ಶುಕ್ರವಾರ, ಫೆಬ್ರವರಿ 3, 2017

ಮೂಢ ಉವಾಚ - 218

ಸಾತ್ವಿಕತೆಯಿಂದ ಜ್ಞಾನ ಶಾಂತಿ ಆನಂದ
ರಾಜಸಿಕ ಪಡೆಯುವನು ಆಯಾಸ ನೋವ |
ಪರರ ನೋಯಿಪ ತಾಮಸವೆ ಅಜ್ಞಾನ
ಹಿತವದಾವುದೀ ಮೂರರಲಿ ಮೂಢ ||



ಶುಕ್ರವಾರ, ನವೆಂಬರ್ 11, 2016

ಮೂಢ ಉವಾಚ - 217

ಸತ್ವಗುಣ ಸಂಪನ್ನ ಸ್ವರ್ಗವನೆ ಸೇರುವನು
ಇದ್ದಲ್ಲೆ ಇರುವನು ರಾಜಸಿಕ ಗುಣದವನು |
ಪಶು ಪ್ರಾಣಿ ಕೀಟವಾಗುವನು ತಾಮಸಿಕ 
ಅಟ್ಟಡುಗೆಯುಣಬೇಕು ಇದು ಸತ್ಯ ಮೂಢ ||


ಬುಧವಾರ, ಅಕ್ಟೋಬರ್ 12, 2016

ಮೂಢ ಉವಾಚ - 216

ರಾಗರಹಿತ ಮನ ದೀಪದ ಕಂಬವಾಗಿ 
ಸಂಸ್ಕಾರ ಬತ್ತಿಯನು ಭಕ್ತಿತೈಲದಿ ನೆನೆಸಿ |
ದೇವನ ನೆನೆವ ಮನ ಬತ್ತಿಯನು ಹಚ್ಚಲು
ಜ್ಞಾನಜ್ಯೋತಿ ಬೆಳಗದಿಹುದೆ ಮೂಢ ||




ಭಾನುವಾರ, ಅಕ್ಟೋಬರ್ 2, 2016

ಮೂಢ ಉವಾಚ - 215

ಸಂಕಟವ ಪರಿಹರಿಸೆ ವೆಂಕಟನ ಬೇಡುವರು
ಧನಕನಕ ಆಯಸ್ಸು ಸಂಪತ್ತು ಕೋರುವರು |
ಜ್ಞಾನಿಗಳರಿತಾರಾಧಿಪರು ನಿರ್ಮೋಹದಲಿ
ಅರಿವಿನ ದಾರಿಯರಸುವರು ಮೂಢ ||


ಶನಿವಾರ, ಸೆಪ್ಟೆಂಬರ್ 17, 2016

ಮೂಢ ಉವಾಚ - 214

ದಂಡವಿಡುವುದು ಕುಜನರನು ಅಂಕೆಯಲಿ
ನ್ಯಾಯನೀತಿಗಳು ಗೆಲಿಪುವುವು ವಾದದಲಿ |
ಗೌಪ್ಯತೆಯುಳಿಸಿ ಮಾನ ಕಾಯ್ವುದೆ ಮೌನ
ಬದುಕ ಗೆಲಿಪುವುದು ಜ್ಞಾನ ಮೂಢ ||


ಶನಿವಾರ, ಸೆಪ್ಟೆಂಬರ್ 10, 2016

ಮೂಢ ಉವಾಚ - 213

ದೇವ ಸುಜನ ಗುರು ಹಿರಿಯರಲಿ ಶ್ರದ್ಧೆ 
ತನು ಶುದ್ಧಿ ಜೊತೆಜೊತೆಗೆ ಮನ ಶುದ್ಧಿ |
ನೇರ ನಡೆ ನುಡಿಯು ತ್ರಿಕರಣದಲಿರಲು 
ಪರಮಪದಕಿದಕಿಂತ ತಪವುಂಟೆ ಮೂಢ ||


ಸೋಮವಾರ, ಸೆಪ್ಟೆಂಬರ್ 5, 2016

ಮೂಢ ಉವಾಚ - 212

ಧನಕನಕ ಅಧಿಕಾರ ಪದವಿ ಕೀರ್ತಿಗಳು
ಆತ್ಮಜ್ಞಾನದಲಿ ಸಿಗದೆಂದು ಕೊರಗದಿರು |
ಆನಂದ ಪ್ರಾಪ್ತಿ ಸುಖ ದುಃಖ ನಿವೃತ್ತಿ 
ಆತ್ಮಜ್ಞಾನದಲೆ ಮುಕ್ತಿಯೋ ಮೂಢ ||