ಬುಧವಾರ, ಜನವರಿ 31, 2018

ಮೂಢ ಉವಾಚ - 374

ಅಮರನಲ್ತೆ ಕತ್ತಲೆಯನೋಡಿಸುವ ಬೆಳಕು ನೀನಲ್ತೆ
ನೀನಲ್ತೆ ನಿರ್ಮಲನು ತಿಳಿವು ತೋರುವ ಅರಿವು ನೀನಲ್ತೆ |
ಸರಿದಾರಿಯಲಿ ಸಮನಿಹನ ಹಿಂದಿಕ್ಕಿ ಅಡಿಯಿಡಲು
ಅಡ್ಡಿ ನಿನಗೇನಿಹುದೊ ಕಾಣೆ ಮೂಢ || 



ಶನಿವಾರ, ಜನವರಿ 27, 2018

ಮೂಢ ಉವಾಚ - 373

ಸತ್ವ ರಜೋ ತಮಗಳ ಕಟ್ಟುಗಳು ಬಿಗಿದಿರಲು
ತನು ಮನ ವಚನಗಳು ಬಿಡದೆ ಕಾಡಿರಲು |
ವಿಚಾರಿ ತಾನವನು ದೇವನ ಮೊರೆ ಹೊಕ್ಕು
ತನ್ನ ಬಂಧನವ ತಾನೆ ಮುರಿವನೋ ಮೂಢ ||





ಶುಕ್ರವಾರ, ಜನವರಿ 26, 2018

ಮಾಡಿದ್ದುಣ್ಣೋ ಮಹರಾಯ! - As you sow, so shall you reap!

ಎಂಥ ಸತ್ಯ ಎಂಥ ಸತ್ಯ ಎಂಥ ಸತ್ಯವು |
ಅಟ್ಟಿದ್ದೇ ಉಣಬೇಕು ಎಂಬ ಸತ್ಯವು || ಪ ||

ಒಂಬತ್ತು ಬಾಗಿಲಿನ ದೇವಮಂದಿರ
ಮಂದಿರದ ಅಧಿಪತಿಯೆ ಸತ್ಯಸುಂದರ |
ಸುತ್ತೆಲ್ಲ ಹರಿದಿಹುದು ನವರಸಧಾರಾ
ಮಾಯೆಯ ಮುಸುಕಿನಲಿ ಜೀವನಸಾರ || ೧ ||

ಮಂದಿರದ ಒಳಗಿಹುದು ಕಾಣದ ಪಾತ್ರೆ
ಅಂಕಿಲ್ಲದ ಡೊಂಕಿಲ್ಲದ ಸೋರದ ಪಾತ್ರೆ |
ದೇವನ ಲೆಕ್ಕದಲಿ ದೋಷವೆಂಬುದಿಲ್ಲ
ಬೇಯುತಿದೆ ಪಾತ್ರೆಯಲಿ ಮಾಡಿದಡುಗೆಯೆಲ್ಲ || ೨ ||

ಮಾಡಿದ ಕರ್ಮವದು ಬೆನ್ನನು ಬಿಡದು
ಧನಕನಕ ಬಂಧು ಬಳಗ ನೆರವಿಗೆ ಬರದು |
ಅಟ್ಟಡುಗೆಯುಣ್ಣದೆ ವಿಧಿಯೆ ಇಲ್ಲವು
ರಸಪಾಕವ ಮಾಡುವುದೆ ಇರುವ ದಾರಿಯು || ೩ ||
-ಕ.ವೆಂ.ನಾ.
*************
ಪ್ರೇರಣೆ:
ನ ಕಿಲ್ಬಿಷಮತ್ರ ನಾಧಾರೋ ಅಸ್ತಿ ನ ಯನ್ಮಿತ್ರೈಃ ಸಮಮಮಾನ ಏತಿ |
ಅನೂನಂ ಪಾತ್ರಂ ನಿಹಿತಂ ನ ಏತತ್ಪಕ್ತಾರಂ ಪಕ್ವಃ ಪುನರಾ ವಿಶಾತಿ ||  (ಅಥರ್ವ.೧೨.೩.೪೮)


     ಅರ್ಥ:  ಈಶ್ವರೀಯ ನ್ಯಾಯವಿಧಾನದಲ್ಲಿ ಯಾವ ಒಡಕೂ, ದೋಷವೂ ಇಲ್ಲ. ಬೇರೆ ಯಾವ ಆಧಾರವೂ ಇಲ್ಲ. ಸ್ನೇಹಿತರ ಮಧ್ಯೆ ಸೇರಿಕೊಂಡು, ಕ್ಷೇಮವಾಗಿದ್ದೇನೆಂದುಕೊಂಡು ಮೋಕ್ಷಕ್ಕೆ ಸೇರುತ್ತೇನೆ ಎಂಬುದೂ ಕೂಡ ಇಲ್ಲ. ನಮ್ಮ ಈ ಒಡಕಿಲ್ಲದ ಅಂತಃಕರಣದ ಪಾತ್ರೆ ಗೂಢವಾಗಿ ಇಡಲ್ಪಟ್ಟಿದೆ. ಬೇಯಿಸಿದ ಅನ್ನ (ಕರ್ಮಫಲವಿಪಾಕ) ಅದನ್ನು ಪಾಕ ಮಾಡಿದವನನ್ನು ಪುನಃ ಮರಳಿ ಪ್ರವೇಶಿಸಿಯೇ ತೀರುತ್ತದೆ.

ಮಂಗಳವಾರ, ಜನವರಿ 23, 2018

ಮೂಢ ಉವಾಚ - 372

ದೇವನಿಟ್ಟ ಪಾತ್ರೆಯದು ಅಂಕಿಲ್ಲ ಡೊಂಕಿಲ್ಲ
ಬೇಯುತಿಹುದು ಪಾತ್ರೆಯಲಿ ಮಾಡಿದಡುಗೆಯೆಲ್ಲ |
ಮಾಡಿದ ಕರ್ಮವದು ಬೆನ್ನನು ಬಿಡದು
ಅಟ್ಟಡುಗೆಯುಣ್ಣದೆ ವಿಧಿಯಿಲ್ಲ ಮೂಢ ||






ಶುಕ್ರವಾರ, ಜನವರಿ 19, 2018

ಮೂಢ ಉವಾಚ - 371

ಬಲಶಾಲಿ ನೀನಾಗು ನಿನ್ನ ಬಲವೇ ಬಲವು 
ಸುಕರ್ಮವನೆ ಮಾಡಿ ಸಂತಸವ ನೀ ಕಾಣು |
ಉತ್ಥಾನ ಪತನಕ್ಕೆ ಪರರು ಕಾರಣರಲ್ಲ
ನಿನ್ನುದ್ಧಾರ ನಿನ್ನಿಂದಲೇ ಮೂಢ ||