ಶನಿವಾರ, ನವೆಂಬರ್ 14, 2015

ಮೂಢ ಉವಾಚ - 103

ಬರುವುದೆಲ್ಲದಕು ಹಿಡಿಯುವುದು ಗ್ರಹಣ
ಕೂಡಿಡುವ ಬಚ್ಚಿಡುವ ನಿಪುಣ ತಾ ಕೃಪಣ |
ಕೈಯೆತ್ತಿ ಕೊಡಲಾರ ಬಂದದ್ದು ಬಿಡಲಾರ
ಲೋಭಿಯಾ ಲೋಭಕೆ ಮದ್ದುಂಟೆ ಮೂಢ ||

ಗುರುವಾರ, ನವೆಂಬರ್ 12, 2015

ಮೂಢ ಉವಾಚ - 102

ಕೋಪದಿಂದ ಜನಿಪುದಲ್ತೆ ಅವಿವೇಕ 
ಅವಿವೇಕದಿಂದಲ್ತೆ ವಿವೇಚನೆಯು ಮಾಯ |
ವಿವೇಕ ಮರೆಯಾಗೆ ಬುದ್ಧಿಯೇ ನಾಶ
ಬುದ್ಧಿಯಿರದಿದ್ದೇನು ಫಲ ಮೂಢ ||



ಮಂಗಳವಾರ, ನವೆಂಬರ್ 10, 2015

ಮೂಢ ಉವಾಚ - 101

ದುಷ್ಟ ಶಿಕ್ಷಣಕಾಗಿ ಶಿಷ್ಟ ರಕ್ಷಣಕಾಗಿ
ಸಮಾಜಹಿತಕಾಗಿ ಧರ್ಮ ರಕ್ಷಣೆಗಾಗಿ |
ರಾಷ್ಟ್ತ ಭದ್ರತೆಗಾಗಿ ಆತ್ಮಸಮ್ಮಾನಕಾಗಿ
ಕೋಪವದುಕ್ಕುಕ್ಕಿ ಬರಲಿ ಮೂಢ ||


ಶುಕ್ರವಾರ, ನವೆಂಬರ್ 6, 2015

ಮೂಢ ಉವಾಚ - 100

ಭುಗಿಲೆದ್ದ ಜ್ವಾಲಾಗ್ನಿ ಮನೆಯನ್ನೆ ಸುಟ್ಟೀತು
ಹದವರಿತ ಬೆಂಕಿಯದು ಅಟ್ಟುಣಬಡಿಸೀತು |
ಕ್ರೋಧಾಗ್ನಿ ತರದಿರದೆ ಬಾಳಿನಲಿ ವಿರಸ
ಹದವರಿತ ಕೋಪವದು ಹಿತಕಾರಿ ಮೂಢ ||

ಗುರುವಾರ, ನವೆಂಬರ್ 5, 2015

ಮೂಢ ಉವಾಚ - 99

ರಾಷ್ಟ್ರ ರಾಷ್ಟ್ರದ ನಡುವೆ ರಾಜ್ಯ ರಾಜ್ಯದ ನಡುವೆ
ಗ್ರಾಮ ಗ್ರಾಮದ ನಡುವೆ ಜಾತಿ ಜಾತಿಯ ನಡುವೆ |
ಮನುಜ ಮನುಜರ ನಡುವೆ ಧಗಧಗಿಸುವ ದ್ವೇಷದ 
ಮೂಲ ಕ್ರೋಧಾಗ್ನಿಯಲ್ಲವೆ ಮೂಢ? ||


ಬುಧವಾರ, ನವೆಂಬರ್ 4, 2015

ಮೂಢ ಉವಾಚ - 98

ಕೀಳರಿಮೆಯದು ತಾ ಸಿಟ್ಟಿಗದು ಹೇತುವು
ಅಭಿಮಾನಕಾಘಾತ ಕಿಚ್ಚಿಗದು ಕಾರಣವು |
ಬಲಶಾಲಿಗಳೊಡನಾಡಿ ಧೀಶಕ್ತಿ ನೀಗಳಿಸು
ಛಲದಿಂದ ಬಲಗಳಿಸಿ ಮೇಲೇರು ಮೂಢ ||


ಸೋಮವಾರ, ನವೆಂಬರ್ 2, 2015

ಮೂಢ ಉವಾಚ - 97

ದೇಹ ದೌರ್ಬಲ್ಯವದು ಸಿಡಿಮಿಡಿಗೆ ಕಾರಣವು
ಅಸಹಾಯಕತೆ ತಾ ಕೋಪಾಗ್ನಿಗದು ಘೃತವು | 
ದೇಹಧಾರ್ಢ್ಯವನು ಕಾಪಿಟ್ಟು ಮುನ್ನಡೆದು 
ಕಠಚಿತ್ತದಲುಗ್ರತೆಯ ನಿಗ್ರಹಿಸು ಮೂಢ ||