ಕವಿಮನದಾಳದಿಂದ
ಶನಿವಾರ, ಸೆಪ್ಟೆಂಬರ್ 17, 2016
ಮೂಢ ಉವಾಚ - 214
ದಂಡವಿಡುವುದು ಕುಜನರನು ಅಂಕೆಯಲಿ
ನ್ಯಾಯನೀತಿಗಳು ಗೆಲಿಪುವುವು ವಾದದಲಿ |
ಗೌಪ್ಯತೆಯುಳಿಸಿ ಮಾನ ಕಾಯ್ವುದೆ ಮೌನ
ಬದುಕ ಗೆಲಿಪುವುದು ಜ್ಞಾನ ಮೂಢ ||
ಶನಿವಾರ, ಸೆಪ್ಟೆಂಬರ್ 10, 2016
ಮೂಢ ಉವಾಚ - 213
ದೇವ ಸುಜನ ಗುರು ಹಿರಿಯರಲಿ ಶ್ರದ್ಧೆ
ತನು ಶುದ್ಧಿ ಜೊತೆಜೊತೆಗೆ ಮನ ಶುದ್ಧಿ |
ನೇರ ನಡೆ ನುಡಿಯು ತ್ರಿಕರಣದಲಿರಲು
ಪರಮಪದಕಿದಕಿಂತ ತಪವುಂಟೆ ಮೂಢ ||
ಸೋಮವಾರ, ಸೆಪ್ಟೆಂಬರ್ 5, 2016
ಮೂಢ ಉವಾಚ - 212
ಧನಕನಕ ಅಧಿಕಾರ ಪದವಿ ಕೀರ್ತಿಗಳು
ಆತ್ಮಜ್ಞಾನದಲಿ ಸಿಗದೆಂದು ಕೊರಗದಿರು |
ಆನಂದ ಪ್ರಾಪ್ತಿ ಸುಖ ದುಃಖ ನಿವೃತ್ತಿ
ಆತ್ಮಜ್ಞಾನದಲೆ ಮುಕ್ತಿಯೋ ಮೂಢ ||
ಮಂಗಳವಾರ, ಆಗಸ್ಟ್ 16, 2016
ಮೂಢ ಉವಾಚ - 211
ಕಲಿವ ಶ್ರಮವಿರದೆ ಅರಿವು ಬಂದೀತೆ
ಇರುವಲ್ಲೆ ನಿಂತಿರಲು ದಾರಿ ಸವೆದೀತೆ|
ಆರಂಭವದು ವಿಷ ಅಂತ್ಯದಲಿ ಅಮೃತವು
ಪರಮಪದಕಾಗಿ ಪರಿತಪಿಸು ಮೂಢ||
ಮಂಗಳವಾರ, ಆಗಸ್ಟ್ 9, 2016
ಮೂಢ ಉವಾಚ - 210
ಪೂಜೆ ಮಾಡಿದೊಡೆ ಪಾಪ ಹೋಗುವುದೆ
ತನುಶುಚಿಯಾಗಿರಲು ಮನಶುಚಿಯಾಗುವುದೆ |
ಪಾಪ ಪುಣ್ಯಗಳ ಕೊಡುವವನು ಅವನಲ್ಲ
ನಿನ್ನ ನೀನರಿಯದಿರೆ ಫಲವಿಲ್ಲ ಮೂಢ ||
ಶುಕ್ರವಾರ, ಆಗಸ್ಟ್ 5, 2016
ಮೂಢ ಉವಾಚ - 209
ಕಣ್ಮುಚ್ಚಿ ಮಣಮಣಿಸೆ ಜಪವೆನಿಸುವುದೆ
ಒಳಗಣ್ಣು ತೆರೆದು ಧ್ಯಾನಿಪುದೆ ಜಪವು |
ಮಡಿ ಮೈಲಿಗೆಯೆಂದು ಪರದಾಡಿದೊಡೇನು
ಮನಶುದ್ಧಿಯಿಲ್ಲದಿರೆ ವ್ಯರ್ಥ ಮೂಢ ||
ಬುಧವಾರ, ಜುಲೈ 27, 2016
ಮೂಢ ಉವಾಚ - 208
ಮಂತ್ರ ಪಠಿಸಿದೊಡೇನು ಅರ್ಥವನರಿಯದೆ
ಜಪವ ಮಾಡಿದೊಡೇನು ಒಳತುಡಿತವಿರದೆ |
ವಿಚಾರವಿರದಾಚಾರದ ಬದುಕು ಬದುಕೆ
ಕಾರ್ಯದಲರ್ಥವಿರಲು ಬೆಳಕು ಮೂಢ ||
ನವೀನ ಪೋಸ್ಟ್ಗಳು
ಹಳೆಯ ಪೋಸ್ಟ್ಗಳು
ಮುಖಪುಟ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)