ಕವಿಮನದಾಳದಿಂದ
ಬುಧವಾರ, ಡಿಸೆಂಬರ್ 30, 2015
ಮೂಢ ಉವಾಚ - 134
ಸುಖವು ಸ್ವಾಭಾವಿಕ ದುಃಖವಾಗಂತುಕನು
ಯೋಗವನುಸರಿಸುವುದು ನಿಜವಿಯೋಗ |
ದುಃಖಸಂಯೋಗ ವಿಯೋಗವೀವುದು ಸುಖ
ವಿಯೋಗವೆ ಯೋಗವೆನುವರು ಮೂಢ
||
ಭಾನುವಾರ, ಡಿಸೆಂಬರ್ 27, 2015
ಮೂಢ ಉವಾಚ - 133
ಅರ್ಧ ಜೀವನವ ನಿದ್ದೆಯಲಿ ಕಳೆವೆ
ಬಾಲ್ಯ ಮುಪ್ಪಿನಲಿ ಕಾಲುಭಾಗವ ಕಳೆಯೆ |
ಕಷ್ಟ ಕೋಟಲೆ ಕಾಲೆ ಉದರಭರಣೆಗೆ
ಕಳೆದುಳಿವ ಬಾಳಿನಲಿ ತಿರುಳಿರಲಿ ಮೂಢ ||
ಶನಿವಾರ, ಡಿಸೆಂಬರ್ 26, 2015
ಮೂಢ ಉವಾಚ - 132
ಒಂದು ಕಾಲದ ಭವ್ಯ ರಾಜಮಹಾರಾಜರೆಲ್ಲಿ
ಚತುರ ಮಂತ್ರಿ ಚಂದ್ರಮುಖಿ ರಾಣಿಯರದೆಲ್ಲಿ |
ವೈಭವ ಆಡಂಬರ ಕೀರ್ತಿ ಪತಾಕೆಗಳೆಲ್ಲಿ
ನಿನ್ನ ಕಥೆಯೇನು ಹೊರತಲ್ಲ ಮೂಢ ||
ಗುರುವಾರ, ಡಿಸೆಂಬರ್ 24, 2015
ಮೂಢ ಉವಾಚ - 131
ಕ್ಷಮಿಸುವರು ನರರು ಬಲಹೀನತೆಯಿಂದ
ಆಸೆ ಪಡದಿಹರು ದೊರೆಯದಿರುವುದರಿಂದ |
ಧೀರನಾ ಕ್ಷಮೆಗೆ ಬೆಲೆಯಿರುವ ಪರಿ ಯೋಗಿಯ
ನಿರ್ಮೋಹತೆಗೆ ಬಲವುಂಟು ಮೂಢ ||
ಬುಧವಾರ, ಡಿಸೆಂಬರ್ 23, 2015
ಮೂಢ ಉವಾಚ - 130
ಬಯಸದಿರುವವರಿಹರೆ ಈ ಜಗದಿ ಸಂಪತ್ತು
ಪರರ ಮೀರಿಪ ಬಯಕೆ ತರದಿರದೆ ಆಪತ್ತು |
ಸಮಚಿತ್ತದಿಂ ನಡೆದು ಕರ್ಮಫಲದಿಂ ಪಡೆದ
ಜ್ಞಾನ ಸಂಪತ್ತಿಗಿಂ ಮಿಗಿಲುಂಟೆ ಮೂಢ ||
ಮೂಢ ಉವಾಚ - 129
ಬಯಕೆಗಳಿರೆ ಬಡವ ಸಾಕೆಂದರದುವೆ ಸಿರಿ
ನಾನೆಂಬುದು ಅಜ್ಞಾನ ನನದೇನೆನಲು ಜ್ಞಾನ |
ದಾಸನಾದರೆ ಹಾಳು ಒಡೆಯನಾದರೆ ಬಾಳು
ಮನದೊಡೆಯನಾದವನೆ ಮಾನ್ಯ ಮೂಢ ||
ಶನಿವಾರ, ಡಿಸೆಂಬರ್ 19, 2015
ಮೂಢ ಉವಾಚ - 128
ವಿಷಯಮಾರ್ಗದಿ ನಡೆದು ಮಲಿನರಾದವರ
ಹಿಂಬಾಲಿಸದೆ ಹೆಜ್ಜೆ ಹೆಜ್ಜೆಗೆ ಮಿತ್ತು ಪತನ |
ಯುಕ್ತಮಾರ್ಗದಿ ನಡೆದು ವಿವೇಕಿಯಾದೊಡೆ
ಅನುಸರಿಸುವುದು ಫಲಸಿದ್ಧಿ ಮುಕ್ತಿ ಮೂಢ ||
ನವೀನ ಪೋಸ್ಟ್ಗಳು
ಹಳೆಯ ಪೋಸ್ಟ್ಗಳು
ಮುಖಪುಟ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)