ಕವಿಮನದಾಳದಿಂದ
ಭಾನುವಾರ, ಆಗಸ್ಟ್ 23, 2015
ಮೂಢ ಉವಾಚ - 46
ಆವರಣ ಚೆಂದವಿರೆ ಹೂರಣಕೆ ರಕ್ಷಣ
ಹೂರಣ ಚೆಂದವಿರೆ ಆವರಣಕೆ ಮನ್ನಣ |
ಆವರಣ ಹೂರಣ ಚೆಂದವಿರೆ ಪ್ರೇರಣ
ಬದುಕು ಸುಂದರ ಪಯಣ ಮೂಢ ||
ಮೂಢ ಉವಾಚ - 45
ಎಣಿಸದಲೆ ಅವ ಕೀಳು ಇವ ಮೇಲು
ಬಡವ ಸಿರಿವಂತರೆನೆ ತರತಮವು ಇಲ್ಲ |
ನೋವು ನಲಿವಿನಲಿ ಉಳಿಸಿ ಸಮಚಿತ್ತ
ಬಲ್ಲಿದರು ಬಾಳುವರು ಕಾಣು ಮೂಢ ||
ಗುರುವಾರ, ಆಗಸ್ಟ್ 20, 2015
ಮೂಢ ಉವಾಚ - 44
ದಾಂಪತ್ಯವಿರೆ ಅನುರೂಪ ಮನೆಯು ಸ್ವರ್ಗ
ಗುರು ಶಿಷ್ಯ ಪ್ರೇಮದಿಂ ಮನುಕುಲವು ಧನ್ಯ |
ಶಬ್ದಗಳ ಜೋಡಿಸಲು ರಸಭಾವದನುರೂಪ
ಒಡಮೂಡುವುದುತ್ತಮ ಕಾವ್ಯ ಮೂಢ ||
ಮೂಢ ಉವಾಚ- 43
ಅಹುದಿಹುದು ಅಡೆತಡೆಯು ಬಾಳಹಾದಿಯಲಿ
ಸಾಗಬೇಕರಿತು ಪತಿ ಪತ್ನಿ ಜೊತೆಜೊತೆಯಲಿ|
ಸಮಪಾಲು ಪಡೆದಿರಲು ನೋವು ನಲಿವಿನಲಿ
ಬಾಳು ಬಂಗಾರ ಬದುಕು ಸಿಂಗಾರ ಮೂಢ||
ಮಂಗಳವಾರ, ಆಗಸ್ಟ್ 18, 2015
ಮೂಢ ಉವಾಚ - 42
ಉಣ್ಣಲುಡಲಿರಬೇಕು ನೆರಳಿರಬೇಕು
ಮನವರಿತು ಅನುಸರಿಪ ಮಡದಿ ಬೇಕು |
ಬೆಳಕಾಗಿ ಬಾಳುವ ಮಕ್ಕಳಿರಬೇಕು
ಇರುವುದೇ ಸಾಕೆಂಬ ಮನಬೇಕು ಮೂಢ ||
ಮೂಢ ಉವಾಚ - 41
ತಾವೆ ಮೇಲೆಂಬರು ಇತರರನು ಹಳಿಯುವರು
ಪರರೇಳಿಗೆಯ ಸಹಿಸರು ಕಟುಕಿ ಮಾತಾಡುವರು |
ಅರಿಯರವರು ಇತರರಿಗೆ ಬಯಸುವ ಕೇಡದು
ಎರಡಾಗಿ ಎರಗುವುದೆಂಬುದನು ಮೂಢ ||
ಗುರುವಾರ, ಆಗಸ್ಟ್ 13, 2015
ಮೂಢ ಉವಾಚ - 40
ತಾನೇ ಸರಿ ತನದೇ ಸರಿ ಕಾಣಿರಿ
ಎಂಬ ಸರಿಗರ ಸಿರಿಗರ ಬಡಿದ ಪರಿ |
ಏನು ಪೇಳ್ವುದೋ ತಿಪ್ಪೆಯ ಒಡೆಯ
ತಾನೆಂಬ ಶುನಕದ ಹಿರಿಮೆಗೆ ಮೂಢ ||
ನವೀನ ಪೋಸ್ಟ್ಗಳು
ಹಳೆಯ ಪೋಸ್ಟ್ಗಳು
ಮುಖಪುಟ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)