ಭಾನುವಾರ, ಜೂನ್ 28, 2015

ಮೂಢ ಉವಾಚ - 5

ಗಂಟಿರಲು ನಂಟಿಹುದು ಇಲ್ಲದಿರೆ ಏನಹುದು
ಕಸುವಿರಲು ಬಂಧುಗಳು ಇಲ್ಲದಿರೆ ಉಂಡೆಲೆಯು |
ನಗುವಿರಲು ನೆಂಟತನ ಇಲ್ಲದಿರೆ ಒಂಟಿತನ
ಜಗದ ಪರಿಯಿದು ಏನೆನುವೆ ಮೂಢ ||


ಶನಿವಾರ, ಜೂನ್ 27, 2015

ಮೂಢ ಉವಾಚ - 4

ಆಪತ್ತಿಗಾಗುವರಿಹರು ತಿರುಗಿ ನೋಡದವರಿಹರು
ಒಳಿತು ಹಾರೈಸುವರಿಹರು ಕೆಡಕು ಬಯಸುವರಿಹರು |
ಒಳಿತು ಮಾಡದ ಕೆಡಕು ಎಣಿಸಲರಿಯರಿಹರು
ಇವರೊಳು ನೀಯಾರು ನಾಯಾರು ಹೇಳು ಮೂಢ||


ಶುಕ್ರವಾರ, ಜೂನ್ 26, 2015

ಮೂಢ ಉವಾಚ - 3

ಸಂಬಂಧ ಬೇಕೆಂಬರಿಹರು ಯಾಕೆಂಬರಿಹರು
ಬೆಸೆಯುವರಿಹರು ಬೆಸೆದುಕೊಂಬವರಿಹರು |
ಮುರಿಯುವವರಿಹರು ಮುರಿದುಕೊಂಬವರಿಹರು
ಇವರೊಳು ನೀಯಾರು ನಾಯಾರು ಹೇಳು ಮೂಢ ||



ಗುರುವಾರ, ಜೂನ್ 25, 2015

ಮೂಢ ಉವಾಚ- 2

ಸ್ನೇಹ ಪ್ರೀತಿಯಲು ಲಾಭವನೆ ಅರಸುವರು
ಕಿಂಚಿತ್ತು ಪಡೆಯಲು ಶಾಶ್ವತವ ಕಳೆಯುವರು|
ವಿಶ್ವಾಸದಮೃತಕೆ ವಿಷವ ಬೆರೆಸುವರು
ಇಂಥವರ ಸಂಗದಿಂ ದೂರವಿರು ಮೂಢ||



ಬುಧವಾರ, ಜೂನ್ 24, 2015

ಮೂಢ ಉವಾಚ - 1

ಅತ್ತ ಮುಖ ಇತ್ತ ಮುಖ ಎತ್ತೆತ್ತಲೋ ಮುಖ
ಏಕಮುಖ ಬಹುಮುಖ ಸುಮುಖ ಕುಮುಖ |
ಮುಖದೊಳಗೊಂದು ಮುಖ ಹಿಮ್ಮುಖ ಮುಮ್ಮುಖ 
ಮುಖಾಮುಖಿಯಲ್ಲಿ ನಿಜಮುಖವೆಲ್ಲೋ ಮೂಢ || 



ಸೋಮವಾರ, ಜನವರಿ 19, 2015

ಕುರುಡು ದ್ವೇಷ ಸಂಸಾರವ ನುಂಗಿತ್ತಾ . . .

     ಒಂದು ವೈದಿಕ ಭಜನೆಯ ಸಾಲುಗಳಿವು:
ಪೂಜನೀಯ ಪ್ರಭೋ ಹಮಾರೇ ಭಾವ ಉಜ್ವಲ ಕೀಜಿಯೇ |
ಛೋಡ ದೇವೇ ಛಲ ಕಪಟ ಕೋ ಮಾನಸಿಕ ಬಲ ದೀಜಿಯೇ ||
. . . .
ಸ್ವಾರ್ಥ ಭಾವ ಮಿಟೇ ಹಮಾರ ಪ್ರೇಮ ಪಥ ವಿಸ್ತಾರ ಹೋ |
. . . .
     'ಓ ದೇವರೇ, ನಮ್ಮ ಭಾವಗಳನ್ನು ಉಜ್ವಲಗೊಳಿಸು. ಛಲ, ಕಪಟಗಳನ್ನು ಬಿಡಿಸಿ ಮಾನಸಿಕ ಬಲ ನೀಡು, ನಮ್ಮ ಸ್ವಾರ್ಥ ಭಾವವನ್ನು ತೊಡೆದು ಪ್ರೇಮಪಥ ವಿಸ್ತಾರಗೊಳಿಸು' ಎಂದು ಪ್ರಾರ್ಥಿಸುವ ಸಾಲುಗಳು ಅರ್ಥಪೂರ್ಣವಾಗಿವೆ. ಬಹುತೇಕ ಕುಟುಂಬಗಳಲ್ಲಿ ಕಂಡುಬರುವ ಪರಸ್ಪರರಲ್ಲಿನ ಅಸಹನೆ, ಅಸಂತೋಷ, ಸಂದೇಹ, ಮತ್ಸರ, ದ್ವೇಷಗಳಿಗೆ ಮೂಲಕಾರಣ ಸ್ವಾರ್ಥಪ್ರೇರಿತ ಚಿಂತನಾಧಾಟಿ ಎಂಬುದರಲ್ಲಿ ಸಂದೇಹವಿರಲಾರದು. ಸಂಸಾರಗಳು ಪತನದ ಹಾದಿ ಹಿಡಿಯುವುದಕ್ಕೆ ಇದೇ ಕಾರಣವಾಗಿದೆ.
     ಸ್ವಾರ್ಥದಿಂದ ಮೂಡಿದ ದ್ವೇಷಭಾವನೆ ಹೇಗೆ ಸಂಸಾರವನ್ನೇ ನುಂಗುತ್ತದೆ ಎಂದು ಬಿಂಬಿಸುವ ಈ ರಚನೆಯನ್ನು ಸಂತ ಶಿಶುನಾಳ ಶರೀಫರ 'ಕೋಡಗನ ಕೋಳಿ ನುಂಗಿತ್ತಾ' ಹಾಡಿನ ಧಾಟಿಯಲ್ಲಿ ಹಾಡಬಹುದಾಗಿದೆ.

ಕುರುಡು ದ್ವೇಷ ಸಂಸಾರವ ನುಂಗಿತ್ತಾ . . .
ಕುರುಡು ದ್ವೇಷ ಸಂಸಾರವ ನುಂಗಿತ್ತಾ, ಕೇಳೆಲೊ ಮೂಢ
ಕುರುಡು ದ್ವೇಷ ಸು-ಸಾರವ ಹೀರಿತ್ತಾ                          || ಪ ||

ಸ್ವಾರ್ಥ ಪ್ರೀತಿಯ ನುಂಗಿ ಛಲವು ನೆಮ್ಮದಿಯ ನುಂಗಿ

ಕೇಳಲು ಬಂದ ವಿವೇಕವನ್ನೇ ಕೋಪವು ನುಂಗಿತ್ತಾ, ಮೂಢ || ೧ ||

ಸರಿಯು ತಪ್ಪಾಗಿ ಕಂಡು ತಪ್ಪು ಒಪ್ಪಾಗಿ ಬಂದು

ನ್ಯಾಯದ ಕಣ್ಣಿಗೆ ಮಣ್ಣೆರಚುತ್ತ ಮೀಸೆಯ ತಿರುವಿತ್ತಾ, ಮೂಢ    || ೨ ||

ಅನ್ಯರ ಮನೆಗೆ ಹಚ್ಚಿದ ಬೆಂಕಿ ಭಗ್ಗನೆ ಹೊತ್ತಿತ್ತಾ

ಹಚ್ಚಿದವರ ಮನೆಯನು ಕೂಡ ಬೆಂಕಿಯು ನುಂಗಿತ್ತಾ, ಮೂಢ || ೩ ||

ಕಟ್ಟಿಕೊಟ್ಟ ಬುತ್ತಿಯು ಮುಗಿದು ಹಸಿವದು ಹೆಚ್ಚಿತ್ತಾ

ಎರವಲು ಬುದ್ಧಿ ತಾಳಿಕೆ ಬರದೆ ಕಣ್ ಕಣ್ ಬಿಟ್ಟಿತ್ತಾ, ಮೂಢ  || ೪ ||

ಮುಸುಕಿದ ಮಾಯೆಯ ಪರದೆಯು ಸರಿದು ಅರಿವು ಮೂಡಿತ್ತಾ

ಆಗುವುದೇನಿದೆ ಮಾಡುವುದೇನಿದೆ ಕಾಲವು ಮಿಂಚಿತ್ತಾ, ಮೂಢ || ೫ ||

-ಕ.ವೆಂ.ನಾಗರಾಜ್.

ಭಾನುವಾರ, ಸೆಪ್ಟೆಂಬರ್ 7, 2014

ಹಿಂಸೆ


ಹಿಂಸೆಯೆಂಬುದು ಕುಣಿಯುತಲಿತ್ತು
ನಿದ್ದೆಯ ಕಾಣದೆ ಚಡಪಡಿಸಿತ್ತು |
ಯಾರನು ಕೊಲ್ಲಲಿ ಯಾರನು ಕೆಡವಲಿ
ಯಾರನು ಚುಚ್ಚಲಿ ಯಾರನು ತಿವಿಯಲಿ ||

ಬಂಧು ಬಳಗ ಗೆಳೆಯರು ಎನ್ನದೆ
ಸಿಟ್ಟಿನ ಭರದಲಿ ಅಬ್ಬರಿಸಿತ್ತು |
ರೋಷವು ಉಕ್ಕಿದೆ ಹಲ್ಲದು ಕಡಿದಿದೆ
ಯಾರನು ಹೊಡೆಯಲಿ ಯಾರನು ಬಡಿಯಲಿ ||

ಸ್ಥಾನ ಮಾನದ ಗಣನೆಯೆ ಇಲ್ಲ
ಸ್ವಂತ ನಾಶದ ಭಯವೆ ಇಲ್ಲ |
ನ್ಯಾಯವು ಎಲ್ಲಿದೆ ಧರ್ಮವು ಎಲ್ಲಿದೆ
ಸುತ್ತಲು ಮುಸುಕಿದೆ ಕತ್ತಲೆ ಎಲ್ಲ ||

ಸಿಟ್ಟದು ತಣಿಯಲು ಕಾಣುವುದೇನು
ರೋದನ ನೋವು ಮಾಡುವುದೇನು |
ಕೋಪದ ಭರದಲಿ ಕೊಯ್ದಿಹ ಮೂಗು
ಶಾಂತವಾಗಲು ಮರಳುವುದೇನು? ||

ಹಿಂಸೆಯೆಂಬುದು ಹೀನರ ಶಸ್ತ್ರವು
ಮತಿಯನು ಮರೆಸಿ ನಾಶವ ತರುವುದು |
ನಿದ್ದೆಯು ಬರದು ಬುದ್ಧಿಯು ಇರದು
ಕಳವಳ ಕಾಡಲು ನೆಮ್ಮದಿ ಸಿಗದು ||

ಕೋಪದ ಕೂಪದಿ ಕತ್ತಲ ಗುಹೆಯಲಿ
ಚಿಗುರುವ ಹಿಂಸೆಗೆ ಸೊರಗದೆ ಬಾಳು |
ಹಿಂಸೆಯು ಅಡಗಲಿ ಶಾಂತಿಯು ನೆಲೆಸಲಿ
ದ್ವೇಷವು ಕಮರಲಿ ಪ್ರೀತಿಯು ಅರಳಲಿ |

-ಕ.ವೆಂ.ನಾಗರಾಜ್.