ಮಂಗಳವಾರ, ಅಕ್ಟೋಬರ್ 24, 2017

ಮೂಢ ಉವಾಚ - 369

ನೀ ತಂದೆ ಒಬ್ಬನಿಗೆ ಒಬ್ಬನಿಗೆ ಮಗನು
ಒಬ್ಬನಿಗೆ ಅಣ್ಣ ನೀನೊಬ್ಬನಿಗೆ ತಮ್ಮನು |
ನೀನೊಬ್ಬನೇ ಇದ್ದರೇನ್ ಪಾತ್ರಗಳು ಹಲವು
ಜನ್ಮಗಳು ಹಲವಿರಲು ಜೀವವೊಂದೇ ಮೂಢ ||


ಸೋಮವಾರ, ಅಕ್ಟೋಬರ್ 23, 2017

ಮೂಢ ಉವಾಚ - 368

ನೀನೆ ಹೆಣ್ಣಾಗಿರುವೆ ನೀನೆ ಗಂಡಾಗಿರುವೆ 
ಎಲೆ ಜೀವ ನೀನಪ್ಪಿ ಒಪ್ಪಿದಾ ತನುವಿನಂತಪ್ಪೆ |
ಮುಪ್ಪಡರಿ ಕೋಲೂರಿ ಹೊಸ ದಾರಿ ಅರಸಿರಲು
ಲೋಕದೆಲ್ಲೆಡೆ ನಿನ್ನ ದಿಟ್ಟಿಯೋ ಮೂಢ ||


ಭಾನುವಾರ, ಅಕ್ಟೋಬರ್ 22, 2017

ಮೂಢ ಉವಾಚ - 367

ಆ ಮಾರ್ಗ ಈ ಮಾರ್ಗ ಸುತ್ತಿ ಬರುವುದು ಜೀವ
ಮನುಜನೋ ಪ್ರಾಣಿಯೋ ಮತ್ತೊಂದು ಮಗದೊಂದು |
ಇಂದ್ರಿಯಕೆ ಇಂದ್ರನ ಅಮರ ಜೀವಾತ್ಮನ
ನಡೆಗೆ ಕಾರಣವು ಗೂಢವೋ ಮೂಢ || 



ಸೋಮವಾರ, ಅಕ್ಟೋಬರ್ 16, 2017

ಮೂಢ ಉವಾಚ - 366

ಸತ್ತವನ ಜೀವಕ್ಕೆ ಸಾವಿಲ್ಲ ನೋಡಾ
ಸಾಯಲಿಹ ಮತ್ತೊಂದು ದೇಹವನೆ ಸೇರುವುದು |
ಕರ್ಮವನೆ ಅನುಸರಿಸಿ ಅನ್ನ-ಜಲ ಕಾಣವುದು
ಜೀವದಾನಿಯ ಮರ್ಮವೆಂತಿಹುದೊ ಮೂಢ || 



ಭಾನುವಾರ, ಅಕ್ಟೋಬರ್ 15, 2017

ಮೂಢ ಉವಾಚ - 365

ಮನೋವಾಗಿಂದ್ರಿಯಗಳನಂಕಿಸುವುದೊಲವಿನಲಿ
ದೇಹದಲಿ ನೆಲೆಸಿರುವ ಅಣುರೂಪಿ ಚೇತನ |
ದನಕರುಗಳನಂಕಿಸುವ ದಂಡಗಳ ತೆರದಿ
ಇಂತಪ್ಪ ಚೇತನರ ಒಡೆಯನಾರೋ ಮೂಢ || 





ಶನಿವಾರ, ಅಕ್ಟೋಬರ್ 14, 2017

ಮೂಢ ಉವಾಚ - 364

ಕಮರಿ ಹೋಗುವ ತನುವ ಕಸುವು ತಾನಾಗಿಹನು
ಜೀವಜ್ಯೋತಿಯೆ ಅವನು ಅಮರ ಶಕ್ತಿಯೆ ಅವನು |
ದೇಹದೊಂದಿಗೆ ಬೆಳೆದು ತನ್ನಿರುವ ತೋರುವನು
ಅವನಿಲ್ಲದಿರುವಲ್ಲಿ ಬೆಳಕೆಲ್ಲಿ ಮೂಢ || 



ಶುಕ್ರವಾರ, ಅಕ್ಟೋಬರ್ 13, 2017

ಮೂಢ ಉವಾಚ - 363

ಜೀವ ತಾ ಧರಿಸಿರಲು ಮೂಳೆ ಮಾಂಸದ ತಡಿಕೆ
ಬಗೆ ಬಗೆಯಲಾಡಿಹುದು ಪಂಚಭೂತದ ಗೊಂಬೆ |
ಕಾಣುವವನಾಟಕೆ ಕಾಣದವ ಕಾರಣನೆ
ಒಗಟಿಗುತ್ತರಿಪ ಗುರುವೆಲ್ಲಿಹನೊ ಮೂಢ || 



ಗುರುವಾರ, ಅಕ್ಟೋಬರ್ 12, 2017

ಮೂಢ ಉವಾಚ - 362

ಒಂದನೊಂದಗಲಿರದ ಸೊಗದ ಹಕ್ಕಿಗಳೆರಡು
ಒಂದೆ ಕೊಂಬೆಯಲಿ ಆಶ್ರಯವ ಪಡೆದಿಹವು |
ಫಲವ ಸವಿಯುತಿಹುದೊಂದು ಮತ್ತೊಂದು ಸಾಕ್ಷಿ
ಜೀವಾತ್ಮ ಪರಮಾತ್ಮರವರಲ್ತೆ ಮೂಢ || 





ಮಂಗಳವಾರ, ಅಕ್ಟೋಬರ್ 3, 2017

ಮೂಢ ಉವಾಚ - 361

ಹಿಂದೆ ಇರದಿಹ ಬಂಡಿ ಮುಂದೆ ಇರದೀ ಬಂಡಿ
ಈಗಿನಾ ಬಂಡಿಯಿದು ಮಾಯಕಾರದ ಬಂಡಿ |
ಬಂಡಿ ಮುಕ್ಕಾದೊಡನೆ ಒಡೆಯ ಬಿಟ್ಟೋಡುವನು
ಹೊಸ ಬಂಡಿ ಎಂತಿಹುದೊ ಕಂಡಿಹೆಯ ಮೂಢ || 

ಸೋಮವಾರ, ಅಕ್ಟೋಬರ್ 2, 2017

ಮೂಢ ಉವಾಚ - 360

ಅಂದ ಚಂದದ ಬಂಡಿ ನವರಸದ ಬಂಡಿ
ಮೈಮರೆಸಿ ಕಣ್ತಣಿಸಿ ಚಿಮ್ಮಿ ಹಾರುವ ಬಂಡಿ |
ಬಂಡಿ ತಾ ಓಡುವುದು ತನ್ನಿಚ್ಛೆಯಿಂದಲ್ಲ
ಬಂಡಿಯೋಡುವುದು ನಿನಗಾಗಿ ಮೂಢ ||