ಕವಿಮನದಾಳದಿಂದ
ಗುರುವಾರ, ಡಿಸೆಂಬರ್ 10, 2015
ಮೂಢ ಉವಾಚ - 123
ಉರಿವ ಬೆಂಕಿಗೆ ಕೀಟಗಳು ಹಾರುವೊಲು
ಗಾಳದ ಹುಳುವ ಮತ್ಸ್ಯವಾಸೆ ಪಡುವೊಲು |
ವಿಷಯ ಲೋಲುಪರಾಗಿ ಬಲೆಗೆ ಸಿಲುಕುವರ
ಭ್ರಮೆಯದೆನಿತು ಬಲಶಾಲಿ ಮೂಢ ||
ಬುಧವಾರ, ಡಿಸೆಂಬರ್ 9, 2015
ಮೂಢ ಉವಾಚ - 122
ನರಕದ ಭಯ ಉಳಿಸೀತು ಸ್ವರ್ಗವ
ಭಯವಿರೆ ಮಾನವ ಇಲ್ಲದಿರೆ ದಾನವ |
ಭಯದಿಂ ವ್ಯಷ್ಟಿ ಸಮಷ್ಟಿಗೆ ಕ್ಷೇಮಭಾವ
ಲೋಕಹಿತ ಕಾರಕವು ಭಯವೆ ಮೂಢ ||
ಸೋಮವಾರ, ಡಿಸೆಂಬರ್ 7, 2015
ಮೂಢ ಉವಾಚ - 121
ಕೆಡುಕಾಗುವ ಭಯ ಕೆಡುಕ ತಡೆದೀತು
ರೋಗದ ಭಯ ಚಪಲತೆಯ ತಡೆದೀತು |
ಶಿಕ್ಷೆಯ ಭಯವದು ವ್ಯವಸ್ಥೆ ಉಳಿಸೀತು
ಗುಣ ರಕ್ಷಕ ಭಯಕೆ ಜಯವಿರಲಿ ಮೂಢ ||
ಶನಿವಾರ, ಡಿಸೆಂಬರ್ 5, 2015
ಮೂಢ ಉವಾಚ - 120
ಸಿರಿವಂತನಿಗೆ ಬಡತನ ಬಂದೆರಗುವ ಭಯ
ಬಲಶಾಲಿಯಾದವಗೆ ಶತ್ರು ಸಂಚಿನ ಭಯ |
ಮೇಲೇರಿದವಗೆ ಕೆಳಗೆ ಬೀಳುವ ಭಯ
ಭಯಮುಕ್ತನವನೊಬ್ಬನೇ ವಿರಾಗಿ ಮೂಢ ||
ಶುಕ್ರವಾರ, ಡಿಸೆಂಬರ್ 4, 2015
ಮೂಢ ಉವಾಚ - 119
ಸತ್ಕುಲಜಾತನಿಗೆ ಹೆಸರು ಕೆಡುವ ಭಯ
ಧನವಿರಲು ಚೋರಭಯ ಮೇಣ್ ರಾಜಭಯ |
ಸಜ್ಜನರಿಂಗೆ ಕುಜನರು ಕಾಡುವ ಭಯ
ಭಯ ಭಯ ಭಯಮಯವೀ ಲೋಕ ಮೂಢ ||
ಬುಧವಾರ, ಡಿಸೆಂಬರ್ 2, 2015
ಮೂಢ ಉವಾಚ - 118
ಭೋಗಿಯಾದವಗೆ ರೋಗಿಯಾಗುವ ಭಯ
ರೋಗಿಯಾದವಗೆ ಸಾವು ಬಂದೆರಗುವ ಭಯ |
ಅಭಿಮಾನಧನನಿಗೆ ಮಾನಹಾನಿಯ ಭಯ
ಭಯದ ಕಲ್ಪನೆಯೇ ಭಯಾನಕವು ಮೂಢ ||
ಮಂಗಳವಾರ, ಡಿಸೆಂಬರ್ 1, 2015
ಮೂಢ ಉವಾಚ - 117
ಭಯದ ಮಹಿಮೆಯನರಿಯದವರಾರಿಹರು?
ಭಯವಿಲ್ಲದಾ ಜೀವಿಯದಾವದಿರಬಹುದು?|
ನಿಶಾಭಯ ಏಕಾಂತಭಯ ಅಭದ್ರತೆಯ ಭಯ
ಭಯದಿಂದ ಮೂಡಿಹನೆ ಭಗವಂತ ಮೂಢ?||
ನವೀನ ಪೋಸ್ಟ್ಗಳು
ಹಳೆಯ ಪೋಸ್ಟ್ಗಳು
ಮುಖಪುಟ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)