ಕವಿಮನದಾಳದಿಂದ
ಭಾನುವಾರ, ಮೇ 7, 2017
ಮೂಢ ಉವಾಚ - 250
ಸ್ವರ್ಗವೆಂಬುದು ಕೇಳು ಪುಣ್ಯ ತೀರುವ ತನಕ
ನರಕವೆಂಬುದಿದೆ ಪಾಪ ಕಳೆಯುವ ತನಕ|
ನಿನ್ನೊಳಗೆ ನಾನು ನನ್ನೊಳಗೆ ನೀನೆನಲು
ಸಚ್ಚಿದಾನಂದಭಾವ ಕೊನೆತನಕ ಮೂಢ||
ಶನಿವಾರ, ಮೇ 6, 2017
ಮೂಢ ಉವಾಚ - 249
ಸಾಲ ಪಡೆದೆವು ನಾವು ಋಣಿಗಳಾಗಿಹೆವು
ಶರೀರವಿತ್ತ ದೇವಗೆ ಹೆತ್ತವರ್ಗೆ ಹೊತ್ತವರ್ಗೆ|
ದಾರಿ ತೋರುವ ಗುರು ಹಿರಿಯರೆಲ್ಲರಿಗೆ
ಸಾಲವನು ತೀರಿಸದೆ ಮುಕ್ತಿಯುಂಟೆ ಮೂಢ||
ಶುಕ್ರವಾರ, ಮೇ 5, 2017
ಮೂಢ ಉವಾಚ - 248
ಹೆತ್ತು ಹೊತ್ತು ಸಲಹಿದ ಮಮತೆಯ ಜಲಧಿ
ತಾಯ ಋಣ ತೀರಿಸಲು ಆಗುವುದೆ ಜಗದಿ|
ನೋವನುಂಡು ನಲಿವ ನೀಡುವಳು ಮುದದಿ
ಆಕೆಯನು ನೋಯಿಪನು ಕಡುಪಾಪಿ ಮೂಢ||
ಗುರುವಾರ, ಮೇ 4, 2017
ಮೂಢ ಉವಾಚ - 247
ವಿಷಯರಾಗವನು ಮೂಡಿಪುದೆ ಮನಸು
ಪಶುತರದಿ ಬಂಧಗೊಳಿಪುವುದು ಮನಸೆ|
ವಿರಾಗದಲಿ ಬಂಧ ಬಿಡಿಸುವುದು ಮನಸು
ಮನಸಿನಿಂದಲೆ ಕನಸು ನನಸು ಮೂಢ||
ಬುಧವಾರ, ಮೇ 3, 2017
ಮೂಢ ಉವಾಚ - 246
ಶ್ರಮವಿರದ ಸುಖವದೆಲ್ಲರಿಗೆ ಬೇಕು ನಿತ್ಯ
ಸುಖವು ಶ್ರಮದಲಿಹುದೆಂಬುದೆ ಪರಮಸತ್ಯ|
ಸುಖಿಸುವರ ಕಂಡು ಕರುಬುವರು ಪರರು
ಶ್ರಮಿಸುವರ ಮಚ್ಚರಿಪರಿಹರೆ ಮೂಢ||
ಮಂಗಳವಾರ, ಮೇ 2, 2017
ಮೂಢ ಉವಾಚ - 245
ಮೇಲು ಕೀಳುಗಳಿಗೆ ಕಾರಣರು ಪರರಲ್ಲ
ಆಲಸಿಕೆ ಕುಚಟಗಳ ದಾಸರಾಗರೆ ಕೀಳು|
ಮುನ್ನಡೆಯ ಹಂಬಲಿಸೆ ಆಗುವರು ಮೇಲು
ಪರರ ದೂಷಿಸಿ ಫಲವೇನು ಮೂಢ||
ಸೋಮವಾರ, ಮೇ 1, 2017
ಮೂಢ ಉವಾಚ - 244
ಸಮರಾರಿಹರು ಜಗದೊಳು ಸಮರಾರಿಹರು
ಅಸಮಾನರೆನಿಸೆ ಹಂಬಲಿಸಿ ಹೋರಾಡುತಿಹರು|
ಗುರಿ ಸಮನಿರಬಹುದು ದಾರಿ ಸಮನಹುದೆ
ನಿಜಸಮತೆ ಕಂಡೀತು ಸಾವಿನಲಿ ಮೂಢ||
ನವೀನ ಪೋಸ್ಟ್ಗಳು
ಹಳೆಯ ಪೋಸ್ಟ್ಗಳು
ಮುಖಪುಟ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)