ಕವಿಮನದಾಳದಿಂದ
ಬುಧವಾರ, ನವೆಂಬರ್ 1, 2017
ಮೂಢ ಉವಾಚ - 370
ಸಕಲ ರಕ್ಷಕ ಸಕಲ ಪೋಷಕ ಸೃಷ್ಟಿಕರ್ತನೆ ದೇವನು
ತಂದೆಯವನೆ ತಾಯಿಯವನೆ ಅವನೆ ಸಕಲಕೆ ಕಾರಕ |
ಹಿತವ ಕಾಯುವ ಮಹಿಮನ ಹಿತವನಾರು ಕಾಯ್ವರು
ಗೂಢಾತಿಗೂಢವೋ ಅವನಾಟ ಮೂಢ ||
ಮಂಗಳವಾರ, ಅಕ್ಟೋಬರ್ 24, 2017
ಮೂಢ ಉವಾಚ - 369
ನೀ ತಂದೆ ಒಬ್ಬನಿಗೆ ಒಬ್ಬನಿಗೆ ಮಗನು
ಒಬ್ಬನಿಗೆ ಅಣ್ಣ ನೀನೊಬ್ಬನಿಗೆ ತಮ್ಮನು |
ನೀನೊಬ್ಬನೇ ಇದ್ದರೇನ್ ಪಾತ್ರಗಳು ಹಲವು
ಜನ್ಮಗಳು ಹಲವಿರಲು ಜೀವವೊಂದೇ ಮೂಢ ||
ಸೋಮವಾರ, ಅಕ್ಟೋಬರ್ 23, 2017
ಮೂಢ ಉವಾಚ - 368
ನೀನೆ ಹೆಣ್ಣಾಗಿರುವೆ ನೀನೆ ಗಂಡಾಗಿರುವೆ
ಎಲೆ ಜೀವ ನೀನಪ್ಪಿ ಒಪ್ಪಿದಾ ತನುವಿನಂತಪ್ಪೆ |
ಮುಪ್ಪಡರಿ ಕೋಲೂರಿ ಹೊಸ ದಾರಿ ಅರಸಿರಲು
ಲೋಕದೆಲ್ಲೆಡೆ ನಿನ್ನ ದಿಟ್ಟಿಯೋ ಮೂಢ ||
ಭಾನುವಾರ, ಅಕ್ಟೋಬರ್ 22, 2017
ಮೂಢ ಉವಾಚ - 367
ಆ ಮಾರ್ಗ ಈ ಮಾರ್ಗ ಸುತ್ತಿ ಬರುವುದು ಜೀವ
ಮನುಜನೋ ಪ್ರಾಣಿಯೋ ಮತ್ತೊಂದು ಮಗದೊಂದು |
ಇಂದ್ರಿಯಕೆ ಇಂದ್ರನ ಅಮರ ಜೀವಾತ್ಮನ
ನಡೆಗೆ ಕಾರಣವು ಗೂಢವೋ ಮೂಢ ||
ಸೋಮವಾರ, ಅಕ್ಟೋಬರ್ 16, 2017
ಮೂಢ ಉವಾಚ - 366
ಸತ್ತವನ ಜೀವಕ್ಕೆ ಸಾವಿಲ್ಲ ನೋಡಾ
ಸಾಯಲಿಹ ಮತ್ತೊಂದು ದೇಹವನೆ ಸೇರುವುದು |
ಕರ್ಮವನೆ ಅನುಸರಿಸಿ ಅನ್ನ-ಜಲ ಕಾಣವುದು
ಜೀವದಾನಿಯ ಮರ್ಮವೆಂತಿಹುದೊ ಮೂಢ ||
ಭಾನುವಾರ, ಅಕ್ಟೋಬರ್ 15, 2017
ಮೂಢ ಉವಾಚ - 365
ಮನೋವಾಗಿಂದ್ರಿಯಗಳನಂಕಿಸುವುದೊಲವಿನಲಿ
ದೇಹದಲಿ ನೆಲೆಸಿರುವ ಅಣುರೂಪಿ ಚೇತನ |
ದನಕರುಗಳನಂಕಿಸುವ ದಂಡಗಳ ತೆರದಿ
ಇಂತಪ್ಪ ಚೇತನರ ಒಡೆಯನಾರೋ ಮೂಢ ||
ಶನಿವಾರ, ಅಕ್ಟೋಬರ್ 14, 2017
ಮೂಢ ಉವಾಚ - 364
ಕಮರಿ ಹೋಗುವ ತನುವ ಕಸುವು ತಾನಾಗಿಹನು
ಜೀವಜ್ಯೋತಿಯೆ ಅವನು ಅಮರ ಶಕ್ತಿಯೆ ಅವನು |
ದೇಹದೊಂದಿಗೆ ಬೆಳೆದು ತನ್ನಿರುವ ತೋರುವನು
ಅವನಿಲ್ಲದಿರುವಲ್ಲಿ ಬೆಳಕೆಲ್ಲಿ ಮೂಢ ||
ನವೀನ ಪೋಸ್ಟ್ಗಳು
ಹಳೆಯ ಪೋಸ್ಟ್ಗಳು
ಮುಖಪುಟ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)