ಕವಿಮನದಾಳದಿಂದ
ಸೋಮವಾರ, ಮೇ 30, 2016
ಮೂಢ ಉವಾಚ - 181
ತಿಮಿರಾಂಧಕಾರವನು ಓಡಿಸುವ ಗುರುವು
ಸಾಧನೆಯ ಮಾರ್ಗ ತೋರುವನೆ ಗುರುವು |
ಸಂದೇಹ ಪರಿಹರಿಸಿ ತಿಳಿವು ಪಸರಿಸುವ
ಸದ್ಗುರುವೆ ದೇವರೂಪಿಯೋ ಮೂಢ ||
ಭಾನುವಾರ, ಮೇ 29, 2016
ಮೂಢ ಉವಾಚ - 180
ಜಾತಿಗವ ದೂರ ನೀತಿಗವ ದೂರ
ಕುಲವು ಅವಗಿಲ್ಲ ಗೋತ್ರ ಮೊದಲಿಲ್ಲ |
ದೇಶ ಕಾಲಗಳಿಲ್ಲ ನಾಮರೂಪಗಳಿಲ್ಲ
ಅವನಿಗವನೆ ಸಮನನ್ಯರಿಲ್ಲ ಮೂಢ ||
ಶನಿವಾರ, ಮೇ 28, 2016
ಮೂಢ ಉವಾಚ - 179
ಅರಿವಿಗಸದಳನು ಅಗೋಚರವಾಗಿಹನು
ಅಳತೆಗೆ ಸಿಲುಕನು ಬುದ್ಧಿಗೆ ನಿಲುಕನು |
ಅನಾದಿಯಾಗಿಹನು ಅನಂತನೆನಿಸಿಹನು
ಪರಿಶುದ್ದ ಪರಿಪೂರ್ಣ ಅವನೆ ಮೂಢ ||
ಗುರುವಾರ, ಮೇ 26, 2016
ಮೂಢ ಉವಾಚ - 178
ಆಗಸದ ಬಣ್ಣವದು ತೋರುವಂತಿಹುದೇನು
ನೀಲಿ ಕೆಂಪು ಕಪ್ಪಾಗಿ ತೋರುವುದೆ ಸೊಗಸು |
ಅರಿತವರು ಯಾರಿಹರು ಗಗನದ ನಿಜಬಣ್ಣ
ದೇವನೆಂತಿಹನೆಂದು ಗೊತ್ತಿಹುದೆ ಮೂಢ ||
ಮಂಗಳವಾರ, ಮೇ 24, 2016
ಮೂಢ ಉವಾಚ - 177
ದೇವನೆಲ್ಲಿಹನೆಂದು ಚಾರ್ವಾಕ ಕೇಳುವನು
ಎಲ್ಲೆಲ್ಲು ಅವನೆಂದು ಆಸ್ತಿಕನು ಹೇಳುವನು |
ಕಾಣದಿಹ ದೇವನಿಹನೆಂದು ಹೇಳಿಸುವ
ಶಕ್ತಿ ಯಾವುದದಚ್ಚರಿಯು ಮೂಢ ||
ಸೋಮವಾರ, ಮೇ 23, 2016
ಮೂಢ ಉವಾಚ - 176
ಹಣದಿಂದ ಸಿಗನು ಅಧಿಕಾರಕೆ ಬರನು
ವಿದ್ಯೆಗೆ ಬಾಗನು ಸುಂದರತೆಗೊಲಿಯನು |
ಚತುರತೆಗೆ ದಕ್ಕನು ಏನನಿತ್ತರೊಲ್ಲನು
ನಿಜ ಪ್ರೀತಿಗೊಲಿಯುವನು ಮೂಢ ||
ಭಾನುವಾರ, ಮೇ 22, 2016
ಮೂಢ ಉವಾಚ - 175
ಮಿತಿಯುಂಟೆ ದೇವನ ಕೊಡುಗೆ ಕರುಣೆಗೆ
ರವಿ ಸೋಮ ನೆಲ ಜಲ ವಾಯು ಆಗಸ |
ಪೂರ್ಣ ಜಗವನಿತ್ತಿಹನು ಸಕಲ ಜೀವಿಗೆ
ಬೇಧವೆಣಿಸದಾತನಿಗೆ ಶರಣಾಗು ಮೂಢ ||
ಶನಿವಾರ, ಮೇ 21, 2016
ಮೂಢ ಉವಾಚ - 174
ಬ್ರಹ್ಮಜ್ಞಾನಿ ತಿಳಿದಾನು ವಿಶ್ವವೇ ಭಗವಂತ
ಅಚ್ಚರಿಯ ಕಂಡಲ್ಲಿ ಅಗಾಧತೆಯ ಕಂಡಲ್ಲಿ |
ರವಿ ಸೋಮರಲಿ ವಾಯು ನೆಲ ಜಲದಲಿ
ದೇವನ ಕಾಣುವರು ನರರು ಮೂಢ ||
ನವೀನ ಪೋಸ್ಟ್ಗಳು
ಹಳೆಯ ಪೋಸ್ಟ್ಗಳು
ಮುಖಪುಟ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)