ಶನಿವಾರ, ಮಾರ್ಚ್ 31, 2018

ಮೂಢ ಉವಾಚ - 392

ಪಿತನು ಪುತ್ರನಿಗೆ ಮಮತೆ ತೋರಿಸುವಂತೆ
ಜೀವದಾತನ ಒಲುಮೆ ಜೀವರಿಗೆ ಸಿಗದಿರದೆ |
ಅವನ ಕರುಣೆಯ ಬೆಳಕು ಬೆಳಗುತಿರಲೆಂದು
ದೇವದೇವನ ಮುದದಿ ಬೇಡಿಕೊಳೊ ಮೂಢ || 



ಶುಕ್ರವಾರ, ಮಾರ್ಚ್ 30, 2018

ಮೂಢ ಉವಾಚ - 391

ಕತ್ತಲೆಯ ಹೊರದೂಡಿ ಬೆಳಕೀವ ಸಜ್ಜನರ
ರೀತಿಗಳು ಕಾಯುವುವು ಪಾಪವನು ತಡೆಯುವುವು |
ಅವರೊಲುಮೆ ಬಲವಾಗಿ ಕರವಿಡಿದು ನಡೆಸುತಿರೆ
ಮುಸುಕಿರುವ ಪೊರೆ ಸರಿಯದಿರದೆ ಮೂಢ ||


ಗುರುವಾರ, ಮಾರ್ಚ್ 29, 2018

ಮೂಢ ಉವಾಚ - 390

ಮನದ ಕತ್ತಲೆ ಸರಿಸಿ ಅರಿವ ಬೆಳಕನು ಪಡೆಯೆ
ದುರ್ಗತಿಯು ದೂರಾಗಿ ನಿರ್ಭಯತೆ ನೆಲೆಸುವುದು |
ಬೆಳಕಿರುವ ಬಾಳಿನಲಿ ಜೀವನವೆ ಪಾವನವು
ಬೆಳಕಿನೊಡೆಯನ ನುಡಿಯನಾಲಿಸೆಲೊ ಮೂಢ || 



ಮಂಗಳವಾರ, ಮಾರ್ಚ್ 27, 2018

ಮೂಢ ಉವಾಚ - 389

ಸಂತಸವ ಚಿಮ್ಮಿಸುತ ಬಾಳು ಹಸನಾಗಿಸುತ
ಸಜ್ಜನರು ಸಾಗುವರು ಸಜ್ಜನಿಕೆ ಸಾರುವರು |
ಸಾಮರ್ಥ್ಯವನುಸರಿಸಿ ದಿವ್ಯತೆಯ ಹೊಂದುವರು
ಸಾಧಕರ ದಾರಿಯಲಿ ಸಾಗು ನೀ ಮೂಢ || 




ಶುಕ್ರವಾರ, ಮಾರ್ಚ್ 23, 2018

ಮೂಢ ಉವಾಚ - 388

ಚುರುಕಿನ ಕಾರ್ಯದಲಿ ವಿಶ್ವಾಸ ಮೇಳವಿಸಿ
ಸಂಕುಚಿತ ಭಾವನೆಯ ತುಂಡರಿಸಿ ಚೆಲ್ಲುತ್ತ |
ವಿಶ್ವವನೆ ಸಜ್ಜನರ ನೆಲೆಯೆನಿಸೆ ಹೋರುತಿಹ
ಜ್ಞಾನಧೀರರ ನಡೆಯನನುಸರಿಸು ಮೂಢ || 



ಗುರುವಾರ, ಮಾರ್ಚ್ 22, 2018

ಮೂಢ ಉವಾಚ - 387

ನಡೆನುಡಿಗಳೊಂದಾಗಿ ಚಿತ್ತ ನಿರ್ಮಲವಿದ್ದು
ಸಜ್ಜನಿಕೆಯೊಡಗೂಡಿ ಧರ್ಮಮಾರ್ಗದಿ ಸಾಗಿ |
ಕುಟಿಲತೆಯ ಹೊರದೂಡಿ ಮುಂದೆ ಸಾಗುವರವರು
ಮನುಕುಲಕೆ ಮಾನ್ಯರವರಲ್ತೆ ಮೂಢ || 



ಮಂಗಳವಾರ, ಮಾರ್ಚ್ 20, 2018

ಮೂಢ ಉವಾಚ - 386

ಸೋಲೆಂಬುದೆಲ್ಲಿಹುದು ಧರ್ಮದಲಿ ನಡೆವವಗೆ
ಮೂತತ್ತ್ವವೆದೆಯಲಿರೆ ವಿಶ್ವವನೆ ಕಾಣವನು |
ಎದ್ದವರು ಬಿದ್ದವರು ಎಲ್ಲರಿಗು ಬೆಳಕವನು
ಸಮದರ್ಶಿಯಾಗಿಹನ ಗೌರವಿಸು ಮೂಢ || 



ಸೋಮವಾರ, ಮಾರ್ಚ್ 19, 2018

ಮೂಢ ಉವಾಚ - 385

ಚಿಂತೆ ಕಂತೆಗಳ ಒತ್ತಟ್ಟಿಗಿಟ್ಟು
ಮಾವಿನೆಲೆ ತೋರಣವ ಬಾಗಿಲಿಗೆ ಕಟ್ಟು |
ಬೇವು-ಬೆಲ್ಲಗಳೆ ಜೀವನದ ಚೌಕಟ್ಟು
ಬಂದುದನೆ ಕಂಡುಂಡು ತಾಳುತಿರು ಮೂಢ ||



ಶುಕ್ರವಾರ, ಮಾರ್ಚ್ 16, 2018

ಮೂಢ ಉವಾಚ - 384

ದಿವ್ಯದೇಹದ ಒಡೆಯ ಬಯಸಿರಲು ಮುಕ್ತಿಯನು
ಯಾತ್ರೆಯದು ಸಾಗುವುದು ಧರ್ಮದಾ ಮಾರ್ಗದಲಿ |
ಹುಟ್ಟು ಸಾವಿನ ಚಕ್ರ ಉರುಳುವುದು ಅನವರತ
ಹಿತವಾದ ದಾರಿಯನು ಆರಿಸಿಕೊ ಮೂಢ || 



ಗುರುವಾರ, ಮಾರ್ಚ್ 8, 2018

ಮೂಢ ಉವಾಚ - 383

ಸತ್ಯಜ್ಞಾನದ ಅರಿವ ಸರ್ವಮೂಲದಿ ಪಡೆದು
ಅಂತರಂಗದೊಳಿರಿಸೆ ದೇವನವ ಕಾಣುವನು |
ಕಣ್ಣಿರುವ ಕುರುಡನು ಕಿವಿಯಿರುವ ಕಿವುಡನು
ಪಾಪಮಾರ್ಗದಿ ನಡೆದು ಬೀಳುವನು ಮೂಢ || 




ಶನಿವಾರ, ಮಾರ್ಚ್ 3, 2018

ಮೂಢ ಉವಾಚ - 382

ಮೇಲೇರು ಎಲೆ ಜೀವ ಕೆಳಗೆ ಜಾರದಿರು
ಜೀವಿಸುವ ದಾರಿಯನು ದೇವ ತೋರುವನು |
ಧರ್ಮದಲಿ ಬಾಳಿ ಇಳಿಯುವ ಹೊತ್ತಿನಲಿ
ಅನುಭವದ ಪಾಕವನು ವಿತರಿಸೆಲೊ ಮೂಢ || 




ಶುಕ್ರವಾರ, ಮಾರ್ಚ್ 2, 2018

ಮೂಢ ಉವಾಚ - 381

ನಿಲ್ಲದಿರಲೀ ನಡಿಗೆ ಬೀಳದಿರು ಕೆಳಗೆ
ಇಹದಲಿವೆ ಕಾರ್ಯಗಳು ಅಂಜದಿರು ಸಾವಿಗೆ |
ಹಗಲಿನಲಿ ಸೂರ್ಯನೊಲು ರಾತ್ರಿಯಲಿ ಅಗ್ನಿಯೊಲು
ಬೆಳಗುವಂತಹ ವರವ ಕೋರಿಕೊಳೊ ಮೂಢ ||