ಗುರುವಾರ, ಮಾರ್ಚ್ 22, 2018

ಮೂಢ ಉವಾಚ - 387

ನಡೆನುಡಿಗಳೊಂದಾಗಿ ಚಿತ್ತ ನಿರ್ಮಲವಿದ್ದು
ಸಜ್ಜನಿಕೆಯೊಡಗೂಡಿ ಧರ್ಮಮಾರ್ಗದಿ ಸಾಗಿ |
ಕುಟಿಲತೆಯ ಹೊರದೂಡಿ ಮುಂದೆ ಸಾಗುವರವರು
ಮನುಕುಲಕೆ ಮಾನ್ಯರವರಲ್ತೆ ಮೂಢ || 



ಮಂಗಳವಾರ, ಮಾರ್ಚ್ 20, 2018

ಮೂಢ ಉವಾಚ - 386

ಸೋಲೆಂಬುದೆಲ್ಲಿಹುದು ಧರ್ಮದಲಿ ನಡೆವವಗೆ
ಮೂತತ್ತ್ವವೆದೆಯಲಿರೆ ವಿಶ್ವವನೆ ಕಾಣವನು |
ಎದ್ದವರು ಬಿದ್ದವರು ಎಲ್ಲರಿಗು ಬೆಳಕವನು
ಸಮದರ್ಶಿಯಾಗಿಹನ ಗೌರವಿಸು ಮೂಢ || 



ಸೋಮವಾರ, ಮಾರ್ಚ್ 19, 2018

ಮೂಢ ಉವಾಚ - 385

ಚಿಂತೆ ಕಂತೆಗಳ ಒತ್ತಟ್ಟಿಗಿಟ್ಟು
ಮಾವಿನೆಲೆ ತೋರಣವ ಬಾಗಿಲಿಗೆ ಕಟ್ಟು |
ಬೇವು-ಬೆಲ್ಲಗಳೆ ಜೀವನದ ಚೌಕಟ್ಟು
ಬಂದುದನೆ ಕಂಡುಂಡು ತಾಳುತಿರು ಮೂಢ ||



ಶುಕ್ರವಾರ, ಮಾರ್ಚ್ 16, 2018

ಮೂಢ ಉವಾಚ - 384

ದಿವ್ಯದೇಹದ ಒಡೆಯ ಬಯಸಿರಲು ಮುಕ್ತಿಯನು
ಯಾತ್ರೆಯದು ಸಾಗುವುದು ಧರ್ಮದಾ ಮಾರ್ಗದಲಿ |
ಹುಟ್ಟು ಸಾವಿನ ಚಕ್ರ ಉರುಳುವುದು ಅನವರತ
ಹಿತವಾದ ದಾರಿಯನು ಆರಿಸಿಕೊ ಮೂಢ || 



ಗುರುವಾರ, ಮಾರ್ಚ್ 8, 2018

ಮೂಢ ಉವಾಚ - 383

ಸತ್ಯಜ್ಞಾನದ ಅರಿವ ಸರ್ವಮೂಲದಿ ಪಡೆದು
ಅಂತರಂಗದೊಳಿರಿಸೆ ದೇವನವ ಕಾಣುವನು |
ಕಣ್ಣಿರುವ ಕುರುಡನು ಕಿವಿಯಿರುವ ಕಿವುಡನು
ಪಾಪಮಾರ್ಗದಿ ನಡೆದು ಬೀಳುವನು ಮೂಢ || 




ಶನಿವಾರ, ಮಾರ್ಚ್ 3, 2018

ಮೂಢ ಉವಾಚ - 382

ಮೇಲೇರು ಎಲೆ ಜೀವ ಕೆಳಗೆ ಜಾರದಿರು
ಜೀವಿಸುವ ದಾರಿಯನು ದೇವ ತೋರುವನು |
ಧರ್ಮದಲಿ ಬಾಳಿ ಇಳಿಯುವ ಹೊತ್ತಿನಲಿ
ಅನುಭವದ ಪಾಕವನು ವಿತರಿಸೆಲೊ ಮೂಢ || 




ಶುಕ್ರವಾರ, ಮಾರ್ಚ್ 2, 2018

ಮೂಢ ಉವಾಚ - 381

ನಿಲ್ಲದಿರಲೀ ನಡಿಗೆ ಬೀಳದಿರು ಕೆಳಗೆ
ಇಹದಲಿವೆ ಕಾರ್ಯಗಳು ಅಂಜದಿರು ಸಾವಿಗೆ |
ಹಗಲಿನಲಿ ಸೂರ್ಯನೊಲು ರಾತ್ರಿಯಲಿ ಅಗ್ನಿಯೊಲು
ಬೆಳಗುವಂತಹ ವರವ ಕೋರಿಕೊಳೊ ಮೂಢ ||