ಸೋಮವಾರ, ಜನವರಿ 28, 2019

ಗೊಡ್ಡು ಮುದುಕಿಯ ಸ್ವಗತ


ನೀವೇನು ಕಂಡಿರಿ ದಾದಿಯರೇ? ಏನು ಕಂಡಿರಿ?
ನನ್ನನ್ನು ಕಂಡು ಏನೆಂದು ಭಾವಿಸಿಹಿರಿ?
ಗೊಣಗುಡುವ ಗೊಡ್ಡು ಮುದುಕಿ, ಬುದ್ಧಿಯಿರದವಳು?
ಗೊತ್ತು ಗುರಿಯಿರದವಳು, ಕಣ್ಣುಮಂಜಿನವಳೆಂದೆ?

ಉದುರಿಸುತಾ ತಿನುವವಳು, ಉತ್ತರಿಸದವಳು?
ಸರಿಯಾಗಿ ತಿನ್ನೆಂದು ಗಟ್ಟಿದನಿಯಲಿ ಗದರಿಸಲು ನೀವು |
ಗಮನಿಸದಂತೆ ಇರುವವಳು? ನಿಮ್ಮ ಪರಿಯ ತಿಳಿಯದವಳು?
ಕಾಲುಚೀಲವೋ, ಪಾದರಕ್ಷೆಯೋ ಕಳೆಯುತಿರುವವಳು?

ಒಪ್ಪಲಿ, ಒಪ್ಪದಿರಲಿ, ನಿಮ್ಮಿಚ್ಛೆಯಂತೆ ಬಿಟ್ಟುಬಿಡುವವಳು
ಶುಚಿಗೊಳಿಸುವಾಗ, ತಿನ್ನಿಸುವಾಗ? ದೀರ್ಘ ದಿನವೊಂದು ಕಳೆಯಲೆಂದೆ?
ಅದೇ ನೀವು ತಿಳಿದಿರುವುದು? ಅದೇ ತಾನೇ ನೀವು ಕಂಡಿರುವುದು?
ಕಣ್ಣು ತೆರಿ ದಾದಿ, ನೀನು ನನ್ನನ್ನು ಕಾಣುತ್ತಿಲ್ಲ!  

ನಾನಾರೆಂದು  ಹೇಳುವೆನು ಕೇಳಿ, ಬಿಮ್ಮನೆ ಕುಳಿತುಕೊಂಡಿರುವಾಗ
ನಿಮ್ಮಿಚ್ಛೆಯಂತೆ ನಡೆಯುತಿರುವಾಗ, ನಿಮ್ಮಿಚ್ಛೆಯಂತೆ ತಿನ್ನುತಿರುವಾಗ!
ನಾನೊಬ್ಬ ಹತ್ತು ವರ್ಷದ ಹುಡುಗಿ, ಅಪ್ಪ -ಅಮ್ಮರ ಜೊತೆಗೆ
ಪ್ರೀತಿಯಲಿ ಕಾಣುವ ಸೋದರ-ಸೋದರಿಯರೊಡನೆ!

 ಹದಿನಾರರ ಹುಡುಗಿ ನಾನು, ಪಾದಗಳಲಿ ರೆಕ್ಕೆಯಿಹವು
ಪ್ರಿಯಕರನು ಬಹನೆಂದು ಕನಸ ಕಾಣುತಿರುವವಳು !
ಇಪ್ಪತ್ತರಲಿ ಮದುಮಗಳು, ಹೃದಯವದು ಹಾರಿ ಕುಣಿದಿಹುದು 
ಇತ್ತ ಭರವಸೆಗಳ ಕಾಪಿಡುವ ವಾಗ್ದಾನಗಳ ನೆನಪಿನಲಿ!

ಇಪ್ಪತ್ತೈದರಲಿ ನಾನೀಗ ನನ್ನದೇ ಮಗುವಿನ ತಾಯಿ
ಆಸರೆ ಬಯಸುವ ಮಗು, ಭದ್ರತೆಯನಿತ್ತಿರಲು ಸಂತಸದ ಮನೆಯು|
ಮೂವತ್ತರ ಹೆಣ್ಣೀಗ, ವೇಗದಲಿ ಮಗುವು ಬೆಳವಣಿಗೆ ಕಂಡಿಹುದು
ಒಬ್ಬರೊಬ್ಬರಲಿ ಬೆಸೆದಿರುವ ಬಂಧ, ಕೊನೆಯವರೆಗೂ ಇರಲಿ ಅನುಬಂಧ ||

ನನಗೀಗ ನಲವತ್ತು, ನನ್ನ ಮಕ್ಕಳು ಬೆಳೆದು ಹೊರಟುಹೋಗಿಹರು
ನನ್ನವನು ನನ್ನ ಜೊತೆಗೆ ಉಳಿದಿಹನು, ನನ್ನ ದುಃಖವನು ಮರೆಸಲೆಂದು|
ಐವತ್ತರಲಿ ಮತ್ತೊಮ್ಮೆ ಮಕ್ಕಳು, ನನ್ನ ಸುತ್ತಲೆ ತೊಡರಿ ಆಡಿಕೊಂಡಿಹರು
ಮತ್ತೊಮ್ಮೆ ಮಕ್ಕಳನು ತಿಳಿದೆವು, ನಾನು ಮತ್ತೆ ನನ್ನ ಪತಿರಾಯ ||

ಮೇಲೆ ಅಡರಿದವು ಕತ್ತಲೆಯ ದಿನಗಳು, ಅಸ್ತಂಗತನು ಪತಿರಾಯ 
ಭವಿಷ್ಯವನು ನೆನೆದು ಭಯದಿಂದ ನಡುಗಿಹೆನು|
ನನ್ನ ಮಕ್ಕಳು ಅವರವರ ಮಕ್ಕಳನು ನೋಡಿಕೊಂಡಿಹರು
ಹಳೆಯ ವರ್ಷಗಳನು, ಗೊತ್ತಿರುವ ಪ್ರೀತಿಯನು ನೆನೆಯುತಿಹೆನು||

ನಾನೀಗ ಮುದುಕಿ, ಪ್ರಕೃತಿಯು ಕ್ರೂರಿ
ನಗೆಪಾಟಲಿಗೆ ದೂಡಿದೀ ಮುದಿತನವೆನ್ನ ಮೂರ್ಖಳಂತಾಗಿಸಿತು|
ಕುಸಿಯುತಿಹ ದೇಹ, ಗತ್ತು ಗಾಂಭೀರ್ಯ ಹೊರಟುಹೋಗಿಹವು
ಒಂದೊಮ್ಮೆ ಹೃದಯವಿದ್ದೆಡೆಯಲ್ಲಿ ಇಹುದೀಗ ಒಂದು ಕಲ್ಲು ||

ಬಲ್ಲಿರಾ, ಈ ಮುದಿ ಶವದೊಳಗೊಬ್ಬ ಚಿಕ್ಕ ಹುಡುಗಿಯಿದ್ದಾಳೆ
ಆಗಿಂದಾಗ ಪುನಃಪುನಃ ಒಡೆದ ಹೃದಯವುಬ್ಬುವುದು|
ಸಂತೋಷಗಳ ನೆನೆಯುವೆನು ನೋವುಗಳ ನೆನೆಯುವೆನು
ಪ್ರೀತಿಸುತ ಬದುಕುವೆನು ಜೀವನವ ಮತ್ತೊಮ್ಮೆ||

ಹಳೆಯ ವರುಷಗಳವು ಎಲ್ಲವೂ ಅಲ್ಪ, ವೇಗದಲಿ ಕಳೆದುಹೋಗಿಬಿಟ್ಟಿಹವು
ಕಠಿಣ ವಾಸ್ತವತೆ ಒಪ್ಪಿಕೊಂಡಿಹೆನು, ಯಾವುದೂ ಉಳಿಯದು|
ನಿಮ್ಮ ಕಣ್ಣು ತೆರೆಯಿರಿ ಜನರೇ, ತೆರೆದು ನೋಡಿ
ನಾನು ಗೊಣಗುವ ಗೊಡ್ಡು ಮುದುಕಿಯಲ್ಲ, ಹತ್ತಿರ ಬನ್ನಿ, ನನ್ನನ್ನು ನೋಡಿ||

ಮೂಲ ಇಂಗ್ಲಿಷ್: ಅನಾಮಧೇಯ
ಕನ್ನಡ ಭಾವಾನುವಾದ: ಕ.ವೆಂ.ನಾಗರಾಜ್.
ನಿವೇದನೆ:  
     ವಿದೇಶದ ನರ್ಸಿಂಗ್ ಹೋಮ್ ಒಂದರಲ್ಲಿ ಸತ್ತ ವೃದ್ಧೆಯ ಹತ್ತಿರ ಸಿಕ್ಕ ಕವನ ಇದು. ಇದು ವೈರಲ್ ಆಗಿ ಅಂತರ್ಜಾಲ ತಾಣದಲ್ಲಿ ಹರಿದಾಡಿದೆ. ಓದಿದ ನನ್ನ ಮೇಲೂ ಇದು ಪ್ರಭಾವ ಬೀರಿದೆ. ವೃದ್ಧರನ್ನು ಕಂಡಾಗ ಆದರದಿಂದ ಕಾಣುವ ಮನೋಭಾವ ಜಾಗೃತಗೊಳ್ಳಲು ಇಂತಹ ಬರಹಗಳು ಅಗತ್ಯ. ಅದರ ಕನ್ನಡ ಭಾವಾನುವಾದ ಮಾಡಿ ಸಹೃದಯರ ಅವಗಾಹನೆಗೆ ಮಂಡಿಸಿರುವೆ.

ಬುಧವಾರ, ಆಗಸ್ಟ್ 22, 2018

ಸತ್ಯಪ್ಪನ ಸತ್ಯ !


ಸತ್ಯಪ್ಪನೆಂಬೋನು ಎಲ್ಲದಾನೋ ಯಪಾ
ನಡುರಾತ್ರ್ಯಾಗ ಬಿಡದೆ ಹೊತ್ತೊಯ್ದರೋ |
ನನ್ನ ದಿಕ್ಕವನು ನನ್ನ ಉಸಿರವನು ಬಿಟ್ಟು ಬಿಡಿರೋ ಯಪಾ
ಸೆರಗೊಡ್ಡಿ ಬೇಡುವೆನು ಪುಣ್ಣೇವ ಕಟ್ಕೋರೀ ಯಪಾ ||

ನಮ್ಹಂತ್ಯಾಕ ಸತ್ಯಪ್ಪ ಇಲ್ಲಾ ಕಣಬೇ
ದೊರೆಯ ಕಾರ‍್ನಾಗವನ ಒಯ್ದಾರಬೇ |
ದೊರೆಯ ಕಣ್ಣೀಗಿ ಅವ ಕಿಸುರು ಕಣಬೇ
ದೊರೆಯ ಹಾದ್ಯಾಗವನು ಮುಳ್ಳಂತ್ಯಬೇ ||

ಅಂಗನಬೇಡ ನನರಾಜ ಕಾಪಾಡೋ ಯಪಾ
ನೀನೆ ನನ ದ್ಯಾವ್ರಂತ ದೀಪ ಹಚ್ತೀನಪಾ |
ಊರ ಬಿಟ್ಟೇವಂತೆ ತಿರುಪೆ ಬೇಡೇವಂತೆ
ಜೀವವೊಂದನಕುಳಿಸಿ ಬಿಟ್ಟು ಬಿಡಿರೋ ಯಪಾ ||

ಚಿಂತೆ ಬಿಡು ಮುದುಕಿ ಸತ್ಯಪ್ಪ ಬರ್ತಾನಬೇ
ಉಪ್ಪೆಸರು ಮಾಡಿಟ್ಟು ದಾರಿ ಕಾಯ್ವೋಗಬೇ |
ಆಳು ಮಕ್ಕಳು ನಾವು ನಮ್ಕೈಲಿ ಏನೈತಬೇ
ಕನಿಕರವ ದಣಿಗೆ ಅಡ ಇಟ್ಟೀವಬೇ ||

ಸತ್ಯಪ್ಪ ಬರದೆ ಓಗಾಣಿಲ್ಲ ನಾ ಓಗಾಣಿಲ್ಲಾ 
ಎಂಗಾರ ಮಾಡ್ಯವನ ಉಳಿಸೋ ಯಪಾ |
ಎಲ್ಲವನೊ ನನ ಕಂದ ಎಂಗವನೋ ನನ ಚಂದ
ನನ್ನೊಪ್ಪ ಮಾಡುದಕೆ ಅವನು ಬೇಕ್ರೋ ಯಪಾ ||

ಅಷ್ಟರಲ್ಲಿ . .
ಭರ್ರೆಂದು ಕಾರೊಂದು ಮೂಟೆಯೊಂದನು ಇಳಿಸಿ 
ಸರ್ರೆಂದು ತಿರುಗಿ ಒಂಟೋಯ್ತಲಾ |
ಚೀರುತ್ತ ಭೋರ‍್ಯಾಡಿ ಮುದುಕಿ ಅಳ್ತೈತಲ್ಲಾ
ಬಿಟ್ಟ ಕಣ್ ಬಿಟ್ಟಂತೆ ನೆಟ್ಟ ಕಣ್ ನೆಟ್ಟಂತೆ ಸತ್ಯಪ್ಪ ಕುಂತವ್ನಲ್ಲ ||

ಸತ್ಯಪ್ಪ ಸತ್ತಿಲ್ಲ ಸತ್ಯ ಮಾತ್ರ ಪೂರ್ತಿ ಸತ್ತೋಯ್ತಲಾ
ಉಳ ಬಿದ್ದು ಸಾಯಿರೋ ಅದ್ದು ತಿಂದೋಗಲೋ |
ಮಣ್ಣು ತೂರಿದ ಮುದುಕಿ ಶಾಪ ಹಾಕಿತಲ್ಲಾ
ಕರಿ ಮೋಡ ಮುಸುಕಿ ಬಾನೆಲ್ಲ ಕಪ್ಪಾಯ್ತಲಾ ||

ಹಲವು ದಿನಗಳ ನಂತರ . .
ಸತ್ಯಪ್ಪ ಬದುಕವನೆ ಹೈಕಳ ಎದೆಯೊಳಗೆ ಇಳಿದುಬಿಟ್ಟವನೆ
ಎದೆ ಸೆಟೆಸಿದಾ ಸತ್ಯ ಮುಷ್ಟಿ ಬಿಗಿದಾ ಸತ್ಯ |
ಕನಲಿ ಕೆರಳಿದ ಸತ್ಯ ಒಡಲ ಬೆಂಕಿಯ ಸತ್ಯ
ದೊರೆಯಂಜಿ ಮುಲುಗುಟ್ಟಿ ಸತ್ಯನ ಕಾಲಿಗೆ ಬಿದ್ದುಬಿಟ್ಟವನೆ ||
-ಕ.ವೆಂ. ನಾಗರಾಜ್
**************
26.8.2018ರ ವಿಕ್ರಮ ವಾರಪತ್ರಿಕೆಯಲ್ಲಿ ಪ್ರಕಟಿತ:

ಶುಕ್ರವಾರ, ಮೇ 4, 2018

ಮೂಢ ಉವಾಚ - 410

ಹಿರಿಯರಾರೂ ಇಲ್ಲ ಕಿರಿಯರೂ ಇರದಿಹರು
ಅಣ್ಣ ತಮ್ಮದಿರವರು ಮುನ್ನಡೆಯುತಿಹರು |
ಭೂಮಾತೆ ಪೊರೆಯುತಿರೆ ದೇವಪಿತ ಕಾಯುತಿರೆ
ಸುದಿನವದು ಸನಿಹದಲಿ ಕಾಣು ಮೂಢ || 



ಮೂಢ ಉವಾಚ - 409

ಅವನೊಲುಮೆ ಬಲುಮೆಯನು ಕೊಂಡಾಡಬೇಕು
ಸಕಲರಿಗೆ ಸಮನಿಹನ ಗುಣವ ಧರಿಸಲುಬೇಕು ||
ಸದ್ವಿದ್ಯೆಯನು ಗಳಿಸಿ ಸತ್ಕರ್ಮದಲಿ ತೊಡಗೆ
ಅದುವೆ ಧರ್ಮದ ಹಾದಿ ತಿಳಿಯೊ ನೀ ಮೂಢ || 

ಬುಧವಾರ, ಮೇ 2, 2018

ಮೂಢ ಉವಾಚ - 408

ಜ್ಞಾನಜ್ಯೋತಿಯೆ ಅವನು ಸತ್ಯರೂಪನೆ ಅವನು
ಸರ್ವಮಿತ್ರನೆ ಅವನು ಸಕಲ ಶಕ್ತಿಯೆ ಅವನು |
ಅವನ ಮಹಿಮೆಯನರಿತು ನರನು ಬೆರಗಾಗಿರಲು
ನರನ ಪರಿ ಸುರವರನ ಮೆರೆದಿಪುದು ಮೂಢ || 

ಭಾನುವಾರ, ಏಪ್ರಿಲ್ 29, 2018

ಮೂಢ ಉವಾಚ - 407

ದೇವನೊಲುಮೆಗೆ ದಾರಿ ತೋರುವುದೆ ಸ್ತುತಿಯು
ಎದೆಯೊಳಗೆ ನಮ್ರತೆಯ ಬೀಜ ಬಿತ್ತುವುದು |
ಮನವು ನಿರ್ಮಲವಾಗಿ ಸುಖ ಶಾಂತಿ ಲಭಿಸುವುದು
ಸತ್ಯೋಪಾಸನೆಯ ಮಹಿಮೆಯಿದು ಮೂಢ || 

ಶನಿವಾರ, ಏಪ್ರಿಲ್ 28, 2018

ಮೂಢ ಉವಾಚ - 406

ಚಂಚಲಿತ ಮನಕಿರಲು ಬುದ್ಧಿಯ ಆಸರೆಯು
ಹೊರಸೆಳೆತಗಳ ತಳ್ಳಿ ಮನಸು ಸ್ಥಿರವಾಗುವುದು | 
ಸ್ಥಿರವಾದ ಮನಸಿನಲಿ ದೇವನನು ನೆನೆಯುತಿರೆ
ಶಾಂತಿಪಥದಲಿ ನೀನು ಮುನ್ನಡೆವೆ ಮೂಢ ||