 2015

ಮೂಢ ಉವಾಚ - 90

ಕಾಮವೆಂಬುದು ಅರಿಯು ಕಾಮದಿಂದಲೆ ಅರಿವು
ಕಾಮವೆಂಬುದು ಪಾಶ ಕಾಮದಿಂದಲೆ ನಾಶ |
ಕಾಮವೆಂಬುದು ಶಕ್ತಿ ಕಾಮದಿಂದಲ್ತೆ ಜೀವಸಂವೃದ್ಧಿ
ಕಾಮದಿಂದಲೆ ಸಕಲ ಸಂಪದವು ಮೂಢ ||