ಕವಿಮನದಾಳದಿಂದ
ಸೋಮವಾರ, ಜುಲೈ 18, 2016
ಮೂಢ ಉವಾಚ - 205
ವಿಷಯ ಬಿಟ್ಟವನು ಎನಿಸುವನು ಸಂನ್ಯಾಸಿ
ಮುಕ್ತಿಮಾರ್ಗಕಿದು ಕಠಿಣತಮ ಹಾದಿ|
ವಿವೇಕಿ ತಾ ಫಲಬಯಸದಾ ಕರ್ಮದಿಂ
ಸರಳ ದಾರಿ ಹಿಡಿಯುವನು ಮೂಢ||
ಶುಕ್ರವಾರ, ಜುಲೈ 15, 2016
ಮೂಢ ಉವಾಚ - 204
ಜ್ಞಾನಯಜ್ಞವದು ಸಕಲಯಜ್ಞಕೆ ಮಿಗಿಲು
ಜಪತಪಕೆ ಮೇಣ್ ಹೋಮಹವನಕೆ ಮಿಗಿಲು|
ಸಕಲಫಲಕದು ಸಮವು ಆತ್ಮದರಿವಿನ ಫಲ
ಅರಿವಿನ ಪೂಜೆಯಿಂ ಪರಮಪದ ಮೂಢ||
ಭಾನುವಾರ, ಜುಲೈ 10, 2016
ಮೂಢ ಉವಾಚ - 203
ಬೆಳಕಿರುವ ತಾಣದಲಿ ತಮವು ಇದ್ದೀತೆ
ಅರಿವಿರುವೆಡೆಯಲ್ಲಿ ಅಜ್ಞಾನ ಸುಳಿದೀತೆ |
ಅರಿವು ಬರಲಾಗಿ ತರತಮವು ಮಾಯ
ಅಭೇದಭಾವಿ ಅಮರನಲ್ಲವೆ ಮೂಢ ||
ಶುಕ್ರವಾರ, ಜುಲೈ 8, 2016
ಮೂಢ ಉವಾಚ - 202
ಸಕಲರುದ್ಧಾರವೇ ಧರ್ಮಶಾಸ್ತ್ರದ ಸಾರ
ಪರಮಪದಕಿಹುದು ನೂರಾರು ದಾರಿ |
ದಾರಿ ಹಲವಿರಲು ಗುರಿಯದು ಒಂದೆ
ಮನ ತೋರ್ವ ದಾರಿಯಲಿ ಸಾಗು ಮೂಢ ||
ಬುಧವಾರ, ಜುಲೈ 6, 2016
ಮೂಢ ಉವಾಚ - 201
ಸತ್ಯಧರ್ಮಕೆ ಹೆಸರು ಕೋದಂಡರಾಮ
ನೀತಿಪಾಲನೆಗೆ ಹಿಡಿದನಾಯುಧ ಶ್ಯಾಮ |
ಮನುಕುಲಕೆ ದಾರಿದೀವಿಗೆಯು ರಾಮ
ಬೆಳಕು ಕಂಡೆಡೆಯಲ್ಲಿ ಸಾಗು ನೀ ಮೂಢ||
ಸೋಮವಾರ, ಜುಲೈ 4, 2016
ಮೂಢ ಉವಾಚ - 200
ಸ್ವರ್ಗ ಶಾಶ್ವತವಲ್ಲ ನರಕ ಶಾಶ್ವತವಲ್ಲ
ಶಾಶ್ವತವದೊಂದೆ ಸಚ್ಚಿದಾನಂದ ಭಾವ|
ಗುರುಮಾರ್ಗವನುಸರಿಸಿ ಸಾಧನೆಯ ಮಾಡೆ
ಭದ್ರಪದವೊಲಿಯುವುದು ಮೂಢ||
ಶುಕ್ರವಾರ, ಜುಲೈ 1, 2016
ಮೂಢ ಉವಾಚ - 199
ಶ್ರವಣದಿಂದಲೆ ವಿದ್ಯೆ ಶ್ರವಣದಿಂದಲೆ ಜ್ಞಾನ
ಶ್ರವಣದಿಂದಲೆ ಅರಿವು ಶ್ರವಣದಿಂದಲೆ ಮೋಕ್ಷ|
ಸುಜನವಾಣಿ ಗುರುವಾಣಿ ಕೇಳುವವ ಧನ್ಯ
ಕೇಳು ಕೇಳು ಕೇಳು ನೀ ಕೇಳು ಮೂಢ||
ನವೀನ ಪೋಸ್ಟ್ಗಳು
ಹಳೆಯ ಪೋಸ್ಟ್ಗಳು
ಮುಖಪುಟ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)