ಗುರುವಾರ, ಜೂನ್ 30, 2016

ಮೂಢ ಉವಾಚ - 198

ತನ್ನ ತಾನರಿಯೆ ಗುರುಕೃಪೆಯು ಬೇಕು
ಅರಿತುದನು ವಿಚಾರ ಮಾಡುತಿರಬೇಕು|
ವಿಚಾರ ಮಥನದ ಫಲವೆ ನಿತ್ಯ ಸತ್ಯ| 
ವೇದವಿದಿತ ಸತ್ಯ ತತ್ವವಿದು ಮೂಢ||  


ಮಂಗಳವಾರ, ಜೂನ್ 28, 2016

ಮೂಢ ಉವಾಚ - 197

ಮನಶುದ್ಧಿಯಿಲ್ಲದಿರೆ ವೇದಾಂತದಿಂದೇನು
ಗುರುಭಕ್ತಿಯಿಲ್ಲದಿರೆ ವಿವೇಕ ಬಹುದೇನು |
ಸುಜನರೊಡನಾಡದಿರೆ ಶುದ್ದಮನವೆಲ್ಲಿಯದು
ಸರಿಯಿರದ ದಾರಿಯಲಿ ಗುರಿ ದೂರ ಮೂಢ ||


ಭಾನುವಾರ, ಜೂನ್ 26, 2016

ಮೂಢ ಉವಾಚ - 196

ಸತ್ಯ ಮಿಥ್ಯಗಳರಿತವರು ಹೇಳಿಹರು
ಕಾಣುವುದು ಅಸತ್ಯ ಕಾಣದಿರುವುದೆ ಸತ್ಯ |
ಕಾಣಿಪುದ ಕಾರಣವೆ ಕಾಣದಿಹ ಸತ್ಯ
ಕಾಣದುದ ಕಾಣುವುದೆ ಜ್ಞಾನ ಮೂಢ ||  


ಶುಕ್ರವಾರ, ಜೂನ್ 24, 2016

ಮೂಢ ಉವಾಚ - 195

ಗುರುಹಿರಿಯರನುಸರಿಸಿ ಜನರು ಸಾಗುವರು
ಗುರುವು ಸರಿಯೆನಲು ಜನರಿಗದು ಸರಿಯು |
ಗುರುವಿಗಿಹುದು  ಗುರುತರದ ಹೊಣೆಯು
ಎಡವದಲೆ ನಡೆಯಬೇಕವನು ಮೂಢ ||


ಗುರುವಾರ, ಜೂನ್ 23, 2016

ಮೂಢ ಉವಾಚ - 194

ತೊಡರು ಬಹುದೆಂದು ಓಡದಿರು ದೂರ
ಓಡಿದರೆ ಸೋತಂತೆ ಸಿಗದು ಪರಿಹಾರ |
ಸಮಸ್ಯೆಯ ಜೊತೆಯಲಿರುವವನೆ ಧೀರ 
ಒಗಟಿನೊಳಗಿಹುದು ಉತ್ತರವು ಮೂಢ ||


ಮಂಗಳವಾರ, ಜೂನ್ 21, 2016

ಮೂಢ ಉವಾಚ - 193

ಅಹಮಿಕೆಯ ಅಂತ್ಯವದು ಅರಿವಿನ ಶಿಖರ
ವಿಷಯವಾಸನೆಯ ಕೊನೆ ವಿರಾಗ ಪ್ರಖರ |
ಭೂತವದು ಕಾಡದು ಭವಿಷ್ಯದ ಭಯವಿಲ್ಲ
ಜೀವನ್ಮುಕ್ತನವ ನಿರ್ವಿಕಾರಿ ಮೂಢ ||


ಶನಿವಾರ, ಜೂನ್ 18, 2016

ಮೂಢ ಉವಾಚ - 192

ಸುಖವನಾಳೆ ಭೋಗಿ ಮನವನಾಳೆ ಯೋಗಿ 
ಸುಖವನುಂಡೂ ದುಃಖಪಡುವವನೆ ರೋಗಿ |
ಸುಖವಿಮುಖಿಯಾದರೂ ಸದಾಸುಖಿ ಯೋಗಿ
ಸುಖವ ಬಯಸದಿರೆ ದುಃಖವೆಲ್ಲಿ ಮೂಢ ||



ಶುಕ್ರವಾರ, ಜೂನ್ 17, 2016

ಮೂಢ ಉವಾಚ - 191

ಫಲವ ಬಯಸದೆ ಮಾಡುವನು ಕರ್ಮ
ಸಮಚಿತ್ತದೆಸಗಿದ ಮಮರಹಿತ ಕರ್ಮ |
ರಾಗ ರೋಷಗಳ ಸೋಂಕಿರದ ಕರ್ಮ
ಕರ್ಮಯೋಗಿಯ ಮರ್ಮವಿದುವೆ ಮೂಢ ||  


ಬುಧವಾರ, ಜೂನ್ 15, 2016

ಮೂಢ ಉವಾಚ - 190

ತಪನಿರತಗಾಸಕ್ತಿ ಕಾಮಿತಫಲದಲಿ
ಪಂಡಿತನಿಗಾಸಕ್ತಿ ಹಿರಿಮೆಗರಿಮೆಯಲಿ |
ಕರ್ಮಿಗಿಹುದಾಸಕ್ತಿ ಬರುವ ಫಲದಲಿ
ಯೋಗಿಗಾಸಕ್ತಿ ಪರಮಪದದಲಿ ಮೂಢ ||


ಮೂಢ ಉವಾಚ - 189

ಬಿಟ್ಟುಬಿಡುವನು ಸಾಧಕನು ತೊರೆಯುವನು
ಹೊರಮನದ ಕೋರಿಕೆಯನಲ್ಲಗಳೆಯುವನು |
ಅಂತರಂಗದ ಕರೆಯನುಸರಿಸಿ ಬಾಳುವನು
ಸಮಚಿತ್ತದಲಿ ಸಾಗುವನು ಮೂಢ ||


ಭಾನುವಾರ, ಜೂನ್ 12, 2016

ಮೂಢ ಉವಾಚ - 188

ದ್ವೇಷವದು ದೂರ ಸರ್ವರಲಿ ಸಮಭಾವ
ಎಲ್ಲರಲು ಅಕ್ಕರೆ ಕರುಣೆಯಲಿ ಸಾಗರ |
ಮಮಕಾರವಿಲ್ಲ ಗರ್ವವದು ಮೊದಲಿಲ್ಲ
ಸಮಚಿತ್ತದವನೆ ನಿಜ ಸನ್ಯಾಸಿ ಮೂಢ ||


ಶನಿವಾರ, ಜೂನ್ 11, 2016

ಮೂಢ ಉವಾಚ - 187

ಜಗದೊಡೆಯ ಪರಮಾತ್ಮನಲಿ ಭಕ್ತಿ
ಏಕಾಂತದಲಿ ಧ್ಯಾನ ಆತ್ಮಾನುಸಂಧಾನ | 
ಗುರುವಿನಲಿ ಶ್ರದ್ಧೆ ಸುಜನ ಸಹವಾಸ
ಸಾಧಕರ ದಾರಿಯಿದು ನೋಡು ಮೂಢ ||


ಗುರುವಾರ, ಜೂನ್ 9, 2016

ಮೂಢ ಉವಾಚ - 186

ಪರರು ನಮಿಪುವ ತೇಜವಿರುವವನು
ಕೆಡುಕ ಸೈರಿಸಿ  ಕ್ಷಮಿಪ ಗುಣದವನು |
ನಾನತ್ವ ದೂರ ನಡೆನುಡಿಯು ನೇರ
ಸಾತ್ವಿಕನು ಸಾಧಕನು ಅವನೆ ಮೂಢ ||


ಸೋಮವಾರ, ಜೂನ್ 6, 2016

ಮೂಢ ಉವಾಚ - 185

ಶ್ರದ್ಧೆಯಿರಲಿ ಧರ್ಮದಾಚರಣೆಯಲಿ
ತುಡಿತವಿರಲಿ ಅರಿವ ಹಸಿವಿನಲಿ |  
ಸಂಯತೇಂದ್ರಿಯನಾಗಿ ಅಂತರಂಗವನರಿಯೆ
ನಿಜಶಾಂತಿ ಸಿಗದಿರದೆ ಮೂಢ ||




ಭಾನುವಾರ, ಜೂನ್ 5, 2016

ಮೂಢ ಉವಾಚ - 184

ಭವಬಂಧನದ ಕಿಚ್ಚಿನಲಿ ಬೆಂದು ನೊಂದವಗೆ
ಹಿತಕಾರಿ ಶೀತಲ ಮೃದು ಮಧುರ ಗುರುವಾಣಿ |
ಸುಜ್ಞಾನಿ ಗುರುವೆರೆವ ಅನುಭವಾಮೃತ ಸವಿದು
ಗುರುಮಾರ್ಗವನುಸರಿಸೆ ಧನ್ಯ ಮೂಢ ||

ಶುಕ್ರವಾರ, ಜೂನ್ 3, 2016

ಮೂಢ ಉವಾಚ - 183

ಭವಬಂಧನವೆ ಕಿಚ್ಚು ಮರಣವೆ ಬಿರುಗಾಳಿ
ಕಾಡ್ಗಿಚ್ಚಿನಲಿ ಸಿಲುಕಿ ಬೆಂದು ನೊಂದಿರುವ |
ಬಿರುಗಾಳಿಯಲಿ ಸಿಲುಕಿ ಭಯಗೊಂಡ ಮನವ 
ಸಂತಯಿಪ ಗುರುವೆ ದೇವ ಮೂಢ ||


ಗುರುವಾರ, ಜೂನ್ 2, 2016

ಮೂಢ ಉವಾಚ - 182

ಆಳವಿಹ ಸಾಗರವ ಹಡಗು ದಾಟಿಸಬಹುದು
ಭವಸಾಗರವ ದಾಟೆ ಅರಿವ ಜಹಜಿರಬೇಕು |
ದಾರಿ ತೋರುವ ಗುರುಕರುಣೆಯಿರಬೇಕು
ದಾಟಬೇಕೆಂಬ ಮನ ಬೇಕು ಮೂಢ ||