ಶುಕ್ರವಾರ, ಜೂನ್ 20, 2014

ಅರಿವು


ನಮ್ಮವರೆಂಬರು ನಮ್ಮವರಲ್ಲ; ಮೋಹಕೆ ಸಿಲುಕಿ ಬಳಲಿದೆನಲ್ಲ |
ದೇವ ನಿನ್ನನು ನೆನೆಯಲೆ ಇಲ್ಲ; ಹುಟ್ಟಿನ ಮಹತಿ ತಿಳಿಯಲೆ ಇಲ್ಲ || ಪ ||

ಕಂಡದ್ದೆಲ್ಲ ಬಯಸಿದೆನಲ್ಲ; ಸಿಕ್ಕದೆ ಇರಲು ಶಪಿಸಿದೆನಲ್ಲ |
ಇಲ್ಲದ ಬಯಸಿ ಕೊರಗಿದೆನಲ್ಲ; ಇದ್ದುದ ಬಿಟ್ಟು ಕೆಟ್ಟೆನಲ್ಲ || 1 ||

ಚಪಲತೆ ಕಣ್ಣನು ಮುಚ್ಚಿತಲ್ಲ; ನಿಜ ಕಾಣದಾಯಿತಲ್ಲ |
ಚಂಚಲ ಬುದ್ಧಿ ಆಡಿದ ಆಟಕೆ ಮೋಸ ಹೋದೆನಲ್ಲಾ || 2 ||

ಸಜ್ಜನ ಸಂಗವ ಮಾಡಲಿಲ್ಲ; ಸದ್ಗತಿ ಸಿಗಲಿಲ್ಲ |
ಕೋಪವು ಮತಿಯ ತಿಂದಿತಲ್ಲ; ಮನಸೇ ಸರಿಯಿಲ್ಲ || 3 ||

ಮಿಗಿಲಾರೆಂದು ಬೀಗಿದೆನಲ್ಲ; ನಗೆಪಾಟಲಾಯಿತಲ್ಲ |
ರಜೋ ತಮಗಳ ಆರ್ಭಟದಲ್ಲಿ ಸತ್ವ ಸತ್ತಿತಲ್ಲಾ || 4 ||

ನಾನು ಎಂಬುದು ನಿಜವಲ್ಲ; ನಾನೇ ಎಂಬುದು ತರವಲ್ಲ |
ನಿನ್ನನು ಬಿಟ್ಟು ನಾನೇನೆಂಬುದ ಅರಿಯಲಿಲ್ಲವಲ್ಲಾ || 5 ||

ಕ.ವೆಂ.ನಾಗರಾಜ್.

ಸೋಮವಾರ, ಜೂನ್ 2, 2014

ಸೋಲದಿರು

ದೂಷಿಸದಿರು ಮನವೆ ಪರರು ಕಾರಣರಲ್ಲ
ನಿನ್ನೆಣಿಕೆ ತಪ್ಪಾಗಿ ಕಂಡಿರುವೆ ನೋವ |
ವಿಧಿಯು ಕಾರಣವಲ್ಲ ಹಣೆಬರಹ ಮೊದಲಲ್ಲ
ಕೊರಗಿದರೆ ಫಲವಿಲ್ಲ ದಣಿಯದಿರು ಮನವೆ ||

ಉಗ್ರವಾಗಿಹ ಮನವೆ ತಾಳು ತಾಳೆಲೆ ನೀನು
ವಿವೇಕ ನಲುಗೀತು ಕೆರಳದಿರು ತಾಳು |
ವ್ಯಗ್ರತೆಯ ನಿಗ್ರಹಿಸಿ ಸಮಚಿತ್ತದಲಿ ನಡೆಯೆ
ಸೋಲಿನ ಅನುಭವವೆ ಗೆಲುವಿಗಾಸರೆಯು ||

ಮೂಢನಂತಾಡದಿರು ಮತಿಗೆಟ್ಟು ನರಳದಿರು
ಮೈ ಕೊಡವಿ ಮೇಲೆದ್ದು ಅಡಿಯನಿಡು ಧೀರ |
ಸೋಲದಿರೆಲೆ ಜೀವ ಕಾಯ್ವ ನಮ್ಮನು ದೇವ
ಛಲಬಿಡದೆ ಮುನ್ನಡೆದು ಉಳಿಸು ಸ್ವಂತಿಕೆಯ ||

ಲೋಕದೊಪ್ಪಿಗೆ ಬೇಕೆ ಪರರ ಮನ್ನಣೆಯೇಕೆ
ದಾರಿ ಸರಿಯಿರುವಾಗ ಅಳುಕು ಅಂಜಿಕೆಯೇಕೆ |
ಒಳಮನವು ಒಪ್ಪಿರಲು ಚಂಚಲತೆ ಇನ್ನೇಕೆ
ಪಯಣಿಗನೆ ನೀ ಸಾಗು ದಾರಿ ನಿಚ್ಛಳವಿರಲು ||
***************
-ಕ.ವೆಂ.ನಾಗರಾಜ್.