ಶನಿವಾರ, ಏಪ್ರಿಲ್ 15, 2017

ಮೂಢ ಉವಾಚ - 228

ಕುಜನರೊಡನಾಡಿ ವಂಚನೆಯ ಗೈಯುವನು
ಪರರ ನೋವಿನಲಿ ಆನಂದ ಕಾಣುವನು|
ಆಲಸಿಕ ತಾನಾಗಿ ಪಶುವಿನಂತಾಡುವನು
ಅಯುಕ್ತನವನಸುರನೋ ಮೂಢ||


ಬುಧವಾರ, ಏಪ್ರಿಲ್ 12, 2017

ಮೂಢ ಉವಾಚ - 227

ನಾನೇ ಎಲ್ಲ ನಾನಿಲ್ಲದಿರಿಲ್ಲವೆಂಬಹಮಿಕೆ
ಪರರ ಜರೆವ ಗುಣ ಗುರುಹಿರಿಯರೆನದೆ|
ಬಯಸಿರಲು ಸಿಗದಿರೆ ಉಮ್ಮಳಿಪ ಕೋಪ
ಅಸೂಯೆ ಅಸುರರ ಆಸ್ತಿ ಮೂಢ||


ಮಂಗಳವಾರ, ಏಪ್ರಿಲ್ 11, 2017

ಮೂಢ ಉವಾಚ - 226

ಅಸುರರೆಲ್ಲಿಹರೆಂದು ಅರಸುವುದು ತರವೆ
ಅತಿಮಾನ ತೋರಿ ಮದದಿ ಮೆರೆಯುವರು|
ಹಿರಿಯರನೆ ನಿಂದಿಸಿ ಡಂಭ ತೋರುವರು 
ಪರರ ನೋಯಿಪರು ಅಸುರರೇ ಮೂಢ||


ಸೋಮವಾರ, ಏಪ್ರಿಲ್ 10, 2017

ಮೂಢ ಉವಾಚ - 225

ಗುರಿಯ ತಲುಪಲು ಕುಟಿಲೋಪಾಯ ಮಾಡಿ
ಪರರ ಮೆಚ್ಚ್ಚಿಸಲು ಡಂಭದಾಚರಣೆಯ ಮಾಡಿ |
ಕಾಮರಾಗಬಲದಿಂ ಕೀಳು ಫಲಕಾಗಿ ಹಂಬಲಿಪ
ಅಹಂಕಾರಿಗಳು ಸಾಧಕಾಸುರರು ಮೂಢ ||


ಭಾನುವಾರ, ಏಪ್ರಿಲ್ 9, 2017

ಮೂಢ ಉವಾಚ - 224

ಬಿತ್ತಿದಾ ಬೀಜದೊಲು ಬೆಳೆಯು 
ನೋಡುವ ನೋಟ ಕೇಳುವ ಮಾತು |
ಆಡುವ ಮಾತು ಸೇವಿಪಾಹಾರ
ಸಾತ್ವಿಕವಿರೆ ಸಾತ್ವಿಕನು ನೀ ಮೂಢ ||


ಶನಿವಾರ, ಏಪ್ರಿಲ್ 8, 2017

ಮೂಢ ಉವಾಚ - 223

ನೊಂದಮನಕೆ ಶಾಂತಿಯನು ನೀಡುವುದು
ಮನವ ನೋಯಿಸಿ ನರಳಿಸುವುದು ನಾಲಿಗೆ|
ಜೀವವುಳಿಸೀತು ಹಾಳುಗೆಡವೀತು 
ನಾಲಿಗೆಯದೆರಡಲಗಿನ ಕಠಾರಿ ಮೂಢ||


ಮೂಢ ಉವಾಚ - 222

ಎಲುಬಿರದ ನಾಲಿಗೆಯ ಮೆದುವೆಂದೆಣಿಸದಿರು
ಭದ್ರ ಹೃದಯವನು ಛಿದ್ರವಾಗಿಸಬಹುದು|
ಮನ ಮನೆಗಳ ಮುರಿದು ಕ್ಲೇಶ ತರಬಹುದು
ಕೆನ್ನಾಲಿಗೆಯ ತಣಿಪುದೆಂತೋ ಮೂಢ||