ಕವಿಮನದಾಳದಿಂದ
ಸೋಮವಾರ, ಏಪ್ರಿಲ್ 9, 2018
ಮೂಢ ಉವಾಚ - 399
ನೀ ಮಾಡಿದುಪಕಾರ ಮರೆತುಬಿಡಬೇಕು
ಉಪಕಾರಕುಪಕಾರ ಬಯಸದಿರಬೇಕು |
ಉಪಕಾರ ಬಯಸುವರು ಕೆಳಗೆ ಬಿದ್ದವರಲ್ತೆ
ಕೆಳಗೆ ಬೀಳುವ ಕನಸ ಕಾಣದಿರು ಮೂಢ ||
ಭಾನುವಾರ, ಏಪ್ರಿಲ್ 8, 2018
ಮೂಢ ಉವಾಚ - 398
ಉನ್ನತಿಗೆ ಕಾರಕವು ಸಕಲರಿಗೆ ಹಿತಕರವು
ಸತ್ಕರ್ಮಯಜ್ಞವದು ಸುಸ್ನೇಹದಾಯಿನಿಯು |
ಸತ್ಕರ್ಮ ರಕ್ಷಿಪನ ಸತ್ಕರ್ಮ ಕಾಯುವುದು
ಕುಟಿಲತನವನು ಕುಟ್ಟಿ ಕೆಡವುವುದೊ ಮೂಢ ||
ಶನಿವಾರ, ಏಪ್ರಿಲ್ 7, 2018
ಮೂಢ ಉವಾಚ - 397
ಬ್ರಹ್ಮಚರ್ಯದಲಿರಲಿ ಗಾರ್ಹಸ್ಥ್ಯದಲ್ಲಿರಲಿ
ವನಪ್ರಸ್ಥಿಯೇ ಇರಲಿ ಋಣರಹಿತನಾಗಿರಲಿ |
ಸಂನ್ಯಾಸಿಯೇ ಇರಲಿ ಎಂತೇ ಇರುತಿರಲಿ
ಸಾಲವನು ತೀರಿಸದೆ ಸಾಯದಿರು ಮೂಢ ||
ಶುಕ್ರವಾರ, ಏಪ್ರಿಲ್ 6, 2018
ಮೂಢ ಉವಾಚ - 396
ಕರ್ಮವನು ಮಾಡುತಲೆ ಶತವರ್ಷ ನೀ ಬಾಳು
ಕರ್ಮವಿಲ್ಲದ ಧರ್ಮಕೆಲ್ಲಿಹುದು ಅರ್ಥ |
ಬಿಡಿಸಲಾರದ ನಂಟು ಅಂಟು ತಾನಲ್ಲ
ಕರ್ಮವನು ಮಾಡದಲೆ ವಿಧಿಯಿಲ್ಲ ಮೂಢ ||
ಗುರುವಾರ, ಏಪ್ರಿಲ್ 5, 2018
ಮೂಢ ಉವಾಚ - 395
ಇಹಜ್ಞಾನವಿರಬೇಕು ಪರಜ್ಞಾನವೂ ಬೇಕು
ಉಭಯ ತತ್ತ್ವಗಳ ತಿಳಿದು ಸಾಗುತಿರಬೇಕು |
ಲೋಕಜ್ಞಾನದ ಬಲದಿ ಮರ್ತ್ಯಲೋಕವ ದಾಟೆ
ಅಮರತ್ವ ತಾನದೊಲಿಯದಿಹುದೇ ಮೂಢ ||
ಮಂಗಳವಾರ, ಏಪ್ರಿಲ್ 3, 2018
ಮೂಢ ಉವಾಚ - 394
ಅಮರ ತತ್ತ್ವದ ಅರಿವ ಶಿಖರವನು ಮುಟ್ಟಲು
ಅಮರವಲ್ಲದ ಜಗದ ಜ್ಞಾನವದು ಮೆಟ್ಟಲು |
ಮರ್ತ್ಯಲೋಕವ ಮೀರಿ ಅಮರತ್ವ ಸಿಕ್ಕೀತು
ಪರಮ ಸತ್ಯದ ತಿಳಿವು ಪಡೆದವಗೆ ಮೂಢ ||
ಮೂಢ ಉವಾಚ - 393
ಮುದದಿ ಬೆಳಕಲಿ ನಿಂದು ಪ್ರಕೃತಿಯ ನೋಡು
ಪ್ರಕೃತಿಗೆ ಮಿಗಿಲೆನಿಪ ಜೀವಾತ್ಮನನು ಕಾಣು |
ನಿನ್ನೊಳಗೆ ನೀ ಸಾಗಿ ನಿನ್ನರಿವೆ ಗುರುವಾಗಿ
ಪರಮ ಸತ್ಯದಾನಂದ ಹೊಂದು ನೀ ಮೂಢ ||
ನವೀನ ಪೋಸ್ಟ್ಗಳು
ಹಳೆಯ ಪೋಸ್ಟ್ಗಳು
ಮುಖಪುಟ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)