ಸೋಮವಾರ, ಫೆಬ್ರವರಿ 19, 2018

ಮೂಢ ಉವಾಚ - 380

ಸಾಧಕನು ಬಲ್ಲಿದರ ನೆರವನ್ನು ಕೋರುವನು
ಸನ್ಮಾರ್ಗ ತೋರೆಂದು ಬಿನ್ನಹವ ಮಾಡುವನು |
ತಿಳಿದವರ ಆಶ್ರಯದಿ ತಿಳಿವು ಪಡೆಯುವನವನು
ಮುಕ್ತಿ ಮಾರ್ಗಕೆ ದಾರಿ ಕಾಣುವನು ಮೂಢ || 



ಮೂಢ ಉವಾಚ - 379

ಮೊದಲಿನಂತುದಿಸುವರು ರವಿ ಸೋಮರು
ತಿರುತಿರುಗಿ ಜನಿಸುವುವು ಭೂಮ್ಯಾಕಾಶಗಳು |
ಎಡೆಬಿಡದ ಸೋಜಿಗಕೆ ಮೊದಲು ಕೊನೆಯಿಲ್ಲ
ಕೊನೆ ಮೊದಲಿರದವನ ಆಟವಿದು ಮೂಢ || 



ಬುಧವಾರ, ಫೆಬ್ರವರಿ 7, 2018

ಮೂಢ ಉವಾಚ - 378

ಸಕಲಕೆಲ್ಲಕು ಮೊದಲು ತಾಯಿ ತಾ ಪ್ರಕೃತಿಯು
ಆದಿಯೇ ಇರದುದಕೆ ಕೊನೆಯೆಂಬ ಸೊಲ್ಲಿಲ್ಲ |
ದೇವನೊಲುಮೆಯಿದು ಜೀವಕಾಶ್ರಯದಾತೆ
ಜೀವಿಗಳೆ ಮಾಧ್ಯಮವು ಪ್ರಕೃತಿಗೆ ಮೂಢ || 



ಸೋಮವಾರ, ಫೆಬ್ರವರಿ 5, 2018

ಮೂಢ ಉವಾಚ - 377

ಇದ್ದುದೆಲ್ಲವು ಅಂದೊಮ್ಮೆ ಜಡರೂಪಿ ದ್ರವವಂತೆ
ಕತ್ತಲೆಯ ಮಡುವಿನಲಿ ಲಕ್ಷಣವೆ ಇರದಿರಲು |
ಸುತ್ತೆಲ್ಲ ಮುಚ್ಚಿರಲು ತಾಮಸವೆ ಮೆರೆದಿರಲು
ಒಂದಾಗಿಸಿದ ಮಹಿಮೆ ಅವನೊಲುಮೆ ಮೂಢ || 



ಶನಿವಾರ, ಫೆಬ್ರವರಿ 3, 2018

ಮೂಢ ಉವಾಚ - 376

ಸಾವೆಂಬುದಿರಲಿಲ್ಲ ಅಮರತ್ವವಿನ್ನೆಲ್ಲಿ
ರಾತ್ರಿಯೇ ಇರದಾಗ ಹಗಲು ಮತ್ತೆಲ್ಲಿ |
ಉಸಿರೆಂಬುದಿರದೆ ಬದುಕಿದ್ದ ವಿಸ್ಮಯಕೆ
ಕಾರಣವು ಅಮರ ಸಂಗತಿಯೊ ಮೂಢ || 






ಗುರುವಾರ, ಫೆಬ್ರವರಿ 1, 2018

ಮೂಢ ಉವಾಚ - 375

ಸತ್ಯಾಸತ್ಯವಿರಲಿಲ್ಲ ಶೂನ್ಯ ತಾ ಮೊದಲು ಇರಲಿಲ್ಲವಂತೆ
ಲೋಕವೆಲ್ಲಿಯದಂತೆ ಆಗಸವು ಮೇಲೆ ಇರಲಿಲ್ಲವಂತೆ |
ಇದ್ದಂತಹುದೇನೋ ಗಹನ ಗಂಭೀರ ವಿಸ್ಮಯವದಂತೆ
ಆರ ಆಶ್ರಯದಲಿತ್ತೋ ಅರಿತವರಿಹರೆ ಮೂಢ || 
-ಕ.ವೆಂ.ನಾ.