ಶುಕ್ರವಾರ, ಸೆಪ್ಟೆಂಬರ್ 29, 2017

ಮೂಢ ಉವಾಚ - 359

ಕುಜನ ಮರ್ದನಕಾಗಿ ಸುಜನ ರಕ್ಷಣೆಗಾಗಿ
ದೇವ ಬಂದಾನೆಂದು ಕಾತರಿಸಿ ಕಾಯುವರು |
ಎಂದೆಂದು ಇರುವವನು ಹೊಸದಾಗಿ ಬರುವನೆ
ಅವನೆ ನಿನ್ನೊಳಗಿಹನು ಕಾಣು ಮೂಢ || 

ಗುರುವಾರ, ಸೆಪ್ಟೆಂಬರ್ 28, 2017

ಮೂಢ ಉವಾಚ - 358

ಸಮಾಧಾನದಲಿ ತಿಳಿಯಹೇಳಲು ಬೇಕು
ದಾನವನು ನೀಡಿ ದಾರಿಗೆಳೆತರಲು ಬೇಕು |
ಮಂತ್ರ ತಂತ್ರವ ಹೂಡಿ ಬಗ್ಗಿಸಲು ಬೇಕು
ಜಗ್ಗದಿರೆ ದಂಡವಿದೆ ಎತ್ತಿಕೋ ಮೂಢ || 

ಬುಧವಾರ, ಸೆಪ್ಟೆಂಬರ್ 27, 2017

ಮೂಢ ಉವಾಚ - 357

ಸಿಕ್ಕಿರುವ ಬಂಡಿಯನು ಸೊಗದಿಂದ ಬಳಸಿರಲು
ತಲುಪಬೇಕಿರುವೆಡೆಗೆ ತಲುಪುವೆಯೊ ನೀನು |
ಬಂಡಿ ಹೋದೆಡೆಯಲ್ಲಿ ಹೋದೆಯಾದರೆ ಕೆಟ್ಟೆ
ಬಿದ್ದರೆದ್ದೇಳುವುದು ಕಷ್ಟವೋ ಮೂಢ || 

ಮಂಗಳವಾರ, ಸೆಪ್ಟೆಂಬರ್ 26, 2017

ಮೂಢ ಉವಾಚ - 356

ಕೊಟ್ಟಿಹನು ಪರಮಾತ್ಮ ಬಣ್ಣ ಬಣ್ಣದ ಬಂಡಿ
ಚಣಚಣಕು ಹೊಸ ಮಿರುಗು ಮೆರುಗಿನಾ ಬಂಡಿ |
ಬಂಡಿಗೊಡೆಯನೆ ನೀನು ಬಂಡಿ ನೀನಲ್ಲ
ದಿಕ್ಕು ದೆಸೆಯಿರದೆ ಓಡದಿರು ಮೂಢ || 

ಸೋಮವಾರ, ಸೆಪ್ಟೆಂಬರ್ 25, 2017

ಮೂಢ ಉವಾಚ - 355

ಗೊತ್ತು ಗುರಿಯಿರದೆ ನಡೆದಿರಲು ಬಂಡಿ
ಗುರಿಯು ಮರೆಯಾಗಿ ಕೊರಗುವೆಯೊ ಕೊನೆಗೆ |
ಒಡೆಯ ತಾ ಮಲಗಿರಲು ಬಂಡಿ ಮಾಡೀತೇನು
ಗುಂಡಿಗೊಟರಲಿ ಬಿದ್ದು ನರಳುವೆಯೊ ಮೂಢ || 

ಭಾನುವಾರ, ಸೆಪ್ಟೆಂಬರ್ 24, 2017

ಮೂಢ ಉವಾಚ - 354

ತಿಳಿದಿರದ ಹಾದಿಯಲಿ ಸಾಗಿಹುದು ಬಂಡಿ
ಹಿಂದೆನಿತು ಬಂಡಿಗಳೊ ಲೆಕ್ಕವಿಟ್ಟವರ್ಯಾರು |
ಪಯಣವದು ಮುಗಿಯದಿರೆ ಮುಂದೆನಿತೊ ಬಂಡಿಗಳು
ಒಳ್ಳೆಯ ಹಾದಿಯಲಿ ಸಾಗು ನೀ ಮೂಢ || 

ಶುಕ್ರವಾರ, ಸೆಪ್ಟೆಂಬರ್ 22, 2017

ಮೂಢ ಉವಾಚ - 353

ಎಲ್ಲಿಂದ ಹೊರಟಿಹುದೊ ತಲುಪುವುದು ಎಲ್ಲಿಗೋ
ಅನವರತ ಸಾಗಿರುವ ಗೊತ್ತಿರದ ಪಯಣ |
ನಿಲ್ಲದೀ ಪಯಣಕೆ ಬಂಡಿಗಳು ಹಲವು
ಬಂಡವಾಳಕೆ ತಕ್ಕ ಬಂಡಿಯಿದೆ ಮೂಢ || 

ಗುರುವಾರ, ಸೆಪ್ಟೆಂಬರ್ 21, 2017

ಮೂಢ ಉವಾಚ - 352

ನಾವು ಹೆಣೆಯುವ ಕಥೆಗೆ ನಾವೆ ನಾಯಕರು
ನಮಗಿಂತ ಉತ್ತಮರು ಬೇರಾರು ಇಹರು |
ಹೊಗಳಿಕೊಳ್ಳುವ ರೋಗಕೆಲ್ಲಿಹುದು ಮದ್ದು
ನಗುವವರ ಎದುರಿನಲಿ ಬೀಳದಿರು ಮೂಢ || 

ಭಾನುವಾರ, ಸೆಪ್ಟೆಂಬರ್ 17, 2017

ಮೂಢ ಉವಾಚ - 351

ಮುಂದೊಮ್ಮೆ ಒಳಿತ ಕಂಡೆ ಕಾಣವೆವೆಂದು
ದುಗುಡ ದುಮ್ಮಾನಗಳ ಸಹಿಸಿಹರು ಇಂದು |
ಮೇಲೇರುವಾ ಆಸೆ ಜೀವಿಯ ಗುಣವಹುದು
ಆಸೆಯಲೆ ಬದುಕಿಹುದು ಗೊತ್ತಿಹುದೆ ಮೂಢ|| 

ಶನಿವಾರ, ಸೆಪ್ಟೆಂಬರ್ 16, 2017

ಮೂಢ ಉವಾಚ - 350

     ಇದು ಮೂಢನ ಪ್ರಲಾಪದ 350ನೆಯ ಕಂತು. ಪ್ರಲಾಪಕ್ಕೆ ಕಾರಣರಾದ ವ್ಯಕ್ತಿಗಳು, ವಿಚಾರಗಳು, ಸಂಗತಿಗಳೇ ನನಗೆ ಗುರುಗಳು, ಪ್ರೇರಕರು. ಓದುತ್ತಿರುವ, ಮೆಚ್ಚುತ್ತಿರುವ, ಪ್ರತಿಕ್ರಿಯಿಸುತ್ತಿರುವ ಎಲ್ಲರಿಗೂ ವಂದನೆಗಳು.
-ಕ.ವೆಂ.ನಾ.

ಸಕಲರನು ಪಾಲಿಪುದು ಪೊರೆಯುವುದೆ ಧರ್ಮ
ಜಗದಗಲ ಜಗದುದ್ದ ಭೇದವೆಣಿಸದ ಮರ್ಮ |
ಕೈಹಿಡಿದು ಮೇಲೆತ್ತಿ ನಿಲಿಸುವುದೆ ಧರ್ಮ
ಇಹಪರಕೆ ಸಾಧನವು ಕರ್ಮವೋ ಮೂಢ || 

ಗುರುವಾರ, ಸೆಪ್ಟೆಂಬರ್ 14, 2017

ಮೂಢ ಉವಾಚ - 349

ನಂಬಿಕೆಯ ಮಿತ್ರರಲಿ ಮತ್ಸರವು ಒಳನುಸುಳೆ
ಗೆಳೆತನವ ಕೊಳೆಸುವ ಅರ್ಬುದವು ಕಾಡುವುದು|
ಚಣಚಣಕೆ ನೋವಿನಲಿ ನರಳುವ ಪಾಡೇಕೆ
ಚಿಗುರಿನಲೆ ಚಿವುಟಿಬಿಡು ಮಚ್ಚರವ ಮೂಢ|| 

ಬುಧವಾರ, ಸೆಪ್ಟೆಂಬರ್ 13, 2017

ಮೂಢ ಉವಾಚ - 348

ಬ್ರಹ್ಮಾನುಭವದಲ್ಲಿ ಅಚಲನಾಗಿರುತಿರಲು
ಪರಮಾನಂದವದು ಸನಿಹದಲಿರದೇನು |
ಆದಿಗುರು ಶಂಕರರು ತೋರಿರುವ ಮಾರ್ಗ
ಮನುಜಕುಲಕಿದು ಉತ್ತಮವು ಮೂಢ || 

ಮಂಗಳವಾರ, ಸೆಪ್ಟೆಂಬರ್ 12, 2017

ಮೂಢ ಉವಾಚ - 347

ಪೂರ್ವಕರ್ಮಗಳ ಫಲವ ಅನುಭವಿಸಬೇಕು
ಒದಗುವ ಫಲದಿಂದ ಹೆದರದಿರಬೇಕು |
ಕರ್ಮಫಲವನನುಭವಿಸಿ ಕಳೆದಿರಲು
ಮುಕ್ತಿಪಥದಲಿ ನೀನು ಮುನ್ನಡೆವೆ ಮೂಢ || 


ಭಾನುವಾರ, ಸೆಪ್ಟೆಂಬರ್ 10, 2017

ಮೂಢ ಉವಾಚ - 346

ಪರಮಾತ್ಮನಲಿ ಚಿತ್ತ ಲೀನವಿರಿಸಲುಬೇಕು
ಎಲ್ಲೆಲ್ಲು ಅವನನ್ನೆ ಕಾಣುತಿರಬೇಕು |
ಜಗವಿದು ಮನಸಿನಾಟವೆಂದೆಣಿಸುತಿರಲಾಗೆ
ಮುಕ್ತಿಪಥದಲಿ ನೀನು ಮುನ್ನಡೆವೆ ಮೂಢ || 

ಭಾನುವಾರ, ಸೆಪ್ಟೆಂಬರ್ 3, 2017

ಮೂಢ ಉವಾಚ - 345

ನಿರ್ಲಿಪ್ತಭಾವವನು ಹೊಂದಿದವನಾಗಿ
ನಿಂದಾಪನಿಂದೆಗಳ ಗಣಿಸದಿರಬೇಕು |   
ಏಕಾಂತದಲಿ ಸುಖವನರಸುತಿರಲಾಗಿ
ಮುಕ್ತಿಪಥದಲಿ ನೀನು ಮುನ್ನಡೆವೆ ಮೂಢ || 

ಶುಕ್ರವಾರ, ಸೆಪ್ಟೆಂಬರ್ 1, 2017

ಮೂಢ ಉವಾಚ - 344

ತಾನಾಗಿ ಬಂದುದೇ ಪರಮಾನ್ನವೆನಬೇಕು
ಶೀತೋಷ್ಣ ಆದಿಗಳ ಸಹಿಸಿಕೊಳಬೇಕು |
ಅನುಚಿತ ಮಾತುಗಳನಾಡದಿರೆ ಮನುಜ
ಮುಕ್ತಿಪಥದಲಿ ನೀನು ಮುನ್ನಡೆವೆ ಮೂಢ ||