ಬುಧವಾರ, ಮೇ 31, 2017

ಮೂಢ ಉವಾಚ - 270

ಏನಿದೇನಿದೀ ಮಾಯೆ ಏನಿದೇನಿದೀ ಚೋದ್ಯ
ಇರುವುದೇ ಮೂರು ದಿನ ಜಗವ ಬಯಸಿಹರು|
ಚಿರಕಾಲ ಬದುಕೆಂದು ಭ್ರಮೆಯ ತಳೆದಿಹರು
ಈ ಜಗವ ನಡೆಸಿಹುದು ಮಾಯೆ ಮೂಢ||



ಮಂಗಳವಾರ, ಮೇ 30, 2017

ಮೂಢ ಉವಾಚ - 269

ಎಲ್ಲರನು ಜಯಿಸಿದವ ವೀರನೆಂಬುದು ಸುಳ್ಳು
ತನ್ನ ತಾ ಜಯಿಸದಿರೆ ಅವನೊಂದು ಜೊಳ್ಳು|
ಎಲ್ಲವನು ಪಡೆದವನು ಹಿರಿತನವ ಪಡೆದಾನೆ
ತನದಲ್ಲವೆನುವವನೆ ಹಿರಿಯ ಮೂಢ||


ಸೋಮವಾರ, ಮೇ 29, 2017

ಮೂಢ ಉವಾಚ - 268

ಹೊರಗಣ್ಣು ತೆರೆದಿದ್ದು ಒಳಗಣ್ಣು ಮುಚ್ಚಿರಲು
ಹೊರಗಿವಿ ಚುರುಕಿದ್ದು ಒಳಗಿವಿಯು ಇಲ್ಲದಿರೆ|
ಸುತ್ತೆಲ್ಲ ಹುಡುಕಾಡಿ ತನ್ನೊಳಗೆ ಇಣುಕದಿರೆ
ತಿರುಳಿರದ ಹಣ್ಣಿನ ಸಿಪ್ಪೆ ನೀ ಮೂಢ||


ಭಾನುವಾರ, ಮೇ 28, 2017

ಮೂಢ ಉವಾಚ - 267

ಏನಿಲ್ಲ ಏನಿಹುದು ಪೂರ್ಣ ಜಗವಿಹುದು
ಶಕ್ತನಿರೆ ಪಡೆಯುವೆ ದೇವನ ಕರುಣೆಯಿದು|
ಪಡೆದಿರುವೆ ನೀನು ಕೊಡದಿರಲು ದ್ರೋಹ
ಕೊಟ್ಟಷ್ಟು ಪಡೆಯುವೆ ನಿಜವು ಮೂಢ||



ಶನಿವಾರ, ಮೇ 27, 2017

ಮೂಢ ಉವಾಚ - 266

ಹೆಸರು ಹೆಸರೆಂದು ಕೊಸರಾಡಿ ಫಲವೇನು
ನೆನೆಸುವರ್ ಚಿರರಿಹರೆ ಚಿರವೆ ಹೆಸರು?|
ಅರಿತವರೆ ಬಿಡದಿಹರು ಹೆಸರ ಹಂಬಲವ
ಹುಲುನರರ ಕಥೆಯೇನು ಹೇಳು ಮೂಢ||



ಮೂಢ ಉವಾಚ - 265

ಸಂಸಾರ ವೃಕ್ಷಕೆ ಅಜ್ಞಾನವೇ ಬೇರು
ಆತ್ಮಬುದ್ಧಿಯು ಮೊಳಕೆ ಆಸಕ್ತಿ ಚಿಗುರು|
ಕರ್ಮವದು ನೀರು ಸಹವಾಸ ಗೊಬ್ಬರವು
ತಕ್ಕಂತೆ ಸಿಕ್ಕೀತು ಫಲವು ಮೂಢ||



ಬುಧವಾರ, ಮೇ 24, 2017

ಮೂಢ ಉವಾಚ - 264

ತಪ್ಪಿಗಿರಬಹುದು ಕಾರಣವು ನೂರು
ಪರರು ಕಾರಣರಲ್ಲ ಹೊರಿಸದಿರು ದೂರು|
ಹುಂಬತನ ಭಂಡತನ ಮೊಂಡುತನ ಬೇಡ
ಅಡಿಗಡಿಗೆ ಅಳುಕುವ ಪಾಡೇಕೆ ಮೂಢ||  


ಮಂಗಳವಾರ, ಮೇ 23, 2017

ಮೂಢ ಉವಾಚ - 263

ಎದೆಯಲ್ಲಿ ದುಃಖ ಮಡುಗಟ್ಟಿದಾಕ್ರೋಷ
ಬರಡು ಮನದಲಿ ತೋರಿಕೆಯ ಸಂತೋಷ|
ಹೀನ ದೈನ್ಯತೆಯ ಆಶ್ರಯದ ಪಾಶ
ಮೂದಲಿಕೆ ತಪ್ಪೀತೆ ಮುದಿತನದಿ ಮೂಢ||


ಸೋಮವಾರ, ಮೇ 22, 2017

ಮೂಢ ಉವಾಚ - 262

ಮರಣಕಿಂತಲು ಘೋರ ಮುಪ್ಪೆಂಬ ಶಾಪ
ದೇಹ ದುರ್ಬಲವು ರೋಗ ರುಜಿನಗಳ ಕೂಪ|
ಅನ್ಯರನು ನೆಚ್ಚುವ ದೈನ್ಯತೆಯೆ ತಾಪ
ನರರ ಮಸ್ತಕದ ಲಿಖಿತವಿದು ಮೂಢ||



ಭಾನುವಾರ, ಮೇ 21, 2017

ಮೂಢ ಉವಾಚ - 261

ನಂಬಿದ್ದೆ ಸರಿಯೆಂಬ ಜಿಗುಟುತನವೇಕೆ
ನಿಜವ ನಂಬಲು ಹಿಂಜರಿಕೆಯೇಕೆ|
ಜಿಜ್ಞಾಸೆಯಿರಲಿ ಹೇಗೆ ಏನು ಏಕೆ 
ಹಿರಿಯ ನಿಜವರಿತು ನಡೆವ ಮೂಢ|| 


ಶನಿವಾರ, ಮೇ 20, 2017

ಮೂಢ ಉವಾಚ - 260

ಪರಮಾತ್ಮ ರಚಿಸಿಹನು ಭವ್ಯ ಬ್ರಹ್ಮಾಂಡ
ಬ್ರಹ್ಮಾಂಡಕಿಂ ಹಿರಿದಲ್ತೆ ಅಂತರಂಗದ ಹರವು|
ಪರಮಾತ್ಮ ಕಾಣನೆ ಒಳಗೆ ನಿನ್ನೊಳಗೆ
ಅಣೋರಣೀಯನ ಮಹತಿಯಿದು ಮೂಢ||


ಬುಧವಾರ, ಮೇ 17, 2017

ಮೂಢ ಉವಾಚ - 259

ವಾಸನೆಯು ಬಿರುಗಾಳಿ ವಿಚಾರ ತರಗೆಲೆಯು
ಆಸೆ ನಗುವುದು ವಿಚಾರ ಸೋಲುವುದು|
ಜಾರುವುದನರಿತರೂ ನಾಶವಾಗದು ಚಪಲ
ಸಕಲ ಸಂಕಟಕೆ ಮೂಲವಿದು ಮೂಢ||




ಮಂಗಳವಾರ, ಮೇ 16, 2017

ಮೂಢ ಉವಾಚ - 258

ದೇಹ ದೇವರಾಗಿ ಭೋಗ ಪೂಜೆಯಾಗಿ
ಇಂದ್ರಿಯದಾಸನಾಗಿ ವಿಷಯದ ಬೇಟೆಯಲಿ|
ಹುಲು ತೃಪ್ತಿ ಗುರಿಯಾಗಿ ಅರಿಗೆ ಶರಣಾಗಿ
ಕೂಪದಲಿ ಬಿದ್ದರೇಳುವರೆ ಮೂಢ||



ಸೋಮವಾರ, ಮೇ 15, 2017

ಮೂಢ ಉವಾಚ - 257

ದೇಹವೆಂಬುದು ರಥವು ಬುದ್ಧಿಯೇ ಸಾರಥಿಯು
ಇಂದ್ರಿಯಾಶ್ವವನು ಚಿತ್ತ ಹಿಡಿದಿಹುದು| 
ಒಡೆಯ ಹೇಳ್ದಂತೆ ಸಾಗುವನು ಸಾರಥಿಯು
ಒಡೆಯನಾರೆಂದು ತಿಳಿದಿಹೆಯ ಮೂಢ||



ಭಾನುವಾರ, ಮೇ 14, 2017

ಮೂಢ ಉವಾಚ - 256

ಕಂಡವರು ಯಾರಿಹರು ಜೀವ ಚೇತನವ
ತರ್ಕವನೆ ಮಾಡುವರು ಅವಿನಾಶಿಯೆನ್ನುವರು| 
ವಾದಗಳ ಮುಂದಿರಿಸಿ ವಿನಾಶಿಯೆಂದಿಹರು
ಅನುಭಾವಿ ತಿಳಿದಾನು ಉತ್ತರವ ಮೂಢ||



ಶನಿವಾರ, ಮೇ 13, 2017

ಮೂಢ ಉವಾಚ - 255

ಶುಭವ ನೋಡದಿರೆ ಕಣ್ಣಿದ್ದು ಕುರುಡ
ಶುಭವ ಕೇಳದಿರೆ ಕಿವಿಯಿದ್ದು ಕಿವುಡ|
ಶುಭವ ನುಡಿಯದಿರೆ ಬಾಯಿದ್ದು ಮೂಕ
ಇದ್ದೂ ಇಲ್ಲದವನಾಗದಿರು ಮೂಢ||



ಶುಕ್ರವಾರ, ಮೇ 12, 2017

ಮೂಢ ಉವಾಚ - 254

ಕೇಳುತಿರ್ದೊಡೆ ತಿಳಿವ ಬೀಜ ಮೊಳೆತೀತು
ಮೊಳಕೆ ಬೆಳೆದೀತು ಕಾಣುವ ನೋಟವಿರೆ|
ಮನನದ ನೀರೆರೆದು ಅನುಭವದಿ ಕಳೆಕೀಳೆ
ಅದ್ಭುತಾಮೃತ ಫಲ ನಿನದೆ ಮೂಢ||


ಗುರುವಾರ, ಮೇ 11, 2017

ಮೂಢ ಉವಾಚ - 253

ಸೋಮಾರಿ ಸಾಯುವನು ಸ್ವಾರ್ಥಿ ಸಾಯುವನು
ಹೇಡಿ ಸಾಯುವನು ವೀರನೂ ಸಾಯುವನು| 
ದೇವ ನಿಯಮವಿದು ಎಲ್ಲರೂ ಸಾಯುವರು
ಬದುಕಿ ಸಾಯುವರ ನೆನೆಯೋ ಮೂಢ||


ಬುಧವಾರ, ಮೇ 10, 2017

ಮೂಢ ಉವಾಚ - 252

ಸಾಲುಗಟ್ಟಿಹೆವು ಕೆಲರ್ ಮುಂದೆ ಕೆಲರ್ ಹಿಂದೆ
ಸರಿಸರಿದು ಸಾಗಿ ಬರುತಿಹುದು ಸಾವ| 
ಸಾವು ನಿಶ್ಚಿತವಿರಲು ಜೀವಿಗಳೆಲ್ಲರಿಗೆ
ಜಾಣರಲಿ ಜಾಣರು ಬದುಕುವರು ಮೂಢ||



ಮಂಗಳವಾರ, ಮೇ 9, 2017

ಮೂಢ ಉವಾಚ - 251

ಸ್ವರ್ಗವನು ಬಯಸುವರು ಕಾಮಿಗಳು ಕೇಳು
ನಿಜಭಕ್ತರವರಲ್ಲ ಜ್ಞಾನಿಗಳು ಮೊದಲಲ್ಲ|
ಅಂಜಿಕೆಯ ಮೇಲೆ ನರಕ ನಿಂತಿರಲು
ಆಸೆಯೇ ಸಗ್ಗಕಾಧಾರ ಮೂಢ||



ಭಾನುವಾರ, ಮೇ 7, 2017

ಮೂಢ ಉವಾಚ - 250

ಸ್ವರ್ಗವೆಂಬುದು ಕೇಳು ಪುಣ್ಯ ತೀರುವ ತನಕ
ನರಕವೆಂಬುದಿದೆ  ಪಾಪ ಕಳೆಯುವ ತನಕ|
ನಿನ್ನೊಳಗೆ ನಾನು ನನ್ನೊಳಗೆ ನೀನೆನಲು
ಸಚ್ಚಿದಾನಂದಭಾವ ಕೊನೆತನಕ ಮೂಢ||


ಶನಿವಾರ, ಮೇ 6, 2017

ಮೂಢ ಉವಾಚ - 249

ಸಾಲ ಪಡೆದೆವು ನಾವು ಋಣಿಗಳಾಗಿಹೆವು 
ಶರೀರವಿತ್ತ ದೇವಗೆ ಹೆತ್ತವರ್ಗೆ ಹೊತ್ತವರ್ಗೆ|
ದಾರಿ ತೋರುವ ಗುರು ಹಿರಿಯರೆಲ್ಲರಿಗೆ
ಸಾಲವನು ತೀರಿಸದೆ ಮುಕ್ತಿಯುಂಟೆ ಮೂಢ|| 


ಶುಕ್ರವಾರ, ಮೇ 5, 2017

ಮೂಢ ಉವಾಚ - 248

ಹೆತ್ತು ಹೊತ್ತು ಸಲಹಿದ ಮಮತೆಯ ಜಲಧಿ
ತಾಯ ಋಣ ತೀರಿಸಲು ಆಗುವುದೆ ಜಗದಿ|
ನೋವನುಂಡು ನಲಿವ ನೀಡುವಳು ಮುದದಿ
ಆಕೆಯನು ನೋಯಿಪನು ಕಡುಪಾಪಿ ಮೂಢ||



ಗುರುವಾರ, ಮೇ 4, 2017

ಮೂಢ ಉವಾಚ - 247

ವಿಷಯರಾಗವನು ಮೂಡಿಪುದೆ ಮನಸು
ಪಶುತರದಿ ಬಂಧಗೊಳಿಪುವುದು ಮನಸೆ|
ವಿರಾಗದಲಿ ಬಂಧ ಬಿಡಿಸುವುದು ಮನಸು
ಮನಸಿನಿಂದಲೆ ಕನಸು ನನಸು ಮೂಢ||


ಬುಧವಾರ, ಮೇ 3, 2017

ಮೂಢ ಉವಾಚ - 246

ಶ್ರಮವಿರದ ಸುಖವದೆಲ್ಲರಿಗೆ ಬೇಕು ನಿತ್ಯ
ಸುಖವು ಶ್ರಮದಲಿಹುದೆಂಬುದೆ ಪರಮಸತ್ಯ|
ಸುಖಿಸುವರ ಕಂಡು ಕರುಬುವರು ಪರರು
ಶ್ರಮಿಸುವರ ಮಚ್ಚರಿಪರಿಹರೆ ಮೂಢ||


ಮಂಗಳವಾರ, ಮೇ 2, 2017

ಮೂಢ ಉವಾಚ - 245

ಮೇಲು ಕೀಳುಗಳಿಗೆ ಕಾರಣರು ಪರರಲ್ಲ
ಆಲಸಿಕೆ ಕುಚಟಗಳ ದಾಸರಾಗರೆ ಕೀಳು|
ಮುನ್ನಡೆಯ ಹಂಬಲಿಸೆ ಆಗುವರು ಮೇಲು
ಪರರ ದೂಷಿಸಿ ಫಲವೇನು ಮೂಢ||


ಸೋಮವಾರ, ಮೇ 1, 2017

ಮೂಢ ಉವಾಚ - 244

ಸಮರಾರಿಹರು ಜಗದೊಳು ಸಮರಾರಿಹರು
ಅಸಮಾನರೆನಿಸೆ ಹಂಬಲಿಸಿ ಹೋರಾಡುತಿಹರು|
ಗುರಿ ಸಮನಿರಬಹುದು ದಾರಿ ಸಮನಹುದೆ
ನಿಜಸಮತೆ ಕಂಡೀತು ಸಾವಿನಲಿ ಮೂಢ||