ಕವಿಮನದಾಳದಿಂದ
ಗುರುವಾರ, ಆಗಸ್ಟ್ 13, 2015
ಮೂಢ ಉವಾಚ - 39
ಸಲ್ಲದ ನಡೆಯು ತೋರಿಕೆಯ ಜಪತಪವು
ಪರರ ಮೆಚ್ಚಿಸಲು ಡಂಭದಾಚರಣೆಯು |
ಹಿತಕಾಯದು ಮರುಳೆ ಮತಿ ನೀಡದು
ಕಪಟ ಫಲಕಾಗಿ ಬಳಲದಿರು ಮೂಢ ||
ಮಂಗಳವಾರ, ಆಗಸ್ಟ್ 11, 2015
ಮೂಢ ಉವಾಚ - 38
ಸ್ವಾಭಿಮಾನಿಯ ಗುರುತಿಪುದು ಜಗವು
ಹಸಿವಾದರೂ
ಹುಲಿಯು
ತಿನ್ನದು ಹುಲ್ಲು |
ಕೊಂಡಾಡಿದರೂ ಶಿರ ಚೆಂಡಾಡಿದರೂ
ತನ್ನತನವ ಉಳಿಸಿಕೊಳೆಲೋ ಮೂಢ ||
ಭಾನುವಾರ, ಆಗಸ್ಟ್ 9, 2015
ಮೂಢ ಉವಾಚ - 37
ಸರಸರನೆ ಮೇಲೇರಿ ಗಿರಕಿ ತಿರುಗಿ
ಪರಪರನೆ ಹರಿದು ದಿಕ್ಕೆಟ್ಟು ತಲೆಸುತ್ತಿ |
ಬೀಳುವುದು ಗಾಳಿಪಟ ಬಂಧ ತಪ್ಪಿದರೆ
ಸೂತ್ರ ಹರಿದರೆ ಎಚ್ಚರವಿರು ಮೂಢ ||
ಶುಕ್ರವಾರ, ಆಗಸ್ಟ್ 7, 2015
ಮೂಢ ಉವಾಚ - 36
ಮರುಭೂಮಿಯಲೊಂದು ತರುವ ಕಾಣಲಹುದೆ?
ಖೂಳತನದ ಖಳನೊಳಿತು ಮಾಡುವನೆ? |
ಕೊಂಕುಸುರುವ ಡೊಂಕ ಮನವೊಡೆವ ಕೆಡುಕನ
ಪುಣ್ಣನರಸುವ ನೊಣನೆಂದೆಣಿಸು ಮೂಢ ||
ಮೂಢ ಉವಾಚ - 35
ಕೋಲುಗಳು ಕಲ್ಲುಗಳು ದೇಹವನು ಘಾತಿಪವು
ಸಿಟ್ಟಿನಾ ಮಾತುಗಳು ಮನಸ ನೋಯಿಪವು |
ಮಡುಗಟ್ಟಿದಾ ಮೌನ ಹೃದಯವನೆ ತಿಂದಿರಲು
ಕೆಡುಕೆಣಿಸಿದವರಿಗೊಳಿತ ಬಯಸು ಮೂಢ ||
ಮಂಗಳವಾರ, ಆಗಸ್ಟ್ 4, 2015
ಮೂಢ ಉವಾಚ - 34
ಅಡಿಗಡಿಗೆ ಕಾಡಿ ಶಿರನರವ ತೀಡಿ
ಮಿಡಿದಿಹುದು ಉಡಿಯೊಳಗಿನ ಕಿಡಿಯು |
ಗಡಿಬಿಡಿಯಲಡಿಯಿಡದೆ ತಡೆತಡೆದು
ಸಿಡಿನುಡಿಯ ನೀಡು ಸಿಹಿಯ ಮೂಢ ||
ಮೂಢ ಉವಾಚ - 33
ಅದರದು ಮನ ಕುಹಕಿಗಳ ಕುಟುಕಿಗೆ
ಬೆದರದು ತನು ಪಾತಕಿಗಳ ಧಮಕಿಗೆ|
ಮುದುಡುವುದು ಮನವು ಕದಡುವುದು
ಪ್ರಿಯರ ಹೀನೈಕೆಗೆ ಹೀಗೇಕೋ ಮೂಢ||
ನವೀನ ಪೋಸ್ಟ್ಗಳು
ಹಳೆಯ ಪೋಸ್ಟ್ಗಳು
ಮುಖಪುಟ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)