ಮಂಗಳವಾರ, ಆಗಸ್ಟ್ 29, 2017

ಮೂಢ ಉವಾಚ - 343

ಹಸಿವು ರೋಗಗಳ ಪರಿಹರಿಸಿಕೊಳಬೇಕು
ದಿನನಿತ್ಯದಾಹಾರ ಔಷಧಿಯೊಲಿರಬೇಕು |
ರುಚಿಯಾದ ಭೋಜನವ ಬಯಸದಿರಲಾಗಿ
ಮುಕ್ತಿಪಥದಲಿ ನೀನು ಮುನ್ನಡೆವೆ ಮೂಢ || 

ಭಾನುವಾರ, ಆಗಸ್ಟ್ 27, 2017

ಮೂಢ ಉವಾಚ - 342

ಗರ್ವದಲಿ ಮೆರೆಯದಿರು ಎಂದೆಂದಿಗು
ಶರೀರವಿದು ನೀನಲ್ಲ ನೆನಪಿಟ್ಟಿರು |
ತಿಳಿದವರ ಕೂಡೆ ವಾದವನು ಮಾಡದಿರೆ
ಮುಕ್ತಿಪಥದಲಿ ನೀನು ಮುನ್ನಡೆವೆ ಮೂಢ || 

ಶುಕ್ರವಾರ, ಆಗಸ್ಟ್ 25, 2017

ಮೂಢ ಉವಾಚ - 341

ವಿತಂಡವಾದದೊಡೆ  ಇರಿಸಿ ಅಂತರವ
ಉಪನಿಷತ್ತಿನ ಪಥವೆ ನಿನ್ನ ಪಥವೆನಿಸಿರಲು |
ಬ್ರಹ್ಮಾನುಭವದಲ್ಲಿ ಒಂದಾಗಿ ಸಾಗುತಿರೆ
ಮುಕ್ತಿಪಥದಲಿ ನೀನು ಮುನ್ನಡೆವೆ ಮೂಢ || 

ಸೋಮವಾರ, ಆಗಸ್ಟ್ 21, 2017

ಮೂಢ ಉವಾಚ - 340

ಉಪನಿಷದ್ವಾಕ್ಯಗಳು ಸುಮನನವಾಗಿರಲು
ವಾಕ್ಯಾಂತರಾರ್ಥದ ಜಿಜ್ಞಾಸೆ ಮಾಡುತಲಿ |
ಉಪನಿಷದ್ವಾಕ್ಯವದೆ ನಿಜಜ್ಞಾನವೆನಿಸಿರಲು
ಮುಕ್ತಿಪಥದಲಿ ನೀನು ಮುನ್ನಡೆವೆ ಮೂಢ || ೬ || 


ಭಾನುವಾರ, ಆಗಸ್ಟ್ 20, 2017

ಮೂಢ ಉವಾಚ - 339

ಸದ್ವಿದ್ಯದಾತರಲಿ ಆಶ್ರಯವ ಪಡೆದಿರಲು
ಸದ್ಗುರು ಪಾದಸೇವೆಯನು ನಿತ್ಯ ಗೈದಿರಲು |
ತಿಳಿಯಲುಜ್ಜುಗಿಸೆ ಓಂಕಾರದರ್ಥವನು 
ಮುಕ್ತಿಪಥದಲಿ ನೀನು ಮುನ್ನಡೆವೆ ಮೂಢ || 

ಶನಿವಾರ, ಆಗಸ್ಟ್ 19, 2017

ಮೂಢ ಉವಾಚ - 338

ಪರಮಾತ್ಮನಲಿ ಭಕ್ತಿ ಧೃಢವಾಗಿ ತಾನಿರಲು
ಶಾಂತಿ ಮತ್ತಿತರ ಗುಣಗಳನೆ ಪಡೆದಿರಲು |
ಸ್ವಾರ್ಥಪರ ಕರ್ಮದಲಿ ಆಸಕ್ತಿ ತ್ಯಜಿಸಿದೊಡೆ
ಮುಕ್ತಿಪಥದಲಿ ನೀನು ಮುನ್ನಡೆವೆ ಮೂಢ || ೪ ||


ಗುರುವಾರ, ಆಗಸ್ಟ್ 17, 2017

ಮೂಢ ಉವಾಚ - 337

ನಿನ್ನ ನಿಜರೂಪವನು ತಿಳಿಯಲೆಣಿಸಿರಲು
ಮೋಹ ಸಂಕಲೆಯ ಕಳೆಯಹೊರಟಿರಲು |
ಜ್ಞಾನಿಗಳ ಸಂಗದಲಿ ನಿಜವನರಿಯುತಿರೆ
ಮುಕ್ತಿಪಥದಲಿ ನೀನು ಮುನ್ನಡೆವೆ ಮೂಢ || 

ಮೂಢ ಉವಾಚ - 336

ಹಾದಿ ತಪ್ಪಿಸುವ ಕರ್ಮಗಳ ತ್ಯಜಿಸಿ
ಅಂತರಂಗದ ಕೊಳೆಯ ತೊಳೆದುಹಾಕಿ |
ಹೊರಸುಖದ ದೋಷವನು ಗುರುತಿಸುವನಾಗೆ
ಮುಕ್ತಿಪಥದಲಿ ನೀನು ಮುನ್ನಡೆವೆ ಮೂಢ ||

ಬುಧವಾರ, ಆಗಸ್ಟ್ 16, 2017

ಮೂಢ ಉವಾಚ - 335

ಮುಕ್ತಿಪಥ
ನಿತ್ಯ ವೇದಾಧ್ಯಯನ ಮಾಡುವವನಾಗಿ
ವೇದೋಕ್ತ ಕರ್ಮಗಳ ಪಾಲಿಸುವನಾಗಿ |
ಈಶಾರಾಧನೆಯಾಗೆ ಕರ್ಮಗಳು ಸಕಲ
ಮುಕ್ತಿಪಥದಲಿ ನೀನು ಮುನ್ನಡೆವೆ ಮೂಢ || ೧ || 


ಮಂಗಳವಾರ, ಆಗಸ್ಟ್ 15, 2017

ಮೂಢ ಉವಾಚ - 334

ನಂಬಿದರೆ ಸತಿ-ಪತಿಯು ನಂಬಿರಲು ಸುತೆ-ಸುತರು
ಬಂಧು-ಮಿತ್ರರ ಬಳಗ ನಂಬಿದರೆ ಮಾತ್ರ|
ಬಾಳಿನಾ ಪಯಣದಲಿ ನಂಬಿಕೆಯೆ ಆಸರೆಯು
ನಂಬಿಕೆಗೆ ನೆರಳಾಗಿ ಬಾಳು ನೀ ಮೂಢ||



ಸೋಮವಾರ, ಆಗಸ್ಟ್ 14, 2017

ಮೂಢ ಉವಾಚ - 333

ನಂಬಿಕೆಯೆ ಕುಸಿದಲ್ಲಿ ಪ್ರೀತಿ ವಿಶ್ವಾಸವದೆಲ್ಲಿ
ನಂಬಿದರೆ ಬಾಳು ನಂಬದಿರೆ ಗೋಳು|
ಹಿತ್ತಾಳೆ ಕಿವಿಯಿರಲು ಕಾಮಾಲೆ ಕಣ್ಣಿರಲು
ನಂಬಿಕೆಗೆ ಎಡೆಯೆಲ್ಲಿ ಹೇಳು ಮೂಢ||





ಭಾನುವಾರ, ಆಗಸ್ಟ್ 13, 2017

ಮೂಢ ಉವಾಚ - 332

ನಿನ್ನ ನೀ ನಂಬಿರಲು ಚಾರಿತ್ರ್ಯ ಸರಿಯಿರಲು
ಅವರಿವರನೊಪ್ಪಿಸುವ ಹಂಬಲವು ನಿನಗೇಕೆ?|
ನಿನ್ನಾತ್ಮ ಒಪ್ಪಿರಲು ಪರಮಾತ್ಮನೊಪ್ಪನೆ
ಟೀಕೆ ಟಿಪ್ಪಣಿ ಸಹಜ ಅಳುಕದಿರು ಮೂಢ||



ಶನಿವಾರ, ಆಗಸ್ಟ್ 12, 2017

ಮೂಢ ಉವಾಚ - 331

ಹೊಗಳುವವನಲ್ಲ ಶಪಿಸುವವನಲ್ಲವೇ ಅಲ್ಲ
ಬಿಟ್ಟಿ ಉಪದೇಶಿಗನಲ್ಲ ತುಟಿಮಾತಿಗನಲ್ಲ|
ನೋವನನುಭವಿಸಿ ಸಂತಯಿಸಿ ಜೊತೆಜೊತೆಗೆ
ನಿಲುವವನೆ ಗೆಳೆಯ ಮೂಢ||



ಗುರುವಾರ, ಆಗಸ್ಟ್ 10, 2017

ಮೂಢ ಉವಾಚ - 330

ಹಣಕಾಗಿ ಪರದಾಡಿ ಹಣಕಾಗಿ ಹೆಣಗಾಡಿ
ಹಣದೊಡೆಯನಾದೊಡೆ ಬೀಗದಿರು ಜಾಣ|
ಕುಣಿಕುಣಿವ ಕಾಂಚಾಣ ತುಳಿದೀತು ಜೋಪಾನ
ಹಣಕೆ ದಾಸನವ ಕಡುಬಡವ ಮೂಢ||



ಮೂಢ ಉವಾಚ - 329

ಅದು ಏಕೆ ಹೇಗೆಂದು ಭೂತಕಾಲವ ಕೇಳಿ
ಸರಿಯಿಲ್ಲವೆಂದು ವರ್ತಮಾನವ ದೂರಿ|
ಭವಿಷ್ಯವನು ನೆನೆದು ಭಯಪಡುವ ಪರಿಯ
ನರರಿಗಿತ್ತಿಹನವನು ಹಿರಿದಚ್ಚರಿಯ ಮೂಢ||


ಮಂಗಳವಾರ, ಆಗಸ್ಟ್ 8, 2017

ಮೂಢ ಉವಾಚ - 328

ಸಿಕ್ಕಾಗ ಸಮಯವನು ತಕ್ಕಾಗಿ ಬಳಸಿದೊಡೆ
ಸಿಕ್ಕದುದು ಸಿಕ್ಕುವುದು ದಕ್ಕದುದು ದಕ್ಕುವುದು|
ಕಳೆಯಿತೆಂದರೆ ಮತ್ತೆ ಸಿಕ್ಕದದು ಜಾಣ
ಕಾಲದ ಮಹತಿಯಿದು ಕಾಣು ಮೂಢ||



ಮೂಢ ಉವಾಚ - 327

ಪುಟ್ಟಿಸಿದ ರವಿಯನೇ ಮುಸುಕುವುದು ಮೋಡ
ನನ್ನಿಂದ ನಾಬರಲು ನನ್ನನೇ ಮರೆಸುವುದು|
ನಾನತ್ವ ಬಿಗಿಯುವ ಕಗ್ಗಂಟೆ ಮಮಕಾರ
ಅರಿತೆನೆಂಬಹಮಿಕೆಗೆ ಸಿದ್ಧಿ ದೂರವು ಮೂಢ|| 

ಶನಿವಾರ, ಆಗಸ್ಟ್ 5, 2017

ಮೂಢ ಉವಾಚ - 326

ಅನುಭವಿಸಿದ ದುಃಖ ಭಯವಾಗಿ ಕಾಡೀತು
ದುಃಖದ ಸೋಂಕೆಲ್ಲಿ ಭಯವಿಲ್ಲದವಗೆ|
ಸುಖದ ನೆನಪುಗಳು ಬಯಕೆ ತರದಿರದೆ
ಬಯಕೆ ದುಃಖಕ್ಕೆ ದೂಡೀತು ಮೂಢ||


ಶುಕ್ರವಾರ, ಆಗಸ್ಟ್ 4, 2017

ಮೂಢ ಉವಾಚ - 325

ಭಕ್ತಿಯಿಲ್ಲದ ಪೂಜೆ ವಿನಯವಿಲ್ಲದ ವಿದ್ಯೆ 
ಗುರುವಿರದ ಶಾಲೆ ಒಡೆಯನಿಲ್ಲದ ಮನೆ|
ಇದ್ದರೇನಿಲ್ಲದಿರೇನ್ ತಳವಿರದ ಮಡಕೆ 
ಲೋಕವಿದು ಕೊರತೆಯ ಸಂತೆ ಮೂಢ||


ಮೂಢ ಉವಾಚ - 324

ಕೀಳರಿಮೆ ಪಡಬೇಡ ಹೀಗಳೆವರ ಮುಂದೆ 
ಜಾರಿ ಬೀಳಲು ಬೇಡ ನಗುವವರ ಮುಂದೆ|
ಜನವ ಮೆಚ್ಚಿಸಲ್ ಸುಳ್ಳು ಹೇಳಲು ಬೇಡ
ಮನವು ಮೆಚ್ಚಿದೊಡೆ ಸಾಕೆಲವೊ ಮೂಢ|| 

ಗುರುವಾರ, ಆಗಸ್ಟ್ 3, 2017

ಮೂಢ ಉವಾಚ - 323

ತಳಮಳಿಪ ಮನವನ್ನು ತಣಿಪುವುದೆ ಪೂಜೆ
ಕುಣಿಕುಣಿವ ಮನವನ್ನು ನಿಲಿಸುವುದೆ ಧ್ಯಾನ|
ಒಳಹೊರಗು ಒಂದೆನಿಸೆ ಜಪತಪವು ಮತ್ತೇಕೆ
ಚಿತ್ತಶಾಂತಿಯೆ ಮೋಕ್ಷ ಬೇರಲ್ಲ ಮೂಢ|| 

ಮಂಗಳವಾರ, ಆಗಸ್ಟ್ 1, 2017

ಮೂಢ ಉವಾಚ - 322

ಮಾಯೆಯ ಮುಸುಕಿನಲಿ ನಡೆದಿಹುದು ಜಗವು
ಜಗದ ಅವಸಾನವದು ಮರೆಯಾಗೆ ಮಾಯೆ|
ಹುಡುಕಾಟ ಬೆದಕಾಟ ಚಣಚಣಕು ಪರದಾಟ
ಮಾಯೆಯಾಟದಲಿ ಮನವೆ ದಾಳ ಮೂಢ||