ಶನಿವಾರ, ಮೇ 27, 2017

ಮೂಢ ಉವಾಚ - 266

ಹೆಸರು ಹೆಸರೆಂದು ಕೊಸರಾಡಿ ಫಲವೇನು
ನೆನೆಸುವರ್ ಚಿರರಿಹರೆ ಚಿರವೆ ಹೆಸರು?|
ಅರಿತವರೆ ಬಿಡದಿಹರು ಹೆಸರ ಹಂಬಲವ
ಹುಲುನರರ ಕಥೆಯೇನು ಹೇಳು ಮೂಢ||ಮೂಢ ಉವಾಚ - 265

ಸಂಸಾರ ವೃಕ್ಷಕೆ ಅಜ್ಞಾನವೇ ಬೇರು
ಆತ್ಮಬುದ್ಧಿಯು ಮೊಳಕೆ ಆಸಕ್ತಿ ಚಿಗುರು|
ಕರ್ಮವದು ನೀರು ಸಹವಾಸ ಗೊಬ್ಬರವು
ತಕ್ಕಂತೆ ಸಿಕ್ಕೀತು ಫಲವು ಮೂಢ||ಬುಧವಾರ, ಮೇ 24, 2017

ಮೂಢ ಉವಾಚ - 264

ತಪ್ಪಿಗಿರಬಹುದು ಕಾರಣವು ನೂರು
ಪರರು ಕಾರಣರಲ್ಲ ಹೊರಿಸದಿರು ದೂರು|
ಹುಂಬತನ ಭಂಡತನ ಮೊಂಡುತನ ಬೇಡ
ಅಡಿಗಡಿಗೆ ಅಳುಕುವ ಪಾಡೇಕೆ ಮೂಢ||  


ಮಂಗಳವಾರ, ಮೇ 23, 2017

ಮೂಢ ಉವಾಚ - 263

ಎದೆಯಲ್ಲಿ ದುಃಖ ಮಡುಗಟ್ಟಿದಾಕ್ರೋಷ
ಬರಡು ಮನದಲಿ ತೋರಿಕೆಯ ಸಂತೋಷ|
ಹೀನ ದೈನ್ಯತೆಯ ಆಶ್ರಯದ ಪಾಶ
ಮೂದಲಿಕೆ ತಪ್ಪೀತೆ ಮುದಿತನದಿ ಮೂಢ||


ಸೋಮವಾರ, ಮೇ 22, 2017

ಮೂಢ ಉವಾಚ - 262

ಮರಣಕಿಂತಲು ಘೋರ ಮುಪ್ಪೆಂಬ ಶಾಪ
ದೇಹ ದುರ್ಬಲವು ರೋಗ ರುಜಿನಗಳ ಕೂಪ|
ಅನ್ಯರನು ನೆಚ್ಚುವ ದೈನ್ಯತೆಯೆ ತಾಪ
ನರರ ಮಸ್ತಕದ ಲಿಖಿತವಿದು ಮೂಢ||ಭಾನುವಾರ, ಮೇ 21, 2017

ಮೂಢ ಉವಾಚ - 261

ನಂಬಿದ್ದೆ ಸರಿಯೆಂಬ ಜಿಗುಟುತನವೇಕೆ
ನಿಜವ ನಂಬಲು ಹಿಂಜರಿಕೆಯೇಕೆ|
ಜಿಜ್ಞಾಸೆಯಿರಲಿ ಹೇಗೆ ಏನು ಏಕೆ 
ಹಿರಿಯ ನಿಜವರಿತು ನಡೆವ ಮೂಢ|| 


ಶನಿವಾರ, ಮೇ 20, 2017

ಮೂಢ ಉವಾಚ - 260

ಪರಮಾತ್ಮ ರಚಿಸಿಹನು ಭವ್ಯ ಬ್ರಹ್ಮಾಂಡ
ಬ್ರಹ್ಮಾಂಡಕಿಂ ಹಿರಿದಲ್ತೆ ಅಂತರಂಗದ ಹರವು|
ಪರಮಾತ್ಮ ಕಾಣನೆ ಒಳಗೆ ನಿನ್ನೊಳಗೆ
ಅಣೋರಣೀಯನ ಮಹತಿಯಿದು ಮೂಢ||