ಭಾನುವಾರ, ಏಪ್ರಿಲ್ 30, 2017

ಮೂಢ ಉವಾಚ - 243

ಹೃದಯವಿರದ ಬುದ್ಧಿ ಅಪಾಯ ತಂದೀತು
ಸ್ವಾರ್ಥ ಮೇಲಾಗಿ ಲೋಕಕಪಕಾರಿಯಾದೀತು|
ಹೃದಯದ ಒಲವಿರಲು ಬುದ್ಧಿ ಜೊತೆಗಿರಲು
ಲೋಕವೊಪ್ಪಿ ಅಹುದೆನದೆ ಮೂಢ||


ಶನಿವಾರ, ಏಪ್ರಿಲ್ 29, 2017

ಮೂಢ ಉವಾಚ - 242

ಬುದ್ಧಿಗೂ ಹೃದಯಕೂ ಎನಿತೊಂದು ಅಂತರ
ಬುದ್ಧಿಯದು ಚಮತ್ಕಾರ ಹೃದಯದಿಂದುಪಕಾರ|
ಬುದ್ಧಿಯ ಬಲದಲಿ ಜಗವನೆ ಗೆಲಲೇಕೆ
ಹೃದಯವಂತ ಜಗದೊಡೆಯ ಮೂಢ||



ಶುಕ್ರವಾರ, ಏಪ್ರಿಲ್ 28, 2017

ಮೂಢ ಉವಾಚ - 241

ಲೌಕಿಕ ಸುಖಕಾಗಿ  ಹೊರಗೆ ಸುತ್ತಲು ಬೇಕು
ಅಂತರಂಗದ ಸುಖಕೆ ಒಳಗೆ ಸಾಗಲು ಬೇಕು|
ಸುಖ ದುಃಖಗಳೆರಡು ಅವಳಿ ಜವಳಿಗಳು
ಒಂದು ಬಿಟ್ಟಿನ್ನೊಂದಿಲ್ಲ ಮೂಢ||


ಗುರುವಾರ, ಏಪ್ರಿಲ್ 27, 2017

ಮೂಢ ಉವಾಚ - 240

ಸುಖ ಬೇಕು ಮನುಜನಿಗೆ ದುಃಖ ಬೇಡ
ಸುಖಿಯು ತಾ ಹೆಚ್ಚು ಸುಖ ಬಯಸುವನು|
ಬೇಡವೆನಿಸದ ದುಃಖಗಳೆರಗೆರಗಿ ಬರುತಿರಲು
ಸುಖವ ನಿನ್ನೊಳಗೆ ಅರಸು ಮೂಢ||


ಬುಧವಾರ, ಏಪ್ರಿಲ್ 26, 2017

ಮೂಢ ಉವಾಚ - 239

ನುಡಿದಂತೆ ನಡೆಯುವರು ಸಟೆಯನಾಡರು
ಚಿತ್ತದಲಿ ಶಾಂತಿ ಹಿರಿಯರಲಿ ಗೌರವ|
ಅಲೋಲುಪ ಅಚಾಪಲ ತ್ಯಾಗಿಯಾಗಿಹರು
ದೇವಮಾನವರವರೆ ಮೂಢ||




ಮಂಗಳವಾರ, ಏಪ್ರಿಲ್ 25, 2017

ಮೂಢ ಉವಾಚ - 238

ವಿರಳ ಮಾನವಜನ್ಮ ಪುಣ್ಯಪಾಪದ ಫಲವು 
ವಿರಳವು ಹುಟ್ಟಿನ ಮಹತಿ ಗುರಿಯರಿವು|
ವಿರಳರು ಅರಿವರಿತು ಸರಿದಾರಿ ಹಿಡಿವವರು
ವಿರಳಾತಿವಿರಳ ಮುಕ್ತಿ ಪಡೆವವರು ಮೂಢ|| 


ಸೋಮವಾರ, ಏಪ್ರಿಲ್ 24, 2017

ಮೂಢ ಉವಾಚ - 237

ಸಂಕಲ್ಪದಿಂ ಕಾಮ ಕಾಮಕಾಗಿ ಕರ್ಮ
ಕರ್ಮದಿಂ ಬಹುದು ಸುಖ ದುಃಖ ಪ್ರಾಪ್ತಿ|
ಪುನರಪಿ ಮರಣ ಪುನರಪಿ ಜನನ
ಸಂಸಾರ ಚಕ್ರಕೆ ಮೂಲ ಸಂಕಲ್ಪ ಮೂಢ||


ಭಾನುವಾರ, ಏಪ್ರಿಲ್ 23, 2017

ಮೂಢ ಉವಾಚ - 236

ಗುರುಹಿರಿಯರ ಗೌರವವಿಸದವ ಹಾಳು
ಒಳಿತಿನಲಿ ಹುಳುಕು ಹುಡುಕುವವ ಹಾಳು|
ಸಂಶಯಿಗೆ ಸುಖವಿಲ್ಲ ಇಹವಿಲ್ಲ ಪರವಿಲ್ಲ
ಪರರಿಗೂ ಅವನಿಂದ ಸುಖವಿಲ್ಲ ಮೂಢ||








ಮೂಢ ಉವಾಚ - 235

ಹಿತಮಿತದ ಮಾತು ಬಾಳಿಗಾಧಾರ
ಹಿತಮಿತದ ಆಹಾರ ಆರೋಗ್ಯಧಾರ|
ಹಿತಮಿತದ ಕರ್ಮ ಸೊಗಸಿನ ಮರ್ಮ
ಇತಿಮಿತಿಯಲಿರೆ ಬದುಕು ಹಿತ ಮೂಢ||


ಶುಕ್ರವಾರ, ಏಪ್ರಿಲ್ 21, 2017

ಮೂಢ ಉವಾಚ - 234

ತಿಳಿಯಾಗಿರಲಿ ಮನ ದೋಷವಿರದಿರಲಿ
ಆನಂದ ತುಂಬಿರಲಿ ಮಂದಹಾಸವದಿರಲಿ|
ರೋಷವದು ದೂರ ವಿವೇಕ ಬಳಿಯಿರಲಿ
ಮಾನಸ ತಪದ ಫಲವೊಲಿಯಲಿ ಮೂಢ||


ಗುರುವಾರ, ಏಪ್ರಿಲ್ 20, 2017

ಮೂಢ ಉವಾಚ - 233

ಬ್ರಾಹ್ಮಣನೆಂದರೆ ಬ್ರಹ್ಮನ ತಿಳಿದವ
ಶಮ ದಮ ತಪ ಶೌಚಗಳೊಡೆಯ|
ಶುದ್ಧಬುದ್ಧಿಯಲಿ ಜ್ಞಾನವನು ಪಡೆವ
ಭೇದವೆಣಿಸದವ ಬ್ರಾಹ್ಮಣನು ಮೂಢ||


ಮಂಗಳವಾರ, ಏಪ್ರಿಲ್ 18, 2017

ಮೂಢ ಉವಾಚ - 232

ಭಕ್ತಿಯೆಂಬುದು ಕೇಳು ಒಳಗಿರುವ ಭಾವ 
ಅಂತರಂಗದೊಳಿರುವ ಪ್ರೇಮಪ್ರವಾಹ|
ಮನವ ಮುದಗೊಳಿಪ ಆನಂದಭಾವ
ಭಕ್ತಿಯಲೆ ಆನಂದ ಭಕ್ತನಿಗೆ ಮೂಢ|| 


ಸೋಮವಾರ, ಏಪ್ರಿಲ್ 17, 2017

ಮೂಢ ಉವಾಚ - 231

ಸುಗಮ ಜೀವನಕೆ ಕಟ್ಟುಪಾಡುಗಳು ಬೇಕು 
ಮೀರಿದರೆ ಆಪತ್ತು ನೆಮ್ಮದಿಯು ಹಾಳು|
ಶಾಸ್ತ್ರವಿಧಿಗಳಿರಬೇಕು ಮಂಗಳವ ತರಲು
ವಿವೇಕದಿಂದನುಸರಿಸೆ ಸುಖವು ಮೂಢ||


ಭಾನುವಾರ, ಏಪ್ರಿಲ್ 16, 2017

ಮೂಢ ಉವಾಚ - 230

ನೂರು ದೇವರನು ನಂಬಿದೊಡೆ ಫಲವೇನು
ತನ್ನ ತಾ ನಂಬದಿರೆ ಬೀಳದಿಹರೇನು| 
ದೇವನನು ನಂಬಿ ವಿಶ್ವಾಸಜೊತೆಯಿರಲು
ಗರಿಮೆಯ ಸಿರಿಗರಿ ನಿನದೆ ಮೂಢ||


ಶನಿವಾರ, ಏಪ್ರಿಲ್ 15, 2017

ಮೂಢ ಉವಾಚ - 229

ವಿಶ್ವಾಸವಿರುವವರು ಇತಿಹಾಸ ರಚಿಸುವರು
ಅವರ ಇತಿಹಾಸವೇ ಜಗದ ಇತಿಹಾಸ|
ವಿಶ್ವಾಸದಿಂದುದಯ ಮನೋಬಲ ಚೇತನ
ಶ್ವಾಸವಿರಲಿ ಜೊತೆಗೆ ವಿಶ್ವಾಸವಿರಲಿ ಮೂಢ||

ಮೂಢ ಉವಾಚ - 228

ಕುಜನರೊಡನಾಡಿ ವಂಚನೆಯ ಗೈಯುವನು
ಪರರ ನೋವಿನಲಿ ಆನಂದ ಕಾಣುವನು|
ಆಲಸಿಕ ತಾನಾಗಿ ಪಶುವಿನಂತಾಡುವನು
ಅಯುಕ್ತನವನಸುರನೋ ಮೂಢ||


ಬುಧವಾರ, ಏಪ್ರಿಲ್ 12, 2017

ಮೂಢ ಉವಾಚ - 227

ನಾನೇ ಎಲ್ಲ ನಾನಿಲ್ಲದಿರಿಲ್ಲವೆಂಬಹಮಿಕೆ
ಪರರ ಜರೆವ ಗುಣ ಗುರುಹಿರಿಯರೆನದೆ|
ಬಯಸಿರಲು ಸಿಗದಿರೆ ಉಮ್ಮಳಿಪ ಕೋಪ
ಅಸೂಯೆ ಅಸುರರ ಆಸ್ತಿ ಮೂಢ||


ಮಂಗಳವಾರ, ಏಪ್ರಿಲ್ 11, 2017

ಮೂಢ ಉವಾಚ - 226

ಅಸುರರೆಲ್ಲಿಹರೆಂದು ಅರಸುವುದು ತರವೆ
ಅತಿಮಾನ ತೋರಿ ಮದದಿ ಮೆರೆಯುವರು|
ಹಿರಿಯರನೆ ನಿಂದಿಸಿ ಡಂಭ ತೋರುವರು 
ಪರರ ನೋಯಿಪರು ಅಸುರರೇ ಮೂಢ||


ಸೋಮವಾರ, ಏಪ್ರಿಲ್ 10, 2017

ಮೂಢ ಉವಾಚ - 225

ಗುರಿಯ ತಲುಪಲು ಕುಟಿಲೋಪಾಯ ಮಾಡಿ
ಪರರ ಮೆಚ್ಚ್ಚಿಸಲು ಡಂಭದಾಚರಣೆಯ ಮಾಡಿ |
ಕಾಮರಾಗಬಲದಿಂ ಕೀಳು ಫಲಕಾಗಿ ಹಂಬಲಿಪ
ಅಹಂಕಾರಿಗಳು ಸಾಧಕಾಸುರರು ಮೂಢ ||


ಭಾನುವಾರ, ಏಪ್ರಿಲ್ 9, 2017

ಮೂಢ ಉವಾಚ - 224

ಬಿತ್ತಿದಾ ಬೀಜದೊಲು ಬೆಳೆಯು 
ನೋಡುವ ನೋಟ ಕೇಳುವ ಮಾತು |
ಆಡುವ ಮಾತು ಸೇವಿಪಾಹಾರ
ಸಾತ್ವಿಕವಿರೆ ಸಾತ್ವಿಕನು ನೀ ಮೂಢ ||


ಶನಿವಾರ, ಏಪ್ರಿಲ್ 8, 2017

ಮೂಢ ಉವಾಚ - 223

ನೊಂದಮನಕೆ ಶಾಂತಿಯನು ನೀಡುವುದು
ಮನವ ನೋಯಿಸಿ ನರಳಿಸುವುದು ನಾಲಿಗೆ|
ಜೀವವುಳಿಸೀತು ಹಾಳುಗೆಡವೀತು 
ನಾಲಿಗೆಯದೆರಡಲಗಿನ ಕಠಾರಿ ಮೂಢ||


ಮೂಢ ಉವಾಚ - 222

ಎಲುಬಿರದ ನಾಲಿಗೆಯ ಮೆದುವೆಂದೆಣಿಸದಿರು
ಭದ್ರ ಹೃದಯವನು ಛಿದ್ರವಾಗಿಸಬಹುದು|
ಮನ ಮನೆಗಳ ಮುರಿದು ಕ್ಲೇಶ ತರಬಹುದು
ಕೆನ್ನಾಲಿಗೆಯ ತಣಿಪುದೆಂತೋ ಮೂಢ||